ದಕ್ಷಿಣ ಕನ್ನಡ: ಕೈ ಭಜರಂಗಿ ಅಬ್ಬರಕ್ಕೆ ಕಮಲಿಗ ತತ್ತರ!!

| ಶುದ್ಧೋದನ |

ಹಿಂದೂತ್ವದ ಒಣ ನಖರಾದಲ್ಲೇ ಹತ್ತು ವರ್ಷದ ಎಂಪಿಗಿರಿ ವ್ಯರ್ಥವಾಗಿ ಕಳೆದ ನಳಿನ್‍ಕುಮಾರ್ ಕಟೀಲ್‍ಗೆ ಮತ ಕೇಳುವ ಮುಖವೂ ಇಲ್ಲವಾಗಿದೆ. ಆತ ಮೋದಿ ಮುಖವಾಡ ಹಾಕಿಕೊಂಡು ಓಡಾಡುತ್ತಿದ್ದಾನೆ. ಮಜಾನ ಎಂದರೆ, ಆರೆಸೆಸ್‍ನ ಕಟ್ಟಾಳುಗಳಿಗೂ ಮೋದಿ ಮಾನ ಪಣಕ್ಕಿಟ್ಟು ನಳಿನ್ ಗೆಲ್ಲಿಸಿಕೊಳ್ಳಬೇಕಾದ ಫಜೀತಿ! ಹಿಂದೂತ್ವದ ಪ್ರಯೋಗ ಶಾಲೆ ದಕ್ಷಿಣ ಕನ್ನಡವೆಂಬ ಒಂದೇ ಒಂದು “ಆಶಾಕಿರಣ” ಬಿಟ್ಟರೆ ಗೆಲ್ಲಲು ಬೇಕಾದ ಬೇರಾವ ಬಲವೂ ಬಿಜೆಪಿಗೆ ಇಲ್ಲವಾಗಿದೆ. ಕಾಂಗ್ರೆಸ್‍ನ ಮಿಥುನ್ ರೈ ಎಂಬ ಬಂಟರ ಖಾನ್‍ದನ್‍ನ ತುಂಟ ತನ್ನ ಭಜರಂಗಿ ಪಡೆಯೊಂದಿಗೆ ಯುದ್ಧ ಭೂಮಿಗೆ ನುಗ್ಗಿದ ಅಬ್ಬರಕ್ಕೇ ಬಿಜೆಪಿಯ ನಳಿನ್ ಥರಗುಟ್ಟಿ ಹೋಗಿದ್ದಾನೆ!!

ವಿಚಿತ್ರವಾದರೂ ಸತ್ಯವೆಂದರೆ, ಕಾಲೆಳೆದಾಟದ ಕಾಂಗ್ರೆಸ್‍ನಲ್ಲಿ ಅಪರೂಪದ ಒಕ್ಕಟ್ಟು ಈ ಬಾರಿ ಮೂಡಿದೆ! ರಮಾನಾಥ ರೈ, ಶಕುಂತಲಾ ಶೆಟ್ಟಿ, ಸೊರಕೆ, ವಸಂತ ಬಾಗೇರಾ, ಜನಾರ್ಧನ ಪೂಜಾರಿ, ಮೋಯ್ಲಿಯಂಥ ಹಿರಿತಲೆಗಳು ಒಂದಾಗಿ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಅಭ್ಯರ್ಥಿ ಮಿಥುನ್‍ನ ರಾಜಗುರು, ಡಿ.ಕೆ.ಶಿವಕುಮಾರ್ ಶಿಷ್ಯನ ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಡಿಕೇಶಿಯಿಂದಾಗಿ ಸುಳ್ಯ, ಪುತ್ತೂರು, ಬೆಳ್ತಂಗಡಿ ಕಡೆಯ ಅರೆಭಾಷೆಗೌಡರ ಮತ ಕಾಂಗ್ರೆಸ್ ಕಡೆ. ಮುಖ ಮಾಡುವ ಸಾಧ್ಯತೆಯಿದೆ. ಏಕ ಗಂಟಿಂದ ಬಿಜೆಪಿ ಪಾಲಾಗುತ್ತಿದ್ದ ಬಂಟರ ಮತದಲ್ಲಿ ಈ ಬಾರಿ ಕಾಂಗ್ರೆಸ್‍ಗೆ ಹೆಚ್ಚು ಬರುವುದು ಗ್ಯಾರಂಟಿ ಕಾಂಗ್ರೆಸ್ ಮತ್ತು ಬಿಜೆಪಿಯ ಹುರಿಯಾಳುಗಳು ಇಬ್ಬರೂ ಬಂಟರಾದರೂ ಬಂಟರಿಗೆ ಹೊಸ ಹುಡುಗ ಮಿಥುನ್ ಎಂದರೇ ಇಷ್ಟ.

ಮಿಥುನ್ ಹಿಂದೆ ದೊಡ್ಡದೆಂದು ಭಜರಂಗಿ ಪಡೆಯೋ ಇದೆ. ಆಟ ಹೋದಲ್ಲಿ-ಬಂದಲ್ಲಿ ಬಿಜೆಪಿಗಳ ಮಾಮೂಲಿ ಹಿಂದೂತ್ವದ ಗಿಮಿಕ್ ಮಾಲಕವೇ ಜನರನ್ನು ಸೆಳೆಯುತ್ತಿದ್ದಾನೆ. ಗೋ ಪೂಜೆ ಮಾಡುತ್ತಿದ್ದಾನೆ; ಹನುಮಾನ್ ಚಾಲೀಸ್ ಪಡಿಸುತ್ತಿದ್ದಾನೆ. ಇದು ಕಟ್ಟರ್ ಬಿಜೆಪಿಗಳಿಗೆ ನಡುಕ ಮೂಡಿಸಿದೆ. ಆರೆಸೆಸ್‍ನ ಕರಾವಳಿ ಡಾನ್ ಆಗಿದ್ದ ಕಲ್ಲಡ್ಕ ಭಟ್ಟರ ಬೆಂಬಲವೂ ಮಿಥುನ್ ತಂಡಕ್ಕೆ ಸಿಕ್ಕಿದೆ. ರೇಪಿಸ್ಟ್ ರಾಘುಸ್ವಾಮಿಯ ಬೆಂಬಲಿಸಿದ ಕಾರಣಕ್ಕೆ ಆರೆಸೆಸ್‍ನಲ್ಲಿ ಮೂಲೆ ಗುಂಪಾಗಿರುವ ಕಲ್ಲಡ್ಕ ಭಟ್ಟರ ಅಭಿಮಾನಿ ಬ್ರಾಹ್ಮಣರ ಒಂದು ಪಾಲುಮತ ಕಾಂಗ್ರೆಸ್‍ಗೆ ದಕ್ಕುವ ಸೂಚನೆ ಗೋಚರಿಸುತ್ತಿದೆ. ಡಿಸಿಪಿ ಬ್ಯಾಂಕ್ ಚುನಾವಣೆ ಹೊತ್ತಲ್ಲಿ ಸುಳ್ಯದ “ಸಹಕಾರ ಭಾರತಿ” ಎಂಬ ಚೆಡ್ಡಿ ತಂಡದಲ್ಲಾದ ವಿಪ್ಲವವೂ ಬಿಜೆಪಿಗೆ ಮಾರಕದಾಗಿದೆ. ಈ ಕಿತಾಪತಿ ಹಿಂದೆ ಕಲ್ಲಡ್ಕ ಭಟ್ಟದ ನೆರಳಿದೆ. ತನಗೆ ತಿರುಗಿ ನಿಂತಿರುವ ಶಿಷ್ಯ ನಳಿನ್ ಆಪೋಷನ ಪಡೆಯಲು ಭಟ್ರು ಹಠತೊಟ್ಟಿದ್ದಾರೆ.

ಹದಿನಾರು ಸಾವಿರ ಕೋಟಿ ಅನುದಾನ ತಂದಿರುವ ತಾನು ನಂಟರ್ ಒನ್ ಎಂಪಿಯೆಂದು ಭೋಂಗು ಬಿಡುತ್ತಿರುವ ನಳಿನ್ ಖೋಟಾ ಕಾಮಗಾರಿಯಿಂದ ಆಡಿ ಪರ್ಸೆಂಟೇಜ್ ಸಿಕ್ಕಿದೆಯೇ ಹೊರತು ಕ್ಷೇತ್ರ ಉದ್ಧರವಾಗಿಲ್ಲ. ಪಂಪ್‍ವೆಲ್, ಲೊಕ್ಕೊಟ್ಟು ಮೇಲ್ಸೇತುವೆ ಮಾಡಲಾದೇ ಜನರ ಗೋಳುಹೋಯ್ದುಕೊಂಡ ನಳಿನ್‍ನಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಸರಿಯಾಗಿ ಮಾಡಿಸಲಾಗಿಲ್ಲ. ಇದೆಲ್ಲಾ ಜನರ ತೊಂದರೆಗೆ ಸಿಲುಕಿಸಿ ನಳಿನ್ ಎಂದರೆ ಕ್ಯಾಕರಿಸಿ ಉಗಿವಂತೆ ಮೂಡಿದೆ. ಬಿಜೆಪಿಯ ಕಾರ್ಯಕರ್ತರು, ಗೋಮುಖದ, ಅನೈತಿಕ ಪೋಲೀಸ್‍ಗಿರಿ ಕಾದಾಟದಲ್ಲಿ ಸಿಕ್ಕಿಬಿದ್ದು ಜೈಲು, ಆಸ್ಪತ್ರೆ ಪಾಲಾದರೂ ನಳಿನ್ ಕಣ್ಣೆತ್ತಿಯೂ ನೋಡಲಿಲ್ಲ. ದಕ್ಷಿಣ ಕನ್ನಡ ಹೆಮ್ಮೆಯ ವಿಜಯಾ ಬ್ಯಾಂಕ್ ಗುಜರಾತಿಗಳ ಹಾನಿಕೋರ ಬರೋಡ ಬ್ಯಾಂಕ್‍ನಲ್ಲಿ ವಿಲೀನವಾದರೂ ಈ ಬಂಟರ ಕುಲ ಘಾತುಕನಿಂದ ಏನೂ ಮಾಡಲಾಗಲಿಲ್ಲ. ಮಂಗಳೂರಿನ ರಸ್ತೆಯೊಂದಕ್ಕೆ ಇದೇ ವಿಜಯಾ ಬ್ಯಾಂಕ್ ಸಂಸ್ಥಾಪಕ ಸುಂದರರಾಮ ಶೆಟ್ಟಿ ಹೆಸರಿಡಲು ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಬೊಬ್ಬೆ ಎಬ್ಬಿಸಿ ಕಳೆದ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಲಾಭ ಮಾಡಿಕೊಂಡಿದ್ದ ನಳಿನ್ ಗ್ಯಾಂಗ್‍ಗೆ ಈ ವಿಜಯಾ ಬ್ಯಾಂಕ್ ವಿಲೀನ ತಿರುಗು ಬಾಣವಾಗಿದೆ.

ಜಾತಿ ಲೆಕ್ಕಚಾರದಲ್ಲಿ ಬಹುಸಂಖ್ಯಾತ ಬಿಲ್ಲವರೇ ನಿರ್ಣಾಯಕರು ಈ ಸಮುದಾಯದ 40 ವರ್ಷದೊಳಗಿನ ಯುವ ಮತದಾರರು ಹಿಂದೂತ್ವದ ಕರಿನೀಂದ ತಲೆ ತೊಳಸಿಕೊಂಡವರು. ಹಾಗಾಗಿ 40 ವರ್ಷ ಮೇಲ್ಪಟ್ಟ ಬಿಲ್ಲವರ ಪರಿವರ್ತನೆಯಲ್ಲ ಮಿಥುನ್, ರಮಾನಾಥರೈ, ಇವಾನ್, ಬಂಗೇರಾ ಬಳಗ ಯಶಸ್ವಿಯಾದರೆ ನಳಿನ್‍ಗೆ ಟಕ್ಕರ್ ಖಂಡಿತ! ಬಿಲ್ಲವರ ಪ್ರಶ್ನಾತೀತ ಹಿರಿಯ ನಾಯಕ ಜನಾರ್ಧನ ಪೂಜಾರಿ “ಮಿಥುನ್ ಗೆಲ್ಲದಿದ್ರೆ ನನ್ನ ಆರಾಧ್ಯ ದೈವ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಕಾಲಿಡಲಾರೆ” ಎಂದು ಶಪಥ ಮಾಡಿರುವುದು ಬಿಲ್ಲವರಲ್ಲಿ ಪರಿಣಾಮ ಬೀರುವ ಲಕ್ಷಣ ಕಾಣಿಸುತ್ತಿದೆ. ಬಿಲ್ಲವರ ಹಿರಿಯರಿಗೂ ಬಿಜೆಪಿ ತಮ್ಮ ಕುಲದ ಹುಂಬ ಹುಡುಗರ ರಕ್ತಪಾತಕ್ಕೆ ಬಳಸಿ ಬಲಿಹಾಕಿದ “ವಾಸ್ತವ” ಅರಿವಾದಂತೆದೆ. ಇದೆಲ್ಲ ಒಳ ಜಗಳದಿಂದ ತತ್ತರಿಸುತ್ತಿರುವ ಬಿಜೆಪಿಗೆ ಮೈನಸ್!!

ಎಸ್‍ಡಿಪಿಐ ಅಸ್ತಿತ್ವ ತೋರಿಸಲು ಗವಣಿಸುತ್ತಿದೆ. ಕಳೆದ ಬಾರಿ ಇಪ್ಪತ್ತೇಳು ಸಾವಿರ ಬಿಲ್ಲವರ ಮತ ಪಡೆದ ಎಸ್‍ಡಿಪಿಐ ಈ ಬಾರಿಯೂ ಕಾಂಗ್ರೆಸ್‍ನ ಹಣೆಬರಹ ನಿರ್ಧರಿಸುವ ಪಾತ್ರವಾಡಲಿದೆ. ಎಸ್‍ಡಿಪಿಐ ಮತ ಕಸಿದಂತೆ ಕಾಂಗ್ರೆಸ್ ಬಡವಾಗುತ್ತದೆ. ದಕ್ಷಿಣ ಕನ್ನಡದ ನಟ್ಟ ನಡುವೆ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಬಿಜೆಪಿಯ ಭದ್ರ ಕೋಟೆಗೆ ಕಾಂಗ್ರೆಸ್ ಲಗ್ಗೆ ಹಾಕಿರುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್‍ನ ಮಿಥುನ್ ಮತ್ತು ಬಿಜೆಪಿಯ ನಳಿನ್ ಪೈಕಿ ಯಾರೂ ಬೇಕಿದ್ದರೂ ಸಣ್ಣ ಅಂತರದಲ್ಲಿ ಗೆಲ್ಲಬಹುದೆಂಬ ಜಿದ್ದಾಜಿದ್ದಿ ನಡೆಯುತ್ತಿದೆ!!!

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here