Homeಅಂಕಣಗಳುಎಲೆಮರೆಯಿಂದಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ

ಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ಕೂಡಾ ಬ್ಯಾರಿ ಸಮುದಾಯದ ಈ ಪ್ರತಿಭಾವಂತ ಹಿರಿಯ ಸಾಹಿತಿಯನ್ನು ಗುರುತಿಸದೇ ಇರುವುದು ಖೇದಕರ.

- Advertisement -
- Advertisement -

ಕೊರೊನಾ ಲಾಕ್‌ಡೌನ್‌ನಿಂದಾಗಿ ಮಸೀದಿ ಬಾಗಿಲುಗಳು ಮುಚ್ಚಲ್ಪಟ್ಟಾಗ ಮೌಲ್ವಿಗಳು ಅಕ್ಷರಶಃ ನಿರುದ್ಯೋಗಿಗಳಾಗಿಬಿಟ್ಟಿದ್ದರು. ಈ ದುರಿತ ಕಾಲದಲ್ಲಿ ಕೆಲವರು ಜೀವನೋಪಾಯಕ್ಕಾಗಿ ಬೇರೆ ಕಸುಬುಗಳತ್ತ ಮುಖ ಮಾಡಿದರೆ, ಅದರ ಕುರಿತಾಗಿಯೂ ಪರ ವಿರೋಧ ಚರ್ಚೆಗಳೇರ್ಪಡುತ್ತಿವೆ.

ಮೌಲ್ವಿಗಳೆಂದರೆ ಮಸೀದಿಗೇ ಸೀಮಿತವಾಗಿರಬೇಕು, ಅವರ ಉಡುಗೆ-ತೊಡುಗೆಗಳು, ವಿಚಾರಗಳು ಅವರಿಗೆಂದೇ ನಿಗದಿಪಡಿಸಿದ ಅಚ್ಚಿನೊಳಗೆ ಕೂರುವಂತಿರಬೇಕು ಎಂಬುವುದು ನಮ್ಮ ಸಮಾಜದ ಸಂಕುಚಿತ ಧೋರಣೆಯಾಗಿದೆ. ಈ ಅಂತರ್ಗತ ಪೂರ್ವಾಗ್ರಹಗಳಿಗೆ ಅಂಜಿಕೊಂಡು ಅವರು ತಮಗೆ ತಾವೇ ಒಂದು ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗಗಳ ನಡುವೆ ಕೇವಲ ಆರು ವರ್ಷಗಳ ಕಾಲವಷ್ಟೇ ಮಸೀದಿಯಲ್ಲಿ ಮೌಲ್ವಿಯಾಗಿ ಸೇವೆ ಸಲ್ಲಿಸಿ ಆ ಬಳಿಕ ಪೂರ್ಣಕಾಲಿಕವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಬ್ಯಾರಿ-ಮುಸ್ಲಿಂ ಸಮುದಾಯದ ಅಪ್ರತಿಮ ಪ್ರತಿಭೆ, ಪ್ರಗತಿಪರ ನಿಲುವಿನ ವಿದ್ವಾಂಸ ಸಾಲೆತ್ತೂರು ಅಬೂಬಕರ್ ಫೈಝಿ ನೆನಪಾಗುತ್ತಾರೆ. ಇಸ್ಲಾಮನ್ನು ಕನ್ನಡದಲ್ಲಿ ತೆರೆದಿಟ್ಟ ಬೆರಳೆಣಿಕೆಯ ಮೊದಲ ಹಂತದ ಸಾಹಿತಿಗಳಲ್ಲಿ ಫೈಝಿ ಅಂಗ್ರಪಂಕ್ತಿಯಲ್ಲಿ ಕಾಣಸಿಗುತ್ತಾರೆ. ಇಸ್ಲಾಮಿನ ಬೇರೆ ಬೇರೆ ಪ್ರವಾದಿಗಳ, ಸೂಫಿಗಳ ಮತ್ತು ಇತಿಹಾಸಪುರುಷರ ಬದುಕಿನ ಚಿತ್ರಗಳನ್ನು ಸೃಜನಶೀಲ ಪ್ರಕಾರದಲ್ಲಿ ಕಟ್ಟಿಕೊಟ್ಟವರಲ್ಲಿ ಫೈಝಿ ಮೊದಲಿಗರು. ನನ್ನರಿವಿಗೆ ನಿಲುಕಿದಂತೆ ಕನ್ನಡದಲ್ಲಿ ಸಾಹಿತ್ಯವನ್ನೇ ಜೀವನೋಪಾಯವಾಗಿಸಿದ ವಿರಳಾತಿವಿರಳರಲ್ಲಿ ಶಿವರಾಮ ಕಾರಂತರು ಪ್ರಮುಖರಾಗಿದ್ದರು. ಅಂತೆಯೇ ಈ ಸಾಲೆತ್ತೂರು ಫೈಝಿಯವರಿಗೆ ಸಾಹಿತ್ಯವೇ ಜೀವನೋಪಾಯ. ಚಿಕ್ಕಂದಿನಲ್ಲಿ ಅಂಗಡಿಯವನು ದಿನಸಿ ಕಟ್ಟಿಕೊಡುತ್ತಿದ್ದ – ಓದಿದರೂ ತಲೆಬುಡ ಸಿಗದ ಪತ್ರಿಕೆಗಳ ತುಂಡು ಕಾಗದಗಳು, ಸಾಹಿತ್ಯಾಸಕ್ತರಾಗಿದ್ದ ಅಣ್ಣ ಮುಹಮ್ಮದರು ಓದಿ ಅಟ್ಟದಲ್ಲಿ ಕಟ್ಟಿಹಾಕಿದ್ದ ಕನ್ನಡ ಕಾದಂಬರಿಗಳು ಓದಿನ ದಾಹ ತಣಿಸುತ್ತಿದ್ದವು. ಉದಯವಾಣಿ ಪತ್ರಿಕೆಯ ಅಂದಿನ ಪ್ರಮುಖ ಅಂಕಣಕಾರರಾಗಿದ್ದ ಕು.ಶಿ.ಹರಿದಾಸ ಭಟ್ಟ, ಕಳ್ಳಿಗೆ ಮಹಾಬಲ ಭಂಡಾರಿ ಮತ್ತು ಬೈಕಾಡಿ ವೆಂಕಟಕೃಷ್ಣ ರಾಯರ ಲೇಖನಗಳು ಅವರ ಓದಿನ ಹರವನ್ನು ವಿಸ್ತರಿಸಿಕೊಳ್ಳಲು ನೆರವಾಯಿತು.

ಫೈಝಿ ಕಲಿತದ್ದು ಐದನೇ ತರಗತಿಯವರೆಗೆ ಮಾತ್ರ. ಅಪಾರ ಓದು, ಸೂಕ್ಷ್ಮಗ್ರಾಹಿತ್ವ, ಸುತ್ತಮುತ್ತಲ ಪರಿಸರದ ಕುರಿತಂತೆ ತೀರದ ಕುತೂಹಲ ಅವರನ್ನು ಸಾಹಿತಿಯಾಗಿಸಿತ್ತು.

ಕರ್ನಾಟಕ – ಕೇರಳದ ಗಡಿಭಾಗದಲ್ಲಿರುವ ಪೊಯ್ಯತ್ತಬೈಲ್ ಎಂಬಲ್ಲಿ ಧಾರ್ಮಿಕ ಶಿಕ್ಷಣ ಕಲಿಯುತ್ತಿದ್ದ ಕಾಲದಲ್ಲಿ ಹಿರಿಯ ಸಾಹಿತಿ, ಸಂಶೋಧಕ ಬಿ.ಎಂ. ಇಚ್ಲಂಗೋಡು ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ “ತವನಿಧಿ” ಪತ್ರಿಕೆಯಲ್ಲಿ ಸೂಫಿಗಳ ಸುಲ್ತಾನ ಬಗ್ದಾದಿನ ಶೇಖ್ ಮುಹಿಯುದ್ದೀನರ ಬದುಕಿನ ಕುರಿತಂತೆ ಫೈಝಿಯವರ ಮೊದಲ ಲೇಖನ ಪ್ರಕಟವಾಯಿತು. ಅಲ್ಲಿಂದ ಮುಂದೆ ದಣಿವರಿಯದೇ ಬರೆಯತೊಡಗಿದರು.
ಕೇರಳದ ಪಟ್ಟಿಕ್ಕಾಡ್ ಎಂಬಲ್ಲಿನ ಜಾಮಿಯಾ ನೂರಿಯಾ ಇಸ್ಲಾಮಿಯಾ ಎಂಬ ಇಸ್ಲಾಮಿಕ್ ವಿದ್ಯಾಲಯದಿಂದ ಫೈಝಿ ಪದವಿ ಪಡೆದು ಮಸೀದಿಯಲ್ಲಿ ಮೌಲ್ವಿ ಉದ್ಯೋಗಕ್ಕೆ ನಿಂತರೂ ಸಾಹಿತ್ಯದೆಡೆಗಿನ ಒಲವು ಕಡಿಮೆಯಾಗಲಿಲ್ಲ. ಮಸೀದಿಯಲ್ಲಿ ಇಮಾಮರಾಗಿದ್ದಾಗಲೇ ’ಅಲ್-ಮುನೀರ್’ ಎಂಬ ಪತ್ರಿಕೆಯೊಂದನ್ನು ಹೊರತರುತ್ತಿದ್ದರು. ಅಲ್ಪಕಾಲದಲ್ಲೇ ಪತ್ರಿಕೆ ಆರ್ಥಿಕ ಅಡಚಣೆಯಿಂದ ಮುಚ್ಚಿಹೋಯಿತು.

1991ರಲ್ಲಿ ಇಬ್ರಾಹಿಂ ಬಾವ ಹಾಜಿ ಎಂಬವರು ಪ್ರಾರಂಭಿಸಿದ ಮುಸ್ಲಿಂ ಸಾಮಾಜಿಕ – ಧಾರ್ಮಿಕ ವಾರಪತ್ರಿಕೆಗೆ ಫೈಝಿಯವರನ್ನು ಸಂಪಾದಕರಾಗಿ ನೇಮಕ ಮಾಡಿದರು. ಮೂರು ವರ್ಷಗಳ ಕಾಲ ಹೆಚ್ಚುಕಡಿಮೆ ಏಕಾಂಗಿಯಾಗಿ ಇಡೀ ಪತ್ರಿಕೆಯನ್ನು ಅತ್ಯಂತ ಜತನದಿಂದ ಮತ್ತು ಜಾಣ್ಮೆಯಿಂದ ನಡೆಸಿದರು. ಆ ಕಾಲದಲ್ಲಿ ಮುಸ್ಲಿಂ ಬರಹಗಾರರ ಸಂಖ್ಯೆ ಬಹಳ ಕಡಿಮೆಯಿತ್ತು. ಹಾಗೆ ಕೆಲವು ಬರಹಗಾರರಿದ್ದರೂ ಅಲ್-ಅನ್ಸಾರ್ ಪತ್ರಿಕೆಯ ಚೌಕಟ್ಟಿನುಸಾರ ಬರೆಯುವವರ ಸಂಖ್ಯೆ ತೀರಾ ವಿರಳವಿತ್ತು. ಆ ಕಾಲದಲ್ಲಿ ಫೈಝಿಯೊಬ್ಬರೇ ಬಹುತೇಕ ಬರಹಗಳನ್ನು ಬೇರೆಬೇರೆ ಹೆಸರುಗಳಲ್ಲಿ ಪ್ರಕಟಿಸಿ ಪತ್ರಿಕೆಗೆ ಜೀವ ತುಂಬುತ್ತಿದ್ದರು. ಪತ್ರಿಕೆಯ ಮುಖಪುಟವು ಸಮಕಾಲೀನ ರಾಜಕೀಯ ವಿಶ್ಲೇಷಣೆಗೆ ಮೀಸಲಾದರೆ, ಒಳಪುಟಗಳಲ್ಲಿ ಇಸ್ಲಾಮೀ ಕರ್ಮಶಾಸ್ತ್ರ್ರ, ಧಾರಾವಾಹಿ, ಪ್ರಶ್ನೋತ್ತರ, ಪದಬಂಧ ಇತ್ಯಾದಿಗಳನ್ನೊಳಗೊಂಡು ಪ್ರಬುದ್ಧ ಪತ್ರಿಕೆಯಾಗಿ ಮುಸ್ಲಿಂ ಓದುಗ ವಲಯದಲ್ಲಿ ಜನಪ್ರಿಯವಾಯಿತು. ಮುಂದೆ ಕನ್ನಡದಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಂ ಬರಹಗಾರರು ಹೊರಬರಲು ಅಲ್-ಅನ್ಸಾರ್ ಪತ್ರಿಕೆಯ ಕೊಡುಗೆಯೂ ದೊಡ್ಡದಿದೆ ಎಂದರೆ ತಪ್ಪಾಗದು.

ಫೈಝಿ ಓರ್ವ ಧಾರ್ಮಿಕ ಸಾಹಿತಿಯಾಗಿ ಮಾತ್ರ ಉಳಿಯಲಿಲ್ಲ. 1994ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿದ್ದ ಕರುಣಾಕರನ್ ಅವರ ಕಾರು ಅತಿ ವೇಗವಾಗಿ ಚಲಾಯಿಸಿ ರಸ್ತೆಬದಿಯಲ್ಲಿದ್ದ ಬಡಪಾಯಿಯ ಸಾವಿಗೆ ಕಾರಣವಾಗಿತ್ತು. ಅಷ್ಟುಹೊತ್ತಿಗೆ ಸಂಪಾದಕ ಸ್ಥಾನ ಕೈತಪ್ಪಿದ್ದರಿಂದ ಅಲ್-ಅನ್ಸಾರ್‌ನಲ್ಲಿ ಕರುಣಾಕರನ್ ಅವರ ಬೇಜವಾಬ್ದಾರಿಯನ್ನು ವಿರೋಧಿಸಿ ಬರೆಯಲಾಗದ್ದಕ್ಕೆ ಲಂಕೇಶ್ ಪತ್ರಿಕೆಯಲ್ಲ್ಲಿ ಬರೆದು ತನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದರು.

ಸಾಮಾನ್ಯವಾಗಿ ದ.ಕ. ಮತ್ತು ಕೊಡಗು ಜಿಲ್ಲೆಯ ಹೆಚ್ಚಿನವರು ಧಾರ್ಮಿಕ ಪದವಿಗಾಗಿ ಕೇರಳದ ವಿದ್ಯಾಲಯಗಳನ್ನು ಆಶ್ರಯಿಸುತ್ತಾರೆ. ಆದುದರಿಂದ ಅವರ ಕನ್ನಡ ಬರಹಗಳಲ್ಲಿ ಮಲ್ಗನ್ನಡ ಪದಗಳು (ಮಲಯಾಳಂ+ಕನ್ನಡ) ಯಥೇಚ್ಛವಾಗಿ ಕಾಣಸಿಗುತ್ತವೆ. ಫೈಝಿಯವರು ಕೇರಳದಲ್ಲಿ ಕಲಿತವರಾದರೂ ಅವರ ಬರಹಗಳಲ್ಲಿ ದುರ್ಬೀನು ಹಿಡಿದು ಹುಡುಕಿದರೂ ಮಲ್ಗನ್ನಡ ಪದ ಸಿಗಲಾರದು. ಸಂಪಾದಕ ದ್ದೆ ಕೈತಪ್ಪಿದ ಬಳಿಕ ಒಂಭತ್ತು ವರ್ಷಗಳ ಕಾಲ ಹೊರಗಿಂದಲೇ ಅಲ್-ಅನ್ಸಾರ್‌ಗೆ ಲೇಖನಗಳನ್ನು ಬರೆಯುತ್ತಿದ್ದರು.
೨೦೦೯ರಲ್ಲ್ಲಿ ಮದರಂಗಿ ಎಂಬ ಮಾಸಿಕ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡರು. ಅವರ ಸಂಪಾದಕತ್ವದಲ್ಲಿ ಮದರಂಗಿ ಮಾಸಿಕ ಕರಾವಳಿ ಮುಸ್ಲಿಮರ ವಲಯದಲ್ಲಿ ಬಹಳ ಜನಪ್ರಿಯವಾಯಿತು. ೨೦೧೦ರ ಮಾರ್ಚ್ ತಿಂಗಳಲ್ಲಿ ಅವರೊಂದು ಅದ್ಭುತ ಸಂಪಾದಕೀಯ ಬರೆದಿದ್ದರು. “ಮಧುಮಾಸದ ಮಧುರಿಮೆ” ಎಂಬ ಶೀರ್ಷಿಕೆಯ ಆ ಸಂಪಾದಕೀಯದ ಪ್ರತಿಯೊಂದು ಪದವೂ “ಮ”ಕಾರದಿಂದ ಪ್ರಾರಂಭವಾಗಿತ್ತು. ಕನ್ನಡ ಪತ್ರಿಕೋದ್ಯಮದಲ್ಲಿ ಅದೊಂದು ವಿಶಿಷ್ಟ ಪ್ರಯೋಗವಾಗಿತ್ತು.
ಮದರಂಗಿಯಲ್ಲಿ ಅವರು ಬರೆಯುತ್ತಿದ್ದ “ಶಮ್ಮಿ ಕಾಲಮ”ನ್ನು ಮೊನ್ನೆ ಅವರಲ್ಲಿ ಮಾತಾಡುವವರೆಗೂ ಅದು ಹೆಣ್ಣೊಬ್ಬಳು ಬರೆಯುತ್ತಿದ್ದ ಅಂಕಣವೆಂದೇ ನಂಬಿದ್ದೆ. ಆ ಮಟ್ಟಿಗೆ ಹೆಣ್ಣೊಬ್ಬಳ ತುಮುಲವನ್ನು ಪರಿಣಾಮಕಾರಿಯಾಗಿ ಬರೆಯುತ್ತಿದ್ದರು.

ಫೈಝಿ ತನ್ನ ಬರಹದ ಆರಂಭಕಾಲದಿಂದಲೂ ವರದಕ್ಷಿಣೆ ಎಂಬ ಮಹಾಮಾರಿಯ ವಿರುದ್ಧ ಲೇಖನಿ ಝಳಪಿಸುತ್ತಾ ಬಂದಿದ್ದಾರೆ. ಕರಾವಳಿಯ ಮುಸ್ಲಿಂ ಸಮುದಾಯದೊಳಗೆ ಹಾಸುಹೊಕ್ಕಾಗಿದ್ದ ಮೌಢ್ಯಗಳ ವಿರುದ್ಧ ತನ್ನ ಬರಹಗಳ ಮೂಲಕ ಸಮರ ಸಾರಿದ್ದರು. ವಾಸ್ತು ಎಂಬ ಮನೆ ಒಡೆಯುವ ಹುಚ್ಚಾಟದಿಂದ ಮುಸ್ಲಿಂ ಸಮುದಾಯವೂ ಹೊರತಾಗಿರಲಿಲ್ಲ. ಅದರ ವಿರುದ್ಧ ಬರೆದಿದ್ದ “ವಾಸ್ತು-ವಾಸ್ತವವೇನು?” ಎಂಬ ಸರಣಿ ಬರಹಗಳು ಮುಸ್ಲಿಂ ವಾಸ್ತುತಜ್ಞರ ನಿದ್ದೆಗೆಡಿಸಿತ್ತು. ವಾಸ್ತು ಇಸ್ಲಾಮಿನಲ್ಲಿ ಇಲ್ಲವೇ ಇಲ್ಲ ಎಂದು ಖುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ವಾಸ್ತುತಜ್ಞರ ಹುನ್ನಾರವನ್ನು ಬಯಲಿಗೆಳೆದು ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾಗಿದ್ದರು. ಕರಾವಳಿಯ ಮುಸ್ಲಿಂ ಸಮುದಾಯದಲ್ಲಿ ವಾಸ್ತುವಿನ ಹುಚ್ಚು ಇಂದು ವಿರಳವಾಗಿದ್ದರೆ ಅದರ ಹಿಂದೆ ಫೈಝಿಯವರ ಬರಹದ ಪ್ರಭಾವವಿದೆ.

ಅವರ ಬರಹಗಳಿಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವ, ಚಿಂತನೆಗೆ ಹಚ್ಚುವ ಮತ್ತು ತಿದ್ದುವ ಶಕ್ತಿ ಇದೆ. ಪ್ರವಾದಿ ಮುಹಮ್ಮದ್ (ಸ): ಬದುಕು ಮತ್ತು ಆದರ್ಶ, ಗುಹೆಯಲ್ಲಿ ಹುಟ್ಟಿದ ಅದ್ಭುತ ಶಿಶು, ಕನಸಿನ ರಾಜ, ಸೇಬು ತಿಂದ ಹುಡುಗ, ಇಸ್ಲಾಮಿನ ಆಂತರ್ಯ, ಆಶುರಾ ಬೀಬಿ, ಲುಕ್ಮಾನುಲ್ ಹಕೀಂ, ಆಧುನಿಕ ವೈದ್ಯಶಾಸ್ತ್ರದ ಪಿತಾಮಹ ಇಬ್ನ್ ಸೀನಾ.. (ಅವಿಸ್ಸಿನ್ನಾ) ಹೀಗೆ ಸುಮಾರು ಇನ್ನೂರಕ್ಕೂ ಮಿಕ್ಕಿದ ಕೃತಿಗಳನ್ನು ಫೈಝಿ ರಚಿಸಿದ್ದಾರೆ. ಅವುಗಳಲ್ಲಿ ಮಲಯಾಳಂ ಮತ್ತು ಅರೆಬಿಕ್‌ನಿಂದ ಅನುವಾದಿಸಿದ ಗ್ರಂಥಗಳೂ ಸೇರಿವೆ. ಪ್ರಕಾಶಕರು ಅವರ ಕೃತಿಗಳನ್ನು ಮುಸ್ಲಿಂ ಧಾರ್ಮಿಕ ಸಮಾರಂಭಗಳಲ್ಲಿ ಮಾರಾಟ ಮಾಡಿ ಮುಗಿಸಿ ಲಾಭ ಗಳಿಸಿದರೇ ಹೊರತು ಕಾಸರಗೋಡು, ದ.ಕ. ಮತ್ತು ಕೊಡಗಿನಾಚೆಗೆ ತಲುಪಿಸುವ ಪ್ರಯತ್ನ ಮಾಡಲೇ ಇಲ್ಲ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ಕೂಡಾ ಬ್ಯಾರಿ ಸಮುದಾಯದ ಈ ಪ್ರತಿಭಾವಂತ ಹಿರಿಯ ಸಾಹಿತಿಯನ್ನು ಗುರುತಿಸದೇ ಇರುವುದು ಖೇದಕರ.


ಇದನ್ನೂ ಓದಿ: ದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...