Homeಅಂಕಣಗಳುವೈಜ್ಞಾನಿಕ ಮನೋಭಾವವಿಲ್ಲದ-ಮಾನವೀಯತೆ ಸೋತ ಸಂಶೋಧನೆ-ಸಂಶೋಧಕರ ಬಗ್ಗೆ ಏಳುವ ಪ್ರಶ್ನೆಗಳು

ವೈಜ್ಞಾನಿಕ ಮನೋಭಾವವಿಲ್ಲದ-ಮಾನವೀಯತೆ ಸೋತ ಸಂಶೋಧನೆ-ಸಂಶೋಧಕರ ಬಗ್ಗೆ ಏಳುವ ಪ್ರಶ್ನೆಗಳು

- Advertisement -
- Advertisement -

ವಿಜ್ಞಾನ ಪ್ರಗತಿಯ-ವೈಜ್ಞಾನಿಕ ಸಂಶೋಧನೆಗಳ ಜರೂರತ್ತು ಮತ್ತು ಮಹತ್ವ ಏನೆಂದು ಯಾರಾದರೂ ಪ್ರಶ್ನಿಸಿಕೊಂಡರೆ ಅದು ವಿಶ್ವದ (ಉಗಮ ಮತ್ತು ಉಳಿವಿನ) ಬಗ್ಗೆ ತರ್ಕಬದ್ಧವಾಗಿ ತಿಳಿವಳಿಕೆ ಮೂಡಿಸಿಕೊಳ್ಳುವುದು, ಇಡೀ ಜಗತ್ತಿನ ಮನುಕುಲದ (ಮತ್ತು ಇತರ ಜೀವಿಗಳು ಹಾಗೂ ಪರಿಸರ ಸಮತೋಲನವನ್ನು ಒಳಗೊಂಡಂತೆ) ಒಳಿತಿನ ಸೂತ್ರ ಸಂಬಂಧಗಳನ್ನು ಕಂಡುಕೊಳ್ಳುವತ್ತ ಹೆಜ್ಜೆ ಇಡುವುದು ಹೀಗೆ ಪಟ್ಟಿಯನ್ನು ಮುಂದುವರಿಸಬಹುದು. ವ್ಯಾಕ್ಸಿನ್‌ನಂತಹ ವೈದ್ಯಕೀಯ ವಿಜ್ಞಾನದ ಹಲವು ಅನ್ವೇಷಣೆಗಳು, ವಸ್ತುಗಳ ಚಲನೆಯ ಮೂಲಭೂತ ಲಕ್ಷಣಗಳು, ಗ್ರಹಗಳು ಮತ್ತಿತರ ಆಕಾಶಕಾಯಗಳ ಚಲನವಲನದ ಬಗೆಗಿನ ಅನ್ವೇಷಣೆಗಳು ಹೀಗೆ ವಿಜ್ಞಾನ ಮನುಕುಲದ ಬೆಳವಣಿಗೆಗೆ ಅತಿ ದೊಡ್ಡ ಕೊಡುಗೆ ನೀಡಿದೆ. ಇನ್ನೂ ಕೆಲವೊಮ್ಮೆ ಅಟಾಮಿಕ್ ಬಾಂಬ್‌ನಂತಹ ವೈಜ್ಞಾನಿಕ ಸಂಶೋಧನೆ ಮನುಕುಲಕ್ಕೆ ಮಾರಕವಾಗಿರುವುದೂ ನಿಜ. ಮತ್ತೆ ಕೆಲವೊಮ್ಮೆ ವೈಜ್ಞಾನಿಕ ಆವಿಷ್ಕಾರಗಳು ಎಲ್ಲರ ಆಶೋತ್ತರಗಳನ್ನೂ ಒಳಗೊಳ್ಳದೆ ಅಥವಾ ಅದು ಆವಿಷ್ಕಾರಗೊಳ್ಳುವ ಪ್ರದೇಶದ ಎಲ್ಲ ಜನರ ಹಿತವನ್ನು ಒಳಗೊಳ್ಳದೆ, ಕೆಲವು ಪ್ರತಿಷ್ಠಿತ ವರ್ಗದ ಹಿತ ಕಾಪಾಡುವುದಕ್ಕೋಸ್ಕರ ನಡೆದಿರುವುದೂ ಇದೆ. ಇಂತಹ ಸಮಯದಲ್ಲಿ ಹಲವು ದಿಕ್ಕಿನಿಂದ ಪ್ರಶ್ನೆಗಳು ಏಳುವುದು ಸರ್ವೇಸಾಮಾನ್ಯ. ವಿಜ್ಞಾನದ ಪ್ರಗತಿಯ ಬಗ್ಗೆ ಬೆನ್ನು ತಟ್ಟಿಕೊಳ್ಳುವವರಿಗೆ ವೈಜ್ಞಾನಿಕ ಮನೋಭಾವ ಇರಬೇಕಿರುವುದು ಬಹಳ ಮುಖ್ಯ. ಆಗ ಮಾತ್ರ ಯಾವುದೇ ಸಂಶೋಧನೆ ಮತ್ತು ಆವಿಷ್ಕಾರಗಳ ಬಗ್ಗೆ ಏಳುವ ಪ್ರಶ್ನೆಗಳನ್ನು-ಟೀಕೆಗಳನ್ನು ಅರ್ಥಮಾಡಿಕೊಂಡು ಕೋರ್ಸ್ ಕರೆಕ್ಷನ್ ಮಾಡಿಕೊಳ್ಳುವುದಕ್ಕೆ ಸಾಧ್ಯವಾದೀತು. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯನ್ನಷ್ಟೇ ವೈಜ್ಞಾನಿಕ ಮನೋಭಾವ ಎಂದು ಕರೆಯಲು ಬರುವುದಿಲ್ಲ.

ನಮ್ಮ ಭಾರತೀಯ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಒಂದಾದ, ವಿಧಿ 51A (h)ರಲ್ಲಿ, “ವೈಜ್ಞಾನಿಕ ಮನೋಭಾವ, ಮಾನವೀಯತೆ, ಶೋಧನೆಯ ಮನೋಭಾವ ಮತ್ತು ಸುಧಾರಣೆ”ಯನ್ನು ನಾಗರಿಕರಲ್ಲಿ ಉತ್ತೇಜಿಸುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ವೈಜ್ಞಾನಿಕ ಸಂಶೋಧನೆ-ಆವಿಷ್ಕಾರ ಮತ್ತು ಅದರ ಅನ್ವಯಿಕತೆಯನ್ನು ನಾಗರಿಕರು ತೀಕ್ಷ್ಣ ದೃಷ್ಟಿಯಿಂದ ಕಾಣಬೇಕಾಗುತ್ತದೆ. ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳ ಆವಿಷ್ಕಾರವನ್ನು ಮಾನವೀಯತೆಯ-ಮನುಕುಲದ ಉಳಿವಿನ ದೃಷ್ಟಿಯಿಂದ ಪ್ರಶ್ನಿಸಬಹುದಾಗಿದೆ ಮತ್ತು ವಿಶ್ಲೇಷಿಸಬಹುದಾಗಿದೆ. ಅದರ ಬಗ್ಗೆ ಪ್ರಭುತ್ವವನ್ನೂ ಟೀಕಿಸಬಹುದಾಗಿದೆ. ನೆರೆ ರಾಷ್ಟ್ರಗಳ ಜೊತೆಗಿನ ಪವರ್ ಸಮತೋಲನ ಇತ್ಯಾದಿ ಕಾರಣಗಳನ್ನು ಪ್ರಭುತ್ವಗಳು ನೀಡಬಹುದು ಅಥವಾ ತನ್ನ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬಹುದು. ಆದರೆ, ವೈಜ್ಞಾನಿಕ ಮನೋಭಾವದ ಹಿನ್ನೆಲೆಯಲ್ಲಿ ತಮಗೆ ತಿಳಿದಿರುವ, ಸ್ಥಾಪಿತವಾಗಿ ಬೇರೂರಿರುವ, ಪರಂಪರಾಗತ ನಂಬಿಕೆಗಳ ಮೇಲೆ ಕೇಳಲಾಗುವ ಪ್ರಶ್ನೆಗಳನ್ನು ಸ್ವೀಕರಿಸಿ, ಅವುಗಳ ವಿವಿಧ ಆಯಾಮಗಳನ್ನು ಚಿಂತಿಸಿ, ಅಗತ್ಯ ಬಿದ್ದರೆ ಬದಲಾಯಿಸಿಕೊಳ್ಳುವ ಮನಸ್ಥಿತಿಯನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ. ಇದನ್ನು ನಾಗರಿಕರಾದ ವಿಜ್ಞಾನಿಗಳು ಮತ್ತು ಸರ್ಕಾರ ನಡೆಸುವ, ವಿರೋಧ ಪಕ್ಷದಲ್ಲಿರುವ ರಾಜಕಾರಣಿಗಳು ಕೂಡ ಅಪ್ಪಿಕೊಳ್ಳಬೇಕಿದೆ.

ಎಸ್. ಸೋಮನಾಥ್

ಇತ್ತೀಚಿಗೆ ಚಂದ್ರಯಾನ-3ರ ಉಡಾವಣೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು. ಬಾಹ್ಯಾಕಾಶ ವಿಜ್ಞಾನದಲ್ಲಿ ಇಸ್ರೋ ಸಂಸ್ಥೆ ನಡೆಸಿರುವ ಸಂಶೋಧನೆಗಳು ಖಂಡಿತಾ ಬಹುತೇಕ ನಾಗರಿಕರಲ್ಲಿ ’ಮಕ್ಕಳಿಗೆ ಇರುವಂತಹ ಕುತೂಹಲ’ವನ್ನು ಬಡಿದೆಬ್ಬಿಸಬಲ್ಲವು. ಜತೆಗೆ ಈ ಸಂಶೋಧನೆಗಳು, ಭಾರತದ ಹಾಗೂ ಮನುಕುಲದ ಪ್ರಗತಿಗೂ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. (ಇದರ ಬಗ್ಗೆ ಮತ್ತು ಬಾಹ್ಯಾಕಾಶದ ಸಂಶೋಧನೆಯ ಇತಿಹಾಸದ ಬಗ್ಗೆ ಈ ಸಂಚಿಕೆಯಲ್ಲಿ ವಿಶ್ವಕೀರ್ತಿ ಅವರು ಒಂದು ವಿಸ್ತೃತ ಬರಹವನ್ನು ಮಾಡಿದ್ದಾರೆ.) ಇಂತಹ ಹೆಮ್ಮೆಯ ಸಂಶೋಧನೆಗಳ ಹಾಗೂ ಅವುಗಳ ಅನ್ವಯಿಕೆಯ ಬಗ್ಗೆ, ಆ ಸಂಶೋಧನೆಗಳಿಗೆ ಬೇರೆ ಏನೆಲ್ಲವನ್ನು ನಿರ್ಲಕ್ಷಿಸಿ ಸಂಪನ್ಮೂಲ ಹಂಚಿಕೆಗಳನ್ನು ಮಾಡಲಾಗಿದೆ ಎಂಬುದರ ಕುರಿತು, ವಿಜ್ಞಾನಿಗಳು ಸೇರಿದಂತೆ ಆ ಸಂಶೋಧನೆಯಲ್ಲಿ ಭಾಗಿಯಾಗುವ ವಿವಿಧ ಜನ ಮತ್ತು ಸಂಸ್ಥೆಗಳ ಸಾರ್ವಜನಿಕ ನಡವಳಿಕೆಗಳ ಬಗ್ಗೆ ಖಂಡಿತಾ ಪ್ರಶ್ನೆಗಳಿರುತ್ತವೆ. ಆ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸುವುದು ಅದಕ್ಕೆ ಉತ್ತರಗಳನ್ನು ಕಂಡುಕೊಳ್ಳುವುದು ವೈಜ್ಞಾನಿಕ ಮನೋಭಾವದ ಭಾಗವೇ!

ಅಂತಹ ಪ್ರಶ್ನೆಗಳಲ್ಲಿ ಮುಖ್ಯವಾದದ್ದು ಮತ್ತು ಪ್ರತಿ ಬಾಹ್ಯಾಕಾಶ ಉಡಾವಣೆಯ ಸಮಯದಲ್ಲಿ ಕೇಳುವಂಥದ್ದು ಒಂದಿದೆ. ನಮ್ಮ ದೇಶದಲ್ಲಿ ಕಕ್ಕಸ್ಸು ಗುಂಡಿಗಳಿಗೆ ಮನುಷ್ಯರನ್ನು ಇಳಿಸುವ ಅತಿ ಕ್ರೂರವಾದ ಪದ್ಧತಿ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಬಹುಶಃ ಮ್ಯಾನುಯಲ್ ಸ್ಕಾವೆಂಜಿಂಗ್ ಕಾಗದದ ಮೇಲೆಯಾದರೂ ಸಂಪೂರ್ಣವಾಗಿ ನಿಷೇಧವಾಗುವುದಕ್ಕೆ ಮುಂಚಿನಿಂದಲೂ ಬಾಹ್ಯಾಕಾಶ ಸಂಶೋಧನೆಗೆ ಅಪಾರ ಸಂಪನ್ಮೂಲಗಳನ್ನು ವ್ಯಯಿಸಲಾಗುತ್ತಿತ್ತು. ಭಾರತದ ಸಾಮಾಜಿಕ ವ್ಯವಸ್ಥೆಯ ಪಿರಾಮಿಡ್‌ನಲ್ಲಿ ಅತಿ ಕೆಳಗಿರುವ ಸಮುದಾಯದ ವ್ಯಕ್ತಿಗಳು ಈ ಮ್ಯಾನುಯಲ್ ಸ್ಕಾವೆಂಜಿಂಗ್ ಎಂಬ ಮಾನವತೆ ವಿರೋಧಿ ಪದ್ಧತಿಯ ಬಲಿಪಶುಗಳಾಗಿದ್ದಾರೆ. ಇದಿನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗದ ಸಮಯದಲ್ಲಿ, ಚಂದ್ರಯಾನಕ್ಕೂ ಮುಂಚಿತವಾಗಿ ಕಕ್ಕಸ್ಸು ಗುಂಡಿಗಳನ್ನು ಕ್ಲೀನ್ ಮಾಡುವ ರೋಬೋ ಮೆಶಿನ್‌ಗಳ ಆವಿಷ್ಕಾರ, ಸಮರ್ಪಕ ಮಟ್ಟದಲ್ಲಿ ಅವುಗಳ ಉತ್ಪಾದನೆ ಮತ್ತು ದೇಶದೆಲ್ಲೆಡೆ ಅವುಗಳನ್ನು ನಿಯೋಜಿಸುವುದು ಮುಖ್ಯ ಅಲ್ಲವೇ ಎಂಬ ಪ್ರಶ್ನೆ ಕೇಳಿಬಂದಾಗ, ಅದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವ, ಪರಿಶೀಲಿಸಿಕೊಳ್ಳುವ, ಕನಿಷ್ಟ ಪಕ್ಷ ಸಂವಾದ ನಡೆಸುವ ವೈಜ್ಞಾನಿಕ ಮನೋಭಾವ ಮುಖ್ಯವಾಗಿ ಬೇಕಾಗುತ್ತದೆ. ಅದು ಬಿಟ್ಟು ದೇಶದ ಬಾಹ್ಯಾಕಾಶ ಸಂಶೋಧನೆಯನ್ನು ವಿರೋಧಿಸುತ್ತಿದ್ದಾರೆ, ಹಾಗೆ ಮಾಡುವುದು ಸರಿಯಲ್ಲ ಎಂದು ಮುಗಿಬಿದ್ದರೆ ಅದು ಯಥಾಸ್ಥಿತಿಯನ್ನು ಪೋಷಿಸುವ ಅವೈಜ್ಞಾನಿಕತೆಯಲ್ಲದೆ ಮತ್ತೇನಲ್ಲ.

ಇದನ್ನೂ ಓದಿ: ಇಂದು ‘ಚಂದ್ರಯಾನ- 3’ ಉಡಾವಣೆ; ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ನಡೆಗೆ ಖಂಡನೆ ವ್ಯಕ್ತ

ಚಂದ್ರಯಾನ-3 ಉಡಾವಣೆಗೂ ಒಂದು ದಿನ ಮುಂಚಿತವಾಗಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ಸೇರಿದಂತೆ ಸುಮಾರು ಎಂಟು ಜನ ವಿಜ್ಞಾನಿಗಳು ಯಶಸ್ವಿ ಉಡಾವಣೆಗಾಗಿ ತಿರುಪತಿಯ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಈ ವಿಜ್ಞಾನಿಗಳ ವೈಯಕ್ತಿಕ ನಂಬಿಕೆಗಳು ಏನೇ ಆಗಿರಲಿ, ಒಂದು ಸಾರ್ವಜನಿಕ ವಿಜ್ಞಾನ ಸಂಸ್ಥೆಯ ಸಂಶೋಧನೆಯ ಯಶಸ್ಸನ್ನು ತಮ್ಮ ವೈದಿಕೆತೆ ನಂಬಿಕೆಯ ಪದತಲಕ್ಕೆ ಇಡುವುದರ ಬಗ್ಗೆ ಪ್ರಶ್ನೆ ಮಾಡಲಾಯಿತು. ಈ ಯೋಜನೆಯ ಹಿಂದೆ ನೇರವಾಗಿ ಮತ್ತು ಪರೋಕ್ಷವಾಗಿ ಸಾವಿರಾರು-ಲಕ್ಷಾಂತರ ಜನರ, ವಿವಿಧ ಧರ್ಮೀಯರ, ವಿವಿಧ ಜಾತಿ ಸಮುದಾಯಗಳ ಜನರ ಕೊಡುಗೆ ಇದೆ, ಎಷ್ಟೋ ಜನರ ತ್ಯಾಗವಿದೆ. ಈ ಎಲ್ಲರೂ ಈ ವಿಜ್ಞಾನ ಸಂಶೋಧನೆಗಾಗಿ ತಮ್ಮ ಜಾತಿ ಮತ ನಂಬಿಕೆ ಆಚರಣೆಗಳನ್ನು ಮೀರಿ ಕೆಲಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದು ಸೆಕ್ಷನ್ ವಿಜ್ಞಾನಿಗಳು ತಮ್ಮ ನಂಬಿಕೆಗಳ ಸಾರ್ವಜನಿಕ ವಿಜೃಂಭಣೆಗಾಗಿ ಈ ವಿಜ್ಞಾನ ಯೋಜನೆಯನ್ನು ಬಳಸಿಕೊಳ್ಳುವುದು ಅನೈತಿಕ ಮತ್ತು ಅವೈಜ್ಞಾನಿಕವಲ್ಲದೆ ಮತ್ತೇನು? ಇದರ ಬಗ್ಗೆ ಸಾವಿರಾರು ಸಾರ್ವಜನಿಕರು ಪ್ರಶ್ನೆಯೆತ್ತಿದ್ದಾರೆ ಮತ್ತು ನೂರಾರು ಶಿಕ್ಷಕರು-ಉಪನ್ಯಾಸಕರೂ ಕೂಡ ಚರ್ಚಿಸಿದ್ದಾರೆ. ಈ ವಿಜ್ಞಾನಿಗಳ ಈ ನಡೆಯನ್ನು ಚಿರಪರಿಚಿತ ಹೋರಾಟಗಾರ ಮತ್ತು ಕನ್ನಡ ಉಪನ್ಯಾಸಕ ಹುಲಿಕುಂಟೆ ಮೂರ್ತಿ ಕೂಡ ಸಾಮಾಜಿಕ ಮಾಧ್ಯಮದ ಮೂಲಕ ಪ್ರಶ್ನಿಸಿದ್ದರು. ದಲಿತ ಹೋರಾಟದ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಹೋರಾಟಗಳಲ್ಲಿ ಸಕ್ರಿಯರಾಗಿರುವ ಮತ್ತು ಎಲ್ಲವನ್ನು ವೈಚಾರಿಕತೆಯ ದೃಷ್ಟಿಯಿಂದ ವೈಜ್ಞಾನಿಕ ಮನೋಭಾವದಿಂದ ಕಾಣಲು ಪ್ರಯತ್ನಿಸುವ, ಅಧಿಕಾರ ಕೇಂದ್ರಗಳಿಗೆ ಪ್ರಶ್ನೆ ಹಾಕುವ ಮೂರ್ತಿಯವರ ಸುದೀರ್ಘ ಹೋರಾಟ ಜೀವನ ಕರ್ನಾಟಕದ ಬಹುತೇಕ ವಲಯಗಳಲ್ಲಿ ಚಿರಪರಿಚಿತ. ಇಂತಹ ಸಮಯದಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿಕೊಳ್ಳುವುದರಲ್ಲಿ ಸೋತಿರುವ ವಿಜ್ಞಾನಿಗಳ ಬಗ್ಗೆ ಮೂರ್ತಿಯವರು ಕೇಳಿದ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರಿಪಡಿಸಿಕೊಳ್ಳಲು ಸಂಬಂಧಪಟ್ಟವರು ಪ್ರಯತ್ನಿಸಬಹುದಿತ್ತು. ಆದರೆ ಸ್ಥಾಪಿತ ಹಿತಾಸಕ್ತಿಯ ಸಂಘ ಪರಿವಾರದ ಸದಸ್ಯರು ನೈತಿಕ ಅಧಃಪತನದಿಂದ ಕೂಡಿದ ದಾಳಿಗೆ ಇಳಿದಿದ್ದು ದುರದೃಷ್ಟಕರ.

ಹುಲಿಕುಂಟೆ ಮೂರ್ತಿ

ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಲಿಕುಂಟೆ ಮೂರ್ತಿಯವರ ಮೇಲೆ ವೈಯಕ್ತಿಕ ದಾಳಿ ನಡೆಸಲಾಯಿತು. ಅದಕ್ಕೆ ಪ್ರತಿರೋಧವಾಗಿ ಪೋಸ್ಟ್‌ಗಳು ಬರಲಾರಂಭಿಸಿದ ಮೇಲೆ ಬಿಜೆಪಿಯ ಮಾಜಿ ಪ್ರಾಥಮಿಕ ಶಿಕ್ಷಣ ಸಚಿವ ಹಾಲಿ ಶಾಸಕ ಸುರೇಶ ಕುಮಾರ್ ಈಗಿನ ಶಿಕ್ಷಣ ಸಚಿವರಿಗೆ ಪತ್ರ ಬರೆದು ಹುಲಿಕುಂಟೆ ಮೂರ್ತಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರುವವರೆಗೆ ಇದು ಮುಂದುವರಿಯಿತು. ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಕರೆಕೊಡುವುದು ಸಂಘ ಪರಿವಾರ ಬೆಂಬಲಿತ ರಾಜಕಾರಣಿಗಳಿಗೆ ಖಂಡಿತಾ ಅರಗಿಸಿಕೊಳ್ಳಲಾರದ ಸಂಗತಿಯೇ. ಅಷ್ಟಲ್ಲದೆ ಇವರ ಪಕ್ಷದ ಸರ್ಕಾರಗಳು ಜ್ಯೋತಿಷ್ಯ ಶಾಸ್ತ್ರವನ್ನು ಮಕ್ಕಳಿಗೆ ಕಲಿಸಲು ಮುಂದಾಗುತ್ತವೆಯೇ? ಅಷ್ಟಲ್ಲದೆ ಎನ್‌ಸಿಇಆರ್‌ಟಿ ಪಠ್ಯದಿಂದ ವಿಕಾಸವಾದ ಮತ್ತು ಪೀರಿಯಾಡಿಕ್ ಟೇಬಲ್ ಬಗೆಗಿನ ಪಾಠಗಳಿಗೆ ಕತ್ತರಿ ಹಾಕುವುದನ್ನು ಆದ್ಯತೆ ಮಾಡಿಕೊಳ್ಳುತ್ತದೆಯೇ? ಇಂತಹ ಸಂಘ ಪರಿವಾರ ಬೆಂಬಲಿತ ಪಕ್ಷದ ರಾಜಕಾರಣಿಗಳಿಗೆ ವೈಜ್ಞಾನಿಕ ಅನ್ವೇಷಣೆಗಳು ಕೇವಲ ತಮ್ಮ ಚೆಸ್ಟ್ ಥಂಪಿಂಗ್ ನ್ಯಾಷನಲಿಸಂ ಪ್ರಾಜೆಕ್ಟ್‌ನ ಭಾಗವಷ್ಟೇ. ಅವುಗಳ ಮಾನವ ಪ್ರಗತಿಯ ಆಯಾಮ, ಸಮಸ್ತ ಮನುಕುಲದ ಒಳಿತಿನ ಮಾನವೀಯತೆಯ ಪ್ರಶ್ನೆ, ವೈಜ್ಞಾನಿಕ ಮನೋಭಾವಗಳ ಬಗ್ಗೆ ಅವರಿಗೆ ಕಾಳಜಿಯಿಲ್ಲ. ಇಂತಹ ಸನ್ನಿವೇಶದಲ್ಲಿ ಪ್ರಶ್ನೆ ಕೇಳಿದವರೆಲ್ಲ ಇವರ ಕೆಂಗಣ್ಣಿಗೆ ಗುರಿಯಾಗುತ್ತಾರೆ!

ಇದು ಕೇವಲ ಚಂದ್ರಯಾನದಲ್ಲಿ ತೊಡಗಿಕೊಂಡಿದ್ದ ಕೆಲವು ವಿಜ್ಞಾನಗಳ ’ವೈಜ್ಞಾನಿಕ ಮನೋಭಾವ’ದ ಕೊರತೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾತ್ರ ನಡೆದ ದಾಳಿಯಲ್ಲ ಎಂಬುದು ಎಲ್ಲರಿಗೂ ಸುಲಭವಾಗಿ ತಿಳಿದಂತಹುದೇ. ದಲಿತರ ಮೇಲಿನ ದೌರ್ಜನ್ಯ, ಒಳಮೀಸಲಾತಿ ಪ್ರಶ್ನೆ, ತಳ ಸಮುದಾಯಗಳ ಘನತೆಯ ಹೋರಾಟಗಳು ಮತ್ತು ರೈತರ ಹೋರಾಟಗಳ ಪ್ರಶ್ನೆ ಬಂದಾಗಲೆಲ್ಲ ದಮನಿತರ ಪರವಾಗಿ ನಿಂತು ಪ್ರಶ್ನೆ ಮಾಡುವ ವ್ಯಕ್ತಿಯ ಮನೋಸ್ಥೈರ್ಯವನ್ನು ತುಳಿದು ಅಡಗಿಸುವ ಹುನ್ನಾರವಿದು. ಮನುಧರ್ಮಶಾಸ್ತ್ರ ಅನುಸರಿಸುವವರ ವಿರುದ್ಧ ನಿಂತು ಸಮ ಸಮಾಜಕ್ಕೆ ಕರೆಕೊಡುವವರ ವಿರುದ್ಧ ಕಾರ್ಯಾಚರಣೆ ನಡೆಸುವ ಸಂಚಿನ ಭಾಗವಿದು. ಸಮಯೋಚಿತ ಪ್ರಶ್ನೆ ಕೇಳುವವರ ಮೇಲೆ ಇಂತಹ ನೀಚ ದಾಳಿ ನಡೆಸುವವರನ್ನು ಸರ್ಕಾರ ಸ್ವಯಂಪ್ರೇರಿತವಾಗಿ ಗುರುತಿಸಿ ಅವರನ್ನು ಸರಿದಾರಿಗೆ ತರುವ ಕೆಲಸವನ್ನು ಮಾಡಬೇಕಿದೆ. ಅಂತಹವರಿಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವ ಸಂವಿಧಾನದ ಕರ್ತವ್ಯವನ್ನು ನೆನಪಿಸುವ ಕೆಲಸವನ್ನೂ ಮಾಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯಯವರನ್ನು ಕೋರ್ಟ್‌ಗೆ ಎಳೆದಿದ್ದಕ್ಕೆ ಬಿಎಸ್‌ವೈ ವಿರುದ್ಧ ಕಾಂಗ್ರೆಸ್ ಸೇಡು; ಬಿಜೆಪಿ ಆರೋಪ

0
'ರಾಜ್ಯದ ಕಾಂಗ್ರೆಸ್ ಸರ್ಕಾರವು ಮಾಜಿ ಮುಖ್ಯಮಂತ್ರಿ ಬಿ.ಎಸ್ ಒಳಗೊಂಡಿರುವ ಪೋಕ್ಸೋ ಪ್ರಕರಣದಲ್ಲಿ ಸೇಡಿನ ರಾಜಕಾರಣ ಮಾಡುತ್ತಿದೆ. ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರನ್ನು ಕೋರ್ಟ್‌ಗೆ ಎಳೆದಿದ್ದಕ್ಕೆ ಯಡಿಯೂರಪ್ಪ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ" ಎಂದು ರಾಜ್ಯ...