ಖರ್ಗೆ ಕುಟುಂಬವನ್ನು ಸಾಫ್ ಮಾಡ್ತೀನಿ ಎಂದು ಜೀವ ಬೆದರಿಕೆ ಹಾಕಿರುವ ಮಣಿಕಂಠ ರಾಠೋಡರದ್ದು ಎನ್ನಲಾದ ಆಡಿಯೋ ಕುರಿತ ವಿಚಾರಣೆಗೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಜುಲೈ 15ರಂದು ಬಂಧಿಸಿ, ವಿಚಾರಣೆ ನಡೆಸಲಾಯಿತು. ಬಳಿಕ ಅವನನ್ನು ಬಿಡುಗಡೆ ಮಾಡಲಾಗಿದೆ. ಪೊಲೀಸರು ಮತ್ತೆ ಬಂಧಿಸುವ ಭೀತಿ ರಾಠೋಡಗೆ ಎದುರಾಗಿದೆ.
ಮಣಿಕಂಠ ರಾಠೋಡ ವಿರುದ್ಧ ವಿವಿಧ ಪ್ರಕರಣಗಳು ಸೇರಿದಂತೆ ಖರ್ಗೆ ಕುಟುಂಬಕ್ಕೆ ಬೆದರಿಕೆ ಹಾಕಿರುವ ಪ್ರಕರಣವು ದಾಖಲಾಗಿದೆ. 2014ರಿಂದ ಇಲ್ಲಿಯವರೆಗೆ ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ, ಬೆಂಗಳೂರು ಹಾಗೂ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣದಲ್ಲಿ ದಾಖಲಾದ ಒಟ್ಟು 46 ಪ್ರಕರಣಗಳನ್ನು ಉಲ್ಲೇಖಿಸಿ ಪಿಎಸ್‌ಐ ಚೇತನ್ ಅವರು ದಂಡಾಧಿಕಾರಿಗೆ ಸಲ್ಲಿಸಿದ್ದಾರೆ.
”46 ಪ್ರಕರಣಗಳು ದಾಖಲಾಗಿದ್ದರೂ ಮಣಿಕಂಠ ತನ್ನ ಪ್ರವೃತ್ತಿಯಲ್ಲಿ ಬದಲಾವಣೆ ತೋರದೆ ಪದೇ ಪದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ, ಶಾಂತಿ ಕದಡಲು ಯತ್ನಿಸುವ ಪ್ರವೃತ್ತಿಯವರಾಗಿದ್ದಾರೆ. ಮುಂದೆ ಚಿತ್ತಾಪುರದಲ್ಲಿ ಜಾತಿ- ಜಾತಿಗಳ ಮಧ್ಯ ವೈರತ್ವ ಬೆಳೆಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿ, ಸಮಾಜದ ಶಾಂತಿ ಕದಡುವ ಸಾಧ್ಯತೆ ಹೆಚ್ಚಾಗಿದೆ. ಅವರನ್ನು ಹಾಜರು ಪಡಿಸಿಕೊಂಡು ಸನ್ನಡತೆಗಾಗಿ ಅವರಿಂದ ಹೆಚ್ಚಿನ ಬಾಂಡ್ ಬರೆಸಿಕೊಳ್ಳಬೇಕು” ಎಂದು ಪಿಎಸ್‌ಐ ತಾಲ್ಲೂಕು ದಂಡಾಧಿಕಾರಿಗೆ ಮನವಿ ಮಾಡಿದ್ದಾರೆ.
ಜುಲೈ 15ರಂದು ಸಂಜೆ ರಾಠೋಡ ಅವರನ್ನು ಬಂಧಿಸಿದ್ದ ಚಿತ್ತಾಪುರ ಪೊಲೀಸರು ವಿಚಾರಣೆ ನಡೆಸಿ, ಧ್ವನಿ ಮಾದರಿ ಸಂಗ್ರಹಿಸಿಕೊಂಡು ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದರು. 16ರಂದು ಮತ್ತೆ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಕಳುಹಿಸಿದ್ದರು. ಆದರೆ, ಮಣಿಕಂಠ ವಿಚಾರಣೆಗೆ ಠಾಣೆಗೆ ಹಾಜರಾಗದೆ ಜಾಮೀನು ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ ಮತ್ತೆ ನೋಟಿಸ್ ಜಾರಿ ಮಾಡಿ, ವಶಕ್ಕೆ ಪಡೆದು ತಾಲ್ಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಕೊಲೆ ಮಾಡಲು ಬಿಜೆಪಿ ಮುಖಂಡರಿಂದ ಸಂಚು: ಕಾಂಗ್ರೆಸ್ ಆರೋಪ
ಖರ್ಗೆ ಕುಟುಂಬದ ವಿರುದ್ಧ ಜೀವಬೆದರಿಕೆ ಪ್ರಕರಣ
ಹಲವು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಚಿತ್ತಾಪುರದ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಅವರದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ ”ಖರ್ಗೆ ಮತ್ತು ಅವರ ಹೆಂಡ್ತಿನಾ, ಇಡೀ ಕುಟುಂಬವನ್ನು ಸಾಫ್ ಮಾಡ್ತೀನಿ” ಅನ್ನುವುದು ದಾಖಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಮಾತನಾಡಿ, ”ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರನ್ನು ಹತ್ಯೆ ಮಾಡಲು ಬಿಜೆಪಿ ನಾಯಕರು ಸಂಚು ರೂಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ಅವರ ನೀಲಿ ಕಣ್ಣಿನ ಹುಡುಗ ಚಿತ್ತಾಪುರದ ಬಿಜೆಪಿ ಅಭ್ಯರ್ಥಿಯ ರೆಕಾರ್ಡಿಂಗ್‌ನಿಂದ ಇದು ಈಗ ಸ್ಪಷ್ಟವಾಗಿದೆ” ಎಂದದು ಹೇಳಿದ್ದರು.
ರವಿ ಎಂಬ ಬಿಜೆಪಿ ಕಾರ್ಯಕರ್ತನೊಬ್ಬ ಮಣಿಕಂಠ ರಾಥೋಡ್‌ರವರಿಗೆ ಫೋನ್ ಮಾಡಿ ನಿಮ್ಮ ಮೇಲೆ 40 ಕೇಸುಗಳಿವೆ ಅನ್ನುತ್ತಾರೆ. ಈ ಕುರಿತು ಖರ್ಗೆಯವರನ್ನು ಪ್ರಶ್ನೆ ಮಾಡ್ತೀನಿ ಅವರ ನಂಬರ್ ಕೊಡಿ ಅಣ್ಣ ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಮಣಿಕಂಠ ರಾಥೋಡ್, ”ನನ್ನ ಬಳಿ ಅವರ ಫೋನ್ ನಂಬರ್ ಇದ್ರೆ ಅವರ ಹೆಂಡ್ರು ಮಕ್ಕಳು ಎಲ್ಲರನ್ನು ಸಾಫ್ ಮಾಡ್ತೀನಿ. ಅದಕ್ಕೆ ನನ್ನ ಬಳಿ ನಂಬರ್ ಇಲ್ಲ” ಎಂದು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ.
”ಯಾರ ಹೆಂಡ್ರ ಮಕ್ಕಳನ್ನು ಸಾಫ್ ಮಾಡ್ತೀರಿ?” ಎಂದು ರವಿ ಪ್ರಶ್ನಿಸಿದಾಗ, ಈಗ ನೀನು ಯಾರ ಹೆಸ್ರು ತಗೊಂಡೆ ಎಂದು ಕೇಳಿ ಆನಂತರ ”ಖರ್ಗೆಯವರ ನಂಬರ್ ಇದ್ರೆ ಅವರಿಗೆ ಬಾಯಿಗೆ ಬಂದಾಂಗೆ ಬೈಯ್ಯುತ್ತಿದ್ದೆ” ಎಂದು ಸಮಜಾಯಿಸಿ ಕೊಡುವುದು ಸಹ ವೈರಲ್ ವಿಡಿಯೋದಲ್ಲಿ ದಾಖಲಾಗಿದೆ.
ಬಿಜೆಪಿ ಅಭ್ಯರ್ಥಿಯೊಬ್ಬ ಖರ್ಗೆ ಕುಟುಂಬವನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದಾರೆ. ಆತ ಬಿಜೆಪಿ ಪಕ್ಷದ ನೀಲಿ ಕಣ್ಣಿನ ಹುಡುಗನಾಗಿದ್ದಾನೆ. ಈ ಕುರಿತು ಪ್ರಧಾನಿ ಮೋದಿಯವರು ಪ್ರತಿಕ್ರಿಯಿಸುವರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟ್ವೀಟ್ ಮಾಡಿದ್ದರು.


