(ಇದು ನ್ಯಾಯಪಥ ಅಕ್ಟೋಬರ್ 15-30 ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ)
ಕಳೆದ ತಿಂಗಳಿನಿಂದಲೂ, ಗಾಜಾದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಮಾನವೀಯ ಬಿಕ್ಕಟ್ಟೊಂದು ಅನಾವರಣಗೊಳ್ಳುತ್ತಿರುವಾಗ ಜಗತ್ತು ಭಯಾತಂಕಗಳಿಂದ ಅದನ್ನು ವೀಕ್ಷಿಸುತ್ತಿದೆ. ಪ್ಯಾಲೆಸ್ತೀನಿ ಸಶಸ್ತ್ರ ಸಂಘಟನೆ ಹಮಾಸ್ ನಡೆಸಿದ ಸಂಘಟಿತ ದಾಳಿಯ ನಂತರದಲ್ಲಿ, ಗಾಜಾದಲ್ಲಿ ಸಶಸ್ತ್ರ ಸಂಘರ್ಷವೊಂದು ಭುಗಿಲೆದ್ದಿದೆ. ಸಂಘರ್ಷವು ಪ್ರಾರಂಭವಾದಾಗಲಿಂದ 5000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ 3000ಕ್ಕೂ ಹೆಚ್ಚು ಜನರು ಗಾಜಾದ ಪ್ಯಾಲೆಸ್ತೀನಿಯರಾಗಿದ್ದಾರೆ. ಮರಣ ಹೊಂದಿರುವ ಸುಮಾರು 3000 ಪ್ಯಾಲೆಸ್ತೀನಿಯರಲ್ಲಿ 900 ಮಕ್ಕಳು ಮತ್ತು 900 ಮಹಿಳೆಯರೂ ಸೇರಿದ್ದಾರೆ.
ಅಕ್ಟೋಬರ್ 7ರಂದು, ಅಲ್-ಅಕ್ಸಾ ಫ್ಲಡ್ (Al-Aqsa Flood) ಎಂದು ಕರೆಯಲ್ಪಡುವ ದಾಳಿಯ ಭಾಗವಾಗಿ ಹಮಾಸ್ 20 ನಿಮಿಷಗಳ ಅವಧಿಯಲ್ಲಿ 5,000 ರಾಕೆಟ್ಟುಗಳನ್ನು ಗಾಜಾ ಪಟ್ಟಿಯಿಂದ ಇಸ್ರೇಲಿನ ಮೇಲೆ ಹಾರಿಸಿತು. ಸುಮಾರು 2,500 ಹಮಾಸ್ ಸಶಸ್ತ್ರ ಹೋರಾಟಗಾರರು ಇಸ್ರೇಲ್‌ಅನ್ನು ಪ್ರವೇಶಿಸಿ, ಇಸ್ರೇಲಿಗಳ ಮೇಲೆ ದಾಳಿ ನಡೆಸಿ, ಅನೇಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡರು. ಈ ದಾಳಿಯಲ್ಲಿ 1,500ಕ್ಕೂ ಹೆಚ್ಚು ಇಸ್ರೇಲಿಗಳು ಕೊಲ್ಲಲ್ಪಟ್ಟರು ಮತ್ತು ನೂರಾರು ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಯಿತು. ಆಗ ಇಸ್ರೇಲ್ ತುರ್ತು ಪರಿಸ್ಥಿತಿಯನ್ನು ಘೋಷಿಸಿತು ಮತ್ತು ಸ್ವೋರ್ಡ್ಸ್ ಆಫ್ ಐರನ್ (Swords of Iron) ಹೆಸರಿನ ದಾಳಿಯನ್ನು ಪ್ರಾರಂಭಿಸಿತು. ಇಸ್ರೇಲಿನ ಪ್ರಧಾನಮಂತ್ರಿಯು ಹಮಾಸ್‌ನ ಮಿಲಿಟರಿ ಸಾಮರ್ಥ್ಯವನ್ನು ಮಟ್ಟಹಾಕುವುದಾಗಿ ಪ್ರತಿಜ್ಞೆ ಮಾಡಿದರು. ಅಲ್ಲಿಂದಾಚೆಗೆ ಇಸ್ರೇಲಿನ ರಕ್ಷಣಾ ಪಡೆಗಳು ಗಾಜಾದಲ್ಲಿ ದಾಳಿಯನ್ನು ಪ್ರಾರಂಭಿಸಿದವು. ನಂತರದಲ್ಲಿ ಇಸ್ರೇಲ್ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿತು. ಅದಾದನಂತರದಲ್ಲಿ ಹಮಾಸ್ ಒತ್ತೆಯಾಳುಗಳಾಗಿ ತೆಗೆದುಕೊಂಡಿದ್ದವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಇಸ್ರೇಲ್ ಹೇಳಿಕೆಯನ್ನೂ ನೀಡಿತು. ಇದರ ಹೊರತಾಗಿಯೂ, ಜಬಾಲಿಯಾ ನಿರಾಶ್ರಿತರ ಶಿಬಿರ ಸೇರಿದಂತೆ ಗಾಜಾದ ಅನೇಕ ತಾಣಗಳ ಮೇಲೆ ತನ್ನ ದಾಳಿಗಳನ್ನು ಮುಂದುವರಿಸಿತು. ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಗಾಜಾದ ಮೇಲೆ ದಿಗ್ಬಂಧನವನ್ನು ಹೇರಿದರು ಮತ್ತು ಗಾಜಾಕ್ಕೆ ನೀರು, ವಿದ್ಯುತ್ ಮತ್ತು ಇಂಧನ ಸೇರಿದಂತೆ ಅತ್ಯಂತ ಅಗತ್ಯವಾದ ಮೂಲಸೌಕರ್ಯಗಳನ್ನು ಕಡಿತಗೊಳಿಸಲಾಯಿತು. ಇಸ್ರೇಲಿ ವಾಯುದಾಳಿಗಳು ಮುಂದುವರಿದಂತೆ ಗಾಜಾದಲ್ಲಿ ನಾಗರಿಕರ ಸಾವುನೋವುಗಳು ಹೆಚ್ಚಾಗುತ್ತಲೇ ಹೋಯಿತು. ಸುದ್ದಿ ಪ್ರಕಟಣಾ ಕಚೇರಿಗಳೂ ಮತ್ತು ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯವೂ ಸಹ ಈ ವಾಯುದಾಳಿಗಳಿಗೆ ತುತ್ತಾದವು.
ಹಮಾಸ್ ದಾಳಿಯ ಹಿನ್ನೆಲೆ
1973ರ ಅರಬ್-ಇಸ್ರೇಲಿ ಯುದ್ಧದ ಐವತ್ತನೇ ವಾರ್ಷಿಕೋತ್ಸವವಾದ ಅಕ್ಟೋಬರ್ 7ರಂದು ದಾಳಿ ನಡೆಸಲು ಹಮಾಸ್ ನಿರ್ಧರಿಸಿತು. 2021ರಲ್ಲಿ ಮತ್ತು 2022ರಲ್ಲಿ ಅಲ್-ಅಕ್ಸಾ (Al-Aqsa) ಮಸೀದಿಯ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ದಾಳಿಯನ್ನು ಉಲ್ಲೇಖಿಸುತ್ತಾ ಈ ದಾಳಿಯನ್ನು ಆಪರೇಷನ್ ಅಲ್-ಅಕ್ಸಾ ಫ್ಲಡ್ ಎಂದು ಕರೆಯಲಾಯಿತು.
ದಾಳಿಗೆ ಕಾರಣವೇನೇ ಇರಲಿ, ಈ ದಾಳಿಗೆ ಪ್ರತ್ಯುತ್ತರವಾಗಿ ಗಾಜಾದ ಎಲ್ಲಾ ಜನರ ಮೇಲೆ ಪ್ರತಿದಾಳಿಯನ್ನು ನಡೆಸಲಾಗುತ್ತಿದೆ. ಪ್ರಾಣಹಾನಿ ಒಂದೆಡೆಯಾದರೆ, ಮತ್ತೊಂದೆಡೆ, ಜನರಿಗೆ ಅತ್ಯಗತ್ಯವಾದ ಮೂಲಸೌಕರ್ಯವನ್ನೂ ನಿರಾಕರಿಸುವ ಮೂಲಕ ಗಾಜಾವನ್ನು ವಿಶ್ವದ ಅತಿದೊಡ್ಡ ತೆರೆದ ಕಾರಾಗೃಹವಾಗಿ ಮಾರ್ಪಡಿಸಲಾಗಿದೆ.
ಇಸ್ರೇಲಿನ ಪ್ರತಿಕ್ರಿಯೆ
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾದಿಂದ 80 ಕಿ.ಮೀವರೆಗಿನ ವ್ಯಾಪ್ತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು ಹಾಗೂ ತದನಂತರದಲ್ಲಿ ಸ್ವೋರ್ಡ್ಸ್ ಆಫ್ ಐರನ್ ಆಪರೇಷನ್‌ಗೆ ಚಾಲ್ತಿ ನೀಡಿದರು. ಇದು ಗಾಜಾದ ಮೇಲೆ ನಡೆದ ಮಿಲಿಟರಿ ದಾಳಿಗಳಿಗೆ ಕಾರಣವಾಯಿತು. ಇಸ್ರೇಲ್ ಪ್ಯಾಲೆಸ್ತೀನಿನ ಮೇಲೆ ಹೇರಿರುವ ದಿಗ್ಬಂಧನದಿಂದಾಗಿ ಪ್ಯಾಲೆಸ್ತೀನಿಯರಿಗೆ ಮೂಲಭೂತ ಅತ್ಯಗತ್ಯಗಳ ಸರಬರಾಜು ಕೂಡ ನಿಂತುಹೋಗಿದೆ. ಉತ್ತರ ಗಾಜಾದಲ್ಲಿ ಬಲಾತ್ಕಾರದ ಮೂಲಕ ಜನರನ್ನು ಸ್ಥಳಾಂತರಿಸುವುದಕ್ಕೆ ಇಸ್ರೇಲ್ ಒತ್ತಾಯಿಸಿದೆ.
ಯಾವುದೇ ಎಗ್ಗಿಲ್ಲದ ಮತ್ತು ವಿವೇಚನೆಯಿಲ್ಲದ ಇಸ್ರೇಲಿನ ಪ್ರತಿಕ್ರಿಯೆಗೆ ಖಂಡನೆಗಳು ವ್ಯಕ್ತವಾಗಿವೆ. ಹಮಾಸ್ ಸಶಸ್ತ್ರ ಹೋರಾಟಗಾರರನ್ನು ಗುರಿಯಾಗಿಸಿಕೊಳ್ಳುವ ಬದಲು ಇಸ್ರೇಲಿನ ದಾಳಿಗಳು ಗಾಜಾದಲ್ಲಿರುವ ಪ್ಯಾಲೆಸ್ತೀನಿಯರನ್ನೇ ತನ್ನ ಗುರಿಯಾಗಿಸಿಕೊಂಡಿದೆ. 1948ರ ನಕ್ಬಾದ ಸಂದರ್ಭದಲ್ಲಿ ಸುಮಾರು 7,00,000 ಪ್ಯಾಲೆಸ್ತೀನಿಯರು ತಮ್ಮ ನೆಲೆಯನ್ನು ತೊರೆದು ಹೊಸದಾಗಿ ಆಗಮಿಸಿದ ಇಸ್ರೇಲ್ ನಿವಾಸಿಗಳಿಗೆ ಅದನ್ನು ಬಿಟ್ಟುಕೊಡಬೇಕಾಯಿತು. ಅಂತಾರಾಷ್ಟ್ರೀಯ ಮಟ್ಟದ ಅನೇಕ ರಾಜಕೀಯ ವಿಶ್ಲೇಷಕರು ಇಂದು ನಡೆಯುತ್ತಿರುವ ಸ್ಥಳಾಂತರಿಸುವಿಕೆಯನ್ನು ಎರಡನೇ ನಕ್ಬಾ ಎಂದು ಕರೆದಿದ್ದಾರೆ. ಇಸ್ರೇಲ್ ಕೈಗೊಂಡ ಕ್ರಮಗಳ ಪರಿಣಾಮ, ಗಾಜಾದಲ್ಲಿ ಸುಮಾರು 10,00,000 ಪ್ಯಾಲೆಸ್ತೀನಿಯರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು 24 ಗಂಟೆಗಳಿಗಿಂತಲೂ ಕಡಿಮೆ ಅವಧಿಯನ್ನು ಅವರಿಗೆ ನೀಡಲಾಗಿದೆ.
ಯಾರಿದು ಹಮಾಸ್?
ಹಮಾಸ್ ಅಥವಾ ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್‌ಮೆಂಟ್ (Islamic Resistance Movement) ಎಂಬುದು ರಾಜಕೀಯ ಮತ್ತು ಸೇನಾ ಸಂಘಟನೆಯಾಗಿದೆ. ಹಮಾಸ್ ಎಂಬುದು ಅರೇಬಿಕ್ ಪದವಾಗಿದ್ದು, ಅದರರ್ಥ ಉತ್ಸಾಹ ಎಂಬುದಾಗಿದೆ. ಇಸ್ರೇಲಿ ಸರ್ಕಾರ ಮತ್ತು ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಹಮಾಸ್‌ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿವೆಯಾದರೂ ವಿಶ್ವಸಂಸ್ಥೆಯಾಗಲೀ ಭಾರತ ಸರ್ಕಾರವಾಗಲೀ ಅದನ್ನು ಭಯೋತ್ಪಾದಕ ಸಂಘಟನೆಯೆಂದು ಗುರುತಿಸಿಲ್ಲ. ಪ್ಯಾಲೆಸ್ತೀನಿನಲ್ಲಿ ಎರಡು ಪ್ರಮುಖ ರಾಜಕೀಯ ಗುಂಪುಗಳಿವೆ. ಅವುಗಳೆಂದರೆ, ಹಮಾಸ್ ಮತ್ತು ಜಾತ್ಯತೀತ ನಿಲುವು ಹೊಂದಿರುವ ಫತಾಹ್. ಈ ಎರಡು ಗುಂಪುಗಳ ನಡುವೆಯೂ ಪರಸ್ಪರ ಭಿನ್ನಾಭಿಪ್ರಾಯಗಳಿವೆ. ಹಮಾಸಿನ ನಾಯಕರು ಹಿಂಸಾಚಾರಕ್ಕೆ ಕರೆ ನೀಡುವ ಮತ್ತು ಧಾರ್ಮಿಕ ಮೂಲಭೂತವಾದವನ್ನು ಬೆಂಬಲಿಸುವ ಇತಿಹಾಸವನ್ನು ಹೊಂದಿದ್ದಾರೆ.
1987ಕ್ಕೂ ಮೊದಲು ಪ್ಯಾಲೆಸ್ತೀನಿನ ಪ್ರಬಲ ರಾಜಕೀಯ ಶಕ್ತಿಯಾಗಿದ್ದ ಸಂಘಟನೆಯೆಂದರೆ ಯಾಸರ್ ಅರಾಫತ್ ನೇತೃತ್ವದ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (PLO). PLO ಒಂದು ಜಾತ್ಯತೀತವಾದ ಪ್ಯಾಲೇಸ್ತೀನಿ ರಾಷ್ಟ್ರೀಯತಾವಾದಿ ಸಂಘಟನೆಯಾಗಿತ್ತು. ಫತಾಹ್ PLO ನಂತರದಲ್ಲಿ ಹುಟ್ಟಿಕೊಂಡ, ಅದರ ಉತ್ತರಾಧಿಕಾರಿ ಸಂಸ್ಥೆಯಾಗಿದೆ. ಪ್ಯಾಲೆಸ್ತೀನಿಯರೆಲ್ಲರೂ ಮುಸ್ಲಿಮರಲ್ಲ. ಹಾಗಾಗಿ, PLO ಇಸ್ರೇಲ್‌ಅನ್ನು ವಿರೋಧಿಸುವ ಎಲ್ಲ ಧರ್ಮಗಳ ಪ್ಯಾಲೆಸ್ತೀನಿಯರನ್ನು ಒಂದೆಡೆ ಸೇರಿಸುವ ನಿಟ್ಟಿನಲ್ಲಿ ಅವರನ್ನೆಲ್ಲಾ ಒಳಗೊಳ್ಳಲು ಪ್ರಯತ್ನಿಸಿತು.
ಹಮಾಸ್‌ನ ಮೂಲವನ್ನು ಈಜಿಪ್ಟ್‌ನಲ್ಲಿ ಗುರುತಿಸಬಹುದು. ಈಜಿಪ್ಟ್‌ನಲ್ಲಿ, ಮುಸ್ಲಿಂ ಬ್ರದರ್‌ಹುಡ್ (Islamic Brotherhood) ಎಂಬ ಧಾರ್ಮಿಕ ಮೂಲಭೂತವಾದಿ ಸಂಘಟನೆಯು ಪ್ಯಾಲೆಸ್ತೀನ್‌ನಲ್ಲಿ ಬೇರೂರಲು ಪ್ರಯತ್ನಿಸಿತು. 1970ರ ದಶಕದಲ್ಲಿ, ಪ್ಯಾಲೆಸ್ತೀನಿ ಧರ್ಮಗುರು ಶೇಖ್ ಅಹ್ಮದ್ ಯಾಸಿನ್ ಅವರು ಪ್ಯಾಲೆಸ್ತೀನಿನಲ್ಲಿ ಮುಸ್ಲಿಂ ಬ್ರದರ್‌ಹುಡ್ ಅನ್ನು ನಿರ್ಮಿಸಲು ಪ್ರಾರಂಭಿಸಿದರು. ಮೊದಮೊದಲಿಗೆ ಅದರ ಕಾರ್ಯಚಟುವಟಿಕೆಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಕ್ಕೆ ಸೀಮಿತವಾಗಿತ್ತು. ಹೆಚ್ಚಿನ ಸಂದರ್ಭದಲ್ಲಿ ಇಸ್ರೇಲಿ ಸರ್ಕಾರದ ಬೆಂಬಲದೊಂದಿಗೆ ಶಾಲೆಗಳು ಮತ್ತು ಮಸೀದಿಗಳನ್ನು ಅವರು ನಿರ್ಮಿಸಿದರು. ಈ ಸಂದರ್ಭದಲ್ಲಿ, ಯಾಸಿನ್‌ರಂತಹ ಮೂಲಭೂತವಾದಿಗಳು ಸ್ವಾತಂತ್ರ್ಯಕ್ಕಾಗಿನ ಹೋರಾಟವನ್ನು ಬೆಂಬಲಿಸದ ಕಾರಣ ಇಸ್ರೇಲಿ ಸರ್ಕಾರವು ಮರುಬೆಂಬಲ ನೀಡಿತು. ಈ ಮೂಲಕ ಪ್ಯಾಲೆಸ್ತೀನಿಯರಲ್ಲಿ ಧರ್ಮದ ಹೆಸರಿನಲ್ಲಿ ಪ್ರತ್ಯೇಕತೆಯನ್ನು ಉತ್ತೇಜಿಸಲಾಯಿತು. ಈ ಬೆಂಬಲ ಹೆಚ್ಚುಕಾಲ ಉಳಿಯಲಿಲ್ಲ.
1980ರ ದಶಕದಲ್ಲಿ, ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲಿ ದಾಳಿಗಳು ಹೆಚ್ಚಾಗತೊಡಗಿದವು. ಲೆಬನಾನ್ ಅಂತರ್ಯುದ್ಧದ ನಂತರ PLOನ ಪ್ರಧಾನ ಕಚೇರಿಯು ಲೆಬನಾನ್‌ನಿಂದ ಟುನೀಶಿಯಾಕ್ಕೆ ಸ್ಥಳಾಂತರವಾಯಿತು. ಯಾಸಿನರ ಸಂಘಟನೆ ಕೂಡ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡು ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಇದನ್ನೂ ಓದಿ: ಗಾಜಾದಿಂದ ತೆರಳದಿದ್ದರೆ ಭಯೋತ್ಪಾದಕರೆಂದು ಪರಿಗಣಿಸಲಾಗುವುದು: ಪ್ಯಾಲೆಸ್ತೀನಿಯರಿಗೆ ಇಸ್ರೇಲ್ ಎಚ್ಚರಿಕೆ
1987ರಲ್ಲಿ, ಪ್ಯಾಲೆಸ್ತೀನಿನಲ್ಲಿ ದಂಗೆಗಳು ಪ್ರಾರಂಭವಾದವು. ಈ ದಂಗೆಗಳನ್ನು ಮೊದಲ ಇಂತಿಫಾದ (Intifada) ಅಥವಾ ಮೊದಲ ದಂಗೆ ಎಂದು ಕರೆಯಲಾಗುತ್ತದೆ. ಇಂತಿಫಾದ ಸುಮಾರು 6 ವರ್ಷಗಳ ಕಾಲ ನಡೆಯಿತು. ಈ ದಂಗೆಯಲ್ಲಿ 2,000ಕ್ಕೂ ಹೆಚ್ಚು ಜನರು ಅಸುನೀಗಿದರು. ಇಂತಿಫಾದವು ಪ್ಯಾಲೆಸ್ತೀನಿನ ರಾಜಕೀಯವನ್ನೇ ಬದಲಾಯಿಸಿಬಿಟ್ಟಿತು. 1987ರಲ್ಲಿ ಇಂತಿಫಾದ ಘಟಿಸುತ್ತಿದ್ದ ಸಂದರ್ಭದಲ್ಲಿ ಹಮಾಸ್ ಸ್ಥಾಪನೆಯಾಯಿತು. ಪ್ಯಾಲೆಸ್ತೀನಿನ ಮೇಲೆ ಇಸ್ರೇಲಿನ ಆಕ್ರಮಣವನ್ನು ವಿರೋಧಿಸಬಾರದು ಎಂಬ ಮುಸ್ಲಿಂ ಬ್ರದರ್‌ಹುಡ್‌ನ ನಿಲುವನ್ನು ಯಾಸಿನ್ ವಿರೋಧಿಸಿದ ನಂತರದಲ್ಲಿ ಮುಸ್ಲಿಂ ಬ್ರದರ್‌ಹುಡ್‌ನ ಪ್ಯಾಲೇಸ್ತೀನಿ ಶಾಖೆಯಿಂದ ಹಮಾಸ್ ಬೇರ್ಪಟ್ಟಿತು. ಪ್ಯಾಲೆಸ್ತೀನಿ ಜನರು ಹೆಚ್ಚೆಚ್ಚು ಜಾತ್ಯತೀತ ಸಂಘಟನೆಗಳೊಂದಿಗೆ ಗುರುತಸಿಕೊಳ್ಳುತ್ತಿದ್ದಾರೆ ಎಂಬ ಭಯ ಹಮಾಸ್‌ಅನ್ನು ಕಾಡಿದ ಕಾರಣ, ಅವರು ರಾಜಕೀಯ ಹೋರಾಟಗಳನ್ನು ಕೈಗೆತ್ತಿಕೊಂಡರು.
ನಾಗರಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವುದು, ಸೂಸೈಡ್ ಬಾಂಬಿಂಗ್ (ಆತ್ಮಹತ್ಯಾತ್ಮಕ ಬಾಂಬ್ ದಾಳಿ) ಮತ್ತು ನಾಗರಿಕರನ್ನು ಅಪಹರಿಸುವುದೂ ಸೇರಿದಂತೆ ಹಿಂಸಾತ್ಮಕ ತಂತ್ರಗಳನ್ನು ಹಮಾಸ್ ತನ್ನ ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಬಳಸಲು ಪ್ರಾರಂಭಿಸಿತು. 2000ದಲ್ಲಿ ಘಟಿಸಿದ ಎರಡನೇ ಇಂತಿಫಾದದಲ್ಲಿ ಹಮಾಸ್ ಕೂಡ ಸಕ್ರಿಯವಾಗಿತ್ತು. 2004ರಲ್ಲಿ, ಪ್ಯಾಲೆಸ್ತೀನಿಗೆ ತನ್ನದೇ ರಾಜ್ಯವನ್ನು ನೀಡುವುದಾದರೆ ಕದನಕ್ಕೆ ವಿರಾಮ ಹಾಡುವುದಾಗಿ ಹಮಾಸ್ ಪ್ರಸ್ತಾಪವೊಂದನ್ನು ಮುಂದಿರಿಸಿತ್ತು. ವೈಮಾನಿಕ ದಾಳಿಯ ಮೂಲಕ ಇಸ್ರೇಲ್ ಈ ಪ್ರಸ್ತಾಪವನ್ನು ನಿರಾಕರಿಸಿತು.
2006ರಲ್ಲಿ ನಡೆದ ಪ್ಯಾಲೆಸ್ತೀನಿನ ಮೊದಲ ಚುನಾವಣೆಯಲ್ಲಿ, ಜಾತ್ಯತೀತ ಪ್ಯಾಲೆಸ್ತೀನಿ ರಾಷ್ಟ್ರೀಯ ವಿಮೋಚನಾ ಗುಂಪಾಗಿದ್ದ ಫತಹ್ ವಿರುದ್ಧ ಹಮಾಸ್ ಗೆಲುವು ಸಾಧಿಸಿತು. ಫತಾಹ್ ಮತ್ತು ಹಮಾಸ್ ಪರಸ್ಪರ ಸೆಣೆಸಾಡಿರುವುದು ಮಾತ್ರವಲ್ಲ ಅವರು ಪ್ಯಾಲೇಸ್ತೀನಿನ ವಿವಿಧ ಪ್ರದೇಶಗಳನ್ನು ಪ್ರತ್ಯೇಕವಾಗಿ ನಿಯಂತ್ರಿಸುತ್ತಾರೆ. ಪಶ್ಚಿಮ ದಂಡೆಯಲ್ಲಿ (West Bank) ಫತಾಹ್ ಅಧಿಕಾರದಲ್ಲಿದ್ದರೆ, ಗಾಜಾದ ಭೂಪ್ರದೇಶವನ್ನು ಹಮಾಸ್ ನಿಯಂತ್ರಿಸಿತು.
ಹಮಾಸ್ ವಿರುದ್ಧದ ಇಸ್ರೇಲಿ ಹೋರಾಟ
2007ರಿಂದ, ಹಮಾಸ್ ನಿಯಂತ್ರಿತ ಗಾಜಾ ಪ್ರದೇಶದ ಮೇಲೆ ಇಸ್ರೇಲ್ ದಿಗ್ಬಂಧನವನ್ನು ಜಾರಿಗೊಳಿಸಿತು. ಇದು ಗಾಜಾದ ಆರ್ಥಿಕತೆಯ ಕುಸಿತಕ್ಕೆ ಕಾರಣವಾಯಿತು. ಗಾಜಾದ ಒಳಕ್ಕೆ ಹರಿದುಬರುವ ಆಹಾರ ಪ್ರಮಾಣದ ಮೇಲೂ ಇಸ್ರೇಲ್ ನಿರ್ಬಂಧಗಳನ್ನು ವಿಧಿಸಿದೆ. ಇತರೆ ಪ್ರದೇಶಗಳಲ್ಲಿ ವಾಸಿಸುವ ಪ್ಯಾಲೆಸ್ತೀನಿಗಳಿಂದಲೂ ಅವರನ್ನು ಪ್ರತ್ಯೇಕಿಸಲಾಗಿದೆ. 2021ರಲ್ಲಿ ಮತ್ತು 2022ರಲ್ಲಿ, ಮುಸ್ಲಿಮರ ಪವಿತ್ರ ಸ್ಥಳವೆಂದು ಪರಿಗಣಿಸಲ್ಪಡುವ ಅಲ್-ಅಕ್ಸಾ ಮಸೀದಿಯೊಳಕ್ಕೆ ನುಗ್ಗಿ, ಪ್ಯಾಲೆಸ್ತೀನಿ ಆರಾಧಕರ ಮೇಲೆ ಇಸ್ರೇಲ್ ದಾಳಿ ನಡೆಸಿತು. ಈಗ ನಡೆಯುತ್ತಿರುವ ದಾಳಿಗಳು ಅಲ್-ಅಕ್ಸಾ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಮತ್ತು ಪ್ಯಾಲೆಸ್ತೀನಿ ಜನರ ಮೇಲೆ ದಶಕಗಳಿಂದ ನಡೆಸಲಾಗುತ್ತಿರುವ ಅವಮಾನಗಳಿಗೆ ಪ್ರತೀಕಾರವೆಂದು ಹಮಾಸ್ ಹೇಳಿಕೊಂಡಿದೆ.
ಹಮಾಸ್ 2001ರಿಂದ ರಾಕೆಟ್‌ಗಳನ್ನು ಬಳಸಲು ಪ್ರಾರಂಭಿಸಿತು. ಇವು ಕಚ್ಚಾ ರಾಕೆಟ್ಟುಗಳಾಗಿದ್ದು ಸಕ್ಕರೆ ಮತ್ತು ರಸಗೊಬ್ಬರಗಳ ಸಂಯೋಜನೆಗಳು ಇವುಗಳಿಗೆ ಇಂಧನವಾಗಿವೆ. ಈ ರಾಕೆಟ್ಟುಗಳ ಕಾರ್ಯಾಚರಣೆಯನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಹಮಾಸ್ ಹೊಂದಿಲ್ಲ. ಈ ರಾಕೆಟ್ಟುಗಳು ಗರಿಷ್ಠವೆಂದರೆ 4.5 ಕಿ.ಮೀ. ದೂರ ಕ್ರಮಿಸಬಲ್ಲವು. ಇಸ್ರೇಲಿನ ಬಳಿಯಿರುವ ಸುಸಜ್ಜಿತ ಶಸ್ತ್ರಾಸ್ತ್ರಗಳು ಬಹುತೇಕ ಈ ರಾಕೆಟ್ಟುಗಳನ್ನು ಸುಲಭವಾಗಿ ನಿರ್ಬಂಧಿಸಬಹುದು. ಪ್ಯಾಲೆಸ್ತೀನಿ ಪಡೆಗಳ ಬಳಿಯಿರುವ ಕಚ್ಚಾ ಶಸ್ತ್ರಾಸ್ತ್ರಗಳಿಗೂ ಮತ್ತು ಇಸ್ರೇಲ್ ದೇಶದ ಸುಸಜ್ಜಿತ ಶಸ್ತ್ರಾಸ್ತ್ರಗಳಿಗೂ ಅಜಗಜಾಂತರ ಹೋಲಿಕೆ. ಇಂದು ನಡೆಯುತ್ತಿರುವ ಹಿಂಸಾಚಾರಕ್ಕೆ ಇದೂ ಒಂದು ಕಾರಣವಾಗಿದೆ. ಗಾಜಾ ಪ್ರದೇಶಕ್ಕೆ ವಿದ್ಯುತ್, ನೀರು ಮತ್ತು ಇಂಧನದ ಸರಬರಾಜನ್ನು ಸ್ಥಗಿತಗೊಳಿಸಿ ಜನರ ಮೇಲೆ ದಿಗ್ಬಂಧನವನ್ನು ಹೇರಲು ಇಸ್ರೇಲ್‌ಗೆ ಸಾಧ್ಯವಾಗಿದೆ. 2001ರಲ್ಲಿ 20 ನಿಮಿಷಗಳಲ್ಲಿ ಹಮಾಸ್ 5000 ರಾಕೆಟ್‌ಗಳನ್ನು ಉಡಾಯಿಸಿತು. ಇದರಿಂದಾಗಿ 5 ಜನರು ಅಸುನೀಗಿದರು ಮತ್ತು ಹಲವರು ಗಾಯಗೊಂಡರು.
ಹಮಾಸ್ ವಿರುದ್ಧದ ಹೋರಾಟದಲ್ಲಿ, ಈಗಾಗಲೇ 2008, 2012, 2014 ಮತ್ತು 2021ರಲ್ಲಿ ಗಾಜಾದ ಜನರ ವಿರುದ್ಧ ಇಸ್ರೇಲ್ ದಾಳಿಗಳನ್ನು ನಡೆಸಿತ್ತು. ಪ್ರತಿ ಬಾರಿಯೂ ಗಾಜಾ ಪಟ್ಟಿ ನಾಗರಿಕ ಸಾವು-ನೋವುಗಳನ್ನು ಉಂಡಿದೆ. ಆದರೆ, ಪ್ರತಿಬಾರಿಯೂ ಹಮಾಸ್‌ನ ಕಾರ್ಯ ಚಟುವಟಿಕೆಗಳು ಸಾಗುತ್ತಲೇ ಇವೆ. ಆದರೆ, ಈಚೆಗಿನ ಇತಿಹಾಸದಲ್ಲಿ ಸಾವಿನ ಸಂಖ್ಯೆಯು ಅತೀ ಹೆಚ್ಚಾಗಿರುವುದು ಈ ಬಾರಿಯೇ.
ಮಾನವೀಯ ಕಾಳಜಿಗಳು
ಗಾಜಾದ ಮೇಲೆ ಹೇರಲಾಗಿರುವ ದಿಗ್ಬಂಧನದಿಂದಾಗಿ, ಪ್ಯಾಲೆಸ್ತೀನಿಯರು ತಪ್ಪಿಸಿಕೊಳ್ಳಲು ಈಜಿಪ್ಟ್‌ನತ್ತ ಮುಖಮಾಡುತ್ತಾರೆ. ಪ್ಯಾಲೆಸ್ತೀನಿನಿಂದ ದೊಡ್ಡ ಸಂಖ್ಯೆಗಳಲ್ಲಿ ನಿರಾಶ್ರಿತರು ಬರಬಹುದೆಂಬ ಚಿಂತೆ ಈಜಿಪ್ಟಿನದ್ದು. ಗಾಜಾದಲ್ಲಿ ಚದುರ ಕಿಲೋಮೀಟರಿಗೆ ಸುಮಾರು 6,000 ಜನರಿದ್ದು 20 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಅಂದರೆ, ಅತ್ಯಂತ ಹೆಚ್ಚು ಜನದಟ್ಟಣೆಯಿರುವ ಪ್ರದೇಶವಾಗಿದೆ. ಜನಸಂಖ್ಯೆಯ ಅರ್ಧದಷ್ಟು ಜನರು ಈಗಾಗಲೇ ಬಡತನ ರೇಖೆಗಿಂತಲೂ ಕಡಿಮೆ ಆದಾಯವನ್ನು ಹೊಂದಿದವರಾಗಿದ್ದಾರೆ. ಉತ್ತರ ಗಾಜಾದಿಂದ ಪ್ಯಾಲೇಸ್ತೀನಿಯನ್ನರ ಹೊರದೂಡುತ್ತಿರುವುದು ಅತೀದೊಡ್ಡ ಪ್ರಮಾಣದ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ. ಇಸ್ರೇಲ್ ಕಡೆಯಿಂದ ಗಾಜಾ ಗಡಿಯನ್ನು ಮುಚ್ಚಲಾಗಿರುವ ಕಾರಾಣ ಪ್ಯಾಲೆಸ್ತೀನಿಯರಿಗೆ ಗಾಜಾವು ಸೆರೆಮನೆಯಾಗಿದೆ. ದಿಗ್ಬಂಧನಕ್ಕೂ ಹಿಂದಿನಿಂದಲೇ, ಗಾಜಾದಲ್ಲಿನ ಪ್ಯಾಲೆಸ್ತೀನಿಯರಿಗೆ ಸಮಯ ನಿರ್ಬಂಧಗಳನ್ನು ವಿಧಿಸಿಯೇ ಹೊರಹೋಗುವ ಅವಕಾಶ ನೀಡಲಾಗುತ್ತಿತ್ತು ಮತ್ತು ಇತರ ಪ್ರದೇಶಗಳಲ್ಲಿ ವಾಸಿಸುವ ಪ್ಯಾಲೆಸ್ತೀನಿಯರು ಗಾಜಾಕ್ಕೆ ಹೋಗುವುದರ ಮೇಲೆ ನಿರ್ಬಂಧಗಳನ್ನು ಹೇರಲಾಗಿತ್ತು. ಗಾಜಾದ ಸುತ್ತಲಿನ ಗಡಿಗಳನ್ನು ಮತ್ತು ವಾಯುಪ್ರದೇಶವನ್ನು ಇಸ್ರೇಲ್ ನಿಯಂತ್ರಿಸುತ್ತದೆ.
2021ರಿಂದಲೂ ಹ್ಯೂಮನ್ ರೈಟ್ಸ್ ವಾಚ್ (Human Rights Watch) ಇಸ್ರೇಲ್ ವರ್ಣಭೇದ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸುತ್ತಿದೆ. ವರ್ಣಭೇದ ನೀತಿಯು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ. ಇದು ಇಪ್ಪತ್ತನೇ ಶತಮಾನದಲ್ಲಿ ದಕ್ಷಿಣ ಆಫ್ರಿಕಾದ ಸರ್ಕಾರವು ಅನುಸರಿಸಿದ ನೀತಿಗಳನ್ನೇ ಆಧರಿಸಿದೆ. ಹ್ಯೂಮನ್ ರೈಟ್ಸ್ ವಾಚ್ ತನ್ನ ಈ ಆರೋಪವನ್ನು ಅಪಾರ್ಥೀಡ್ ಕನ್ವೆಂಶನ್ (Apartheid Convention) 1973ರ ಮತ್ತು 1998ರ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ (International Criminal Court) ರೋಮ್ ಶಾಸನವನ್ನು (Rome Statute) ಆಧರಿಸಿದೆ. ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಪ್ರಾಬಲ್ಯ ಸಾಧಿಸುವ ಉದ್ದೇಶ, ಒಂದು ಜನಾಂಗೀಯ ಗುಂಪು ಮತ್ತೊಂದು ಜನಾಂಗದ ಮೇಲೆ ನಡೆಸುವ ವ್ಯವಸ್ಥಿತ ದಬ್ಬಾಳಿಕೆ ಮತ್ತು ಜನರು ತಮ್ಮ ಮನೆಗಳನ್ನು ಬಿಟ್ಟು ಹೊರಡುವ ಮತ್ತು ತಮ್ಮ ಮನೆಗಳಿಗೆ ಹಿಂದಿರುಗುವ ಹಕ್ಕನ್ನು ನಿರಾಕರಿಸುವಂತಹ ಹೆಚ್ಚು ಅಮಾನವೀಯ ಕೃತ್ಯಗಳಲ್ಲಿ ಒಂದಾಗಿದೆ. ಪ್ಯಾಲೆಸ್ತೀನಿಯರನ್ನು ನಾಲ್ಕು ಪ್ರದೇಶಗಳಲ್ಲಿ ವಿಭಜಿಸಲಾಗಿದ್ದು ಅವರಿಗೆ ಎಲ್ಲ ನಾಗರಿಕ ಹಕ್ಕುಗಳನ್ನು ನಿರಾಕರಿಸಲಾಗಿದೆ. ಈ ನಾಲ್ಕು ಪ್ರದೇಶಗಳ ಒಳಗೂ ಸಹ, ಪ್ಯಾಲೆಸ್ತೀನಿಯರು ಮುಕ್ತವಾಗಿ ಚಲಿಸಲು ಸಾಧ್ಯವಿಲ್ಲ. ಅವರನ್ನು ವಿಭಜಿಸುವ ಕಾರಣಕ್ಕೆ ನೂರಾರು ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳು ಮತ್ತು ಗೋಡೆಗಳನ್ನು ನಿರ್ಮಿಸಲಾಗಿದೆ. ಪೂರ್ವ ಜೆರುಸಲೆಮ್‌ನಲ್ಲಿ ವಾಸಿಸುವ 4 ಲಕ್ಷ ಪ್ಯಾಲೆಸ್ತೀನಿಯರು ಸೀಮಿತ ಹಕ್ಕುಗಳನ್ನು ಹೊಂದಿದ್ದಾರೆ. ಅಂದರೆ, ಅವರು ಮತ ಚಲಾಯಿಸಲು ಸಾಧ್ಯವಿಲ್ಲ ಮತ್ತು ಅವರ ಆ ಹಕ್ಕುಗಳನ್ನು ನಿರಾಕರಿಸಲಾಗಿದೆ. 16 ಲಕ್ಷ ಪ್ಯಾಲೆಸ್ತೀನಿಯರು ಇಸ್ರೇಲಿ ಪೌರತ್ವವನ್ನು ಪಡೆದಿದ್ದಾರೆ ಮತ್ತು ಚುನಾವಣೆಯಲ್ಲಿ ಮತ ಚಲಾಯಿಸಬಹುದಾದರೂ ಅವರು ಎಲ್ಲಿ ವಾಸಿಸಬಹುದು ಮತ್ತು ಯಾರನ್ನು ಮದುವೆಯಾಗಬಹುದು ಎಂಬುದೆಲ್ಲವನ್ನೂ ನಿರ್ಬಂಧಿಸಿ, ಅವರನ್ನು ಕಾನೂನಾತ್ಮಕ ತಾರತಮ್ಯಕ್ಕೆ ಗುರಿಮಾಡಿದೆ. ಈ ಕಾನೂನು ನಿರ್ಬಂಧಗಳಿಂದಾಗಿ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲಿಗಳ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿದೆ. ಈ ಕಾನೂನು ಪದ್ಧತಿಗಳು, ಇಸ್ರೇಲ್ ವರ್ಣಭೇದ ನೀತಿಯನ್ನು ಪಾಲಿಸುವ ಪ್ರಭುತ್ವವಾಗಿದ್ದು, ಪ್ಯಾಲೆಸ್ತೀನಿಯರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ಎಲ್ಲಾ ಇತಿಹಾಸದ ಹಿನ್ನೆಲೆಯಲ್ಲಿ ಗಾಜಾದ ದಾಳಿ ಮತ್ತು ಅದಕ್ಕೆ ಇಸ್ರೇಲ್ ನಡೆಸಿರುವ ಅಂಕೆಯಿಲ್ಲದ ಪ್ರತಿದಾಳಿಯನ್ನು (ಇದು ಹಲವಾರು ವರ್ಷಗಳಿಂದ ನಡೆದು ಬಂದಿರುವುದು) ಅರ್ಥ ಮಾಡಿಕೊಳ್ಳುವುದು ಅತಿ ಅವಶ್ಯಕವಾಗಿದೆ.
ಕನ್ನಡಕ್ಕೆ: ಎಸ್ ಆರ್ ಶಶಾಂಕ್

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


