ಬುರ್ಖಾ ಧರಿಸಿದ ಮಹಿಳೆಗೆ ಕೆನರಾ ಬ್ಯಾಂಕ್‌ನ ಶಾಖೆಯೊಂದಕ್ಕೆ ಪ್ರವೇಶಕ್ಕೆ ನಿರಾಕರಣೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಬ್ಯಾಂಕ್ ಗೈಡ್‌ಲೈನ್ಸ್ ಇದೆ. ಬುರ್ಖಾ ಧರಿಸಿ ಬ್ಯಾಂಕ್ ಒಳಗಡೆ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಬ್ಯಾಂಕ್ ನ ಭದ್ರತಾ ಸಿಬ್ಬಂದಿ ಮಹಿಳೆಗೆ ಹೇಳುವುದು ಸೆರೆಯಾಗಿದೆ.
ವೈರಲ್ ಆಗಿರುವ 5 ನಿಮಿಷಗಳ ವಿಡಿಯೋದಲ್ಲಿ, ಮಹಿಳೆ ಜೈಪುರದ ಕೆನರಾ ಬ್ಯಾಂಕ್‌ಗೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಮನವಿ ಮಾಡುವುದು ಸೆರೆಯಾಗಿದೆ. ಬ್ಯಾಂಕ್ ಒಳಗಡೆ ಬುರ್ಖಾ ಧರಿಸಿ ಬರಲು ಅನುಮತಿ ಇಲ್ಲ ಎಂದು ಹೇಳಿದ ಭದ್ರತಾ ಸಿಬ್ಬಂದಿ ಬ್ಯಾಂಕ್ ಒಳಗಡೆ ಬರಲು ಮಹಿಳೆಗೆ ಬುರ್ಖಾ ತೆಗೆಯುವಂತೆ ಹೇಳುವುದು ಕಂಡು ಬಂದಿದೆ.
ಮಹಿಳೆ ಬುರ್ಖಾಗೆ ಧರಿಸಿದವರಿಗೆ ಪ್ರವೇಶಕ್ಕೆ ಅನುಮತಿ ಇಲ್ಲ ಹೇಳಿರುವ ಗೈಡ್ ಲೈನ್ಸ್ ತೋರಿಸಿ ಎಂದು ಭದ್ರತಾ ಸಿಬ್ಬಂದಿಗೆ ಮತ್ತೆ ಮತ್ತೆ ಆಗ್ರಹಿಸಿದ್ದಾರೆ. ಈ ವೇಳೆ ಆತ ಬ್ಯಾಂಕ್ ನ ವ್ಯವಸ್ಥಾಪಕರು ಅನುಮತಿ ಕೊಟ್ಟರೆ ಒಳಗೆ ಬರಲು ಅನುಮತಿ ಕೊಡುವುದಾಗಿ ಹೇಳಿದ್ದಾರೆ. ಮಹಿಳೆ ಅನುಮೋದನೆಯನ್ನು ಪಡೆದ ನಂತರ ಭದ್ರತಾ ಸಿಬ್ಬಂದಿಗಳು ಹಿಂತಿರುಗಲು ಕಾಯುತ್ತಿದ್ದರು. ಈ ವೇಳೆ ಒಂದೆರಡು ಜನರು ಬ್ಯಾಂಕ್ ಒಳಗಡೆ ಪ್ರವೇಶಿಸುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ನಂತರ ಮಹಿಳೆಯನ್ನು ಶಾಖಾ ವ್ಯವಸ್ಥಾಪಕರ ಕಚೇರಿಗೆ ಕರೆದೊಯ್ಯುತ್ತಾರೆ. ಅಲ್ಲಿ ಅವರು ಬುರ್ಖಾ ಧರಿಸಿದರೆ ಪ್ರವೇಶ ನಿರಾಕರಣೆ ಬಗ್ಗೆ ಹೊರಡಿಸಿದ ಗೈಡ್ ಲೈನ್ ತೋರಿಸುವಂತೆ ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾನೇಜರ್, ಅವರಿಗೆ ಬ್ಯಾಂಕ್ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡದಿರುವುದು ಬುರ್ಖಾದ ಕಾರಣದಿಂದಲ್ಲ. ಊಟದ ಸಮಯದ ಕಾರಣ ಅನುಮತಿ ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ ಬ್ಯಾಂಕ್ ಆವರಣದೊಳಗೆ ರೆಕಾರ್ಡಿಂಗ್ ನಿಲ್ಲಿಸುವಂತೆ ಮ್ಯಾನೇಜರ್ ಮಹಿಳೆಗೆ ಸೂಚಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನಂತರ ಬ್ಯಾಂಕ್‌ನ ಇತರ ಇಬ್ಬರು ಮಹಿಳಾ ಉದ್ಯೋಗಿಗಳು ಮಧ್ಯಪ್ರವೇಶಿಸಿ ಮಹಿಳೆಯ ಬಳಿ ಕ್ಷಮೆಯಾಚಿಸುವುದನ್ನು ಕಾಣಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಬ್ಯಾಂಕ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು ಆಗ್ರಹಿಸಿದ್ದಾರೆ.
ಇದನ್ನು ಓದಿ: ಭಾರತ್ ಜೋಡೋ ವರ್ಷಾಚರಣೆ: ದ್ವೇಷ ಅಳಿದು, ದೇಶ ಒಗ್ಗೂಡಿಸುವವರೆಗೂ ಯಾತ್ರೆ ಮುಂದುವರಿಯುತ್ತದೆ; ರಾಹುಲ್


