Homeಅಂಕಣಗಳುಚುನಾವಣಾ ಅಕ್ರಮ ತಡೆಯುವ ವಿಧಾನ ಸರಿಯಿದೆಯೇ?

ಚುನಾವಣಾ ಅಕ್ರಮ ತಡೆಯುವ ವಿಧಾನ ಸರಿಯಿದೆಯೇ?

- Advertisement -
- Advertisement -

ಚುನಾವಣಾ ಆಯೋಗ ಪೋಲೀಸ್ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲವೂ ಚುನಾವಣಾ ಭ್ರಷ್ಟಾಚಾರ ತಡೆಯುವುದರಲ್ಲಿ ಸೋತಿವೆ. ಇಲ್ಲವೇ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ಸಹಾಯಕವಾಗಿವೆ ಎಂದು ಖಚಿತವಾಗಿ ಹೇಳಬಹುದು.

ನಾನು ನನ್ನ ಅನುಭವದಿಂದ ಈ ಗುರುತರ ಆಪಾದನೆಯನ್ನು ಮಾಡುತ್ತಿದ್ದೇನೆ. ದಿವಂಗತ ಪ್ರಭಾಕರ ರೆಡ್ಡಿ ಮತ್ತು ನಾನು ಕೂಡಿಕೊಂಡು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಚಿಸಿದ್ದೆವು. ನಾವು ಒಮ್ಮೆ ರಾಜ್ಯದ ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ನಡೆಸಿದೆವು. ಆ ನಂತರ ಒಂದು ಡಿಮ್ಯಾಂಡ್ ಅವರ ಮುಂದಿಟ್ಟೆವು. ಡಿಮ್ಯಾಂಡ್ ಇದು – ನೀವು ಚುನಾವಣೆ ಸಮಯದಲ್ಲಿ ಇಷ್ಟು ಬ್ಯಾರಲ್ ಮದ್ಯ ಹಿಡಿದೆವು, ಇಷ್ಟು ಕೋಟಿ ಸಾಗಿಸುತ್ತಿದ್ದ ಹಣ ಜಪ್ತಿ ಮಾಡಿದೆವು, ಸೀರೆ-ಪಂಚೆ ಸಾವಿರ ಗಟ್ಟಲೆ ಹಿಡಿದೆವು, ಚಿನ್ನ-ಬೆಳ್ಳಿ ಸಾಮಾನು ಹಿಡಿದೆವು ಎಂದು ಚುನಾವಣೆ ಮುಗಿಯುವವರೆಗೆ ಪತ್ರಿಕೆಗೆ ವರದಿ ಮಾಡುತ್ತೀರಿ. ಆದರೆ ಮುಂದೆ ಹಿಡಿದ ಹಣ, ಮದ್ಯ, ಜವಳಿ, ಚಿನ್ನ-ಬೆಳ್ಳಿ ಸಾಮಾನುಗಳು ಏನಾದವು? ಎಲ್ಲಿ ಹೋದವು, ಹಿಡಿದವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿದಿರಾ? ನೀವು ಹಿಡಿದವರಲ್ಲಿ ಎಷ್ಟು ಜನಕ್ಕೆ ಏನು ಶಿಕ್ಷೆಯಾಗಿದೆ? ಯಾವುದನ್ನೂ ನೀವು ಪ್ರಕಟಿಸುವುದಿಲ್ಲ. ಹಿಡಿದ ಎಲ್ಲ ಹಣ, ಮದ್ಯ ಇತರ ಸಾಮಗ್ರಿಗಳು ನಿಮ್ಮ ಮನೆಗಳಲ್ಲಿದೆಯೇ? ಖಜಾನೆಯಲ್ಲಿದೆಯೇ? ನ್ಯಾಯಾಲಯದ ವಶದಲ್ಲಿದೆಯೇ? ಪೋಲೀಸ್ ಠಾಣೆಗಳಲ್ಲಿದೆಯೇ? ಒಂದೂ ಗೊತ್ತಾಗುವುದಿಲ್ಲ. ಆದ್ದರಿಂದ ಪ್ರತಿ ಒಂದು ಸಾರಿ ಸಾರ್ವತ್ರಿಕ ಚುನಾವಣೆಗಳು ನಡೆದಾಗಲೂ ಈ ಕುರಿತು ಒಂದು ಶ್ವೇತ ಪತ್ರ ಹೊರಡಿಸಿ ಎಂದು ಪಟ್ಟು ಹಿಡಿದೆವು.

ಚುನಾವಣಾ ಕಚೇರಿಯವರು ಚುನಾವಣಾ ಸಂದರ್ಭದಲ್ಲಿ ಹಿಡಿಯಲಾದ ಎಲ್ಲವನ್ನೂ ನಾವು ಪೋಲೀಸರ ವಶಕ್ಕೆ ಕೊಡುತ್ತೇವೆ. ಅವರೇ ಕೇಸುಗಳನ್ನು ಹಾಕುತ್ತಾರೆ. ನಾನು ಎಲ್ಲಾ ಎಸ್‌ಪಿಗಳಿಗೆ ಪತ್ರ ಬರೆದು ನಿಮಗೆ ನೀವು ಕೇಳಿರುವ ಎಲ್ಲಾ ವಿವರಗಳನ್ನು ಕೊಡಲು ತಿಳಿಸುತ್ತೇನೆ ಎಂದು ಹೇಳಿ ಜವಾಬ್ದಾರಿಯಿಂದ ಜಾರಿಕೊಂಡರು. ನಾಲ್ಕಾರು ತಿಂಗಳ ಮೇಲೆ ನಮಗೆ ಎರಡು ಜಿಲ್ಲೆಗಳ ಎಸ್‌ಪಿಗಳಿಂದ ‘ನಮ್ಮ ಜಿಲ್ಲೆಯಲ್ಲಿ ಇಂತಹ ಪ್ರಸಂಗಗಳು ನಡೆದೇ ಇಲ್ಲ’ ಎಂಬ ಉತ್ತರ ಬಂದಿತ್ತು. ಉಳಿದ ಜಿಲ್ಲೆಗಳ ಯಾವ ಎಸ್‌ಪಿಯೂ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ. ಪೋಲೀಸ್ ವರಿಷ್ಠರ ಕಚೇರಿಗೆ ಹೋಗಿ ಅವರಿಗೆ ಎಸ್‌ಪಿಗಳ ಬೇಜವಬ್ದಾರಿಯುತ ಮೌನದ ಬಗೆಗೆ ತಿಳಿಸಿದೆವು.

ಮಾತುಕತೆಯೆಲ್ಲ ಆದಮೇಲೆ ಅವರು ತಿಳಿಸಿದ್ದು ಹೀಗೆ;- ‘ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಳ್ಳುವ ಎಲ್ಲಾ ಹಣವನ್ನು ಖಜಾನೆಗೆ ಕಟ್ಟಲಾಗುತ್ತದೆ, ಮದ್ಯವನ್ನು ನಾಶ ಮಾಡಲಾಗುತ್ತದೆ. ಆದರೆ ಇತರ ವಸ್ತುಗಳ ಬಗೆಗೆ ನಮಗೆ ಮಾಹಿತಿ ಇಲ್ಲ’ ಎಂದರು. ಜಪ್ತಿಯಾದ ಉಳಿಕೆ ಸಾಮಾನುಗಳು ಏನಾದವು? ಅದನ್ನು ಹೊಂದಿದ್ದವರ ಮೇಲೆ ಖಟ್ಲೆ ಹೂಡಲಾಯಿತೆ? ಅವರಿಗೆ ಶಿಕ್ಷೆ ಆಯಿತೆ? ಅವರು ಯಾವ ಅಭ್ಯರ್ಥಿಗಾಗಿ ಹಣ ತೆಗೆದುಕೊಂಡು ಹೋಗುತ್ತಿದ್ದರು? ಅಭ್ಯರ್ಥಿಯನ್ನು ನ್ಯಾಯಾಲಯದ ಮುಂದೆ ನಿಲ್ಲಿಸಲಾಯಿತೆ? ಅವರಿಗಾದ ಶಿಕ್ಷೆ ಏನು? ಇದರ ಮಾಹಿತಿಯನ್ನು ಯಾರೂ ಒದಗಿಸಲಿಲ್ಲ.

ಅಂದರೆ ಚುನಾವಣೆಯ ಸಂದರ್ಭದಲ್ಲಿ ಯಾವತ್ತೂ ನಡೆಯುವ ಪ್ರಹಸನ ಇದು. ಚುನಾವಣಾ ಆಯೋಗ ಚುನಾವಣೆಯ ಸಂದರ್ಭದಲ್ಲಿ ನಡೆಯುವ ದುರ್ವ್ಯವಹಾರಗಳನ್ನು ತಡೆಗಟ್ಟುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೆ? ಚುನಾವಣಾ ಆಯೋಗಕ್ಕೆ, ಪೋಲಿಸರಿಗೆ, ಚುನಾವಣಾಧಿಕಾರಿಗಳಿಗೆ ನಿಜವಾಗಿ ಚುನಾವಣೆಯನ್ನು ಪರಿಶುದ್ಧಗೊಳಿಸಬೇಕೆಂಬ ಕಾತರವಿದ್ದಿದ್ದರೆ ಅವರು ಇಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರಲಿಲ್ಲ. ಚುನಾವಣೆಯನ್ನು ಸುಧಾರಿಸಬೇಕೆಂಬ ಉತ್ಕಟೇಚ್ಛೆ ಇವರಿಗೆಲ್ಲ ಇದ್ದಿದ್ದರೆ ಈ ಎಲ್ಲಾ ಬಗೆಯ ಭ್ರಷ್ಟಾಚಾರವನ್ನು ತಡೆಗಟ್ಟಲು ಅವರು ಆದ್ಯತೆ ನೀಡುತ್ತಿದ್ದರು. ಅವರೆಲ್ಲ ಕಾಟಾಚಾರಕ್ಕೆ, ಜನರ ಕಣ್ಣಿಗೆ ಮಣ್ಣೆರಚುವುದಕ್ಕೆ ಕಾಟಾಚಾರದ ತಪಾಸಣೆ ಮಾಡುತ್ತಾರೆ. ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಹಾಗೂ ಪೋಲೀಸರ ಬೇಜವಾಬ್ದಾರಿತನ ಒಂದು ವರವಾಗಿ ಪರಿಣಮಿಸಿದೆ.

ನಾನು ಈ ಬಗೆಗೆ ಚುನಾವಣಾ ಆಯೋಗಕ್ಕೆ, ಒಂದು ಪತ್ರ ಬರೆದಿದ್ದೆ. ಅವರು ಆ ಪತ್ರಕ್ಕೆ ಉತ್ತರ ನೀಡುವ ಸೌಜನ್ಯವನ್ನು ತೋರಲಿಲ್ಲ.

ಚುನಾವಣಾ ಪದ್ದತಿಯಲ್ಲಿ ರೂಢಮೂಲ ಬದಲಾವಣೆಗಳನ್ನು ತರಬೇಕೆಂದು ನ್ಯಾ.ತಾರ್ಕುಂಡೆಯವರು ಮೊದಲುಗೊಂಡು ನೂರಾರು ಮಂದಿ ಸಲಹೆಗಳನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಸುಧಾರಣೆ ಚುನಾವಣಾ ಆಯೋಗಕ್ಕೂ ಬೇಕಾಗಿಲ್ಲ, ಸರ್ಕಾರಕ್ಕೂ ಬೇಕಾಗಿಲ್ಲ. ಪಾರ್ಲಿಮೆಂಟ್ ಸದಸ್ಯರಿಗೆ ಈ ಸುಧಾರಣೆ ಆದರೆ ತಮಗೆ ಅಸ್ತಿತ್ವವಿಲ್ಲದೆ ಹೋಗುವುದೆಂಬ ಭಯವಿರುವುದರಿಂದ ಅವರು ಮೌನವನ್ನವಲಂಬಿಸುತ್ತಾರೆ.

ಶೇಷನ್ ಚುನಾವಣಾ ಆಯೋಗದ ಅಧ್ಯಕ್ಷರಾಗಿದ್ದಾಗ ಈಗ ಇರುವ ಕಾಯ್ದೆಗಳನ್ನೇ ಬಳಸಿಕೊಂಡು ಚುನಾವಣೆಯ ಅನೇಕ ಅಕ್ರಮಗಳನ್ನು ತಡೆದರು. ಪಾರ್ಲಿಮೆಂಟ್ ಸದಸ್ಯರಿಗೆ ಸರ್ಕಾರಗಳಿಗೆ ನಡುಕ ಹುಟ್ಟಿಸಿದ್ದರು. ಶೇಷನ್‌ರವರಾದ ಮೇಲೆ ಅಧಿಕಾರಕ್ಕೆ ಬಂದ ಯಾವ ಚುನಾವಣಾ ಆಯೋಗದ ಸದಸ್ಯರಿಗೂ ಶೇಷನ್‌ರವರ ಗಟ್ಸ್ ಇಲ್ಲವಾದ್ದರಿಂದ ಬದಲಾಗಿದ್ದ ಚುನಾವಣಾ ಪದ್ಧತಿ, ರಿವರ್ಸ್ಗೇರ್ ಹೊಡೆಯಿತು. ಅಪ್ಪ ಹಾಕಿದ ಆಲದಮರಕ್ಕೇ ನೇಣು ಹಾಕಿಕೊಳ್ಳುತ್ತಿದ್ದಾರೆ, ಶೇಷನ್ ನಂತರ ಬಂದ ಚುನಾವಣಾ ಆಯೋಗದ ಸದಸ್ಯರು.

ಸರ್ಕಾರ ನಡೆಸುವವರು ಯಾವ ಪಕ್ಷದವರಾದರೂ ಸರಿಯೇ ಚುನಾವಣೆಗೆ ಸ್ವಲ್ಪ ಮೊದಲು ತಮ್ಮ ಮಾತನ್ನು ಕೇಳುವ ಎಸ್‌ಪಿಗಳನ್ನು, ಜಿಲ್ಲಾಧಿಕಾರಿಗಳನ್ನು ತಮಗೆ ಬೇಕಾದ ಜಿಲ್ಲೆಗೆ ವರ್ಗಾಯಿಸುತ್ತಾರೆ. ಮುಖ್ಯವಾಗಿ ಎಸ್‌ಪಿಯ ಜವಾಬ್ದಾರಿ ಅವರ ಅಧೀನದ ಎಲ್ಲಾ ಠಾಣೆಗಳಿಗೂ ಫರ್ಮಾನು ನೀಡುವುದು. ಇಷ್ಟನೇ ನಂಬರ್ ಕಾರು ಅಥವಾ ಟ್ಯಾಕ್ಸಿ ನಮ್ಮ ಜಿಲ್ಲೆಗೆ ಬಂದರೆ ಅದರ ತಂಟೆಗೆ ಹೋಗಬಾರದು. ಚುನಾವಣೆ ಸಮಯದಲ್ಲಿ ಅವರು ಹಣ ತರಲಿ, ಏನೇ ತರಲಿ ಅದರ ತನಿಖೆ ಮಾಡಬಾರದು.

ಟ್ಯಾಕ್ಸಿಯಲ್ಲಿ ಮೈಸೂರಿಗೆ ಹೋಗುವಾಗ ಆ ಟ್ಯಾಕ್ಸಿ ಡ್ರೈವರ್ ತನ್ನ ಘನಂದಾರಿ ಕೆಲಸ ಕುರಿತು ನನಗೆ ಹೇಳಿದ ನನ್ನ ಹತ್ತಿರ ಹಣ ಕೊಟ್ಟು ಕಳಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲೂ ನನ್ನನ್ನು ತಡೆದು ಕಾರು ತಪಾಸಣೆ ಮಾಡುವ ಕೆಲಸ ನಡೆಯುವುದಿಲ್ಲ. ಅಲ್ಲಿಗೆ ಚುನಾವಣೆಗೆ ಸ್ವಲ್ಪ ಮೊದಲು ವರ್ಗಾವಣೆಯಾಗಿರುವಾಗ ಎಸ್‌ಪಿ ಎಲ್ಲಾ ಠಾಣೆಗಳಿಗೂ ನನ್ನ ಟ್ಯಾಕ್ಸಿ ಹಿಡಿಯದಂತೆ ತಾಕೀತು ಮಾಡಿರುತ್ತಾರೆ. ನಾನು ಆ ಸಂದರ್ಭದಲ್ಲಿ ನಾಲ್ಕಾರು ಸಲ ಜಿಲ್ಲಾ ಕೇಂದ್ರಗಳಿಗೆ ಹಣ ತೆಗೆದುಕೊಂಡು ಹೋಗಿ ತಲುಪಿಸಬೇಕಾಗುತ್ತದೆ ಎಂದು ಹೆಮ್ಮೆಯಿಂದ ಹೇಳಿದೆ.

ಈ ಲೇಖನ ಬರೆದ ಉದ್ದೇಶ ಇಷ್ಟೇ;- ಪ್ರತಿ ಒಂದು ಸಾರ್ವತ್ರಿಕ ಚುನಾವಣೆ ನಡೆದ ಒಂದು ವರ್ಷದ ಒಳಗೆ ಚುನಾವಣಾ ಆಯೋಗ ಒಂದು ಶ್ವೇತ ಪತ್ರ ಹೊರಡಿಸಿ ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಆ ಶ್ವೇತ ಪತ್ರದಲ್ಲಿ ಆ ವರ್ಷ ನಡೆದ ಚುನಾವಣೆ ಸಂದರ್ಭದಲ್ಲಿ ಆಗಿರುವ ಹಣಕಾಸಿನ ಇತರೆ ಸಾಮಗ್ರಿಗಳ ಸಾಗಾಣಿಕೆಯ ದಂಧೆಯಲ್ಲಿ ಸಿಕ್ಕಿಬಿದ್ದವರು ಯಾರು? ಯಾವ ಅಭ್ಯರ್ಥಿಗಾಗಿ ಆ ಹಣ ಸಾಗಾಣಿಕೆಯಾಯಿತು. ಅವರಿಗೆ ಶಿಕ್ಷೆ ಆಯಿತೇ ಮುಂತಾದ ವಿವರಗಳನ್ನು ಪ್ರಕಟಿಸಬೇಕು. ಮತದಾರರಿಗೆ ಇದು ಗೊತ್ತಾದರೆ ಅವರು ಜಾಗೃತರಾಗುತ್ತಾರೆ. ಚುನಾವಣೆಗೆ ನಿಲ್ಲುವ ಕ್ರಿಮಿನಲ್‌ಗಳ ಸಂಖ್ಯೆ ಇಳಿಮುಖವಾಗುತ್ತದೆ. ಚುನಾವಣಾ ಆಯೋಗ ಇದರ ಜೊತೆ ಜೊತೆಗೇ ಚುನಾವಣಾ ಪದ್ಧತಿಯಲ್ಲಿ ರೂಢಮೂಲ ಬದಲಾವಣೆ ಮಾಡಿದರೆ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....