ವ್ಯಕ್ತಿಯೊಬ್ಬ ಅತ್ಯಾಚಾರ ಪ್ರಕರಣದಲ್ಲಿ 10ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ, ಜೈಲಿನಿಂದ ಹೊರಬಂದ ನಂತರವೂ ಮತ್ತದೇ ಹೇಯ ಕೃತ್ಯವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಸತ್ನಾದಲ್ಲಿ 5 ವರ್ಷದ ದಲಿತ ಬಾಲಕಿಯ ಮೇಲೆ ಆರೋಪಿಯು ಅತ್ಯಾಚಾರ ಎಸಗಿದ್ದಾನೆ. ಸಧ್ಯ ಆತನ ವಿರುದ್ಧ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಈ ಆರೋಪಿಯು ಈ ಹಿಂದೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ 10 ವರ್ಷಗಳ ಕಾಲ ಜೈಲಿನಲ್ಲಿದ್ದರೂ ಆತನ ಮನಸ್ಥಿತಿ ಸ್ವಲ್ಪವೂ ಸುಧಾರಿಸಿರಲಿಲ್ಲ. ಒಂದೂವರೆ ವರ್ಷದ ಹಿಂದೆಯಷ್ಟೇ ಜೈಲಿನಿಂದ ಹೊರಬಂದಿದ್ದನು. ಇದೀಗ ಆತ ಮತ್ತೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತ ಬಾಲಕಿಯು ಬುಧವಾರ ಸಂಜೆ 5 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದಾಳೆ, ಇದರ ಬೆನ್ನಲ್ಲೇ ಆಕೆಯ ಅಜ್ಜಿ ಹುಡುಕಾಟ ಆರಂಭಿಸಿದ್ದರು. ಸ್ವಲ್ಪ ದೂರದಲ್ಲಿ ಬಾಲಕಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆರೋಪಿ ರಾಕೇಶ್ ವರ್ಮಾ ಅಲಿಯಾಸ್ ರಕ್ಕು ಬಾಲಕಿಗೆ ಮಿಠಾಯಿ ತಿನ್ನಿಸುವ ನೆಪದಲ್ಲಿ ಆಮಿಷವೊಡ್ಡಿ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ.
ಬಾಲಕಿಯು ಸಹಾಯಕ್ಕಾಗಿ ಕೂಗಿದಾಗ ಸಿಟಿ ಕೊತ್ವಾಲ್ ಶಂಖಧರ್ ದ್ವಿವೇದಿ ಅವರ ತಂಡ ಸ್ಥಳಕ್ಕೆ ಆಗಮಿಸಿ ಬಾಲಕಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಹುಡುಕಾಟ ನಡೆಸಿದ ಬಳಿಕ ಬಾಲಕಿ ಪತ್ತೆಯಾಗಿದ್ದಾಳೆ. ಬಾಲಕಿಯ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ರೇವಾದಲ್ಲಿರುವ ಸಂಜಯ್ ಗಾಂಧಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈದ್ಯಕೀಯ ವರದಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಆರೋಪಿಯು 2012ರಲ್ಲಿ ಕೊಲ್ಗ್ವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕೂವರೆ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರಿದ್ದನು. ಜೈಲಿನಲ್ಲಿ ಉತ್ತಮ ನಡತೆಯ ಆಧಾರದ ಮೇಲೆ ಮೂರು ವರ್ಷಗಳ ಶಿಕ್ಷೆಯನ್ನು ಮನ್ನಾ ಮಾಡಿ 18 ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದನು. ಬಿಡುಗಡೆಯಾದ ಒಂದೂವರೆ ವರ್ಷದ ಬಳಿಕ ಆರೋಪಿ ಮತ್ತೊಬ್ಬ ಅಪ್ರಾಪ್ತ ಬಾಲಕಿಯ ಮೇಲೂ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಇದನ್ನೂ ಓದಿ:


