ಸರ್ವೋದಯ ಸಮಾಜದ ರಚನೆ

0

ಹೆಚ್.ಎಸ್‍.ದೊರೆಸ್ವಾಮಿ |
ಸ್ವಾತಂತ್ರ್ಯಾ ನಂತರ ಭಾರತ ಎರಡು ಬಗೆಯ ಆರ್ಥಿಕ ವ್ಯವಸ್ಥೆಯನ್ನು ಕಂಡಿದೆ. ಒಂದು ನಿಯಂತ್ರಿತ ಆರ್ಥಿಕ ವ್ಯವಸ್ಥೆ. ಎರಡನೆಯದು ಮುಕ್ತ ಆರ್ಥಿಕ ವ್ಯವಸ್ಥೆ. ನಿಯಂತ್ರಿತ ಆರ್ಥಿಕ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮತ್ತು ಸರ್ಕಾರದ ಅಧಿಕಾರಿಗಳು ಜನರನ್ನು ಶೋಷಣೆಗೊಳಪಡಿಸಿದರೆ ಮುಕ್ತ ಆರ್ಥಿಕ ವ್ಯವಸ್ಥೆಯಲ್ಲಿ ಬಂಡವಾಳಶಾಹಿಗಳು ಜನರನ್ನು ಶೋಷಿಸುತ್ತಾರೆ. ಈ ಎರಡೂ ಬಗೆಯ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಬೇಕಾದರೆ ಇರುವ ಏಕೈಕ ದಾರಿ ಕೇಂದ್ರಿತ ಆರ್ಥಿಕ ವ್ಯವಸ್ಥೆ ಅಂದರೆ ಅದು ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ಯ ಪರಿಕಲ್ಪನೆ. ಹಿಂದೆ ಪ್ರತಿಯೊಂದು ಗ್ರಾಮವೂ ಸ್ವಸಂಪೂರ್ಣವಾಗಿತ್ತು. ಸ್ವಾವಲಂಬಿ ಗ್ರಾಮವಾಗಿತ್ತು. ಆಯಾ ಗ್ರಾಮದ ಅವಶ್ಯಕತೆಗಳನ್ನು ಅದೇ ಪೂರೈಸುತ್ತಿತ್ತು. ಇಂದು ಕೇಂದ್ರೀಕೃತ ಉತ್ಪಾದನಾ ಪದ್ಧತಿಯಿಂದಾಗಿ ಗ್ರಾಮಗಳು ಪರಾವಲಂಬಿಗಳಾಗಿವೆ. ಗ್ರಾಮಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ. ಗ್ರಾಮಕೇಂದ್ರಿತ ಆರ್ಥಿಕ ವ್ಯವಸ್ಥೆಯನ್ನು ಜಾರಿಗೊಳಸಬೇಕಾಗಿದೆ. ಗ್ರಾಮಗಳು ಆಡಳಿತದ ಮೂಲ ಘಟಕಗಳಾಗಬೇಕು. ಗ್ರಾಮಸಭೆಯೇ ಗ್ರಾಮದ ಅಭಿವೃದ್ಧಿ ಯೋಜನೆಯನ್ನು ರೂಪಿಸಬೇಕು. ಗ್ರಾಮದ ಬೇಕು, ಬೇಡಗಳನ್ನು ನಿರ್ಧರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾವು ರೂಪಿಸಿದ ಯೋಜನೆಗಳನ್ನು ಗ್ರಾಮಗಳ ಮೇಲೆ ಹೇರಬಾರದು. ಪ್ರತಿ ಗ್ರಾಮದಲ್ಲಿ ಒಂದು ಗ್ರಾಮಕೋಕ ಇರಬೇಕು. ಪ್ರತಿ ಗ್ರಾಮದಲ್ಲಿ ಪದಾರ್ಥಗಳ ಸಂಸ್ಕರಣ ಕೇಂದ್ರಗಳು ಸ್ಥಾಪನೆಯಾಗಬೇಕು. ರೇಷ್ಮೆಗೂಡನ್ನು ರೇಷ್ಮೆ ನೂಲನ್ನಾಗಿ ಪರಿಷ್ಕರಿಸುವ ಘಟಕಗಳು ಸ್ಥಾಪನೆಯಾಗಬೇಕು. ಹಣ್ಣುಗಳನ್ನು ಸಂಸ್ಕರಣೆ ಮಾಡಿ, ಹಣ್ಣಿನ ರಸ, ಇತ್ಯಾದಿಗಳನ್ನು ತಯಾರಿಸುವ ಘಟಕಗಳು ಆರಂಭವಾಗಬೇಕು. ಎರಡು ಮೂರು ಗ್ರಾಮಗಳ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ನೀಡುವ ಸಣ್ಣ ಕೈಗಾರಿಕಾ ಕೇಂದ್ರ ಸ್ಥಾಪನೆಯಾಗಬೇಕು. ಇಲ್ಲಿ ಉತ್ಪತ್ತಿಯಾಗುವ ಪದಾರ್ಥಗಳನ್ನು ಬೃಹತ್ ಕೈಗಾರಿಕೆಗಳು ಉತ್ಪಾದಿಸದಂತೆ ರೈತರೇ ಮಾರಿಕೊಳ್ಳುವ ಸ್ವಾತಂತ್ರ್ಯವನ್ನು ಹರಣ ಮಾಡಬಾರದು. ಬೀಜೋತ್ಪನ್ನ ಕಂಪನಿಗಳ ಅಡಿಯಾಳಾಗಲು ರೈತರನ್ನು ಬಿಡಬಾರದು.

ಗ್ರಾಮಗಳ ನಿರ್ವಹಿಸಲಾಗದ ಜವಾಬ್ದಾರಿಗಳನ್ನು ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಹಿಸಿಕೊಳ್ಳಬೇಕು. ಉದಾಹರಣೆಗೆ ನೋಟು ಮುದ್ರಣ, ವಿದೇಶಾಂಗ ನೀತಿ ನಿರ್ವಹಣೆ, ಅಣೆಕಟ್ಟಗಳ ನಿರ್ಮಾಣ ದೇಶ ರಕ್ಷಣೆ ಮುಂತಾದ ಜವಾಬ್ದಾರಿಗಳನ್ನು ಕೇಂದ್ರ ಸರ್ಕಾರ ಹೊರಬೇಕು. ಸಾರಿಗೆ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ, ರಸ್ತೆ ಕಾಮಗಾರಿ, ಶಿಕ್ಷಣ ನೀತಿ ನಿರೂಪಣೆ ಮುಂತಾದ ಹೊಣೆಗಾರಿಕೆ ರಾಜ್ಯ ಸರ್ಕಾರಗಳದ್ದು. ಗ್ರಾಮಸ್ವರಾಜ್ಯ ಸ್ಥಾಪನೆ ಮಾಡುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದ ಹೊರೆ ಕಡಿಮೆಯಾಗುತ್ತದೆ. ನೌಕರಶಾಹಿಯ ದುರಾಡಳಿತ ಲಂಚರಾಷ್ಟ್ರ ಮತ್ತು ದಬ್ಬಾಳಿಕೆ ಕಡಿಮೆಯಾಗುತ್ತದೆ. ಹಳ್ಳಿಗಳಲ್ಲಿ ಲವಲವಿಕೆ ಉಂಟಾಗುತ್ತದೆ. ಹಳ್ಳಿಗರು ಜವಾಬ್ದಾರಿ ಜನರಾಗುತ್ತಾರೆ. ಗ್ರಾಮಗಳಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ. ಗ್ರಾಮೀಣ ಯುವಕರು, ಕಸುಬುದಾರರು ಹಳ್ಳಿಗಳನ್ನು ತೊರೆದು ಪಟ್ಟಣಗಳಿಗೆ ವಲಸೆ ಹೋಗುವ ಪಿಡುಗು ತಪ್ಪುತ್ತದೆ. ಗ್ರಾಮದ ಕೆರೆಗಳ ರಕ್ಷಣೆ, ಜಲ ಸಂಪನ್ಮೂಲಗಳ ರಕ್ಷಣೆ, ಹಳ್ಳಿಗರ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.

ರಾಜಕೀಯ ಪಕ್ಷಗಳ ಹಾವಳಿ ಹಳ್ಳಿಗಳಲ್ಲಿ ತಪ್ಪುತ್ತದೆ. ಪಂಚಾಯ್ತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಭಾಗವಹಿಸುವಂತಿಲ್ಲ, ಮೂಗು ತೂರಿಸುವಂತಿಲ್ಲ ಎಂಬ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ. ಆದರೂ ರಾಜಕೀಯ ಪಕ್ಷಗಳು ಪ್ರಚ್ಛನ್ನವಾಗಿ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಭಾಗವಹಿಸುತ್ತಿವೆ. ಗ್ರಾಮ ಸ್ವರಾಜ್ಯ ಸ್ಥಾಪನೆಯಾದ ಮೇಲೆ ರಾಜಕೀಯ ಪಕ್ಷಗಳು ಗ್ರಾಮಗಳಿಗೆ ನುಸುಳದಂತೆ ಮಾಡುವ ಕಾನೂನನ್ನು ಗ್ರಾಮ ಪಂಚಾಯ್ತಿ ಕೈಗೊಳ್ಳಬಹುದು. ಆರೋಗ್ಯ ಕೇಂದ್ರಗಳನ್ನು, ಕುಡಿಯುವ ನೀರನ್ನು ಪೂರೈಸುವ ಕೆಲಸವನ್ನೂ ಈಗ ಸರ್ಕಾರ ಖಾಸಗಿ ಯುವಕರಿಗೆ ವಹಿಸುತ್ತಿವೆ. ಗ್ರಾಮ ಸ್ವರಾಜ್ಯದಲ್ಲಿ ಇವೆರಡರ ನಿರ್ವಹಣೆಯ ಹೊಣೆಗಾರಿಕೆಯನ್ನು ಪಂಚಾಯ್ತಿಗಳು ನಿರ್ವಹಿಸುತ್ತಿವೆ. ಖಾಸಗಿಯವರ ಶೋಷಣೆಯಿಂದ ಗ್ರಾಮಗಳು ಮುಕ್ತವಾಗುತ್ತವೆ. ಪರದೇಶಗಳ ಕಂಪನಿಗಳು ತಯಾರಿಸುವ ಫೇಸ್ ಪೌಡರ್, ಕುಂಕುಮ, ಸೋಪು, ಟೂತ್‍ಪೇಸ್ಟ್, ಕಾಡಿಗೆ, ಕೃತಕ ನೂಲಿನ ಬಟ್ಟೆಗಳು, ಸಿದ್ಧ ಪಡಿಸಿದ ಉಡುಪುಗಳು, ಪೆಪ್ಸಿ ಕೋಲಾ, ಫ್ರೂಟಿ ಗ್ರಾಮಗಳಿಗೆ ನುಗ್ಗಿಬರುತ್ತಿವೆ ಗ್ರಾಮಸಭೆಯತ್ತ ಗ್ರಾಮ ಪಂಚಾಯ್ತಿಗಳು ಈ ಬಗೆಯ ಶೋಷಣೆಗೆ ಅವಕಾಶ ಕೊಡುವುದಿಲ್ಲ.

ಅವು ಗ್ರಾಮಗಳಿಗೆ ಪ್ರವೇಶಿಸದಂತೆ ಕಾನೂನು ಕಟ್ಟಳೆ ಮಾಡಲಾಗುತ್ತದೆ. ಊರಿನಲ್ಲಿ ನಡೆಯುವ ಕಳ್ಳತನ, ಹಾದರ, ಮೋಸ, ದಾಂಧಲೆ ಇವುಗಳನ್ನೆಲ್ಲ ತಡೆಯಲು ಸ್ವತಂತ್ರ ಪೊಲೀಸ್ ವ್ಯವಸ್ಥೆ ಗ್ರಾಮಮಟ್ಟದ ನ್ಯಾಯಾಲಯಗಳನ್ನು ಸ್ಥಾಪಿಸಿಕೊಳ್ಳಲಾಗುತ್ತದೆ. ಭಾರಿ ಕೊಲೆ, ವಂಚನೆ ಮುಂತಾದ ಅಪರಾಧಗಳನ್ನು ರಾಜ್ಯ ಸರ್ಕಾರ ನಿರ್ವಹಿಸುತ್ತದೆ. ಗ್ರಾಮಸಭೆ ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ನಡೆಯಬೇಕು. ಹಳ್ಳಿಯ ಅಸೆಂಬ್ಲಿ ಅದಾಗಬೇಕು. ಗ್ರಾಮಸಭೆ ಎರಡು ದಿನ ನಡೆಯಬೇಕು. ಮೊದಲನೆಯ ದಿನ ವರದಿ ಮಂಡನೆ ಅದರ ಮೇಲೆ ಚರ್ಚೆ ನಡೆಯಬೇಕು. ನಡೆದಿರುವ ದುವ್ರ್ಯವಹಾರಗಳ ಕೂಲಂಕಶ ಚರ್ಚೆಯಾಗಿ ಅದನ್ನೇ ನಡೆಸಿದವರ ಮೇಲೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ನಿರ್ಣಯ ರೂಪದಲ್ಲಿ ಮಂಡಿಸಿ ಸಭೆಯ ಸಮ್ಮತಿ ಪಡೆದುಕೊಳ್ಳಬೇಕು.

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದಿಂದ ಬರುವ ಹಣ ಮನೆಗಂದಾಯ, ಭೂ ಕಂದಾಯದಿಂದ ಬಂದ ಹಣ ಕಾರ್ಖಾನೆಗಳು, ಹೋಟೆಲ್ ಮುಂತಾದ ಉದ್ಯಮಗಳು ಬಸ್‍ಸ್ಟಾಂಡಿನ ನಿರ್ವಹಣೆ ತೆರಿಗೆ ಟೋಲ್, ನೀರಿನ ಸೆಸ್ ಮುಂತಾದ ಬಾಬತ್ತುಗಳಿಂದ ಬರುವ ವರಮಾನ ನಾನಾ ಬಾಬುಗಳಿಂದ ಸಂಗ್ರಹವಾಗುವ ಹಣ ಗ್ರಾಮದ ಸಂಪನ್ಮೂಳ ಇದನ್ನು ಪಾರದರ್ಶಕವಾಗಿ ನಿರ್ವಹಿಸುವ ಜವಾಬ್ದಾರಿ ಪಂಚಾಯ್ತಿಯದು. ಆದ್ಯತೆಯ ಮೇಲೆ ಬಡತನ ನಿವಾರಣೆ ಯೋಜನೆಗಳನ್ನು ರೂಪಿಸಬೇಕು. ಈ ಕೆಲಸ ಅಂತ್ಯೋದಯದಿಂದ ಆರಂಭ ಆಗಬೇಕು. ಮೊದಲ ಆದ್ಯತೆ ಹಳ್ಳಿಯ ಕಟ್ಟಕಡೆಯ ವ್ಯಕ್ತಿಯನ್ನು ಬಡತನದಿಂದ ಪಾರು ಮಾಡುವುದು ಹೀಗೆ ಗ್ರಾಮದ ಎಲ್ಲರಿಗೂ ಊಟ, ಉದ್ಯೋಗ, ವಿದ್ಯೆ ಇರಲು ಮನೆ ಒದಗಿಸುವುದು ಸರ್ವೋದಯದ ಗುರಿ.

ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ಪಂಚಾಯ್ತಿಯ ಆದ್ಯ ಕರ್ತವ್ಯವಾಗಬೇಕು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here