ಗುರುಗ್ರಾಮದ ಸ್ಲಮ್‌ನಲ್ಲಿ ಮುಸ್ಲಿಮರು ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಬೆದರಿಕೆ ಹಾಕುವ ಪೋಸ್ಟರ್‌ಗಳನ್ನು ಹಾಕಲಾಗಿದೆ.
ಈ ಸಂಬಂಧ ಮೊಜೆದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಭಾನುವಾರ ಬೆಳಿಗ್ಗೆ ತಮ್ಮ ಟೀ ಅಂಗಡಿಯ ಗೋಡೆಯ ಮೇಲೆ ಪೋಸ್ಟರ್ ಹಾಕಲಾಗಿದೆ. ಪೋಸ್ಟರ್‌ನಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ಹೆಸರುಗಳಿವೆ ಎಂದು ಅವರು ಆರೋಪಿಸಿದ್ದಾರೆ.
ಪೋಸ್ಟರ್‌ನಲ್ಲಿ ಸೋಮವಾರದೊಳಗೆ ಮನೆ ತೊರೆಯಬೇಕು ಎಂದು ಮುಸ್ಲಿಮರಿಗೆ ಎಚ್ಚರಿಕೆ ನೀಡಿರುವ ಭಿತ್ತಿಚಿತ್ರಗಳು ಕಂಡು ಬಂದಿದ್ದು, ಇಲ್ಲವಾದರೆ ತಮ್ಮ ಸಾವಿಗೆ ಅವರೇ ಹೊಣೆ ಹೊರಬೇಕು ಎಂದು ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್ ಭಿತ್ತಿ ಚಿತ್ರವನ್ನು ನಾವು ಹಾಕಿಲ್ಲ ಎಂದು ಹೇಳಿದೆ. ಆ ನಕಲಿ ಅಭಿಯಾನದಲ್ಲಿ ಭಾಗಿಯಾಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಮೋಜೆದ್ ದೂರನ್ನು ಆಧರಿಸಿ ನಿನ್ನೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿಭಂಗಗೊಳಿಸಲು ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆ), 295ಎ, 188 ಹಾಗೂ 294 (ನಿಂದನೆ) ಅಡಿ ಕೇಸ್ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ತನಗೆ ಬೆದರಿಕೆ ಹಾಕಲು ಮತ್ತು ಸ್ಥಳದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಆಸಿಫ್ ಎಂಬಾತ ಆ ಪೋಸ್ಟರ್ ಅಂಟಿಸಿರುವ ಸಾಧ್ಯತೆ ಇದೆ ಎಂದು ಮೋಜೆದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


