Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಹೊಲಸು ಚುನಾವಣಾ ಆಯೋಗದ ನೀತಿಗೆ ಇತಿಶ್ರೀ ಹಾಡಬೇಡವೇ? - ಎಚ್.ಎಸ್ ದೊರೆಸ್ವಾಮಿ

ಹೊಲಸು ಚುನಾವಣಾ ಆಯೋಗದ ನೀತಿಗೆ ಇತಿಶ್ರೀ ಹಾಡಬೇಡವೇ? – ಎಚ್.ಎಸ್ ದೊರೆಸ್ವಾಮಿ

ಈ ದುರವಸ್ಥೆಯಿಂದ ಪಾರಾಗಲು ಇರುವುದು ಒಂದೇ ದಾರಿ. ಜನತಾ ಆಂದೋಲನವೊಂದನ್ನು ದೀರ್ಘಾವಧಿ ಹೋರಾಟಕ್ಕೆ ಅಣಿಮಾಡಬೇಕು. ಇದಕ್ಕೆ ಎಲ್ಲ ಸಂಘಟನೆಯವರೂ ಕೈಜೋಡಿಸಬೇಕು.

- Advertisement -
- Advertisement -

ಯಾಕೆ ನಮ್ಮ ಸಾಮಾಜಿಕ ಕಾರ್ಯಕರ್ತರು, ಆಯ್ದ ಕೆಲ ರಾಜಕೀಯ ನಾಯಕರು, ರಾಜಕೀಯ ಸಿದ್ಧಾಂತಿಗಳು, ಕಾರ್ಮಿಕ ಸಂಘಟನೆಗಳು ನಮ್ಮ ದುಷ್ಟ ಚುನಾವಣಾ ಪದ್ಧತಿಯನ್ನು ರದ್ದುಮಾಡಲು ಸರ್ಕಾರದ ಮೇಲೆ, ಚುನಾವಣಾ ಆಯೋಗದ ಮೇಲೆ ಒತ್ತಡ ತರಲು ಮನಸ್ಸು ಮಾಡಿಲ್ಲ? ಅವರಿಗೆಲ್ಲ ಈಗಿನ ಚುನಾವಣಾ ಪದ್ಧತಿ ವಾಕರಿಕೆ ಹುಟ್ಟುಸುತ್ತಿಲ್ಲವೇ? ಎಲ್ಲ ರಾಜಕೀಯ ಪಕ್ಷಗಳೂ ಮತದಾರರನ್ನು ಭ್ರಷ್ಟರನ್ನಾಗಿ ಪರಿವರ್ತಿಸಿರುವುದು ನಿಮಗೆ ತಿಳಿದಿಲ್ಲವೇ? ಪಾರ್ಲಿಮೆಂಟ್ ಸದಸ್ಯರು ಮತ್ತು ಕಾರ್ಪೊರೆಟ್‌ಗಳ ನಡುವೆ ಒಂದು ಅನೈತಿಕ ಸಂಬಂಧ ಇರುವುದು ನಿಮಗೆ ತಿಳಿಯದ ವಿಚಾರವೇ? ಸರ್ಕಾರಗಳಲ್ಲಿ ಪದೇಪದೇ ಹಗರಣಗಳು ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈ ಹಗರಣಗಳನ್ನು ಪದೇಪದೇ ಹೊರಹಾಕುವ ನೀವು ಅದನ್ನು ತಡೆಗಟ್ಟಲು ಚುನಾವಣಾ ಆಯೋಗದ ಮೇಲೆ ಏಕೆ ಒತ್ತಡ ತರುತ್ತಿಲ್ಲ? ಪ್ರತಿಯೊಬ್ಬ ಶಾಸಕ ಮತ್ತು ಪಾರ್ಲಿಮೆಂಟ್ ಸದಸ್ಯ ತಾನು ಚುನಾವಣೆ ವೇಳೆಗೆ ತನ್ನ ಸಂಪತ್ತು ಹಿಂದಿನದಕ್ಕಿಂತ ಶೇಕಡ ನೂರರಿಂದ ಶೇಕಡ ೫೦೦ಪಟ್ಟು ಹೆಚ್ಚಿರುವುದಾಗಿ ಘೋಷಿಸುತ್ತಾನೆ. ಅದು ಯಾವ ಯಾವ ಬಾಬಿತ್ತಿನಿಂದ ಬಂತು ಎಂದು ಚುನಾವಣಾ ಆಯೋಗ ಕೇಳುತ್ತಿಲ್ಲ. ಅದು ಅವರ ಕರ್ತವ್ಯವಲ್ಲವೇ?

ಅಮೀನ್‌ಮಟ್ಟು ಪ್ರಜಾವಾಣಿ ಪತ್ರಿಕೆಯಲ್ಲಿದ್ದಾಗ ಒಂದು ಚುನಾವಣೆಯ ಸಮೀಕ್ಷೆ ನಡೆಸುತ್ತಾರೆ. ಅವರು ಹೇಳುತ್ತಾರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಪಾಳೇಗಾರ ಶಾಸಕರ ಸುಪರ್ದಿನಲ್ಲಿದೆ ಎಂದು. ಹುಕ್ಕೇರಿ ಕತ್ತಿ ಸಹೋದರರು, ಗೋಕಾಕಿನ ಜಾರಕಿಹೊಳಿ ಸಹೋದರರು, ಪ್ರಭಾಕರ್ ಕೋರೆ, ಪ್ರಕಾಶ್ ಹುಕ್ಕೇರಿ ಈ ಸಿಂಡಿಕೇಟಿನ ಇತರ ಸದಸ್ಯರು ಎಂಬುದನ್ನು ವರದಿ ಮಾಡಿದ್ದಾರೆ. ಇವರೆಲ್ಲ ತಮ್ಮ ಉದ್ಯಮ ಮತ್ತು ರಾಜಕೀಯ ಸಾಮ್ರಾಜ್ಯ ರಕ್ಷಣೆಗಾಗಿ ರಾಜಕೀಯ ’ಸಿಂಡಿಕೇಟ್ ಕಟ್ಟಿಕೊಂಡಿದ್ದಾರೆ. ಜಾತ್ಯತೀತವಾದ ಪಕ್ಷಾತೀತವಾದದ ಸಿಂಡಿಕೇಟ್ ಇದು. ಈ ಸಿಂಡಿಕೇಟ್ ಯಾವ ದಾಖಲೆಯಲ್ಲೂ ಇಲ್ಲ. ಯಾರ ಕಣ್ಣಿಗೂ ಬೀಳುವುದಿಲ್ಲ. ಗ್ರಾಮಪಂಚಾಯ್ತಿಯಿಂದ ಲೋಕಸಭೆವರೆಗೆ, ಸಹಕಾರಿ ಬ್ಯಾಂಕಿನಿಂದ ಹಾಲಿನ ಸೊಸೈಟಿವರೆಗೆ ನಡೆಯುವ ಎಲ್ಲ ಚುನಾವಣೆಯಲ್ಲೂ ಇವರ ಕೈವಾಡವಿದೆ. ಉಮೇಶ್ ಕತ್ತಿ ಸಹೋದರರು ಕಳೆದ ಐದು ಚುನಾವಣೆಗಳಲ್ಲಿ ಐದು ಬೇರೆ ಬೇರೆ ಪಾರ್ಟಿಗಳಿಂದ ಗೆದ್ದು ಬಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವರ ಹಿಕ್ಮತ್‌ನಿಂದ ಒಟ್ಟು 363 ಕ್ಷೇತ್ರಗಳಲ್ಲಿ 196 ಕ್ಷೇತ್ರಗಳು ಇವರ ಪಾಲಾಗಿದೆ. ಈ ಕ್ಷೇತ್ರಗಳಲ್ಲಿ ಬೇರೆ ಬೇರೆ ಪಕ್ಷಗಳ ಶಾಸಕರಿದ್ದಾರೆ. ತಮ್ಮ ಪಕ್ಷದ ಶಾಸಕರೇ ಇಲ್ಲ. ಈ ಕ್ಷೇತ್ರಗಳಲ್ಲಿ ಪಕ್ಷೇತರರೆಲ್ಲ ಕತ್ತಿಯವರ ಹಸ್ತಕರು.

ರಾಜಕೀಯ ವಿರೋಧಿಗಳನ್ನು ನಿರ್ನಾಮ ಮಾಡುವುದು, ಜನತೆಯ ಪಾಲುಗಾರಿಕೆ ಇರುವ ಎಲ್ಲ ಸಂಸ್ಥೆಗಳ ಮೇಲೆ ನಿಯಂತ್ರಣ, ಪಕ್ಷಾತೀತವಾಗಿ ರಾಜಕೀಯ ನಾಯಕರೊಡನೆ ಹೊಂದಾಣಿಕೆ ಇದು ಇವರ ಹುನ್ನಾರದ ವೈಖರಿ. ಇವರ ಹುನ್ನಾರ ಎಲ್ಲರಿಗೂ ಗೊತ್ತಿದ್ದರೂ ಜನ ಅಸಹಾಯಕರಾಗಿದ್ದಾರೆ. ಈ ಗುಲಾಮಗಿರಿಯಿಂದ ಪಾರಾಗಲು ಜನ ಕುದುರೆ ಏರಿಬರುವ ನಾಯಕನೊಬ್ಬನಿಗಾಗಿ ಕಾಯುತ್ತಿದ್ದಾರೆ ಎನ್ನುತ್ತಾರೆ ಮಟ್ಟು. ರಿಪಬ್ಲಿಕ್ ಆಫ ಬಳ್ಳಾರಿ ಇದ್ದ ಹಾಗೆ ಇವರದೂ ಒಂದು ರಿಪಬ್ಲಿಕ್.

ಇವು ಒಂದು ವರ್ಷದ ಚುನಾವಣೆಯಲ್ಲಿ ಬೆಳಕಿಗೆ ಬಂದಿರುವ ಅಪರಾಧಗಳು. ಇವೆಲ್ಲ ಬೆಂಗಳೂರೊಂದರಲ್ಲಿ ನಡೆದಿರುವವು.
1) ವಾರೆಂಟನ್ನು 597 ಜನರ ಮೇಲೆ ಜಾರಿ ಮಾಡಲಾಯಿತು. ಇದರ ಪೈಕಿ 570 ಬೆಂಗಳೂರು ನಗರ ಜಿಲ್ಲೆಯಲ್ಲಿ.
2) ಎಲೆಕ್ಷನ್ ಕೋಡ್ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ 1010 ಜನರ ಮೇಲೆ ನಾನ್‌ಬೈಲಬಲ್ ವಾರಂಟ್.
3) 492 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಯಿತು.
5) 3221 ಚೀಲ ಅಕ್ಕಿ, 18 ಚೀಲ ಮೈದಾಹಿಟ್ಟು, 123 ಚೀಲ ತೊಗರಿಬೇಳೆ, 34 ಚೀಲ ಬೆಲ್ಲ, 100 ಪ್ಯಾಕೆಟ್ ಅಡಿಗೆ ಎಣ್ಣೆ: ಇದರ ಅಂದಾಜು ಬೆಲೆ 26.44 ಲಕ್ಷರೂ. ಮಹದೇವಪುರದ ಚುನಾವಣಾ ಕ್ಷೇತ್ರದ ಒಂದು ಗೋಡಾನ್‌ನಲ್ಲಿ ಇವೆಲ್ಲವನ್ನೂ ಇಡಲಾಗಿತ್ತು.
5) 500 ಚೀಲ ಅಕ್ಕಿಯ ಅಂದಾಜು ಬೆಲೆ 5 ಲಕ್ಷ; ಬ್ಯಾಟರಾಯನಪುರ ಚುನಾವಣಾ ಕ್ಷೇತ್ರದ ಒಂದು ತೋಟದಲ್ಲಿ ಇಡಲಾಗಿತ್ತು.

ಕಳೆದ ಚುನಾವಣೆಯ ಸಂದರ್ಭದಲ್ಲಿ 11 ಏಪ್ರಿಲ್ 2019 ರವರೆಗೆ 6.35 ಕೋಟಿ ರೂ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಎರಡು ದಿನನ ಕಾರ್ಯಾಚರಣೆಯಲ್ಲಿ ಟಿ.ನರಸಿಪುರದ ಬಳಿ 5 ಲಕ್ಷ ರೂ, ಬೆಳಗಾವಿಯಲ್ಲಿ 7 ಲಕ್ಷ ರೂ, ಚಿತ್ರದುರ್ಗದ ಬಳಿ 3.5 ಲಕ್ಷ ರೂ, ಅಥಣಿ ತಾಲೂಕಿನಲ್ಲಿ 20 ಲಕ್ಷ ರೂ, ನೇಸರ್ಗಿಯಲ್ಲಿ ಒಂದು ಕೋಟಿ ರೂ, ಬಾಗಲಕೋಟೆಯಲ್ಲಿ 21 ಲಕ್ಷ ರೂ ವಶಪಡಿಸಿಕೊಳ್ಳಲಾಯಿತು. ಬೆಳಗಾವಿಯಲ್ಲಿ ಖೊಟ್ಟಿ ನಂಬರ್ ಪ್ಲೇಟ್ ಹಾಕಿದ್ದ ಕಾರಿನಲ್ಲಿ 1 ಕೋಟಿ ರೂ ಪತ್ತೆಯಾಯಿತು. ಈ ಹಣಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆ ಅವರಲ್ಲಿರಲಿಲ್ಲ.

ಇದು 2-3ಜಿಲ್ಲೆಗಳಲ್ಲಿ ನಡೆದಿರುವ ಪ್ರಕರಣಗಳು ಇಡೀ ಭಾರತದಲ್ಲಿ ಇಂಥದು ಎಷ್ಟು ಪ್ರಕರಣಗಳು ನಡೆದಿರಬಹುದು. ಈ ಅಪರಾಧಿಗಳಲ್ಲಿ ಯಾರಿಗೂ ಶಿಕ್ಷೆಯಾದ ಸುದ್ದಿ ಹೊರಬಂದೆ ಇಲ್ಲ. 60 ವರ್ಷಗಳಿಂದ ಚುನಾವಣಾ ಆಯೋಗ ಇದನ್ನು ಗಮನಿಸಿಯೇ ಇಲ್ಲ. ಚುನಾವಣೆಯಿಂದ ಚುನಾವಣೆಗೆ ಭ್ರಷ್ಟಾಚಾರ ಹೆಚ್ಚುತ್ತಲೇ ಹೋಗುತ್ತಿದೆ. ಚುನಾವಣಾ ಆಯೋಗ ನಿದ್ರ್ರಾವಸ್ಥೆಯಲ್ಲಿದೆಯೇ, ಮರಣಶಯ್ಯೆಯಲ್ಲಿದೆಯೋ ಗೊತ್ತಿಲ್ಲ. ಜನಪ್ರತಿನಿಧಿಗಳು ಆಡಿದ್ದೇ ಆಟ. ಕರ್ನಾಟಕದಲ್ಲಿ ಹತ್ತಾರು ಸಾವಿರ ಹೋರಾಟ ಸಂಸ್ಥೆಗಳಿದ್ದರೂ ಅವುಗಳಿಗೆ ಚುನಾವಣಾ ಭ್ರಷ್ಟಾಚಾರ ತಾರಕಕ್ಕೇರಿದೆ ಎಂಬ ಆತಂಕವಿಲ್ಲ. ಅಂದ ಮೇಲೆ ಈ ದುಷ್ಟಪದ್ಧತಿ ಮುಂದುವರಿದುಕೊಂಡು ಹೋಗಲಿ ಎಂದು ಹತಾಶರಾಗಿಬಿಟ್ಟಿದ್ದೀರಾ ಎಂದು ಕೇಳಬೇಕಿದೆ.

ಲೋಕಪಾಲ್ ಮಸೂದೆಯಲ್ಲೂ ಚುನಾವಣಾ ಪದ್ಧತಿಯನ್ನು ಶುದ್ಧಗೊಳಿಸುವ ಪ್ರಸ್ತಾಪ ಇಲ್ಲ.
ಅಡ್ವಾನಿ ಮತ್ತು ಇಂದ್ರಜಿತ್ ಗುಪ್ತಾ ಕೂಡಿ ಬರೆದ ಚುನಾವಣಾ ಸುಧಾರಣೆ ವರದಿ ಕಸದ ಬುಟ್ಟಿ ಸೇರಿದೆ. 6 ವರ್ಷ ರಾಜ್ಯಭಾರ ಮಾಡಿದ ಬಿಜೆಪಿಯಾಗಲಿ, ಗೃಹಮಂತ್ರಿಯಾಗಿದ್ದ ಅಡ್ವಾನಿಯಾಗಲಿ ಚುನಾವಣಾ ಸುಧಾರಣೆ ಬಗೆಗೆ ತುಟಿಕ್‌ಪಿಟಕ್ ಎನ್ನಲಿಲ್ಲ.

ಈ ಚುನಾವಣೆಗಳಲ್ಲಿ ಬಡವರು, ಮಧ್ಯಮವರ್ಗದವರು ಉಮೇದುದಾರರಾಗಲು ಸಾಧ್ಯವೇ ಇಲ್ಲ. ಸಂಸತ್‌ನಲ್ಲಿ 1996ರಲ್ಲಿ ಅಪರಾಧ ಮಾಡಿರುವವರ ಸಂಖ್ಯೆ ಶೇ.10 ಇದ್ದದ್ದು 2009ಕ್ಕೆ ಶೇ.30ರಷ್ಟಾಯಿತು. ಈಗ ಬಹುಶಃ ಅದು ಶೇ.50 ಆಗಿರಬಹುದು. ವಾಣಿಜ್ಯ ಸಂಸ್ಥೆಯವರು ಹಾಗೂ ಪಾರ್ಲಿಮೆಂಟ್ ಮತ್ತು ಶಾಸನ ಸಭೆಗಳ ಸದಸ್ಯರ ನಡುವಣ ಹೊಂದಾಣಿಕೆಯಿಂದಾಗಿ ಜನಪ್ರತಿನಿಧಿಗಳ ಆಸ್ತಿ ಚುನಾವಣೆಯಿಂದ ಚುನಾವಣೆಗೆ ನೂರುಪಟ್ಟು ಮತ್ತು ಸಾವಿರಪಟ್ಟು ಹೆಚ್ಚಿದೆ.

ಆದ್ದರಿಂದ ಈ ದುರವಸ್ಥೆಯಿಂದ ಪಾರಾಗಲು ಇರುವುದು ಒಂದೇ ದಾರಿ. ಜನತಾ ಆಂದೋಲನವೊಂದನ್ನು ದೀರ್ಘಾವಧಿ ಹೋರಾಟಕ್ಕೆ ಅಣಿಮಾಡಬೇಕು. ಇದಕ್ಕೆ ಎಲ್ಲ ಸಂಘಟನೆಯವರೂ ಕೈಜೋಡಿಸಬೇಕು.

ಚುನಾವಣಾ ಪದ್ಧತಿಯನ್ನು ಆಮೂಲಾಗ್ರವಾಗಿ ಬದಲಾಯಿಸದೆ ಇದ್ದರೆ ಮುಂದೆ ಕೋಟ್ಯಾಧಿಪತಿಗಳು, ಭ್ರಷ್ಟರು, ಕ್ರಿಮಿನಲ್‌ಗಳು, ಕೊಲೆಗಡುಕರು ಇವರೇ ಆಳಲು ಬರುತ್ತಾರೆ ಎಂಬುದು ತಿಳಿದಿರಲಿ.


ಇದನ್ನೂ ಓದಿ: ಬಹುಜನ ಭಾರತ: ಇತಿಹಾಸದ ಕಟಕಟೆಯಲ್ಲಿ ಅರುಣ್ ಮಿಶ್ರ ಎಂಬ ನ್ಯಾಯಮೂರ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...