Homeಕರ್ನಾಟಕಶಿವಮೊಗ್ಗ ಕೃಷಿ ವಿವಿ ನೇಮಕಾತಿಯಲ್ಲಿ ರೋಸ್ಟರ್ ವಂಚನೆಯಿಂದ 50 ದಲಿತ ಅಭ್ಯರ್ಥಿಗಳಿಗೆ ಅನ್ಯಾಯ ಆರೋಪ

ಶಿವಮೊಗ್ಗ ಕೃಷಿ ವಿವಿ ನೇಮಕಾತಿಯಲ್ಲಿ ರೋಸ್ಟರ್ ವಂಚನೆಯಿಂದ 50 ದಲಿತ ಅಭ್ಯರ್ಥಿಗಳಿಗೆ ಅನ್ಯಾಯ ಆರೋಪ

- Advertisement -
- Advertisement -

ಶಿವಮೊಗ್ಗ ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ರೋಸ್ಟರ್ ವಂಚನೆಯಿಂದಾಗಿ 50 ದಲಿತ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ದಲಿತ ವಿದ್ಯಾರ್ಥಿಗಳ ಒಕ್ಕೂಟ ಆರೋಪಿಸಿದೆ.

ಈ ಕುರಿತು ಇಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಎಚ್.ಸಿ ಮಹಾದೇವಪ್ಪನವರಿಗೆ ಮನವಿ ಸಲ್ಲಿಸಿ, ಸರ್ಕಾರವು ಕೂಡಲೇ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದು ದಲಿತ ಅಭ್ಯರ್ಥಿಗಳಿಗೆ ಕಾನೂನಾತ್ಮಕವಾಗಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸರ್ಕಾರವು 1995 ರಲ್ಲಿ ಆದೇಶಿಸಿರುವ 100 ರಿಕ್ತ ಸ್ಥಾನಗಳ ರೋಸ್ಟರ್‌ನಂತೆ, ಸರ್ಕಾರಿ ವಿಶ್ವವಿದ್ಯಾಲಯಗಳು ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ವಿಷಯ/ವಿಭಾಗವನ್ನು ಒಂದು ಘಟಕ ಎಂದು ಪರಿಗಣಿಸಿ ಒಂದೊಂದು ವಿಭಾಗಕ್ಕೂ ಪ್ರತ್ಯೇಕ ರೋಸ್ಟರ್‌ ಅನ್ನು ಮಾಡುತ್ತವೆ. ಕರ್ನಾಟಕ ರಾಜ್ಯದ ಕೃಷಿ, ತೋಟಗಾರಿಕೆ ಮತ್ತು ಪಶು ವೈದ್ಯಕೀಯ ಸಂಬಂದಿತ ವಿಶ್ವವಿದ್ಯಾಲಯಗಳು ಸಹ ಇದನ್ನೇ ಅನುಸರಿಸುತ್ತಾ ಬಂದಿವೆ. ಶಿವಮೊಗ್ಗದ “ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಸಹ 2015 ರಲ್ಲಿ ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ವಿಷಯ/ವಿಭಾಗವಾರು ರೋಸ್ಟರ್‌ ಮಾಡಿದಾಗ ಒಟ್ಟು 85 ಸ್ಥಾನಗಳಲ್ಲಿ 41 ಸ್ಥಾನಗಳು ಪ.ಜಾ./ಪ.ಪಂ. ಅಭ್ಯರ್ಥಿಗಳಿಗೆ ಕಾನೂನುಬದ್ಧವಾಗಿ ಲಭಿಸಿತ್ತು. ಆದರೆ ಅದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನೇಮಕಾತಿಯನ್ನೇ ರದ್ದು ಮಾಡಿದವು. ಅದೇ ವಿಶ್ವವಿದ್ಯಾಲಯ 2019 ರಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹೊಸದಾಗಿ 109 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪ್ರಕಟಣೆ ಮಾಡಿತು. ಆದರೆ ಈ ಬಾರಿ ಇಡೀ ವಿಶ್ವವಿದ್ಯಾಲಯವನ್ನೇ ಒಂದು ಘಟಕ ಎಂದು ಪರಿಗಣಿಸಿ ತಪ್ಪಾದ ರೋಸ್ಟರ್ ಮಾಡಿದೆ. ಪರಿಣಾಮ ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ ಕೇವಲ 21 ಸ್ಥಾನ ಸಿಕ್ಕಿವೆ ಎಂದು ಒಕ್ಕೂಟ ಆರೋಪಿಸಿದೆ.

ಚಿತ್ರಕೃಪೆ: ವಾರ್ತಾಭಾರತಿ

ರಾಜ್ಯ ಸರ್ಕಾರದ ರೋಸ್ಟರ್ ನಿಯಮಗಳ ಪ್ರಕಾರ ಯಾವುದೇ ಹೊಸ ವಿಶ್ವವಿದ್ಯಾಲಯವು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ರೋಸ್ಟರ್ ಮಾಡುವಾಗ ಪ್ರಾರಂಭದ ಮೊದಲ ಬಿಂದು ಪರಿಶಿಷ್ಟ ಅಭ್ಯರ್ಥಿಗೆ, ಎರಡನೆ ಬಿಂದು ಸಾಮಾನ್ಯ ಅಭ್ಯರ್ಥಿಗೆ ಮತ್ತು 3 ನೇ ಬಿಂದು ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ ಮೀಸಲಿರುತ್ತದೆ ಮತ್ತು ಇತರ ಸಮುದಾಯಗಳ ಮೀಸಲಾತಿ ಮುಂದಿನ ಬಿಂದುಗಳಲ್ಲಿ ಬರುತ್ತದೆ. ಹೊಸ ವಿಶ್ವವಿದ್ಯಾಲಯಗಳಲ್ಲಿ ಹೊಸದಾಗಿ ವಿಭಾಗವಾರು ರೋಸ್ಟರ್ ಮಾಡಿದಾಗ, 1 ವಿಭಾಗಕ್ಕೆ ಕೇವಲ 2 ರಿಂದ 4 ಹುದ್ದೆಗಳನ್ನು ಮಾತ್ರ ತುಂಬುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೊದಲ ನೇಮಕಾತಿಯಲ್ಲಿ ಹೆಚ್ಚಿನ ಸ್ಥಾನಗಳು ದೊರೆಯುತ್ತಿರುವ ಹಾಗೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ನಂತರದ ನೇಮಕಾತಿಯಲ್ಲಿ ಇತರ ಮೀಸಲು ವರ್ಗಗಳಿಗೂ ಸ್ಥಾನಗಳು ದೊರೆಯುತ್ತವೆ ಎಂಬುದು ವಾಸ್ತವ ಸಂಗತಿ. ಅಂತಹ ಪದ್ದತಿಯನ್ನು ಕೈಬಿಟ್ಟಿರುವುದು ಅನ್ಯಾಯ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ಆರ್.ಕೆ.ಸಭರವಾಲ ಮತ್ತು ಇತರರು V/s ಸ್ಟೇಟ್ ಆಫ್ ಪಂಜಾಬ್ ಮತ್ತು ಇತರರು (10.02.1995.), ಡಾ.ರಾಜ್ ಕುಮಾರ್ ಮತ್ತು ಇತರರು V/s ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ಇತರರು (20.06.1990) ಪ್ರಕರಣ ಸೇರಿದಂತೆ ದೇಶದಲ್ಲಿನ ಅನೇಕ ನ್ಯಾಯಾಲಯಗಳು ವಿಷಯವಾರು/ವಿಭಾಗವಾರು ರೋಸ್ಟರ್ ಮಾಡುವುದೇ ಸಂವಿಧಾನಾತ್ಮಕ ಎಂದಿವೆ.

ವಿವೇಕಾನಂದ ತಿವಾರಿ ಮತ್ತು ಇತರರು V/s ಯುನಿಯನ್ ಆಫ್ ಇಂಡಿಯ ಮತ್ತು ಇತರರು (07.04.2017) ಕೇಸಿನಲ್ಲಿ ಅಲಹಾಬಾದ್ ಹೈ ಕೋರ್ಟ್ ವಿಭಾಗ/ವಿಷಯವಾರು ರೋಸ್ಟರ್‌ ಮಾಡುವುದೇ ಸಂವಿಧಾನಾತ್ಮಕ ನ್ಯಾಯ ಎಂದಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಹ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ. ಯುಜಿಸಿಯು ಸಹ 2018 ಮಾರ್ಚ್ 5 ರಂದು ಆದೇಶ ಹೊರಡಿಸಿ ಎಂದಿನಂತೆ ವಿಭಾಗ/ವಿಷಯವಾರು ರೋಸ್ಟ‌ರ್ ಮಾಡಲು ಆದೇಶಿಸಿದೆ. ಆದರೆ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದವು ವಿಶ್ವವಿದ್ಯಾಲಯ ಒಂದು ಘಟಕವಾಗಿ ರೋಸ್ಟರ್ ಮಾಡಿರುವುದರಿಂದ ದಲಿತ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದೆ.

ವಿಶ್ವವಿದ್ಯಾಲಯ ಒಂದು ಘಟಕವನ್ನಾಗಿ ಮಾಡಿದಾಗ ಕೆಲವು ವಿಭಾಗಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕೆಲವು ವಿಭಾಗಗಳಲ್ಲಿ ಮೀಸಲಾತಿ ಅಭ್ಯರ್ಥಿಗಳು ತುಂಬುತ್ತಾರೆ ಮತ್ತು ಸಂವಿಧಾನದ 14, 16ರ ವಿಧಿಯ ಅತಿಕ್ರಮಣ ಆಗುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಮುಂದುವರಿದು ಒಂದು ವಿಭಾಗದವರು ಮತ್ತೊಂದು ವಿಭಾಗದವರೊಂದಿಗೆ ಅಥವಾ ಒಂದು ವಿಷಯದವರು ಮತ್ತೊಂದು ವಿಷಯದವರೊಂದಿಗೆ ಸ್ಪರ್ಧಾಳು ಅಲ್ಲ ಹಾಗೂ ವರ್ಗಾವಣೆ ಮಾಡಲು ಸಹ ಸಾಧ್ಯವಿಲ್ಲ, ಆದುದರಿಂದ ವಿಶ್ವವಿದ್ಯಾಲಯಗಳು ನೇರ ನೇಮಕಾತಿಯಲ್ಲಿ ವಿಭಾಗ/ವಿಷಯವಾರು ರೋಸ್ಟರ್‌ನ್ನು ಪಾಲಿಸಲು ತಿಳಿಸಿತು ಮತ್ತು ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿಯಿತು.

ಎಲ್ಲಾ ರೋಸ್ಟರ್ ಅಂಶಗಳನ್ನು ಗಮನಿಸಿದಾಗ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯವು ಸಾರ್ವಜನಿಕವಾಗಿ ರಾಜ್ಯ ಸರ್ಕಾರದ ಆದೇಶ, ಯುಜಿಸಿ ಆದೇಶ, ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕಡೆಗಣಿಸಿ 50 ದಲಿತ ಆಕಾಂಕ್ಷಿಗಳ ಭವಿಷ್ಯತ್ತಿಗೆ ಕೊಡಲಿ ಪೆಟ್ಟನ್ನು ನೀಡಿರುವುದು ಸ್ಪಷ್ಟವಾಗಿದೆ. ಶೋಷಿತ ಸಮುದಾಯಗಳಲ್ಲಿ ಬೆರಳಣಿಕೆಯಷ್ಟು ಜನ ಪಿ.ಹೆಚ್.ಡಿಯನ್ನು ಮುಗಿಸಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಆದ್ದರಿಂದ ರಾಜ್ಯ ಸರ್ಕಾರವು ಪ್ರಸ್ತುತ ಪ್ರಗತಿಯಲ್ಲಿರುವ ನೇಮಕಾತಿಯನ್ನು ಕೂಡಲೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆಯ ರೋಸ್ಟರ್‌ಅನ್ನು ಅಳವಡಿಸಿ ವಂಚಿತ ಅಭ್ಯರ್ಥಿಗಳಿಗೆೆ ನ್ಯಾಯ ಕೊಡಿಸುವುದರ ಮೂಲಕ ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ ಎಂದು ಒಕ್ಕೂಟ ಒತ್ತಾಯಿಸಿದೆ.

ಇದನ್ನೂ ಓದಿ; ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...