”ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ದರಿದ್ದೇವೆ ಆದರೆ ರಾಜ್ಯದ ಸ್ಥಾನಮಾನವನ್ನು ಯಾವಾಗ ಮರುಸ್ಥಾಪಿಸಲಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲು ಸಾಧ್ಯವಿಲ್ಲ” ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು, 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿರುವ ಮತ್ತು ಹಿಂದಿನ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಪ್ರಶ್ನಿಸಿ 20ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ಮಂಗಳವಾರ ನ್ಯಾಯಾಲಯವು, ಜಮ್ಮು ಮತ್ತು ಕಾಶ್ಮೀರವನ್ನು ಮತ್ತೆ ಯಾವಾಗ ರಾಜ್ಯವನ್ನಾಗಿ ಮಾಡುತ್ತೀರಿ ಎಂಬುದನ್ನು ತಿಳಿಸಿ ಎಂದು ಕೇಂದ್ರ ಸರ್ಕಾರಕ್ಕೆ ಹೇಳಿತ್ತು.
ಈ ವಿಚಾರವಾಗಿ ಗುರುವಾರ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ”ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ತಾತ್ಕಾಲಿಕವಾಗಿದೆ ಎಂದು ಪುನರುಚ್ಚರಿಸಿದರು. ಆದಾಗ್ಯೂ, ಸಂಪೂರ್ಣ ರಾಜ್ಯವಾಗಿ ಮರುಸ್ಥಾಪಿಸಲು ನಿಖರವಾದ ಅವಧಿಯನ್ನು ನೀಡಲು ನನಗೆ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
”ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಪಟ್ಟಿಯನ್ನು ನವೀಕರಿಸುವ ಪ್ರಕ್ರಿಯೆಯು ಮುಗಿದಿದೆ. ಜಮ್ಮು ಮತ್ತು ಕಾಶ್ಮೀರದ ಪಂಚಾಯತ, ಪುರಸಭೆ ಮತ್ತು ವಿಧಾನಸಭೆಗೆ ಕೇಂದ್ರವು ಮೂರು ಹಂತದ ಚುನಾವಣೆಗಳನ್ನು ನಡೆಸಲಿದೆ” ಎಂದು ಮೆಹ್ತಾ ಹೇಳಿದರು.
“ಕೇಂದ್ರ ಸರ್ಕಾರವು ಈಗ ಅಲ್ಲಿ ಯಾವುದೇ ಸಮಯದಲ್ಲಾದರೂ ಚುನಾವಣೆ ನಡೆಸಲು ಸಿದ್ಧವಾಗಿದೆ” ಎಂದು ಅವರು ಹೇಳಿದರು.
”ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಗುಂಪುಗಳು ಕಲ್ಲು ತೂರಾಟ ಮತ್ತು ಬಂದ್‌ಗಳಿಗೆ ಕರೆ ನೀಡುವ ಘಟನೆಗಳು ಕಡಿಮೆಯಾಗಿವೆ ಮತ್ತು 370ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ ಪ್ರವಾಸೋದ್ಯಮವು ಪ್ರವರ್ಧಮಾನಕ್ಕೆ ಬಂದಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿಗೆ ಮರಳಿರುವುದನ್ನು ತೋರಿಸುತ್ತದೆ ಎಂದು ಮೆಹ್ತಾ ಸರ್ಕಾರಿ ಡೇಟಾವನ್ನು ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ”ಸರ್ಕಾರ ಬಲವಂತದ ಕ್ರಮ ಕೈಗೊಳ್ಳುತ್ತಿದೆ. ನೀವು 5000 ಜನರನ್ನು ಗೃಹಬಂಧನದಲ್ಲಿಟ್ಟಿದ್ದೀರಿ. ರಾಜ್ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಹೇಇರದ್ದೀರಿ” ಎಂದು ಅವರು ಹೇಳಿದರು.
ಇದನ್ನೂ ಓದಿ: ಜಮ್ಮು, ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಯಾವಾಗ ಮರು ಸ್ಥಾಪಿಸುತ್ತೀರಿ?: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ


