Homeಕರ್ನಾಟಕ'ಸಾಮ್ರಾಟ'ರ ಕಿರೀಟ ಮತ್ತೊಬ್ಬರ ಪಾಲಾದ ಕಥೆಯು!

‘ಸಾಮ್ರಾಟ’ರ ಕಿರೀಟ ಮತ್ತೊಬ್ಬರ ಪಾಲಾದ ಕಥೆಯು!

- Advertisement -
- Advertisement -

ನಿರೀಕ್ಷೆಯಂತೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ರಾಜ್ಯ ರಾಜಕಾರಣದ ಕೇಂದ್ರದಿಂದ ಅಂಚಿಗೆ ಸರಿಸುವ ಪ್ರಯತ್ನಗಳಿಗೆ ಚಾಲನೆ ನೀಡಿರುವ ಬಿಜೆಪಿ ಹೈಕಮಾಂಡ್ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದೆ. ಅಷ್ಟು ಮಾತ್ರವೇ ಅಲ್ಲ, ಡಿಸಿಎಂ ಹುದ್ದೆಗಳಿಗೆ ಆಯ್ಕೆ ಮಾಡುವಾಗ ರಾಜ್ಯ ಬಿಜೆಪಿಯಲ್ಲಿ ತಮ್ಮನ್ನು ತಾವು ಅತಿರಥ ಮಹಾರಥರು ಎಂದು ಪರಿಗಣಿಸುವ ನಾಯಕರನ್ನು ನಿಕೃಷ್ಟವಾಗಿ ಬದಿಗೆ ಸರಿಸಿರುವ ಪರಿ ಪಕ್ಷದೊಳಗೆ ಆಸಕ್ತಿಕರ ಚರ್ಚೆಗೂ ವೇದಿಕೆಯಾಗಿದೆ.

ರಾಜ್ಯ ಬಿಜೆಪಿಯ ಪ್ರಬಲ ಒಕ್ಕಲಿಗ ನಾಯಕ ಎಂದು ಬಿಂಬಿತವಾಗಿದ್ದ ಸಚಿವ ಆರ್.ಅಶೋಕ್ ಅವರನ್ನು ಬದಿಗೆ ಸರಿಸಿರುವ ರೀತಿ, ಮುಖ್ಯಮಂತ್ರಿಯಾದ ನಂತರವೂ ಉಪ ಮುಖ್ಯಮಂತ್ರಿಯಾಗುವ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಅವಕಾಶ ಸಿಕ್ಕರೆ ಒಂದು ಕೈ ನೋಡಲು ಇಚ್ಛಿಸಿದ್ದ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಹೈಕಮಾಂಡ್ ಪರಿಗಣಿಸದ ಬಗೆ, ಸಚಿವ ಸ್ಥಾನ ಸಿಕ್ಕದೆ ಪರಿತಪಿಸುತ್ತಿರುವ ಅನೇಕ ಹಿರಿಯ ನಾಯಕರ ಗೊಣಗಾಟಗಳಿಗೆ ಸೊಪ್ಪು ಹಾಕದೆ ಇರುವುದು ಇದೆಲ್ಲದರ ಬಗ್ಗೆ ಕಮಲ ಪಾಳಯದಲ್ಲಿ ಆಸಕ್ತಿಕರ ಚರ್ಚೆಗಳು ಆರಂಭವಾಗಿವೆ.

ಯಡಿಯೂರಪ್ಪನವರ ಅಧಿಕಾರ ಅಲ್ಪಾಯುವಾಗಲಿದ್ದು, ಮುಂದೆ ರಾಜ್ಯದ ಮತ್ತೊಂದು ಪ್ರಭಾವಿ ಸಮುದಾಯವಾದ ಒಕ್ಕಲಿಗ ಸಮುದಾಯಕ್ಕೆ ಈ ಸ್ಥಾನ ಸಲ್ಲಬೇಕು ಎನ್ನುವ ಲೆಕ್ಕಾಚಾರ ರಾಜ್ಯ ಬಿಜೆಪಿಯ ಒಂದು ಗುಂಪಿನಲ್ಲಿದೆ. ಹಾಗಾದಲ್ಲಿ ಮಾತ್ರವೇ ಕರ್ನಾಟಕದಲ್ಲಿ, ಅದರಲ್ಲಿಯೂ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಯನ್ನು ಬೆಂಗಳೂರಿನ ಆಚೆಗೂ ಪ್ರಬಲವಾಗಿ ವಿಸ್ತರಿಸಲು ಸಾಧ್ಯ ಎನ್ನುವುದು ಈ ಗುಂಪಿನ ವಾದ. ಈ ವಾದದ ಹುರುಳೇನೇ ಇದ್ದರೂ ಬೆಂಗಳೂರಿನ ಪ್ರಭಾವಿ ಸಚಿವ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರನ್ನು ಸಮೀಪದ ಭವಿಷ್ಯದಲ್ಲಿ ಮುಖ್ಯಮಂತ್ರಿಯನ್ನಾಗಿ ಕಾಣುವ ಪ್ರಯತ್ನಕ್ಕೆ ಈ ವಾದ ಇಂಬು ನೀಡಿತ್ತು.

ಅಶೋಕ್ ತಮ್ಮ ರಾಜಕೀಯ ಜೀವನದಲ್ಲಿ ಬೆಳೆದ ಪರಿ, ಪಕ್ಷದಲ್ಲಿ, ಸರ್ಕಾರದಲ್ಲಿ ಸ್ಥಾನಮಾನ ಪಡೆಯುವಲ್ಲಿ ಅವರು ತೋರಿಸಿದ ತಂತ್ರಗಾರಿಕೆಯನ್ನು ಗಮನಿಸಿದ ಎಲ್ಲರಿಗೂ ಅವರು ದೊಡ್ಡ ಮಹತ್ವಾಕಾಂಕ್ಷೆಯ ಬೆನ್ನುಹತ್ತಿ ಹೊರಟಿದ್ದು ಸ್ಪಷ್ಟವಾಗಿತ್ತು. ಈ ಹಿಂದೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಮಾಜಿ ಕೇಂದ್ರ ಸಚಿವ, ದಿವಂಗತ ಅನಂತಕುಮಾರ್ ಅವರ ನಡುವೆ ಪಕ್ಷದ ಮೇಲಿನ ಹಿಡಿತಕ್ಕಾಗಿ ನಡೆಯುತ್ತಿದ್ದ ಹಗ್ಗಜಗ್ಗಾಟವನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಬೆಳೆದ ನಾಯಕರೆಂದರೆ ಅದು ಅಶೋಕ್ ಎನ್ನುವ ಮಾತು ಅವರ ಸರೀಕರಲ್ಲಿಯೇ ಇದೆ. ಈ ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅನಂತಕುಮಾರ್ ಅವರ ಬಲ, ಒಕ್ಕಲಿಗ ಸಮುದಾಯದ ಬೆಂಬಲಗಳೆಲ್ಲವನ್ನೂ ಅಶೋಕ್ ಅಚ್ಚುಕಟ್ಟಾಗಿ ಬಳಸಿಕೊಂಡು ಬೆಳೆದವರು.

ಬೆಂಗಳೂರಿನ ಅಧಿಕಾರದ ಮೇಲೆ ಒಂದೊಮ್ಮೆ ಪಕ್ಷದೊಳಗೆ ತಮಗೆ ಪ್ರಬಲ ಪ್ರತಿಸ್ಪರ್ಧಿಯಂತೆ ತೋರುತ್ತಿದ್ದ ಕಟ್ಟಾ ಸುಬ್ರಹ್ಮಣ್ಯನಾಯ್ಡು ಜೈಲುಪಾಲಾಗಿ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದು ಸಹ ಅಶೋಕ್ ಅವರ ಪಾಲಿಗೆ ವರವೇ ಆಗಿತ್ತು. ಜಾತಿ ಲೆಕ್ಕಾಚಾರವನ್ನು ಯಾವಾಗ ಮುಂದೆ ಮಾಡಬೇಕು, ಬಣ ರಾಜಕೀಯದ ಗಣಿತದಲ್ಲಿ ಎಲ್ಲಿ ಯಾವಾಗ ಪ್ರತ್ಯಕ್ಷವಾಗಬೇಕು ಎನ್ನುವ ಲೆಕ್ಕಾಚಾರವನ್ನು ಚೆನ್ನಾಗಿ ಅರಿತಿದ್ದ ಅಶೋಕ್ ಅದರ ಮೂಲಕವೇ ಕಷ್ಟಸಾಧ್ಯವೆನಿಸಿದ್ದ ಉಪಮುಖ್ಯಮಂತ್ರಿ ಹುದ್ದೆಯನ್ನು ತಮ್ಮದಾಗಿಸಿಕೊಂಡಿದ್ದರು.

ಅಶೋಕ್ ಅವರ ಮತ್ತೊಂದು ವರಸೆಯೆಂದರೆ, ಪ್ರತಿ ಬಾರಿಯೂ ಪಕ್ಷ ಅಥವಾ ಬಿಜೆಪಿ ಸರ್ಕಾರ ಸಂಕಷ್ಟದಲ್ಲಿದೆ ಎನ್ನುವಂತಹ ಗಳಿಗೆಗಳಲ್ಲಿ ಅದನ್ನು ಉಳಿಸಲು ತಾವು ಮಾಡಿದ `ತಂತ್ರಗಾರಿಕೆ’, ಇದಕ್ಕಾಗಿ ಪಟ್ಟ `ಅಪಾರ ಶ್ರಮ’ದ ಬಗ್ಗೆ ಮಾಧ್ಯಮಗಳಲ್ಲಿ ವಿಶೇಷವಾಗಿ ವರದಿಯಾಗುವಂತೆ ನೋಡಿಕೊಳ್ಳುತ್ತಿದ್ದುದು! ಬಹುತೇಕ ಸಂದರ್ಭಗಳಲ್ಲಿ ಅವರು ತೆಗೆದುಕೊಂಡ ಈ ಶ್ರಮ, ಮಾಡಿದ ತಂತ್ರಗಾರಿಕೆಗಳು ಅದನ್ನು `ಬರೆದವರಿಗೆ’ ಹಾಗೂ `ಹೇಳಿದವರಿಗೆ’ ಬಿಟ್ಟರೆ ಪಕ್ಷದೊಳಗಿನ ಇನ್ನಾರಿಗೂ ಗೊತ್ತೇ ಇರುತ್ತಿರಲಿಲ್ಲ ಎನ್ನುವ ಆರೋಪ ಪಕ್ಷದೊಳಗಿಂದಲೇ ಕೇಳಿಬರುತ್ತಿತ್ತು! ಅಶೋಕ್ ಅವರ ಪರವಾಗಿ ಮಾಧ್ಯಮದಲ್ಲಿ ಒಂದು ಪಡೆ ಅವರು ಈ ಹಿಂದೆ ಸಚಿವರಾಗಿದ್ದ ಕಾಲದಿಂದಲೂ ಅತಿ ಎನಿಸುವಷ್ಟು ಮಮಕಾರವನ್ನು ತೋರುತ್ತಾ ಬಂದಿದೆ. ಅದಕ್ಕೆ ಕಾರಣವೇನು ಎನ್ನುವುದನ್ನು ಅಶೋಕ್ ಅವರ ಕುರಿತು ತುದಿಗಾಲಿನಲ್ಲಿ ನಿಂತು, ಶ್ರದ್ಧೆಯಿಂದ ಬರೆಯುವ ಈ ಗುಂಪೇ ಹೇಳಬೇಕು! ಹೀಗೆ `ಜಾಣ ರಾಜಕಾರಣ’ದಿಂದಲೇ ರಾಜಕೀಯವಾಗಿ ಅತ್ಯುತ್ತಮ ಸ್ಥಾನಗಳನ್ನು ಪಡೆದ, `ಸಾಮ್ರಾಟ್’ ಬಿರುದಾಂಕಿತ ಅಶೋಕ್ ಅವರ ಮೇಲೆ ಸಂಘ ಪರಿವಾರದ ಆಯಕಟ್ಟಿನ ಮಂದಿ ಮೊದಲಿನಿಂದಲೂ ಒಂದು ಕಣ್ಣು ಇರಿಸಿದ್ದರು.

ಒಮ್ಮೆ ಮೋದಿ – ಶಾ ಜೋಡಿ ಕೇಂದ್ರದಲ್ಲಿ ಅಧಿಕಾರ ಹಿಡಿದು ಪಕ್ಷದ ಮೇಲೆ ಬಿಗಿ ಹಿಡಿತವನ್ನು ಗಳಿಸಿದ ನಂತರ ಇತ್ತ ಅನಂತಕುಮಾರ್ ಸಹ ಕಳಾಹೀನರಾದರು. ಒಂದು ಕಾಲದಲ್ಲಿ ವಾಜಪೇಯಿ ಹಾಗೂ ಅಡ್ವಾಣಿಯವರ ವಿಶೇಷ ಮೆಚ್ಚುಗೆ, ಆಶೀರ್ವಾದಗಳಿಗೆ ಪಾತ್ರರಾಗಿದ್ದ ಅನಂತಕುಮಾರ್ ಅವರು ಮುಂದೆ ಇದೇ ಕಾರಣದಿಂದಾಗಿ ಪ್ರಧಾನಿ ಮೋದಿಯವರೆಡೆಗೆ ತಮ್ಮದು ಅಚಲನಿಷ್ಠೆ ಎಂದು ಬಿಂಬಿಸಿಕೊಳ್ಳಲು ಹೆಣಗಬೇಕಾಯಿತು. ಸಂಘ ಪರಿವಾರದ ಹಿನ್ನೆಲೆಯಿಂದ ರಾಷ್ಟ್ರ ರಾಜಕಾರಣದಲ್ಲಿ ಬೇಗನೇ ಪ್ರವರ್ಧಮಾನಕ್ಕೆ ಬಂದು, ದೆಹಲಿ ರಾಜಕಾರಣದ ಅಧಿಕಾರದ ಆಯಕಟ್ಟಿನ ಜಾಗಗಳ ಒಳಹೊರಗುಗಳನ್ನು ಚೆನ್ನಾಗಿ ಬಲ್ಲವರಾಗಿದ್ದ ಅನಂತಕುಮಾರ್ ಅವರ ಬಗ್ಗೆ ಅವರದೇ ವಾರಿಗೆಯ ಮೋದಿಯವರಿಗೆ ಕೆಲವೊಂದು ಖಚಿತ ಅಭಿಪ್ರಾಯಗಳಿದ್ದವು. ಹಾಗಾಗಿಯೇ, ಅಳೆದು ಸುರಿದೂ ಮೋದಿ – ಶಾ ಜೋಡಿ ಅನಂತಕುಮಾರ್ ಅವರನ್ನು ಸಂಪುಟದೊಳಗೆ ಬಿಟ್ಟುಕೊಂಡಿತ್ತು. ಅನಂತಕುಮಾರ್ ಅವರಿಗೆ ಮೊದಲ ಬಾರಿಗೆ `ಅಪಾಯ ವಲಯ’ದಲ್ಲಿ ನಿಂತು ಸೂಕ್ಷ್ಮ ರಾಜಕಾರಣ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು.

ಹೀಗೆ, ಅತ್ತ ರಾಷ್ಟ್ರ ರಾಜಕಾರಣದಲ್ಲಿ ಅನಂತಕುಮಾರ್ ಹಾಗೂ ಇತ್ತ ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪನವರು ಮೋದಿ – ಶಾ ಜೋಡಿಯೊಂದಿಗೆ ಅಷ್ಟೇನೂ ಮಧುರ ಮೈತ್ರಿ ಹೊಂದಿರದ ಕಾಲಘಟ್ಟ ಆರಂಭವಾಯಿತು. ಅನಂತಕುಮಾರ್ ವಿಧಿವಶರಾಗುವ ವೇಳೆಗೆ ಇತ್ತ ರಾಜ್ಯ ರಾಜಕಾರಣದ ಪರಿಸ್ಥಿತಿಯೂ ಸಾಕಷ್ಟು ಬದಲಾಯಿಸಿತ್ತು. ಇಂದು ಅನಂತಕುಮಾರ್ ಎನ್ನುವ ಕವಚವಿಲ್ಲದೆ ಅಶೋಕ್ ಅವರು ತಮ್ಮ ರಾಜಕೀಯ ದಾಳ ಉರುಳಿಸಬೇಕಾಗಿದೆ. ಗಮನಿಸಬೇಕಾದ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಈ ಹಿಂದೆ ಅನಂತ್ ಬೆಂಬಲಿತ ಅಶೋಕ್‍ಗೆ ಪರ್ಯಾಯವಾಗಿ ಬೆಂಗಳೂರಿನ ರಾಜಕಾರಣದಲ್ಲಿ ತಮ್ಮದೇ ಹಿಡಿತವನ್ನು ಇರಿಸಿಕೊಳ್ಳಲು ಯಡಿಯೂರಪ್ಪನವರು ಅರವಿಂದ ಲಿಂಬಾವಳಿಯನ್ನು ಬೆಳೆಸಲು ಮುಂದಾಗಿದ್ದರು. ಆದರೆ, ಈ ಬಗೆಯ ಎಲ್ಲ ಶಕ್ತಿ ಧ್ರುವೀಕರಣಗಳನ್ನು ಚೆನ್ನಾಗಿ ಅರಿತಿರುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಬಿಜೆಪಿ ಹೈಕಮಾಂಡ್ ಮುಲಾಜಿಲ್ಲದೆ ಬೆಂಗಳೂರಿನ ರಾಜಕಾರಣದ ಮೇಲಿನ ಹಿಡಿತವನ್ನು ಈ ಎರಡೂ ಧ್ರುವಗಳಿಂದ ಒಂದೇ ಏಟಿಗೆ ದೂರ ಸರಿಸಿದೆ. ಹಾಗೆ ನೋಡಿದರೆ, ಮುಂಬರುವ ದಿನಗಳಲ್ಲಿ ಬೆಂಗಳೂರಿಗೆ ಬಿಜೆಪಿಯ ಮುಖ ಯಾರಾಗಬೇಕು ಎನ್ನುವ ಹುಡುಕಾಟ ವಿಧಾನಸಭಾ ಚುನಾವಣಾಪೂರ್ವದಲ್ಲಿಯೇ ಆರಂಭವಾಗಿತ್ತು. ಪಕ್ಷ ಹಾಗೂ ಸಂಘಕ್ಕೆ ವಿಧೇಯರಾಗಿರುವ, ಪ್ರಬಲ ಸಮುದಾಯಕ್ಕೆ ಸೇರಿದವರಾದರೂ ಹೈಕಮಾಂಡ್ ಅಣತಿಯನ್ನು ಶಿರಸಾವಹಿಸಿ ಪಾಲಿಸುವಂತಹ ಹಾಗೂ ವೈಯಕ್ತಿಕ ರಾಜಕೀಯ ಮಹತ್ವಾಕಾಂಕ್ಷೆಗಳ ತಂತ್ರಗಾರಿಕೆಗಿಂತ ಹೆಚ್ಚಾಗಿ ಪಕ್ಷ ರಾಜಕಾರಣದ ತಂತ್ರಗಾರಿಕೆ ಬದ್ಧರಾಗಿರುವವರನ್ನು ಹುಡುಕುತ್ತಿದ್ದ ಬಿಜೆಪಿಯ ವರಿಷ್ಠರು ಮೂರು ಬಾರಿ ಮಲ್ಲೇಶ್ವರ ಕ್ಷೇತ್ರವನ್ನು ಪ್ರತಿನಿಧಿಸಿರುವ ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಆ ಮುಖವಾಗಿ ಪರಿಗಣಿಸಿದೆ. ಪರಿಣಾಮ, ಮೊದಲ ಬಾರಿಗೆ ಸಚಿವರಾಗುತ್ತಿರುವ ಅಶ್ವತ್ಥನಾರಾಯಣ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವೂ ಸಿಕ್ಕಿದೆ.

ಈ ಹಿಂದೆ ಬಿಬಿಎಂಪಿ ಅಧಿಕಾರವನ್ನು ಹಿಡಿಯುವಲ್ಲಿ ಮಾಡಿಕೊಂಡ ಎಡವಟ್ಟು, ಅದಕ್ಕೂ ಪ್ರಮುಖವಾಗಿ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಪರಿವರ್ತನಾ ರ್ಯಾಲಿಗೆ ಬೆಂಗಳೂರಿನಲ್ಲಿ ಚಾಲನೆ ನೀಡುವ ಸಂದರ್ಭದಲ್ಲಿ ಅರೆಮನಸ್ಸಿನಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು ಎನ್ನುವ ಆರೋಪಗಳು ಅಶೋಕ್ ಅವರ ಮೇಲಿವೆ. ಜೆಡಿಎಸ್ ಜೊತೆಗೆ ಹೊಂದಿರುವ ಉತ್ತಮ ಬಾಂಧವ್ಯದ ಬಗ್ಗೆಯೂ ಪಕ್ಷದೊಳಗೆ ಚರ್ಚೆಗಳಿವೆ. ಈ ಕಾರಣಕ್ಕೆ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಅಂತಿಮ ಹಂತದ ತಂತ್ರಗಾರಿಕೆಯಲ್ಲಿ ಅಶೋಕ್ ಅವರನ್ನು ಬಿಜೆಪಿ ವಿಶೇಷವಾಗಿಯೇನೂ ಪರಿಗಣಿಸಿರಲಿಲ್ಲ. ಆ ಸ್ಥಾನವನ್ನು ಎಲ್ಲ ರೀತಿಯಲ್ಲೂ ಸಮರ್ಥವಾಗಿ ತುಂಬುವಂತೆ ಅಶ್ವತ್ಥನಾರಾಯಣ ಅವರಿಗೆ ಸೂಚಿಸಲಾಗಿತ್ತು. ಅಧಿಕಾರ ಹಿಡಿಯುವ ಈ ಇಡೀ ಪ್ರಹಸನದಲ್ಲಿ ತಾವು ಸುದ್ದಿಯಲ್ಲೇ ಇಲ್ಲದೆ ಹೋದದ್ದರಿಂದ ಮುಜುಗರಗೊಂಡಂತೆ ಕಂಡ ಅಶೋಕ್, ಶಾಸಕರನ್ನು ಸೆಳೆಯುವ ಪ್ರಹಸನದಲ್ಲಿ ತಮ್ಮ `ವಿಶೇಷ ಶ್ರಮ’ವೂ ಇದೆ ಎಂದು ತಮ್ಮ ಕೆಲ ಮಾಧ್ಯಮ ಸ್ನೇಹಿತರ ಮೂಲಕ ಬಿಂಬಿಸಲು ಹೋಗಿ ಅಪಹಾಸ್ಯಕ್ಕೆ ಈಡಾಗಿದ್ದರು. ಜೊತೆಗೆ, ಹೈಕಮಾಂಡ್ ಕೆಂಗಣ್ಣಿಗೂ ತುತ್ತಾಗಿದ್ದರು.
ಮುಂದಿನ ದಿನಗಳಲ್ಲಿ ಅಶೋಕ್ ತಮ್ಮ ರಾಜಕೀಯ ಸ್ಥಾನಮಾನಗಳನ್ನು ಉಳಿಸಿಕೊಳ್ಳಬೇಕೆಂದರೆ ಹೈಕಮಾಂಡ್‍ಗೆ ಪೂರ್ಣ ಶರಣಾಗಬೇಕು. ಮಾಧ್ಯಮಗಳ ಮೂಲಕವಷ್ಟೇ ತಮ್ಮ `ಶ್ರಮ’ವನ್ನು ತೋರಿಸದೆ ವರಿಷ್ಠರು ಹೇಳುವ ಕೆಲಸವನ್ನು ಶಿರಸಾವಹಿಸಿ ಪಾಲಿಸಬೇಕು. ಪ್ರಸ್ತುತ ಪಕ್ಷದೊಳಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವರಿಗೆ ಸಮುದಾಯದ ಬೆಂಬಲಕ್ಕಿಂತ ವರಿಷ್ಠರ ಬೆಂಬಲ ಅತ್ಯಗತ್ಯ ಎನ್ನುವುದು ಪಕ್ಷದೊಳಗಿನ ಮಾತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...