2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ NDA ಸರ್ಕಾರ ಸೋಲಿಸಲು 26 ವಿರೋಧ ಪಕ್ಷಗಳು ಒಟ್ಟಾಗಿ INDIA ಎಂಬ ನೂತನ ಮೈತ್ರಿಕೂಟ ರಚಿಸಿಕೊಂಡಿವೆ. ಇದರಿಂದ ಎಚ್ಚೆತ್ತುಕೊಂಡಿರುವ ನರೇಂದ್ರ ಮೋದಿಯವರು ತಮ್ಮ NDA ಮೈತ್ರಿಕೂಟಕ್ಕೆ ಹಲವು ಸಣ್ಣ ಪುಟ್ಟ ಪಕ್ಷಗಳನ್ನು ಸೇರಿಸಿಕೊಂಡು ಸಭೆ ನಡೆಸಿದ್ದಾರೆ. ಅಲ್ಲದೇ ತಮ್ಮೊಡನೆ ಒಟ್ಟು 38 ಪಕ್ಷಗಳಿವೆ ಎಂದಿದ್ದಾರೆ. ಆದರೆ NDA ಜೊತೆಗಿರುವ 38 ಪಕ್ಷಗಳಲ್ಲಿ 15 ಪಕ್ಷಗಳು ಕಳೆದ ಬಾರಿ ಒಂದೂ ಲೋಕಸಭಾ ಸ್ಥಾನ ಗೆದ್ದಿಲ್ಲ, 10 ಪಕ್ಷಗಳು ಸ್ಪರ್ಧಿಸಿಯೇ ಇಲ್ಲ! 8 ಪಕ್ಷಗಳು ಮಾತ್ರ ತಲಾ ಒಂದೊಂದು ಲೋಕಸಭಾ ಸ್ಥಾನ ಗೆದ್ದಿವೆ ಅಷ್ಟೇ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವಿಶೇಷ ವರದಿ ಪ್ರಕಟಿಸಿದೆ.
ಬಿಜೆಪಿ ಹೊರತುಪಡಿಸಿ NDA ಮೈತ್ರಿಕೂಟದಲ್ಲಿ 37 ಪಕ್ಷಗಳಿವೆ. ಅದರಲ್ಲಿ ಹೊಸದಾಗಿ ಸೇರ್ಪಡೆಗೊಂಡ ಎನ್‌ಸಿಪಿ ಅಜಿತ್ ಪವಾರ್ ಬಣ, ಏಕನಾಥ್ ಶಿಂಧೆ ಶಿವಸೇನೆ ಬಣ ಮತ್ತು ಎಲ್‌ಜೆಪಿ ಪಕ್ಷಗಳು ಸಭೆಯಲ್ಲಿ ಭಾಗವಹಿಸಿವೆ. ಈ ಪಕ್ಷಗಳು ಮಾತ್ರವೇ ಕಳೆದ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿವೆ ಬಿಟ್ಟರೆ ಸಭೆಯಲ್ಲಿ ಭಾಗವಹಿಸಿದ್ದ 10 ಪಕ್ಷಗಳು 2019ರ ಲೋಕಸಭಾ ಚುನಾವಣೆಯನ್ನು ಎದುರಿಸಿರಲಿಲ್ಲ. ಉಳಿದ 23 ಪಕ್ಷಗಳು ಸ್ಪರ್ಧಿಸಿದ್ದರೂ ಅವುಗಳಲ್ಲಿ 8 ಪಕ್ಷಗಳು 9 ಸ್ಥಾನಗಳನ್ನಷ್ಟೇ ಗೆದ್ದಿದ್ದವು. 15 ಪಕ್ಷಗಳು ಒಂದೂ ಸ್ಥಾನ ಗೆಲ್ಲಲಾಗಿರಲಿಲ್ಲ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷವೊಂದೇ 37.69 ಮತ ಪ್ರಮಾಣದೊಂದಿಗೆ 303 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಆಗ ಬಿಜೆಪಿ ಮೈತ್ರಿ ಪಕ್ಷವಾಗಿದ್ದ ಶಿವಸೇನೆ ಮಹಾರಾಷ್ಟ್ರದಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು. ಈಗ ಅದು ಉದ್ಧವ್ ಬಣ ಮತ್ತು ಶಿಂಧೆ ಬಣವಾಗಿ ಎರಡು ಹೋಳಾಗಿದ್ದು ಶಿಂಧೆ ಬಣ ಎನ್‌ಡಿಎ ಜೊತೆಗಿದೆ. ಎಲ್‌ಜೆಪಿ ಪಕ್ಷವು ಎನ್‌ಡಿಎ ಜೊತೆ ಮೈತ್ರಿಯೊಂದಿಗೆ ಸ್ಪರ್ಧಿಸಿ ಬಿಹಾರದಲ್ಲಿ 6 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಆನಂತರ ಅದು ಸಹ ಎರಡು ಹೋಳಾಗಿದೆ. ಎನ್‌ಸಿಪಿ ಪಕ್ಷ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯೊಂದಿಗೆ ಸ್ಪರ್ಧಿಸಿ 5 ಸ್ಥಾನಗಳನ್ನು ಗೆದ್ದಿತ್ತು. ಅದು ಅದು ಎರಡು ಹೋಳಾಗಿದ್ದು ಅಜಿತ್ ಪವಾರ್ ಬಣ ಎನ್‌ಡಿಎ ಜೊತೆಗೆ ಗುರುತಿಸಿಕೊಂಡಿದೆ. ಈ ಪಕ್ಷಗಳನ್ನು ಬಿಟ್ಟರೆ ಉಳಿದ ಎನ್‌ಡಿಎ ಜೊತೆಗಿರುವ ಪಕ್ಷಗಳ ಸಾಧನೆ ಅಷ್ಟಕಷ್ಟೆ ಎನ್ನುವಂತಿದೆ.
10 ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ
ಶಿರೋಮಣಿ ಅಕಾಲಿದಳ (ಸಂಯುಕ್ತ), ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ), ಜನ ಸುರಾಜ್ಯ ಶಕ್ತಿ ಪಕ್ಷ, ಕುಕಿ ಪೀಪಲ್ಸ್ ಅಲೈಯನ್ಸ್, ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ನಿಶಾದ್ ಪಾರ್ಟಿ, ಹರಿಯಾಣ ಲೋಕಿತ್ ಪಾರ್ಟಿ, ಕೇರಳ ಕಾಮರಾಜ್ ಕಾಂಗ್ರೆಸ್, ಪುತಿಯಾ ತಮಿಳಗಂ, ಮತ್ತು ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್ ಪಕ್ಷಗಳು ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.
8 ಪಕ್ಷಗಳಿಗೆ 9 ಸೀಟು
ಅಪ್ನಾ ದಳ (ಸೋನಿಲಾಲ್), ಎಜೆಎಸ್‌ಯು, ಎಐಎಡಿಎಂಕೆ, ಮಿಜೋ ನ್ಯಾಷನಲ್ ಫ್ರಂಟ್, ನಾಗಾ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ಸ್ ಪಾರ್ಟಿ, ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ, ಮತ್ತು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಪಕ್ಷಗಳು ಸೇರಿ 9 ಸ್ಥಾನಗಳನ್ನು ಗೆದ್ದಿದ್ದವು. ಅಪ್ನಾ ದಳ ಎರಡು ಸ್ಥಾನಗಳಲ್ಲಿ ಗೆಲುವು ಕಂಡಿದ್ದಿ ಬಿಟ್ಟರೆ ಉಳಿದ ಪಕ್ಷಗಳು ತಲಾ ಒಂದೊಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದವು.

ಒಂದೂ ಸ್ಥಾನ ಗೆಲ್ಲಲಾದ 15 ಪಕ್ಷಗಳು!
ಸದ್ಯ ಎನ್‌ಡಿಎ ಜೊತೆ ಗುರುತಿಸಿಕೊಂಡಿರುವ 15 ಪಕ್ಷಗಳು ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅವುಗಳೆಂದರೆ ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್, ಅಸೋಮ್ ಗಣ ಪರಿಷತ್, ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ, ಪಟ್ಟಾಲಿ ಮಕ್ಕಳ್ ಕಚ್ಚಿ, ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ, ಭಾರತ್ ಧರ್ಮ ಜನಸೇನಾ, ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ), ಜನಸೇನಾ ಪಾರ್ಟಿ, ಜನನಾಯಕ್ ಜನತಾ ಪಾರ್ಟಿ, ಪ್ರಹಾರ್ ಜನಶಕ್ತಿ ಪಕ್ಷ, ರಾಷ್ಟ್ರೀಯ ಸಮಾಜ ಪಕ್ಷ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ, ತಮಿಳ್ ಮಾನಿಲಾ ಕಾಂಗ್ರೆಸ್ (ಮೂಪನಾರ್), ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ, (ಲಿಬರಲ್) ಗಳಾಗಿವೆ.
ಇದನ್ನೂ ಓದಿ: ಮಣಿಪುರದಲ್ಲಿ ಯಾರ ಸರ್ಕಾರವಿದೆ? ಮೋದಿ 36 ಸೆಕೆಂಡ್ ಮಾತನಾಡಿದರೆ ಸಾಕೆ? – ಕಾಂಗ್ರೆಸ್ ಪ್ರಶ್ನೆ


