Homeಮುಖಪುಟಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಕೊಲೆ ಮಾಡಲು ಬಿಜೆಪಿ ಮುಖಂಡರಿಂದ ಸಂಚು: ಕಾಂಗ್ರೆಸ್ ಆರೋಪ

ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಕೊಲೆ ಮಾಡಲು ಬಿಜೆಪಿ ಮುಖಂಡರಿಂದ ಸಂಚು: ಕಾಂಗ್ರೆಸ್ ಆರೋಪ

ಹಲವು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್‌ ಅವರದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ "ಖರ್ಗೆ ಮತ್ತು ಅವರ ಹೆಂಡ್ತಿನಾ, ಇಡೀ ಕುಟುಂಬವನ್ನು ಸಾಫ್ ಮಾಡ್ತೀನಿ" ಅನ್ನುವುದು ದಾಖಲಾಗಿದೆ.

- Advertisement -
- Advertisement -

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬವನ್ನು ಕೊಲೆ ಮಾಡಲು ಬಿಜೆಪಿ ಮುಖಂಡರು ಸಂಚು ನಡೆಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಗಂಭೀರ ಆರೋಪ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್‌ ಅವರದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ “ಖರ್ಗೆ ಮತ್ತು ಅವರ ಹೆಂಡ್ತಿನಾ, ಇಡೀ ಕುಟುಂಬವನ್ನು ಸಾಫ್ ಮಾಡ್ತೀನಿ” ಅನ್ನುವುದು ದಾಖಲಾಗಿದೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸುರ್ಜೇವಾಲ, “ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರನ್ನು ಹತ್ಯೆ ಮಾಡಲು ಬಿಜೆಪಿ ನಾಯಕರು ಸಂಚು ರೂಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ಅವರ ನೀಲಿ ಕಣ್ಣಿನ ಹುಡುಗ ಚಿತ್ತಾಪುರದ ಬಿಜೆಪಿ ಅಭ್ಯರ್ಥಿಯ ರೆಕಾರ್ಡಿಂಗ್‌ನಿಂದ ಇದು ಈಗ ಸ್ಪಷ್ಟವಾಗಿದೆ” ಎಂದಿದ್ದಾರೆ.

ರವಿ ಎಂಬ ಬಿಜೆಪಿ ಕಾರ್ಯಕರ್ತನೊಬ್ಬ ಮಣಿಕಂಠ ರಾಥೋಡ್‌ರವರಿಗೆ ಫೋನ್ ಮಾಡಿ ನಿಮ್ಮ ಮೇಲೆ 40  ಕೇಸುಗಳಿವೆ ಅನ್ನುತ್ತಾರೆ. ಈ ಕುರಿತು ಖರ್ಗೆಯವರನ್ನು ಪ್ರಶ್ನೆ ಮಾಡ್ತೀನಿ ಅವರ ನಂಬರ್ ಕೊಡಿ ಅಣ್ಣ ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಮಣಿಕಂಠ ರಾಥೋಡ್‌, “ನನ್ನ ಬಳಿ ಅವರ ಫೋನ್ ನಂಬರ್ ಇದ್ರೆ ಅವರ ಹೆಂಡ್ರು ಮಕ್ಕಳು ಎಲ್ಲರನ್ನು ಸಾಫ್ ಮಾಡ್ತೀನಿ. ಅದಕ್ಕೆ ನನ್ನ ಬಳಿ ನಂಬರ್ ಇಲ್ಲ” ಎನ್ನುವುದು ದಾಖಲಾಗಿದೆ.

ಯಾರ ಹೆಂಡ್ರ ಮಕ್ಕಳನ್ನು ಸಾಫ್ ಮಾಡ್ತೀರಿ ಎಂದು ರವಿ ಪ್ರಶ್ನಿಸಿದಾಗ, ಈಗ ನೀನು ಯಾರ ಹೆಸ್ರು ತಗೊಂಡೆ ಎಂದು ಕೇಳಿ ಆನಂತರ ಖರ್ಗೆಯವರ ನಂಬರ್ ಇದ್ರೆ ಅವರಿಗೆ ಬಾಯಿಗೆ ಬಂದಾಂಗೆ ಬೈಯ್ಯುತ್ತಿದ್ದೆ ಎಂದು ಸಮಜಾಯಿಸಿ ಕೊಡುವುದು ಸಹ ವೈರಲ್ ವಿಡಿಯೋದಲ್ಲಿ ದಾಖಲಾಗಿದೆ.

ಬಿಜೆಪಿ ಅಭ್ಯರ್ಥಿಯೊಬ್ಬ ಖರ್ಗೆ ಕುಟುಂಬವನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದಾರೆ. ಆತ ಬಿಜೆಪಿ ಪಕ್ಷದ ನೀಲಿ ಕಣ್ಣಿನ ಹುಡುಗನಾಗಿದ್ದಾನೆ. ಈ ಕುರಿತು ಪ್ರಧಾನಿ ಮೋದಿಯವರು ಪ್ರತಿಕ್ರಿಯಿಸುವರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟ್ವೀಟ್ ಮಾಡಿದ್ದಾರೆ.

ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮೇಲೆ 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ ಎಂದು ಅವರೆ ಘೋಷಿಸಿಕೊಂಡಿದ್ದಾರೆ. ಮೂಲತಃ ಯಾದಗಿರಿಯವರಾದ ಅವರ ಮೇಲೆ ಕಳ್ಳತನ, ಅಕ್ಕಿ, ಹಾಲಿನ ಪುಡಿ ಅಕ್ರಮ ಸಾಗಾಣೆ, ಕೊಲೆ ಬೆದರಿಕೆ ಸೇರಿ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಯನ್ನು ಕದ್ದ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆಯೂ ಆಗಿದ್ದು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ.

ಯಾದಗಿರಿ, ವಿಜಯಪುರ, ಕಲಬುರಗಿ ಮೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಥೋಡನನ್ನು ಒಂದು ವರ್ಷಗಳ ಕಾಲ ಗಡಿಪಾರು ಮಾಡಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ. ಎಸ್. ರವಿಕುಮಾರ ಆದೇಶ ಹೊರಡಿಸಿದ್ದರು. ಇದಕ್ಕೆ ಮಣಿಕಂಠ, ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು.

ಮಣಿಕಂಠ ರಾಠೋಡ ಅವರು ಪಿಸ್ತೂಲ್ ಹಿಡಿದು ಪ್ರದರ್ಶಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಕುರ್ಚಿಯಲ್ಲಿ ಕೂತಿರುವ ಮಣಿಕಂಠ ತಮ್ಮ ಬಲಗೈ ತೋರುಬೆರಳಿನಿಂದ ಪಿಸ್ತೂಲ್ ತಿರುಗಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಇದು ಹಳೆಯ ವಿಡಿಯೊ ಎನ್ನಲಾಗಿದ್ದು, ಮಣಿಕಂಠ ಬಿಜೆಪಿ ಅಭ್ಯರ್ಥಿಯಾಗಿರುವ ಕಾರಣ ಇದು ಚರ್ಚೆಗೆ ಗ್ರಾಸವಾಗಿತ್ತು.

ಇತ್ತೀಚೆಗೆ ಮಣಿಕಂಠ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರೋಡ್ ಷೋ ನಡೆಸಬೇಕಿದ್ದನ್ನು ಇದೇ ಕಾರಣಗಳಿಂದ ರದ್ದುಗೊಳಿಸಿದರು ಎನ್ನಲಾಗಿದೆ.

ಈ ಹಿಂದಿನಿಂದಲೂ ಬಿಜೆಪಿ ಪಕ್ಷ ರೌಡಿಗಳನ್ನು ಪಕ್ಷಕ್ಕೆ ಬರಮಾಡಿಕೊಂಡಿ ಟಿಕೆಟ್ ನೀಡುತ್ತಿದೆ ಎಂಬ ಆರೋಪ ಎದುರಿಸುತ್ತಿದೆ. ಅದರ ಬೆನ್ನಲ್ಲೇ ಈಗ ಮಣಿಕಂಠ ರಾಥೋಡ್ ಬಗ್ಗೆ ಖರ್ಗೆ ಕುಟುಂಬ ಕೊಲೆ ಮಾಡುತ್ತೇನೆ ಎಂಬ ಬೆದರಿಕೆ ಆರೋಪ ಬಂದಿರುವುದರಿಂದ ಅದು ಬಿಜೆಪಿಗೆ ಮತ್ತಷ್ಟು ತಲೆ ನೋವು ಆಗುವ ಸಂಭವವಿದೆ.

ಇದನ್ನೂ ಓದಿ: ಹತಾಶೆಯ ಬಿಜೆಪಿ ಮುಖಂಡರ ಬೆದರಿಕೆಯ ಭಾಷೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...