Homeಚಳವಳಿಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತಿರುವ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಲಿ: ವರದರಾಜೇಂದ್ರ

ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತಿರುವ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಲಿ: ವರದರಾಜೇಂದ್ರ

- Advertisement -
- Advertisement -

ರಾಜ್ಯದಲ್ಲಿ ಬಹುಚರ್ಚಿತ ಅನ್ನಭಾಗ್ಯ ಯೋಜನೆ ಜಾರಿಯಾಗಿ 10 ವರ್ಷಗಳಾಗಿವೆ. ಅದರ ಯಶಸ್ಸಿಗೆ ದುಡಿದ ಹಮಾಲಿ ಕಾರ್ಮಿಕರ ಬದುಕು ಮಾತ್ರ ಸುಧಾರಿಸಿಲ್ಲ. ಹಾಗಾಗಿ ಅನ್ನಭಾಗ್ಯ ಯೋಜನೆಯ ದಶಮಾನೋತ್ಸವ ಸಂದರ್ಭದಲ್ಲಾದರೂ ಮಹಾರಾಷ್ಟ್ರ ಮಾದರಿಯಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಬೇಕು ಎಂದು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ವರದರಾಜೇಂದ್ರ ಒತ್ತಾಯಿಸಿದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು “ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2013ರಲ್ಲಿ ಅಧಿಕಾರದಲ್ಲಿದ್ದಾಗ ಪಡಿತರ ವಿತರಣೆಯ ವ್ಯವಸ್ಥೆಗೆ ಅನ್ನಭಾಗ್ಯ ಯೋಜನೆಯೆಂದು ಹೆಸರಿಟ್ಟು, ಫ್ರೀಡಂ ಪಾರ್ಕಿನಲ್ಲಿ ಚಾಲನೆ ನೀಡಿದ್ದರು. ಆ ಮೂಲಕ ಸಮಗ್ರ ನೀತಿ ಜಾರಿ ಮಾಡಿ, ಬಡವರ ಬದುಕಿಗೆ ಬಹುದೊಡ್ಡ ಆಸರೆ ಕಲ್ಪಿಸಿದ್ದರು. ಅವರು ಅದನ್ನು ಜಾರಿ ಮಾಡುವ ಹಮಾಲಿ ಕಾರ್ಮಿಕರ ಬಗ್ಗೆಯೂ ಕಾಳಜಿ ವಹಿಸಬೇಕು” ಎಂದರು.

‘ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಅದೇಶವನ್ನು ಈ ಕೂಡಲೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿರುವ ಅವರು, “ಅನ್ನಭಾಗ್ಯ ಯೋಜನೆ ಜಾರಿ ಅಡಿ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಯಾವುದೇ ಸರ್ಕಾರದ ಅಧಿಕಾರಿಗಳು, ಗುತ್ತಿಗೆದಾರರು ಕಿರುಕುಳ ನೀಡಿ ಕೆಲಸದಿಂದ ಕಿತ್ತುಹಾಕುವುದನ್ನು ತಪ್ಪಿಸಲು ಕೆಲಸದ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

“ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯನ್ನು ಜಾರಿಗೆ ತರಬೇಕು. ಎಲ್ಲ ಗುತ್ತಿಗೆ, ಅಸಂಘಟಿತ ಹಾಗೂ ಅಭದ್ರಿತ ಕಾರ್ಮಿಕರಿಗೂ ಕನಿಷ್ಟ 30 ಸಾವಿರ ವೇತನ ಹಾಗೂ ಉದ್ಯೋಗ ಭದ್ರತೆಯನ್ನು ಖಾತ್ರಿಗೊಳಿಸಿ ನೀತಿ ರೂಪಿಸಬೇಕು. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ನಗದು ಹಣ ನೀಡುವುದನ್ನು ನಿಲ್ಲಿಸಿ ಆಹಾರ ಧಾನ್ಯಗಳನ್ನೇ ನೀಡಬೇಕು. ಅನ್ನಭಾಗ್ಯ ಹಮಾಲಿ ಕಾರ್ಮಿಕರಿಗೆ ಆಹಾರ ನಿಗಮದ ಮೂಲಕ ಸರ್ಕಾರವೇ ನೇರ ಸಂಬಳ ಪಾವತಿ ಮಾಡಲು ಮುಂದಾಗಬೇಕು” ಎಂದು ಒತ್ತಾಯಿಸಿದರು.

ಈ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಜುಲೈ 10ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಕಾರ್ಮಿಕರ ದಶಮಾನೋತ್ಸವ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬಿಡಬ್ಲ್ಯೂಎಸ್‌ಎಸ್‌ಬಿ ಗುತ್ತಿಗೆ ಕಾರ್ಮಿಕರು, ಅನ್ನಭಾಗ್ಯ ಹಮಾಲಿ ಕಾರ್ಮಿಕರು, ಮೆಟ್ರೋ ಕಾರ್ಮಿಕರು, ವಾಣಿಜ್ಯ ತೆರಿಗೆ ಕಾರ್ಮಿಕರು, ಬಿಬಿಎಂಪಿ ಪೌರ ಕಾರ್ಮಿಕರು, ರೇಸ್ ಕೋರ್ಸ್‌ ಕಾರ್ಮಿಕರು, ಆರೋಗ್ಯ ಸಾರಿಗೆ ಮುಂತಾದ ಇಲಾಖೆಗಳ ಕಾರ್ಮಿಕರೂ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಕಾರ್ಮಿಕ ಸಚಿವ ಸಂತೋಷ್ ಲಾಡ್‌, ಹಿರಿಯ ಕಾರ್ಮಿಕ ಮುಖಂಡ, ಹಿರಿಯ ಹೈಕೋರ್ಟ್ ವಕೀಲ ಎಸ್.ಬಾಲನ್, ಪ್ರೊ. ಬಾಬು ಮಾಥ್ಯೂ, ಸಾಮಾಜಿಕ ಕಾರ್ಯಕರ್ತರಾದ ಡಾ.ಹೆಚ್ ವಿ ವಾಸು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಆದಿನಾರಾಯಣ್, ರವಿ ಮೋಹನ್, ಬಿಬಿಎಂಪಿ ಪೌರ ಕಾರ್ಮಿಕ ಸಂಘದ ಚನ್ನಮ್ಮ ಉಪಸ್ಥಿತರಿದ್ದರು.

ಇದನ್ನೂ ಓದಿ: ಶಿವಮೊಗ್ಗ ಕೃಷಿ ವಿವಿ ನೇಮಕಾತಿಯಲ್ಲಿ ರೋಸ್ಟರ್ ವಂಚನೆಯಿಂದ 50 ದಲಿತ ಅಭ್ಯರ್ಥಿಗಳಿಗೆ ಅನ್ಯಾಯ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...