ಗೋವಾ, ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನಾದೇಶದಿಂದ ಆಯ್ಕೆಯಾದ ಸರ್ಕಾರಗಳನ್ನು ಉರುಳಿಸಿ ಜನತಂತ್ರವಿರೋಧಿ ಆಪರೇಷನ್ ಕಮಲ ಎಂಬ ಹೀನ ತಂತ್ರಗಾರಿಕೆಯಿಂದ, ಹಿಂಬಾಗಿಲಿನಿಂದ ಅಧಿಕಾರ ಹಿಡಿದ ಬಿಜೆಪಿ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ವಿರೋಧ ಪಕ್ಷಗಳನ್ನು ಎರಡು ಹೋಳು ಮಾಡಿ 3ನೇ 2ರಷ್ಟು ಶಾಸಕರಿಗೆ ಅಧಿಕಾರದ ಆಮಿಷ ಅಥವಾ ಇಡಿ/ಸಿಬಿಐ ಭಯ ತೋರಿಸಿ ಸೆಳೆದುಕೊಳ್ಳುವ ಮೂಲಕ ಅಧಿಕಾರ ಹಿಡಿಯುವುದು ಮತ್ತು ವಿಪಕ್ಷಗಳನ್ನು ಬಲಿ ಕೊಡುವುದು ಅದರ ಹೊಸ ತಂತ್ರವಾಗಿದೆ. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಎರಡು ಭಾಗ ಮಾಡಿ, ಶಿಂಧೆ ಬಣದ ಬೆಂಬಲದೊಂದಿಗೆ ಅಧಿಕಾರಕ್ಕೇರಿದ್ದ ಬಿಜೆಪಿ ಸದ್ಯ ಎನ್‌ಸಿಪಿಯನ್ನು (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಎರಡು ಹೋಳು ಮಾಡಿದೆ.
ಎನ್‌ಸಿಪಿ ರಾಷ್ಟ್ರಾಧ್ಯಕ್ಷ ಶರದ್ ಪವಾರ್ ವಿರುದ್ಧ ಮುನಿಸಿಕೊಂಡಿದ್ದ ಅವರ ಅಣ್ಣನ ಮಗ ಅಜಿತ್ ಪವಾರ್‌ರನ್ನು ಬಿಜೆಪಿ ಸೆಳೆದುಕೊಂಡಿದೆ. ಅಜಿತ್ ಮೇಲೆ ಅಕ್ರಮ ಹಣ ಸಂಗ್ರಹಣೆಯಂತಹ ಗಂಭೀರ ಪ್ರಕರಣಗಳಿದ್ದು, ಅವುಗಳಿಂದ ಪಾರಾಗಲು ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಜುಲೈ 2ರಂದು ಸಿಎಂ ಏಕನಾಥ್ ಶಿಂಧೆಯವರ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿ ಉಪಮುಖ್ಯಮಂತ್ರಿ ಪಟ್ಟ ಪಡೆದ ಅಜಿತ್ ಪವಾರ್ ಮತ್ತು ಅವರ 8 ಬೆಂಬಲಿಗ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ 4 ವರ್ಷಗಳ ಅವಧಿಯಲ್ಲಿ ಮೂರು ಬಾರಿಗೆ ಪ್ರತ್ಯೇಕ ಮೈತ್ರಿ ಸರ್ಕಾರಗಳಲ್ಲಿ ಉಪಮುಖ್ಯಮಂತ್ರಿಯಾದ ದಾಖಲೆ ಅವರದ್ದಾಗಿದೆ.
ಬಿಜೆಪಿಯ ಲೆಕ್ಕಾಚಾರಗಳು
ಅಜಿತ್ ಪವಾರ್ 2019ರ ಅಂತ್ಯದಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿ ಉಪಮುಖ್ಯಮಂತ್ರಿಯಾಗಿ ತನ್ನ ಮೇಲಿನ ಕೇಸುಗಳು ಖುಲಾಸೆಗೊಂಡ ತಕ್ಷಣ ಯೂಟರ್ನ್ ಹೊಡೆದಿದ್ದರು. ವಾಪಸ್ ಎನ್‌ಸಿಪಿಗೆ ಮರಳಿ ಬಿಜೆಪಿಗೆ ಮುಖಭಂಗ ಮಾಡಿದ್ದರು. ಆದರೂ ಬಿಜೆಪಿ ಅವರನ್ನು ಮತ್ತೆ ಸೆಳೆದುಕೊಳ್ಳಲು ಸಾಕಷ್ಟು ಕಾರಣಗಳಿವೆ.

ದೇಶದ ಎರಡನೇ ಅತಿಹೆಚ್ಚು (48) ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅವಿಭಜಿತ ಶಿವಸೇನೆ ಮೈತ್ರಿಯು 41 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಭರ್ಜರಿ ಸಾಧನೆ ತೋರಿತ್ತು. ಆದರೆ ಈಗ ಮುಂಬರುವ 2024ರ ಲೋಕಸಭಾ ಚುನಾವಣೆ ವೇಳೆಗೆ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಏಕೆಂದರೆ 2019ರ ಅಂತ್ಯದಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಸಿಎಂ ಸ್ಥಾನದ ಕುಸ್ತಿಯಿಂದ ಬಿಜೆಪಿಯ ಬಹುವರ್ಷದ ಮಿತ್ರ ಪಕ್ಷ ಶಿವಸೇನೆ ಬಿಜೆಪಿ ವಿರೋಧಿ ಮೈತ್ರಿ ಪಾಳಯವನ್ನು ಸೇರಿದೆ. ಅಲ್ಲದೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡಂತೆ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಸ್ಥಾಪನೆಯಾಗಿತ್ತು. ಈ ಸರ್ಕಾರವನ್ನು ಕೆಡವಲು ಮೂರು ವರ್ಷಗಳ ಕಾಲ ಯತ್ನಿಸಿದ ಬಿಜೆಪಿ ಕೊನೆಗೂ 2022ರ ಅಂತ್ಯದಲ್ಲಿ ಯಶಸ್ವಿಯಾಯಿತು. ಶಿವಸೇನೆಯ ಏಕನಾಥ್ ಶಿಂಧೆಯ ಜೊತೆ 40 ಶಾಸಕರನ್ನು ಸೆಳೆದುಕೊಂಡು ಶಿಂಧೆಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು ಬಿಜೆಪಿ ಒಡೆದ ಶಿವನೇನೆ ಬಣದೊಂದಿಗೆ ಸರ್ಕಾರ ರಚಿಸಿತು. ಆಗ ಸಿಎಂ ಆಗಲು ತುದಿಗಾಲಲ್ಲಿ ನಿಂತಿದ್ದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಡಿಸಿಎಂ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಆದರೆ ಈ ಒಂದು ವರ್ಷದಲ್ಲಿ ಬಿಜೆಪಿಗೆ ಅರಿವಾಗಿದ್ದೇನೆಂದರೆ ಶಿಂಧೆ ಜೊತೆ 40 ಶಾಸಕರಿದ್ದರೂ ಸಹ ಅವರಿಗೆ ತಳಮಟ್ಟದಲ್ಲಿ ಸದೃಢ ಪಕ್ಷ ಸಂಘಟನೆಯಿಲ್ಲ. ಜೊತೆಗೆ ವಿರೋಧಿ ಉದ್ಧವ್ ಠಾಕ್ರೆ ಪರವಾಗಿ ಜನರ ಸಿಂಪಥಿ ಮತ್ತು ಪಕ್ಷ ಸಂಘಟನೆ ಬಲವಾಗಿದೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇವಲ ಶಿಂಧೆ ಬಣದೊಟ್ಟಿಗಿನ ಮೈತ್ರಿ ಜೊತೆಗೆ ಹೋದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ ಎಂದು ಅರಿತು ಬಿಜೆಪಿಯು ಅಜಿತ್ ಪವಾರ್ ಮೇಲೆ ತನ್ನ ಕಣ್ಣಿಟ್ಟಿತ್ತು.
ಅಜಿತ್ ಪವಾರ್ ತಮ್ಮ ಜೊತೆಗೆ ಎನ್‌ಸಿಪಿಯ 54ರಲ್ಲಿ 36 ಶಾಸಕರ ಮತ್ತು 5 ಸಂಸದರಲ್ಲಿ ಇಬ್ಬರ ಬೆಂಬಲ ತಮಗಿದೆ ಎಂದು ಹೇಳಿಕೊಂಡಿದ್ದಾರೆ. ಸಾಕಷ್ಟು ಆಡಳಿತದ ಅನುಭವ ಮತ್ತು ಪಕ್ಷ ಸಂಘಟನೆಯ ಸಾಮರ್ಥ್ಯವಿರುವ ಅಜಿತ್ ಪವಾರ್ ಸದ್ಯ ಮೂಲ ಎನ್‌ಸಿಪಿ ಪಕ್ಷ ತಮ್ಮದೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುವ ಭರವಸೆಯನ್ನು ನೀಡಿದೆ.

ಇದೇ ಸಮಯದಲ್ಲಿ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್‌ಗಿಂತ ಏಕನಾಥ್ ಶಿಂಧೆ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ ಎಂದು ಸಿಎಂ ಶಿಂಧೆ ಜಾಹೀರಾತು ನೀಡಿದ್ದರು. ಆ ಮೂಲಕ ಬಿಜೆಪಿಗೆ ತಾವು ಅನಿವಾರ್ಯ ಎಂಬ ಸಂದೇಶ ರವಾನಿಸಿದ್ದರು. ಅದನ್ನು ಸರಿದೂಗಿಸಲು ಬಿಜೆಪಿ ಅಜಿತ್ ಪವಾರ್‌ರನ್ನು ಮೈತ್ರಿಗೆ ಸೆಳೆದುಕೊಂಡಿದೆ ಎಂದು ಕೂಡ ವಿಶ್ಲೇಷಿಸಲಾಗುತ್ತಿದೆ.
ಸಿಎಂ ಏಕನಾಥ್ ಶಿಂಧೆಯನ್ನು ಬಳಸಿ ಬಿಸಾಕಿದ ಬಿಜೆಪಿ?
ಎರಡು ತಿಂಗಳ ಹಿಂದೆಯಷ್ಟೇ ಅಜಿತ್ ಪವಾರ್ ಬೆಂಬಲ ನಮಗೆ ಬೇಕಿಲ್ಲ ಎಂದು ಕೂಗಾಡಿದ್ದ ಸಿಎಂ ಏಕನಾಥ್ ಶಿಂಧೆ ಸದ್ಯ ತಣ್ಣಗಾಗಿದ್ದಾರೆ. ಮಹಾರಾಷ್ಟ್ರದ ಈ ಬೆಳವಣಿಗೆಗಳು ಅವರಿಗೆ ಹಿನ್ನಡೆಯನ್ನುಂಟು ಮಾಡಿವೆ. ಏಕೆಂದರೆ 40 ಶಾಸಕರ ಬೆಂಬಲದೊಂದಿಗೆ ಸಿಎಂ ಆದ ಅವರು ಸರ್ಕಾರದಲ್ಲಿ ಸಾಕಷ್ಟು ಹಿಡಿತ ಹೊಂದಿದ್ದರು. ನಾನಿಲ್ಲದೆ ಬಿಜೆಪಿ ಸರ್ಕಾರವಿಲ್ಲ ಎಂದು ಗುಡುಗಿದ್ದರು. ಆದರೆ ಸದ್ಯ ಅಜಿತ್ ಪವಾರ್ ಬಣದ ಆಗಮನ ಅವರಿಗೇ ನಡುಕ ಹುಟ್ಟಿಸಿದೆ. ಏಕೆಂದರೆ ಸದ್ಯ ಶಿಂಧೆ ಬಣದ ಬೆಂಬಲ ಇಲ್ಲದಿದ್ದರೂ ಸಹ 20 ಪಕ್ಷೇತರ ಸದಸ್ಯರ ಬೆಂಬಲ ಮತ್ತು ಅಜಿತ್ ಪವಾರ್‌ರವರು ಪ್ರತಿಪಾದಿಸುತ್ತಿರುವಂತೆ 36 ಶಾಸಕರ ಬಲದೊಂದಿಗೆ ಬಿಜೆಪಿ ನಿರಾತಂಕವಾಗಿ ಆಡಳಿತ ನಡೆಸಬಹುದಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರಕ್ಕೆ ಅಜಿತ್ ಪವಾರ್ ಎನ್‌ಸಿಪಿ ಬಣ ಸೇರ್ಪಡೆ: ಶಿಂಧೆ ಶಿವಸೇನೆ ಶಾಸಕರಲ್ಲಿ ಭುಗಿಲೆದ್ದ ಅಸಮಾಧಾನ
ಮಹಾರಾಷ್ಟ್ರದಲ್ಲಿ 43 ಸಚಿವ ಸ್ಥಾನಗಳಿವೆ. ಅದರಲ್ಲಿ ಇದುವರೆಗೂ ಬಿಜೆಪಿಯ 10 ಸಚಿವರು ಮತ್ತು ಶಿಂಧೆ ಬಣದ 10 ಸಚಿವರುಗಳು ಇದ್ದರು. ಇನ್ನು 23 ಸ್ಥಾನಗಳು ಖಾಲಿ ಇದ್ದವು. ಅವುಗಳಲ್ಲಿ ಕನಿಷ್ಟ 11 ಸಚಿವ ಸ್ಥಾನಗಳು ಶಿವಸೇನೆ (ಶಿಂಧೆ ಬಣ) ಶಾಸಕರಿಗೆ ಸಿಗುತ್ತವೆ ಎಂಬ ವಿಶ್ವಾಸದಲ್ಲಿದ್ದರು ಶಿಂಧೆ. ಆದರೆ ಆ 23ರಲ್ಲಿ ಸದ್ಯ ಏಕಾಏಕಿ 9 ಸಚಿವ ಸ್ಥಾನಗಳು ಅಜಿತ್ ಪವಾರ್ ಬಣಕ್ಕೆ ದಕ್ಕಿವೆ. ಹಾಗಾಗಿ ಕೇವಲ 14 ಸ್ಥಾನಗಳು ಮಾತ್ರ ಖಾಲಿ ಇದ್ದು ಶಿಂಧೆ ಬಣಕ್ಕೆ 5 ಸಚಿವ ಸ್ಥಾನ ಸಿಗುವುದೇ ದೊಡ್ಡದು ಎನ್ನಲಾಗಿದೆ. ಇದು ಅವರ ಬಣದಲ್ಲಿ ಕಿತ್ತಾಟಕ್ಕೆ ಕಾರಣವಾಗಬಹುದಾಗಿದೆ.
ಇನ್ನೊಂದೆಡೆ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಸುಪ್ರೀಂಕೋರ್ಟ್ ತೀರ್ಪಿನಂತೆ ಏಕನಾಥ್ ಶಿಂಧೆ ಸೇರಿದಂತೆ ಅವರ ಬಣದ 16 ಶಾಸಕರು ಅನರ್ಹರಾಗುವ ಭೀತಿಯಲ್ಲಿದ್ದಾರೆ. ಸ್ಪೀಕರ್ ಅನರ್ಹತೆಯ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಹೇಳಿದೆ. ಬಿಜೆಪಿಯ ರಾಹುಲ್ ನರ್ವೇಕರ್ ಅಸೆಂಬ್ಲಿ ಸ್ಪೀಕರ್ ಆಗಿದ್ದಾರೆ. ಹಾಗೊಂದು ವೇಳೆ ಅವರು ತಮ್ಮ ಅಧಿಕಾರ ಬಳಸಿ ಶಾಸಕರನ್ನು ಅನರ್ಹಗೊಳಿಸಿದರೆ ಶಿಂಧೆ ಅಧಿಕಾರ ಕಳೆದುಕೊಂಡು ಅಜಿತ್ ಪವಾರ್ ಮಹಾರಾಷ್ಟ್ರದ ನೂತನ ಸಿಎಂ ಆಗಲಿದ್ದಾರೆ ಎಂದು ಸಂಸದ ಶಿವನೇಸೆಯ (ಉದ್ಧವ್ ಬಣ) ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ. ಅಜಿತ್ ಪವಾರ್‌ರನ್ನು ಮಹಾರಾಷ್ಟ್ರದ ಸಿಎಂ ಮಾಡುವ ಆಸೆ ತೋರಿಸಿಯೇ ಅವರನ್ನು ಬಿಜೆಪಿ ತನ್ನೆಡೆಗೆ ಸೆಳೆದುಕೊಂಡಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇವೆಲ್ಲವೂ ಏಕನಾಥ್ ಶಿಂಧೆಯನ್ನು ಅಸಹಾಯಕರನ್ನಾಗಿ ಮಾಡುವುದು ಖಂಡಿತ. ಇದು ಬಿಜೆಪಿಯ ಬಳಸಿ ಬಿಸಾಕುವ ತಂತ್ರ ಎಂಬ ಟೀಕೆಗೆ ಗುರಿಯಾಗಿದೆ.
ಮಹಾ ವಿಕಾಸ್ ಅಘಾಡಿಯ ಬಲ ಕುಂದುವುದೇ?
ಅಜಿತ್ ಪವಾರ್ ಹೀಗೇಕೆ ಮಾಡಿದರು ಎಂಬುದಕ್ಕೆ ಉತ್ತರ ಸರಳವಾಗಿದೆ. ಒಂದು ತಮ್ಮ ಮೇಲಿದ್ದ ನೀರಾವರಿ ಹಗರಣ ಮತ್ತು ಸಹಕಾರ ಬ್ಯಾಂಕುಗಳಿಂದ ಅಕ್ರಮ ಸಾಲ ನೀಡಿರುವ ಕೇಸುಗಳಿಂದ ಬಚಾವ್ ಆಗುವುದು, ಮತ್ತೊಂದು ಕಡೆ ಅಧಿಕಾರದ ಏಣಿ ಹತ್ತುವುದು. ಕಳೆದ ವರ್ಷ ಮಹಾ ವಿಕಾಸ್ ಅಘಾಡಿ ಸರ್ಕಾರ ಉರುಳಿದ ನಂತರ ಡಿಸಿಎಂ ಸ್ಥಾನ ಕಳೆದುಕೊಂಡ ಅಜಿತ್ ಪವಾರ್ ಅಧಿಕಾರಕ್ಕಾಗಿ ಎದುರುನೋಡುತ್ತಿದ್ದರು.

ಅದೇ ಸಮಯದಲ್ಲಿ ಪಕ್ಷದೊಳಗೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದರು. ಇದನ್ನು ಅರಿತ ಶರದ್ ಪವಾರ್ ಇದ್ದಕ್ಕಿದ್ದಂತೆ ಎನ್‌ಸಿಪಿ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ಆ ನಿರ್ಧಾರದ ವಿರುದ್ಧ ಪಕ್ಷದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಆಗ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಶರದ್ ಪವಾರ್ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಅಜಿತ್ ಪವಾರ್ ಜೊತೆಗೆ ಎರಡು ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿಸಿ ತಮ್ಮ ಮಗಳು ಸುಪ್ರಿಯಾ ಸುಳೆ ಮತ್ತು ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್‌ಗೆ ಹಂಚಿದರು. ಮತ್ತೊಬ್ಬ ಪ್ರಭಾವಿ ನಾಯಕ ಜಯಂತ್ ಪಟೇಲ್ ಎನ್‌ಸಿಪಿ ರಾಜ್ಯಾಧ್ಯಕ್ಷರಾದರು. ಇದರಿಂದ ಕೋಪಗೊಂಡ ಅಜಿತ್ ಪವಾರ್ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಲ್ಲದೇ 40 ಬೆಂಬಲಿಗ ಶಾಸಕರ ಸಭೆ ನಡೆಸಿ ಸರ್ಕಾರ ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅಚ್ಚರಿಯೆಂದರೆ ಕಾರ್ಯಾಧ್ಯಕ್ಷನಾಗಿ ನೇಮಕಗೊಂಡಿದ್ದ ಪ್ರಫುಲ್ ಪಟೇಲ್ ಸಹ ಅಜಿತ್ ಪವಾರ್ ಬೆಂಬಲಕ್ಕೆ ನಿಂತಿದ್ದಾರೆ. ಏಕೆಂದರೆ ಕಳೆದ ತಿಂಗಳುಗಳಿಂದ ಎನ್‌ಸಿಪಿಯ ಬಹುತೇಕರು ಇಡಿ ದಾಳಿ ಮತ್ತು ತನಿಖೆಗೆ ಒಳಗಾಗಿದ್ದರು. ಈಗ ಅವರೆಲ್ಲ ಬಿಜೆಪಿ ವಾಷಿಂಗ್ ಮೆಷಿನ್‌ನಲ್ಲಿ ಸ್ವಚ್ಛಗೊಳ್ಳುವ ಆಸೆಯಿಂದ ಬೆಂಬಲ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಪಕ್ಷದೊಳಗೆ ನಡೆಯುತ್ತಿದ್ದ ಅಧಿಕಾರಕ್ಕಾಗಿನ ಬಣ ಗುದ್ದಾಟ ಕೊನೆಗೂ ಈ ರೀತಿ ಸ್ಫೋಟಗೊಂಡಿದೆ. ಇದು ಇಡೀ ಮಹಾ ವಿಕಾಸ್ ಅಘಾಡಿಯ ರಾಜಕೀಯದ ಮೇಲೆ ಪರಿಣಾಮ ಬೀರುವ ಭಾರೀ ಸಾಧ್ಯತೆಯಿದೆ. ತತ್‌ಕ್ಷಣಕ್ಕೆ ಅದರ ಬಲ ಕುಂದಿದಂತೆ ಕಾಣುತ್ತದೆ. ಜೊತೆಗೆ ರಾಷ್ಟ್ರಾದ್ಯಂತ ವಿರೋಧ ಪಕ್ಷಗಳ ಐಕ್ಯತೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಶರದ್ ಪವಾರ್ ರಾಜ್ಯದ ಆಗುಹೋಗುಗಳಿಗೆ ಸಮಯ ನೀಡಬೇಕಾಗಿದ್ದು, ಅವರ ಮಹತ್ವ ಕಡಿಮೆಯಾಗುವ ಸಾಧ್ಯತೆಯಿದೆ.
ಬಿಜೆಪಿಯಲ್ಲಿ ಅಸಮಾಧಾನದ ಹೊಗೆ
ಇನ್ನೊಂದೆಡೆ ಬಿಜೆಪಿಯ ಶಾಸಕರಲ್ಲಿಯೂ ಅಸಮಾಧಾನದ ಹೊಗೆಯಾಡತೊಡಗಿದೆ. 105 ಜನ ಬಿಜೆಪಿ ಶಾಸಕರಿದ್ದರೂ ಕೇವಲ 10 ಜನರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಮಹತ್ವದ ಖಾತೆಗಳೆಲ್ಲ ಶಿಂಧೆ ಶಿವಸೇನೆ, ಅಜಿತ್ ಪವಾರ್ ಬಣಕ್ಕೆ ಹೋಗುತ್ತಿರುವುದು ಒಂದು ಕಡೆಯಾದರೆ, ಸಂಪುಟ ವಿಸ್ತರಣೆಯಲ್ಲಿ ತಮಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂದು ಕಾಯುತ್ತಿದ್ದ ಬಿಜೆಪಿ ಶಾಸಕರಿಗೆ ನಿರಾಶೆ ಮುಂದುವರಿದಿದೆ. ಇನ್ನು ಅನಿವಾರ್ಯವಾಗಿ ಡಿಸಿಎಂ ಸ್ಥಾನಕ್ಕೆ ಡಿಮೋಟ್ ಆಗಿದ್ದ ದೇವೇಂದ್ರ ಫಡ್ನವೀಸ್‌ರನ್ನು ಕೇಂದ್ರ ಸಚಿವರನ್ನಾಗಿ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಸ್ಥಳೀಯ ಬಿಜೆಪಿ ನಾಯಕರ ಮಾತಿಗೆ ಬೆಲೆಯಾಗಲಿ, ಅವರು ಬೆಳೆಯಲು ಅವಕಾಶವಾಗಲೀ ಸಿಗುತ್ತಿಲ್ಲ. ಒಟ್ಟಿನಲ್ಲಿ ಬಿಜೆಪಿಯ ಹೈಕಮಾಂಡ್ ಆಟಕ್ಕೆ ಬಿಜೆಪಿಗರೆ ಸುಸ್ತು ಹೊಡೆದಿರುವುದು ಮಾತ್ರ ನಿಜ.

ಮಹಾರಾಷ್ಟ್ರವೆಂಬ ಆರ್ಥಿಕತೆಯಲ್ಲಿ ನಂಬರ್ ಒನ್ ಇರುವ ರಾಜ್ಯದ ಅಧಿಕಾರಕ್ಕಾಗಿ ತೀವ್ರ ಕಸರತ್ತು ನಡೆಸುತ್ತಿರುವ ಬಿಜೆಪಿಯ ನಡೆ ಮತದಾರರಿಗೆ ಹೇಸಿಗೆ ಹುಟ್ಟಿಸಬಹುದು. ಮಹಾರಾಷ್ಟ್ರದಲ್ಲಿ ಅಸ್ತಿತ್ವ ಉಳಿಸಿಕೊಂಡಿದ್ದ ಎರಡು ಪ್ರಾದೇಶಿಕ ಪಕ್ಷಗಳನ್ನು ಹೋಳು ಮಾಡಿದ ಅಪಕೀರ್ತಿ ಬಿಜೆಪಿ ಮೇಲಿದೆ. ಇದೆಲ್ಲವನ್ನು ಅಲ್ಲಿನ ಜನತೆ ಹೇಗೆ ಸ್ವೀಕರಿಸುತ್ತಾರೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.


