ಹಿಂದುತ್ವ ನಾಯಕ ಸಂಭಾಜಿ ಭಿಡೆ ಅವರು ತಮ್ಮ ಭಾಷಣದ ವೇಳೆ ಮಹಾತ್ಮಾ ಗಾಂಧಿಯವರ ವಂಶಾವಳಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಇದೀಗ ಅವರ ವಿರುದ್ಧ ಮಹಾತ್ಮಾ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿಯವರು ಅಧಿಕೃತ ದೂರು ದಾಖಲಿಸುವುದಾಗಿ ಗುರುವಾರ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ನಾನು ಪುಣೆಗೆ ಹೋಗುತ್ತಿದ್ದೇನೆ. ಈ ಮಧ್ಯೆ ಇಂದು ಮಧ್ಯಾಹ್ನ ಡೆಕ್ಕನ್ ಪೊಲೀಸ್ ಠಾಣೆಯಲ್ಲಿ ಪ್ರಧಾನಮಂತ್ರಿಯವರ ‘ಪೂಜ್ಯ ಗುರೂಜಿ’ಯಾದ ಭಿಡೆ ವಿರುದ್ಧ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಲಿದ್ದೇನೆ. ನನ್ನ ಪೂರ್ವಜರ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಆಗಬೇಕು” ಎಂದು ಹೇಳಿದ್ದಾರೆ.
ಕಳೆದ ತಿಂಗಳು, ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಸಂಘಟನೆಯ ಸಂಸ್ಥಾಪಕ ಭಿಡೆ ಅವರ ಭಾಷಣದಲ್ಲಿ ಮಹಾತ್ಮ ಗಾಂಧಿಯವರ ವಂಶಾವಳಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಅಮರಾವತಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಮಹಾತ್ಮಾ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಕೆಯನ್ನು ಖಂಡಿಸಿದ ವಿರೋಧ ಪಕ್ಷಗಳು ಭಿಡೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆ ಇಟ್ಟಿದ್ದರು. ಕಳೆದ ವಾರ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ರಾಷ್ಟ್ರೀಯ ಐಕಾನ್‌ಗಳನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಬುದ್ಧ, ಪುಲೆ, ಪೆರಿಯಾರ್ ವಿರುದ್ಧವೂ ಭಿಡೆ ಅವಹೇಳನ
ಆ ಬಳಿಕ ಭಿಡೆ ಅವರು ಗೌತಮ್ ಬುದ್ಧ, ಜ್ಯೋತಿಬಾ ಫುಲೆ ಮತ್ತು ಪೆರಿಯಾರ್ ನಾಯ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಮತ್ತೊಂದು ಪ್ರಕರಣವನ್ನು ದಾಖಲಿಸಲಾಗಿದೆ.
ದೂರಿನಲ್ಲಿ ಕೆಲವು ಆನ್‌ಲೈನ್ ವೀಡಿಯೋಗಳನ್ನು ಉಲ್ಲೇಖಿಸಲಾಗಿದೆ, ಇದರಲ್ಲಿ ಭಿಡೆ ಸಮಾಜ ಸುಧಾರಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಕಂಡುಬಂದಿದೆ.
ಇದನ್ನೂ ಓದಿ: ಮಹಾತ್ಮ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಬಂಧನ


