ವಿರೋಧ ಪಕ್ಷಗಳು ಬೆಂಗಳೂರಿನಲ್ಲಿ ಎರಡು ದಿನಗಳ ಸಭೆ ನಡೆಸಿದರು. ಆದರೆ ಎಐಎಂಐಎಂ ಪಕ್ಷದ ಒವೈಸಿಗೆ ಆಹ್ವಾನ ನೀಡದಿರುವುದಕ್ಕೆ, ಪಕ್ಷದ ನಾಯಕ ವಾರಿಸ್ ಪಠಾಣ್ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಾರಿಸ್ ಪಠಾಣ್, ”ಜಾತ್ಯತೀತ ಪಕ್ಷಗಳು ಎಂದು ಕರೆಯಲ್ಪಡುವವರು ಸಭೆಗೆ ನಮ್ಮನ್ನು ಆಹ್ವಾನಿಸಿಲ್ಲ. ನಾವು ಅವರಿಗೆ ರಾಜಕೀಯ ಅಸ್ಪೃಶ್ಯರಂತ ಕಂಡಿರಬಹುದು ಬಿಹಾರ ಸಿಎಂ ನಿತೀಶ್ ಕುಮಾರ್, ಉದ್ಯವ್ ಠಾಕ್ರೆ ಮತ್ತು ಮಹಬೂಬಾ ಮುಫ್ರಿ ಸೇರಿದಂತೆ ಒಂದು ಕಾಲದಲ್ಲಿ ಭಾರತೀಯ ಜನತಾ ಪಕ್ಷದಲ್ಲಿದ್ದ (ಬಿಜೆಪಿ) ನಾಯಕರು ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ” ಎಂದು ಗುಡುಗಿದ್ದಾರೆ.
”ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರವಾಲ್ ಅವರು ಕಾಂಗ್ರೆಸ್ ಅನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ನಾವು ನೋಡಿದ್ದೇವೆ ಆದರೆ, ಅವರು ಬೆಂಗಳೂರಿನ ಸಭೆಯಲ್ಲಿ ಕುಳಿತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
”ನಾವು ಸಹ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪಣ ತೊಟ್ಟಿದ್ದೇವೆ. ಆದರೆ ಅವರು (ವಿರೋಧ ಪಕ್ಷಗಳು) ಅಸಾದುದ್ದೀನ್ ಒವೈಸಿ ಸೇರಿದಂತೆ ನಮ್ಮ ಪಕ್ಷವನ್ನು (ಎಐಎಂಐಎಂ) ಕಡೆಗಣಿಸುತ್ತಿದ್ದಾರೆ” ಎಂದು ದೂರಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮಣಿಸಲು ತಂತ್ರ ಹೆಣೆಯುತ್ತಿರುವ 26 ವಿರೋಧ ಪಕ್ಷಗಳು ಒಗ್ಗೂಡಿ ‘ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ’ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಯೂಸಿವ್ ಅಲಯನ್ಸ್ ಇಂಡಿಯಾ) ರಚಿಸಿಕೊಂಡಿದ್ದು, ಚುನಾವಣಾ ರಾಜಕೀಯದತ್ತ ಒಂದು ಹೆಜ್ಜೆ ಮುಂದಿಟ್ಟಿವೆ ಮೈತ್ರಿಕೂಟದ ಮುಂದಿನ ಸಭೆಯನ್ನು ಶೀಘ್ರದಲ್ಲಿ ಮುಂಬೈಯಲ್ಲಿ ನಡೆಸಿ, 11 ಸದಸ್ಯರ ಸಮನ್ವಯ ಸಮಿತಿ ರಚಿಸಲು ಸಭೆಯಲ್ಲಿ ಪಾಲ್ಗೊಂಡ ನಾಯಕರು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: INDIA ಇಷ್ಟಪಡದವರು ಪಾಕಿಸ್ತಾನಕ್ಕೆ ಹೋಗಿ ಎಂದು ನಾವು ಹೇಳುವುದಿಲ್ಲ: ಮೈತ್ರಿಕೂಟದ ಟೀಕೆಗೆ ಖೇರಾ ತಿರುಗೇಟು


