ಟೋಬಿ’ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿದ ಮಹಿಳೆಗೆ ಯವಕನೊಬ್ಬ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ ಘಟನೆ ಮೈಸೂರಿನ ಸಂಗಮ್ ಚಿತ್ರಮಂದಿರದ ಹೊರಾಂಗಣದಲ್ಲಿ ನಡೆದಿತ್ತು. ಈ ಪ್ರಕರಣ ಸಂಬಂಧ ಇದೀಗ ಚಿತ್ರನಟ ರಾಜ್ ಬಿ ಶೆಟ್ಟಿ ಕ್ಷಮೆ ಕೋರಿದ್ದಾರೆ.
‘ದೌರ್ಜನ್ಯಕ್ಕೀಡಾದ ಯುವತಿ ಜತೆ ಕ್ಷಮೆ ಕೇಳುತ್ತೇನೆ’ ಎಂದು ರಾಜ್ ಬಿ ಶೆಟ್ಟಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
”ಸಿನಿಮಾ ವಿಮರ್ಶೆಗೆ ಒಳಪಡುವ ಮಾಧ್ಯಮವಾಗಿದೆ. ಹಣ ಕೊಡುವ ವೀಕ್ಷಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ. ಅದನ್ನು ಒಪ್ಪಿಕೊಳ್ಳುವ ಅಥವಾ ಒಪ್ಪಿಕೊಳ್ಳದೇ ಇರುವ ಸ್ವಾತಂತ್ರ್ಯ ಅವರಿಗಿದೆ. ಹಾಗಾಗಿ ಅವರು ತಮ್ಮ ಅಭಿಪ್ರಾಯ ಹೇಳಿದ ಕಾರಣಕ್ಕೆ ಯಾವುದೇ ರೀತಿಯಲ್ಲಿ ನಾವು ಕಿರುಕುಳ ನೀಡಲು ಪ್ರಯತ್ನಿಸಬಾರದು” ಎಂದು ಅವರು ಬರೆದುಕೊಂಡಿದ್ದಾರೆ.
”ವಿಡಿಯೊದಲ್ಲಿರುವವರು ನಮ್ಮ ಸಿನಿಮಾಗೆ ಸಂಬಂಧಪಟ್ಟವರಲ್ಲ ಆದರೂ ನಾನು ಕಿರುಕುಳಕ್ಕೆ ಒಳಗಾದ ಯುವತಿಯ ಜತೆ ಕ್ಷಮೆ ಕೇಳುತ್ತೇನೆ. ನಮ್ಮನ್ನು ಕ್ಷಮಿಸಿ ಎಂದು ರಾಜ್ ಬಿ ಶೆಟ್ಟಿ ಕ್ಷಮೆ ಕೇಳಿದ್ದಾರೆ.

ಏನಿದು ಘಟನೆ?
ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನ ಮುಗಿದ ಬಳಿಕ ಮಾತನಾಡಿದ್ದ ಮಹಿಳೆ ‘ಚಿತ್ರ ಚೆನ್ನಾಗಿಲ್ಲ’ ಎಂದು ನೇರವಾಗಿ ಕ್ಯಾಮೆರಾ ಮುಂದೆ ನಿಂತು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಕನ್ನಡ ಸಿನಿಮಾ ಚೆನ್ನಾಗಿಲ್ಲ ಅಂತೀಯಲ್ಲ ಅವಾಚ್ಯ ಪದಗಳನ್ನು ಬಳಸಿ ಆಕೆಯನ್ನು ನೂರಾರು ಜನರ ಮುಂದೆ ನಿಂದಿಸಿದ್ದಾನೆ.
ಚಿತ್ರ ಚೆನ್ನಾಗಿಲ್ಲ ಅನ್ನೋಕೆ ನೀನ್ಯಾರು, ಚಿತ್ರ ಚೆನ್ನಾಗಿದೆ, ಚಿತ್ರ ನೋಡಿ ಹೇಗಿದೆ ಎಂದು ಹೇಳಲು ನಿನಗೆ ಯಾರು ಹೇಳಿದ್ರು? ಎಂದೆಲ್ಲಾ ಜೋರು ದನಿಯಲ್ಲಿ ಮಾತನಾಡಿದ್ದಾನೆ. ಕನ್ನಡ ಚಿತ್ರವೊಂದನ್ನು ನೋಡಲು ಬಂದ ಮಹಿಳೆಗೆ ವ್ಯಕ್ತಿಯೊಬ್ಬ ಅತಿ ಕೆಟ್ಟ ಪದ ಬಳಕೆ ಮಾಡುತ್ತಿದ್ದರೂ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಸಹ ಆಕೆಯದ್ದೆ ತಪ್ಪು, ಚಿತ್ರ ಚೆನ್ನಾಗಿಲ್ಲ ಎಂದಿದ್ದೇ ತಪ್ಪು ಎಂದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದು ಯುವಕ ವರ್ತನ ವಿರುದ್ಧ ನಟ್ಟಿಗರು ಕಿಡಿಕಾಡಿದ್ದಾರೆ.
ಇದನ್ನೂ ಓದಿ: ‘ಟೋಬಿ’ ಚಿತ್ರ ಚೆನ್ನಾಗಿಲ್ಲ ಎಂದ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆಗೆ ಯತ್ನ


