| ಡಾ. ವಿನಯಾ ಒಕ್ಕುಂದ |
ಅನುಪಮಾ ನಿರಂಜನರ ‘ಮಾಧವಿ’ ಕಾದಂಬರಿ ಕಲಿಸುತ್ತಿದ್ದೆ. ನನ್ನೆದುರು ಮಾಧವಿ ಕುಳಿತಿರುತ್ತಿದ್ದಳು. ತಿಳಿದುಕೊಳ್ಳಲು ಹರಸಾಹಸ ಮಾಡುತ್ತ ಮುಖ ವಾರೆಮಾಡಿ ಕೆಲವೊಮ್ಮೆ ಡೆಸ್ಕಿನ ಮೇಲೆ ಬಾಗಿಕೊಂಡು ಕ್ಲಾಸಿನಲ್ಲಿ ಒಂದು ಪ್ರಶ್ನೆಯನ್ನವಳು ಕೇಳುತ್ತಾಳೆಂದರೆ ಇಡೀ ಕ್ಲಾಸು ಒಂದು ಹತ್ತು ನಿಮಿಷ ಸ್ತಬ್ಧವಾಗಬೇಕಾಗುತ್ತಿತ್ತು. ಮಾಧವಿಗೆ ಒಂದು ವಾಕ್ಯ ಮಾತನಾಡಲು ಅಷ್ಟು ವೇಳೆ ಹಿಡಿಯುತ್ತಿತ್ತು. ಸ್ವಂತ ಒಂದು ಹೆಜ್ಜೆಯೂ ನಡೆಯಲಾಗದ ಅಂಗವಿಕಲತೆ ಅವಳದು. ಬುದ್ದಿಮಾಂದ್ಯತೆ ಅಲ್ಲದಿದ್ರೂ ಉಳಿದ ಮಕ್ಕಳಿಗೆ ಸರಿಗಟ್ಟಲಾಗದ ನ್ಯೂನತೆಯಂತೂ ಇತ್ತು.
ಆದರೆ ಮಾಧವಿ ಎಲ್ಲದ್ದರಲ್ಲೂ ಆಸಕ್ತಳಿದ್ದಳು. ಹಾಡಿಗೆ, ಮಾತುಗಾರಿಕೆಗೆ ಸತತ ಶ್ರಮಿಸುತ್ತಿದ್ದಳು. ಒಂದೊಂದು ಅಕ್ಷರಕ್ಕೆ ಬರೋಬ್ಬರಿ ಒದೊಂದು ನಿಮಿಷವೇ ಬೇಕಾಗುತ್ತಿತ್ತು ಅವಳಿಗೆ. ವಿಶ್ವವಿದ್ಯಾಲಯದ ನಿಯಮಕ್ಕನುಸಾರ ಅರ್ಧಗಂಟೆ ಹೆಚ್ಚು ಅವಧಿ ತೆಗೆದುಕೊಂಡು ಪರೀಕ್ಷೆ ಬರೆಯುತ್ತಿದ್ದಳು. ಕಳೆದ ಏಪ್ರಿಲ್‍ನಲ್ಲಿ ಬಿ.ಎ ಕೊನೆಯ ಪರೀಕ್ಷೆಯನ್ನೂ ಬರೆದಳು. ಇಂಥವಳಿಗೆ ಮಾಧವಿ ಪುಸ್ತಕವನ್ನೊಳಗೊಂಡ ಪರೀಕ್ಷೆಯಲ್ಲಿ 60 ಅಂಕಗಳು ಬಂದುಬಿಟ್ಟಿದ್ದವು. ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ಮುಂದೆಲ್ಲ ಅವಳು ಕ್ಲಾಸಿನಲ್ಲಿ ನಗುತ್ತಲೇ ಇದ್ದ ನೆನಪು.
ಅವಳಿಗೆ ಏನಾದರೂ ಹೇಳಲಿಕ್ಕಿದ್ದರೆ ಕ್ಲಾಸುಗಳು ಮುಗಿದಮೇಲೆ ಗೆಳತಿಯರ ಹತ್ತಿರ ಹೇಳಿ ಕಳುಹಿಸುತ್ತಿದ್ದಳು. ‘ಮೇಡಂ, ಬರ್ಬೇಕಂತೆ ಮಾಧವಿ ಕರೀತಿದಾಳೆ’ ಎಂಬ ಅವರ ನಗುವಿನಲ್ಲಿ, ‘ಬನ್ನಿ ನಿಮ್ಮ ಪಂಚಾಯ್ತಿ ಬಿಡಿಸುತ್ತಾಳೆ’ ಎಂಬ ಒಳಾರ್ಥವೂ ಇರುತ್ತಿತ್ತು. ಮಾಧವಿಯ ಪ್ರಶ್ನೆಗಳಿಗೆ ಉತ್ತರಿಸಿ ಅಲ್ಲಿಂದ ದಾಟಿ ಬರುವುದೇನು ಸಾಮಾನ್ಯವೇ? ಇಂತಹ ಒಂದಿನ, ‘ಮಾಧವಿ’ ಪುಸ್ತಕದ ಮುಂದೆ ಚಾಚಿ ‘ಇದರ ಮೇಲೆ ಏನಾದರೂ ಬರೆದುಕೊಡಿ ನಾ ಇದನ್ನ ಯಾವಾಗಲೂ ನಂಜೊತೆ ಇಟ್ಟುಕೊತೀನಿ’ ಎಂದಳು. ಹಾಗೆನ್ನುವಾಗ ಅವಳ ಕಣ್ಣು ನೀರೊಡೆದಿದ್ದವು. ನಾನು ಅಳುನುಂಗಿ ಬರೆದಿದ್ದೆ. ‘ಶಂತನು ಮಹಾರಾಜನ ಮಗಳು ಮಾಧವಿಯ ಕಥೆ, ಹೆಣ್ಣು ಪಿತೃವ್ಯವಸ್ಥೆಯಿಂದ ಅನುಭವಿಸುತ್ತಿದ್ದ ಯಾತನೆಯ ಆದಿಮ ಉದಾಹರಣೆ. ಆದರೆ ಈ ಮಾಧವಿಯದು ಮಗಳನ್ನು ಕಣ್ಣರೆಪ್ಪೆಯಂತೆ ಪೊರೆವ ಅಪ್ಪನನ್ನು ಪಡೆದವಳ ಕಥೆ. ಈ ಎರಡೂ ಹೆಣ್ಣು ಬದುಕಿನ ಸತ್ಯಗಳೇ ಜಾಣೆಯಾಗಿರು, ಅಪ್ಪ-ಅಮ್ಮನ ಮಾತು ಕೇಳು’ ಹಾಗೆ ಬರೆಯಲು ಕಾರಣಗಳಿದ್ದವು.
ಎರಡೇ ದಿನ ಮುಂಚೆ ಮಾಧವಿ ತನಗೆ ಬಂದಿದ್ದ ಒಂದು ಸಂಬಂಧವನ್ನು ತಿರಸ್ಕರಿಸಿದ್ದೆ ಎಂದಿದ್ದಳು. ಅದು ಸತ್ಯವೇ, ಅಥವಾ ಆವಳದ್ದೇ ಆದ ಕಾಲ್ಪನಿಕತೆಯೇ ಅರ್ಥವಾಗಿರಲಿಲ್ಲ. ಸತ್ಯವಾಗಿದ್ದರೆ, ಅವಳ ಹೆತ್ತವರಿಗಾದ ನಿರಾಸೆ ಹೇಳಲು ಮಾತು ಸೋಲುತ್ತ್ತದೆ. ಸುಳ್ಳಾಗಿದ್ದು ನಾನು ಅವರ ತಂದೆಯನ್ನು ಕೇಳಿದರೆ ಅವರ ಕಣ್ಣಲ್ಲಿ ಮಾಧವಿ ಕುಸಿಯುತ್ತಾಳೆ. ದಿನಂಪ್ರತಿ ಮಗಳನ್ನು ಕಾಲೇಜಿಗೆ ಕರೆತಂದು ಕೈಹಿಡಿದು ತಂದು ಕ್ಲಾಸ್‍ರೂಂನಲ್ಲಿ ಕೂರಿಸಿ, ಮತ್ತೆ ಮರಳಿ ಕರೆದೊಯ್ಯಲು ಬರುತ್ತಿದ್ದ ಅವಳ ಅಪ್ಪನ ಮುಖದ ಮಂದಹಾಸ ಯಾವ ನಂದಾದೀಪಕ್ಕೂ ಕಡಿಮೆಯಾಗಿರಲಿಲ್ಲ. ಖಾಸಗಿ ಬ್ಯಾಂಕೊಂದರ ಉದ್ಯೋಗಿಯಾಗಿದ್ದ ಅವರು ಮಗಳಿಗಾಗಿ ಗಂಧದ ಹಾಗೆ ಜೀವ ತೇಯುತ್ತಿದ್ದರು. ಮಗಳು ಕಲಿತು ಉದ್ಯೋಗಸ್ಥಳಾಗುತ್ತಾಳೆ ಎಂಬ ಭ್ರಮೆಯೂ ಅವರಿಗಿರಲಿಲ್ಲ ಪರಿಸ್ಥಿತಿಯ ಅರಿವಿತ್ತು. ಆದರೆ ಅವಳ ಸಂತಸದ ಹಾದಿಯ ಹುಡುಕಾಟದಲ್ಲಿ ಮಗ್ನರಾಗಿರುತ್ತಿದ್ದರು. ಈಗಲೂ ಅವರು ಹಾಗೇ ಇದ್ದಿದ್ದಾರು.
ನನ್ನ ಅಜ್ಜಿಯ ತಮ್ಮ ಒಬ್ಬರಿದ್ದರು. ನನ್ನ ಎಳೆವಯಸಲ್ಲಿ ಒಮ್ಮೆ ಮಾತ್ರ ಆ ಅಜ್ಜನನ್ನು ನೋಡಿದ್ದು. ಈಗ ಗಂಗಾವಳಿ ನದಿ ಹೊಕ್ಕು ಹೈರಾಣಾದ ಗಂಗಾ ಸಿಲ್ಲೂರು ಎಂಬ ಹಳ್ಳಿಯಲ್ಲಿ ಬೇಸಾಯ ಮಾಡಿಕೊಂಡಿದ್ದರು. ಅವರಿಗೆ ರಾಶಿ ಹೆಣ್ಮಕ್ಕಳು, ಒಬ್ಬನೇ ಮಗ. ಆಗಿನ ಕಾಲದಲ್ಲಿ ಆ ಹಳ್ಳಿಮೂಲೆಯಿಂದಲೇ ತಮ್ಮ ಹೆಣ್ಮಕ್ಕಳನ್ನೆಲ್ಲ ಓದಿಸಿದರು. ಅವರೆಲ್ಲಾ ಬೇರೆ ಬೇರೆ ಉದ್ಯೋಗ ಹಿಡಿದು ಸಮಾಜದ ಮುಖ್ಯವಾಹಿನಿಗೆ ಬೆರೆಯಲ್ಪಟ್ಟರು. ಪ್ರವಾಹದ ಸೆಳೆತಕ್ಕೆ ಸಿಗದೆ ಮರಹತ್ತುವ ‘ಹತ್ತುಮೀನನ’ ಹಾಗೆ ನನ್ನ ತಾಯಿಯ ವಾರಗೆಯ ಅವರು ಹೆಣ್ಮಕ್ಕಳ ಮಾತಿನ ಒಳಕೋಣೆಗಳಲ್ಲಿ ತಮ್ಮ ಅಪ್ಪನನ್ನು ಅದೆಷ್ಟು ತೃಪ್ತಿಯಿಂದ ನೆನೆಯುತ್ತಿದ್ದರು. ಆ ಬಿರುದು ಇನ್ನೂ ನನ್ನ ಕಿವಿಯಾಲೆಗಳಲ್ಲಿದೆ. ನನ್ನ ಅಜ್ಜ ಯಕ್ಷಗಾನ ತಂಡಕ್ಕೆ ಮನೆಯ ಹೆಣ್ಣುಮಕ್ಕಳನ್ನು ಸೇರಿಸಿದ್ದ. ಸಾರಾ ಅಬೂಬಕ್ಕರ ಅವರ ‘ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು’ ಓದುವಾಗ, ಮಗಳನ್ನು ಮಗಳಂತಹ ಹೆಣ್ಣು ಮಕ್ಕಳನ್ನು ಶಾಲೆ ಕಲಿಸಲು ಮಿನುಗುತ್ತಿದ್ದ ಆ ತಂದೆಗಾಗಿ ಮನ ಆದ್ರವಾಗುತ್ತಿದೆ. ತಂಗಿಗೆ ಮುಂದೆ ಕಲಿಸಲಾಗಲಿಲ್ಲ ಎಂದು ಕಣ್ಣೊರೆಸಿಕೊಂಡ ಅಣ್ಣನ ಕಣ್ಣೀರು ಪುಸ್ತಕದ ಪುಟಗಳ ಮೇಲೆ ಉದುರುತ್ತದೆ. ಗಾಂಧಿಯುಗದ ಸುಧಾರಣಾವಾದಿ ಮನೋಧರ್ಮವು ಸಮಾಜದಲ್ಲಿ ಅಂತರ್ಗತವಾಗಿದ್ದರ ಪರಿಣಾಮವಿದ್ದೀತು. ಈಗ ಅತ್ಯಾಧುನಿಕತೆಯ ಕಕ್ಷೆಗೆ ಚಲಿಸುತ್ತಿರುವ ಸಮಾಜದಲ್ಲಿ ಹೆಣ್ಮಕ್ಕಳು ಅಪ್ಪನ ಪ್ರೀತಿ ಅಕ್ಕರೆಯನ್ನು ಮುಫತ್ತಾಗಿ ಪಡೆಯುತ್ತಿದ್ದಾರೆ. ಮಕ್ಕಳನ್ನು ಪ್ರಾಣವಾಗಿಸಿಕೊಂಡ ನನ್ನ ಗಂಡನಂತಹ ಅಪ್ಪಂದಿರಿಗೆ ಕೊರತೆಯೇನಿಲ್ಲ.
ಈ ಎಲ್ಲ ನೆನಪಾಗುತ್ತಿದ್ದು, ಕಳೆದ 15 ದಿನಗಳಲ್ಲಿ ಕೇಳಿದ ಕೆಲವು ದುರ್ಭರ ಘಟನೆಗಳಿಂದಾಗಿ ವಿದ್ಯಾವಂತ ಯುವತಿಯರಿಬ್ಬರು (ಎರಡು ಪ್ರತ್ಯೇಕ ಪ್ರಕರಣಗಳಲ್ಲಿ) ತಮ್ಮ ತಂದೆಯ ಕೊಲೆ ಆರೋಪಿಗಳಾಗಿದ್ದಾರೆ. ತಂದೆ ತಮ್ಮ ಸ್ವಚ್ಛಂದ ವರ್ತನೆಯನ್ನು ಪ್ರಶ್ನಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಇಂತಹ ಕ್ರೌರ್ಯ ಜನಿತವಾಗುವುದು ಅಷ್ಟು ಸಲೀಸೆ? ಹಿರಿಯರಿಗೀಗ ಉಂಡುಡುವ ಸಮಸ್ಯೆಯಲ್ಲ, ತಾವು ಬೇಡದ ಕಸವಾಗುತ್ತಿದ್ದೇವೆ ಎಂಬ ಅನಾಥಭಾವ ಕಾಡುತ್ತಿದೆ. ವೃದ್ಧರೊಬ್ಬರು ಅನಾರೋಗ್ಯದ ಪತ್ನಿಗೆ ವಿಷಹಾಕಿ ತಾವು ವಿಷ ಕುಡಿದಿದ್ದಾರೆ. ಇನ್ನೊಂದರಲ್ಲಿ ಮಕ್ಕಳು ಸೊಸೆಯಂದಿರು ಸೇರಿ ಹಿರಿಯರನ್ನು ಇಲ್ಲವಾಗಿಸಿದ್ದಾರೆ. ನಮ್ಮ ಕುಟುಂಬ ವ್ಯವಸ್ಥೆಗೆ ಕೊಳೆರೋಗ ತಗುಲಿದೆ. ಮನುಷ್ಯತ್ವದ ನಿರ್ಮಲತೆಯನ್ನು ಬಂಡವಾಳವಾದದ ಮಹಾಪೂರ ಎತ್ತಲೋ ಒಯ್ದಾಗಿದೆ. ಅಮ್ಮ ಹೇಳಿದ್ದಳು ಈಚೆಗೆ ಊರಲ್ಲಿ ಒಂದು ಘಟನೆಯಾಗಿತ್ತಂತೆ. ತಂದೆಯ ಬಗ್ಗೆ ಮಗನಿಗೆ ಮುನಿಸು. ಅಪ್ಪ ಕಟ್ಟಿದ ಮನೆಯ ಅಟ್ಟದ ಮೇಲೆ ಇದ್ದಾನೆ. ಅಪ್ಪ ಸತ್ತಿದ್ದಾನೆ ಎಂದಾಗಲೂ ಬಡಪಟ್ಟಿಗೆ ಕೆಳಗಿಳಿದಿರಲಿಲ್ಲವಂತೆ. ಸಂಬಂಧಿಗಳು ಹೋಗಿ ಬಯ್ದು ಕರೆತರಬೇಕಾಯಿತಂತೆ.
ಮನುಷ್ಯ ಕುಲ ಬಲು ಶ್ರಮದಿಂದ ರೂಪಿಸಿಕೊಂಡಿದ್ದ ಹೃದಯವಂತಿಕೆಯ ಮಾರ್ದವ ಈಗ್ಯಾಕಿಷ್ಟು ಒರಟಾಗಿಬಿಟ್ಟಿದೆ? ಮನಸ್ಸಿಡೀ ಬಂಡವಾಳವಾದಿ ಮೌಲ್ಯಗಳೇ ಕೆಸರುಗಟ್ಟಿದೆ. ಇದರರ್ಥ ಹಿಂದೆಲ್ಲ ಬದುಕು ತೀರ ಸುಂದರವೂ ಸುಸೂತ್ರವೂ ಆಗಿತ್ತು ಎಂದಲ್ಲ. ಈ ಕಾಲದ ವಿಕೃತ ಸಂಗತಿಗಳ ಕಾರಣಕ್ಕೆ ಈ ಕಾಲವೂ ಜವಾಬ್ದಾರವಾಗಿದೆ ಎಂಬ ಅನಿವಾರ್ಯತೆಯಿಂದ ವಿವರಿಸಿಕೊಳ್ಳಬೇಕಿದೆ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಅದರ ಘನತೆಯೊಂದಿಗೆ ಮಕ್ಕಳಿಗೆ ಮನನ ಮಾಡಿಸಲಾಗದೆ ಸೋಲುತ್ತಿದ್ದೇವೆ. ಮಾರುಕಟ್ಟೆ ಬದುಕನ್ನು ರೋಚಕ ಎಂದು ಬಿಂಬಿಸುತ್ತಿದೆ. ಹೆಣ್ಣು-ಗಂಡುಗಳು ಹೆಚ್ಚು ಅರಿತು ಬೆರೆತು ಬದುಕುವಲ್ಲಿ ಹಳೆಯ ಮಡಿವಂತಿಕೆಯ ಚೌಕಟ್ಟು ಕಳಚಿವೆ. ಅದು ಸಹಜವೇ ಆದರೆ ಅದೇ ಜಾಗೆಯಲ್ಲಿ ಬೇರೂರಿ ಬೆಳೆಯಬೇಕಾದ ಭಾವನಾತ್ಮಕವೂ ಬೌದ್ಧಿಕವೂ ಆದ ಗಟ್ಟಿತನ ಸೊರಗುತ್ತಿದೆ. ನಾವು ಸೋಲುತ್ತಿದ್ದೇವೆ, ಬದುಕೆಂದರೆ, ಗಳಿಕೆ-ಬಳಕೆ ಎಂಬ ಮಾದರಿ ಹಾಕಿದ್ದರ ಪರಿಣಾಮಗಳಲ್ಲವೇ ಇವು? ಆರ್ಭಟಿಸುತ್ತಿರುವ ಫ್ಯಾಶನ್ ಲೋಕ ಬದುಕೆಂದರೆ ಎಂಜಾಯ್‍ಮೆಂಟ್ ಎಂಬ ಕಲ್ಪಿತಗಳೇ ಭಯಾನಕ ಅಪರಾಧಗಳಾಗಿ ಪರಿವರ್ತಿತವಾಗುತ್ತದೆ.
ನನ್ನ ಕಣ್ಣೆದುರು ದಯನೀಯ ಕೌಟುಂಬಿಕ ಸ್ಥಿತಿಯಿಂದ ಬಂದ ಮಕ್ಕಳಿದ್ದಾರೆ. ಸರ್ಕಾರೀ ಶಾಲೆಗಳ ಉಪ್ಪಿಟ್ಟು, ಸರ್ಕಾರೀ ಕಾಲೇಜುಗಳ ಕಡಿಮೆ ಫೀಗಳು ಅವರನ್ನು ಇಲ್ಲಿಯವರೆಗೂ ಹೇಗೋ ಕರೆತಂದಿದೆ. ಪದವಿ ಮಾಕ್ರ್ಸ್‍ಕಾರ್ಡಿನೊಂದಿಗೆ ಯಾವುದಾದರೂ ಸಣ್ಣಪುಟ್ಟ ಕಂಪನಿ, ಕಾರ್ಖಾನೆಗಳ ಉದ್ಯೋಗವೆಂಬ ದೊಡ್ಡ ಕನಸನ್ನು ಹೊತ್ತುಕೊಂಡಿದ್ದಾರೆ. ಜಗತ್ತಿನಲ್ಲಿಯೇ ಅತಿಹೆಚ್ಚು ‘ಯುವಶಕ್ತಿ’ ಹೊಂದಿದ ದೇಶ ಸ್ವಾತಂತ್ರ್ಯಾನಂತರದ ಬಲುಭೀಕರ ಆರ್ಥಿಕ ಕುಸಿತವನ್ನು ಅನುಭವಿಸುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಸಿದ ಸ್ವಯಂಕೃತ ಅಪರಾಧವಿದು. ದೇಶವನ್ನು ಮುನ್ನಡೆಸುವವರಿಗೆ, ಜನರ ಆಲೋಚನೆಯನ್ನು ಬೇರೆಡೆಗೆ ತಿರುಗಿಸಿ ತಾವು ಭದ್ರವಾಗುವ ತಂತ್ರಗಾರಿಕೆ ಚೆನ್ನಾಗಿ ಗೊತ್ತಿದೆ. ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡುವ ಯೋಜನೆಗಳ ಅರಿವಿಲ್ಲ. ಅಂತಹ ಪ್ರಾಮಾಣಿಕ ಪ್ರಯತ್ನವೂ ನಡೆಯುತ್ತಿಲ್ಲ. ಒಂದೆಡೆ ಯುದ್ಧೋನ್ಮಾದದ ಅಬ್ಬರವನ್ನು ಬೊಬ್ಬಿರಿಸುತ್ತ; ಇನ್ನೊಂದೆಡೆ ಸೈನ್ಯದಲ್ಲಿಯೂ ಉದ್ಯೋಗಾವಕಾಶಗಳನ್ನು ಕಡಿತಗೊಳಿಸುತ್ತಿರುವ ವಿರೋಧಾಭಾಸವನ್ನು ಅರ್ಥ ಮಾಡಿಕೊಳ್ಳಬೇಕಾದ ಹೊಣೆಗಾರಿಕೆ ಯುವಜನರ ಹೆಗಲಮೇಲಿದೆ.
ಜವಳಿ ಉದ್ಯಮ, ಟೀ ಉದ್ಯಮ, ಆಟೊಮೊಬೈಲ್, ಟಾಟಾಸ್ಟೀಲ್, ಪಾರ್ಲೆಜೆ ಹೀಗೆ ಒಂದೊಂದು ತನ್ನ ಅಸಹಾಯಕತೆಯನ್ನು ತೋರ್ಪಡಿಸಿಕೊಳ್ಳುತ್ತಿವೆ. ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಕೈಗಾರಿಕಾ ಸಂಸ್ಥೆಗಳ ಜಾಹೀರಾತುಗಳನ್ನು ಗಮನಿಸಿದರೆ ಬಲು ದೀರ್ಘಕಾಲೀನ ಆರ್ಥಿಕ ದಿವಾಳಿಯತ್ತ ಸರಿಯುತ್ತಿರುವುದರ ಸೂಚನೆಯಿದೆ. ವರ್ಷ ಒಪ್ಪೊತ್ತಿನಲ್ಲಿ ಲಕ್ಷಾಂತರ ಉದ್ಯೋಗಗಳು ಕಡಿತವಾಗುವುದು ಭಾರತದಂತಹ ದೇಶದಲ್ಲಿ ಅತಿ ದಾರುಣ ಸ್ಥಿತಿಯನ್ನು ತರುವ ಸಂಗತಿಯಾಗಿದೆ. ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ಮುಚ್ಚಿಕೊಂಡಿವೆ ನಾವು ಮಾತ್ರ ಮಕ್ಕಳಿಗೆ, ಕೌಶಲ್ಯಾಭಿವೃದ್ಧಿಯ ಟ್ರೈನಿಂಗ್ ಕೊಡಿಸುತ್ತಲೇ ಇದ್ದೇವೆ. ಪ್ರವಾಹ ನುಗ್ಗಿ ಇರಬರ ಗದ್ದೆ-ತೋಟ ಹಟ್ಟಿಗಳಲ್ಲಿ ಆಳೆತ್ತರದ ಹೂಳು ನುಗ್ಗಿಸಿದೆ. ಇನ್ನೆರಡು ವರ್ಷ ಏನೂ ಗೇಯದ ಸ್ಥಿತಿಯಿದೆ. ಮನೆ ಎಂಬುದು ಅಸ್ಥಿಪಂಜರವಾಗಿದೆ. ಇರುವ ಜಾಗ, ಬದುಕಲು ಯೋಗ್ಯವೇ ತಿಳಿಯುತ್ತಿಲ್ಲ. ಇಂಥ ಸ್ಥಿತಿ ಯುವ ಮನಸ್ಸುಗಳಲ್ಲಿ ಅಸಹಾಯಕ ಸಿನಿಕತೆಯನ್ನೂ, ಹಿಂಸೆಯನ್ನೆ ಉತ್ಪಾದಿಸುತ್ತಿದೆ. ಮರಗಳನ್ನು ಬೆಳೆಸಿ ಕಾಡು ಮರುನಿರ್ಮಾಣ ಮಾಡುವುದರಿಂದ ಪರಿಸ್ಥಿತಿ ಸುಧಾರಿಸಬಹುದೇ? ಸಹ್ಯಾದ್ರಿಯ ಗರ್ಭದಲ್ಲಿ ಅಣುಬಾಂಬುಗಳನ್ನು ಹುಗಿದಿಟ್ಟ ಪರಿಣಾಮದ ಆತಂಕಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವವರು ಯಾರು? ಅತಂತ್ರ ವಾಸ್ತವ, ಮನುಷ್ಯ ಬದುಕಿನ ಎಲ್ಲ ಆಯಾಮಗಳನ್ನೂ ನಿರ್ನಾಮಗೊಳಿಸುತ್ತಿದೆ. ಎಲ್ಲವೂ ಒಂದರೊಳಗೊಂದು ಜಟಿಲವಾಗಿ ಹೆಣೆದುಕೊಂಡಿದೆ.


