ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಸಿಸೋಡಿಯಾ ಅವರನ್ನು ಫೆಬ್ರವರಿ 26 ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದಾಗಿನಿಂದ ಬಂಧನದಲ್ಲಿಯೇ ಇದ್ದಾರೆ.
ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಕೈಗೆತ್ತಿಕೊಂಡಿದ್ದು, ಆರರಿಂದ ಎಂಟು ತಿಂಗಳಲ್ಲಿ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಸೂಚಿಸಿದೆ. ವಿಚಾರಣೆ ನಿಧಾನಗತಿಯಲ್ಲಿ ಮುಂದುವರಿದರೆ, ನಂತರದ ಹಂತದಲ್ಲಿ ಸಿಸೋಡಿಯಾ ಜಾಮೀನಿಗೆ ಮರು ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಯನ್ನು ತಿರುಚಲು ಹಣ ಪಾವತಿಸಲಾಗಿದೆ ಎಂದು ಹೇಳಲಾದ ಲಂಚವು ಪೂರ್ವಾಪೇಕ್ಷಿತ ಅಪರಾಧದ ಭಾಗವಾಗಿಲ್ಲದಿದ್ದರೆ, ಸಿಸೋಡಿಯಾ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸಾಬೀತುಪಡಿಸುವುದು ಕಷ್ಟ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದೆ.
”ಲಂಚ ನೀಡಲಾಗುತ್ತಿದೆ ಎಂಬ ಊಹೆಯ ಆಧಾರದ ಮೇಲೆ ಪ್ರಕರಣವನ್ನು ಮುಂದುವರಿಸಲು ಸಾಧ್ಯವಿಲ್ಲ” ಎಂದು ಅದು ಸಿಬಿಐಗೆ ತಿಳಿಸಿದೆ.
ಸಿಬಿಐನಿಂದ ಬಂಧನಕ್ಕೊಳಗಾದ ನಂತರ, ಇಡಿ ಅಧಿಕಾರಿಗಳು ತಿಹಾರ್ ಜೈಲಿನಲ್ಲಿ ಸಿಸೋಡಿಯಾ ಅವರನ್ನು ಪ್ರಶ್ನಿಸಿದ್ದರು. ಆ ನಂತರ ಇಡಿ ಅಧಿಕಾರಿಗಳು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅವರನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡರು.
ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಹಣ-ಲಾಂಡರಿಂಗ್ ಪ್ರಕರಣದಲ್ಲಿ ಸಿಸೋಡಿಯಾ ಅವರಿಗೆ ಈ ಹಿಂದೆ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು, ಅವರ ವಿರುದ್ಧದ ಆರೋಪಗಳು ಬಹಳ ಗಂಭೀರವಾಗಿದೆ ಎಂದು ಹೇಳಿದ್ದರು.
ಉಪಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವರಾಗಿದ್ದ ಸಿಸೋಡಿಯಾ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿರುವ ‘ಉನ್ನತ’ ವ್ಯಕ್ತಿ ಎಂದು ಮೇ 30 ರಂದು ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
ಇದನ್ನೂ ಓದಿ: ಕೊಚ್ಚಿ ಸ್ಫೋಟ: ಕೇಂದ್ರ ಸಚಿವರ ‘ಕೋಮುವಾದಿ’ ಹೇಳಿಕೆಗೆ ಪಿಣರಾಯಿ ವಿಜಯನ್ ಕಿಡಿ


