Homeಕರ್ನಾಟಕಚುನಾವಣಾ ಪ್ರಚಾರದಲ್ಲಿ ಕೋಮುದ್ವೇಷ ಭಾಷಣ: ಅಡ್ಡಂಡ ಕಾರ್ಯಪ್ಪ ವಿರುದ್ಧ ಎಫ್‌ಐಆರ್‌

ಚುನಾವಣಾ ಪ್ರಚಾರದಲ್ಲಿ ಕೋಮುದ್ವೇಷ ಭಾಷಣ: ಅಡ್ಡಂಡ ಕಾರ್ಯಪ್ಪ ವಿರುದ್ಧ ಎಫ್‌ಐಆರ್‌

- Advertisement -
- Advertisement -

ಚುನಾವಣಾ ಪ್ರಚಾರ ವೇಳೆ ಹಿಂದೂ ಮುಸ್ಲಿಂ ಗಲಭೆ ಸೃಷ್ಟಿಸುವ ರೀತಿಯಲ್ಲಿ ಕೋಮುದ್ವೇಷ ಭಾಷಣ ಮಾಡಿರುವ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ನೀಡಿರುವ ದೂರಿನ ಅನ್ವಯ ಕೊಡಗು ಜಿಲ್ಲೆ, ವಿರಾಜಪೇಟೆ ತಾಲ್ಲೂಕಿನ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 153ಎ, 171ಜಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 125ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಚುನಾವಣಾ ಕ್ಷಿಪ್ರ ಪರಿಶೀಲನಾ ತಂಡ-4ರಲ್ಲಿ ಕೆಲಸ ಮಾಡುತ್ತಿರುವ ಆರ್‌.ಕುಮಾರಸ್ವಾಮಿಯವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಧಿಕಾರಿ ನೀಡಿರುವ ದೂರಿನಲ್ಲಿ ಏನಿದೆ?

“ನಾನು ಕ್ಷಿಪ್ರ ಪರಿಶೀಲನಾ ತಂಡ- 4ರಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ತಂಡದಲ್ಲಿ ಸಹಾಯಕ ಸಿಬ್ಬಂದಿಗಳಾದ ಸಿ.ಮಹೇಶ, ಪೊಲೀಸ್ ಸಹಾಯಕ ಉಪನಿರೀಕ್ಷಕರಾದ ಕೆ.ಜೆ.ಫ್ರಾನ್ಸಿಸ್, ಛಾಯಾಚಿತ್ರಗಾರ ಕೆ.ರಿಜ್ವಾನ್ನ್‌ ಇದ್ದೆವು.”

“ದಿನಾಂಕ 4-05-2023ರಂದು ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರದ ಸ್ಥಳವಾದ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಸುಮಾರು 12.45 ಗಂಟೆಗೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ನನ್ನ ತಂಡದವರೊಂದಿಗೆ ಹೋಗಿದ್ದೆವು. ಪೊನ್ನಂಪೇಟೆ ನಗರದಲ್ಲಿ ವಾಸವಿರುವ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪನವರು ಬಿಜೆಪಿ ಪರ ಪ್ರಚಾರದಲ್ಲಿ ನಿರತರಾಗಿದ್ದರು.”

“ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಮುಸ್ಲಿಂ ಜನಾಂಗಕ್ಕೆ ಘೋಷಿಸಿರುವ ಸೌಲಭ್ಯದ ಕುರಿತು ಕೊಡವ ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಕೋಮುದ್ವೇಷ ಭಾಷಣ ಮಾಡಿದ್ದಾರೆ.”

“ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದವರಿಗೆ ಉಚಿತ ವಸತಿ ನಿಲಯ ನೀಡುವುದಾಗಿ ತಿಳಿಸಿದ್ದು, ಈ ವಸತಿ ಶಾಲೆಗಳಲ್ಲಿ ಹಿಂದೂಗಳನ್ನು ಕೊಲ್ಲಲು ತರಬೇತಿ ನೀಡುವ ಉದ್ದೇಶ ಹೊಂದಿದ್ದಾರೆ. ಅದಕ್ಕಾಗಿ ಈ ಸೌಲಭ್ಯ ನೀಡಿದ್ದಾರೆ ಎಂದು ಆರೋಪಿಸಿ ಭಾಷಣ ಮಾಡಿದ್ದಾರೆ.”

“ಇದರಿಂದ ಧರ್ಮ ಧರ್ಮಗಳ ನಡುವೆ ಸಾಮರಸ್ಯ ಕದಡಿ, ಶತ್ರುತ್ವವನ್ನು ಉಂಟು ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗ ಹಾಗೂ ಭಯ, ಭೀತಿ ಮೂಡಿಸುವ ಹಲವು ರೀತಿಯ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಅಡ್ಡಂಡ ಕಾರ್ಯಪ್ಪ ಪ್ರಚೋದನಾಕಾರಿ ಭಾಷಣ ಮಾಡಿದ್ದು, ಮಾದರಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಕಾರ್ಯಪ್ಪ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನು ಪರಿಶೀಲಿಸಲು ಹಾಗೂ ವಿಡಿಯೊ ತುಣುಕುಗಳನ್ನು ಸಿಡಿ ರೂಪದಲ್ಲಿ ಸಲ್ಲಿಸಲು ಕಾಲಾವಕಾಶವನ್ನು ಅಧಿಕಾರಿ ತೆಗೆದುಕೊಂಡಿದ್ದಾರೆ.

ಲೂಸ್ ಟಾಕ್‌ಗಳಿಗೆ ಹೆಸರಾದ ಅಡ್ಡಂಡ ಕಾರ್ಯಪ್ಪ ಕೋಮುದ್ವೇಷ ಭಾಷಣ ಮಾಡುವುದು ಹೊಸದೇನೂ ಅಲ್ಲ. ಟಿಪ್ಪುವನ್ನು ಕೊಂದಿದ್ದು ಉರಿಗೌಡ, ನಂಜೇಗೌಡ ಎಂದು ತಮ್ಮ ನಾಟಕದಲ್ಲಿ ನಕಲಿ ಇತಿಹಾಸ ಸೃಷ್ಟಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು.

ಒಕ್ಕಲಿಗರು ಮತ್ತು ಮುಸ್ಲಿಮರನ್ನು ಕಾರ್ಯಪ್ಪ ಎತ್ತಿಕಟ್ಟಲು ಯತ್ನಿಸುತ್ತಿದ್ದಾರೆಂಬ ಟೀಕೆಗಳು ವ್ಯಕ್ತವಾಗಿದ್ದವು. ಪ್ರಧಾನಿ ಮೋದಿಯವರು ಮಂಡ್ಯ ಜಿಲ್ಲೆಗೆ ಪ್ರವೇಶಿಸುವ ಸಂದರ್ಭದಲ್ಲಿ ಉರಿಗೌಡ, ನಂಜೇಗೌಡ ಮಹಾದ್ವಾರ ಸೃಷ್ಟಿಸಿ ವಿವಾದವನ್ನು ಮತ್ತಷ್ಟು ದೊಡ್ಡದಾಗಿಸಲಾಗಿತ್ತು. ಬಿಜೆಪಿ ನಾಯಕರೂ ಈ ಪಾತ್ರಗಳನ್ನೇ ಇಟ್ಟುಕೊಂಡು ಹೇಳಿಕೆಗಳನ್ನು ನೀಡುತ್ತಿದ್ದರು.

ಈ ವಿಚಾರವಾಗಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರು ಮಧ್ಯಪ್ರವೇಶಿಸಿ, ”ಸಿ.ಟಿ ರವಿ ಇರಬಹುದು, ಅಶ್ವತ್ಥ ನಾರಾಯಣ ಅವರಿರಬಹುದು, ಗೋಪಾಲಯ್ಯ ಅವರಿರಬಹುದು, ಈ ವಿಷಯದಲ್ಲಿ ಯಾರೆಲ್ಲ ಮಾತನಾಡುತ್ತಿದ್ದಾರೋ ಅವರೆಲ್ಲರಿಗೂ ಇತಿಹಾಸದ ಹಿನ್ನೆಲೆಯನ್ನು ಮನದಟ್ಟು ಮಾಡಿಕೊಟ್ಟಿದ್ದರಿಂದ ಅವರೆಲ್ಲರೂ ಸುಮ್ಮನಾಗಬೇಕು, ಸುಮ್ಮನಾಗಿದ್ದಾರೆ ಎಂದು ಭಾವಿಸಿದ್ದೇನೆ” ಎಂದಿದ್ದರು.

”ಕಲ್ಪನೆ ಮಾಡಿಕೊಂಡು ಬರೆಯುವುದು ಕಾದಂಬರಿ ಆಗುತ್ತದೆ, ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯನ್ನು ಇಟ್ಟುಕೊಂಡು ಬರೆದಿರುವುದು ಮುಂದಿನ ಪೀಳಿಗೆಗೆ ಒಂದಿಷ್ಟು ಶಕ್ತಿಯಾಗುತ್ತದೆ. ಅಂತಹುದ್ಯಾವುದೂ ಇದುವರೆಗೆ ಕಂಡುಬಾರದೆ ಇರುವುದರಿಂದ ಹೇಳಿಕೆಗಳ ಮೂಲಕ ಯುವಕರಲ್ಲಿ ಮತ್ತು ಸಮಕಾಲೀನ ಜಗತ್ತಿನಲ್ಲಿ ಗೊಂದಲವನ್ನು ಸೃಷ್ಟಿ ಮಾಡಿ ವ್ಯಕ್ತಿಗಳ ಶಕ್ತಿಯನ್ನು ಹಾಳು ಮಾಡಬಹುದು, ಸಮುದಾಯಕ್ಕೆ ಧಕ್ಕೆಯನ್ನು ಕೂಡಾ ತರಬಾರದು” ಎಂದು ಸ್ವಾಮೀಜಿ ಎಚ್ಚರಿಸಿದ್ದರು.

ಇದಾದ ಬಳಿಕ ಹೇಳಿಕೆ ನೀಡಿದ್ದ ಅಡ್ಡಂಡ ಕಾರ್ಯಪ್ಪ, “”ನಿರ್ಮಲಾನಂದನಾಥರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಳಿಗೆ ಅಲ್ಲ, ಒಕ್ಕಲಿಗ ಸಮುದಾಯದ ರಕ್ಷಣೆ ಮಾಡುವುದು ಅವರ ಕೆಲಸ ಹಾಗಂತ ಉರಿಗೌಡ, ನಂಜೇಗೌಡರ ಕುರಿತು ಚರ್ಚೆ ನಡೆಯಲೇಬಾರದು ಎಂದು ಹೇಳಿದ್ದು ಸರಿಯಲ್ಲ” ಎಂದಿದ್ದರು. ಬಳಿಕ ಸ್ವಾಮೀಜಿಯವರ ಬಳಿ ಕಾರ್ಯಪ್ಪ ಕ್ಷಮೆಯಾಚಿಸಿದ್ದರು.

ಇದನ್ನೂ ಓದಿರಿ: ನಿರ್ಮಲಾನಂದನಾಥರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಲ್ಲ: ಅಡ್ಡಂಡ ಕಾರ್ಯಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...