ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷಾ ಅವ್ಯವಹಾರದ ಪ್ರಮುಖ ಆರೋಪಿ, ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಸೋಮವಾರ ಕಲಬುರಗಿ ನಗರದ ವಸತಿ ಸಮಚ್ಚಯವೊಂದರಿಂದ ಪರಾರಿಯಾಗಿದ್ದಾನೆ.
ಅಭ್ಯರ್ಥಿಗಳಿಗೆ ಬ್ಲೂಟೂತ್ ಸಾಧನವನ್ನು ಬಳಸಿಕೊಂಡು ಉತ್ತರಗಳನ್ನು ಬರೆಯಲು ಸಹಾಯ ಮಾಡಿದ ಆರೋಪ ಈತನ ಮೇಲಿದೆ. ಪಾಟೀಲ್ ಮನೆಯೊಂದರಲ್ಲಿ ಅಡಗಿಕೊಂಡಿರುವ ಬಗ್ಗೆ ಸುಳಿವು ಸಿಕ್ಕ ನಂತರ ಪೊಲೀಸ್ ಅಧಿಕಾರಿಗಳು ಜೇವರ್ಗಿ ರಸ್ತೆಯಲ್ಲಿರುವ ವಸತಿ ಬಡಾವಣೆಗೆ ತೆರಳಿದ್ದರು. ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಆರ್.ಡಿ. ಪಾಟೀಲ್ ವಸತಿ ಸಮುಚ್ಚಯದ ಕಾಂಪೌಂಡ್ ಮೇಲಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಅ.28ರಂದು ಕೆಇಎ ನೇಮಕಾತಿ ಪರೀಕ್ಷೆ ನಡೆಯಿತು. ಅಫಜಲಪುರ, ಕಲಬುರಗಿ ನಗರದ ಕೆಲವು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಅಕ್ರಮವಾಗಿ ಬ್ಲೂಟೂತ್ ಡಿವೈಸ್ ಬಳಸಲು ಯತ್ನಿಸಿ ಬಂಧಿತರಾಗಿದ್ದಾರೆ. ಈ ಅಭ್ಯರ್ಥಿಗಳಿಗೆ ಬ್ಲೂಟೂತ್ ಪೂರೈಸಲು ಆರ್.ಡಿ. ಪಾಟೀಲ್ ಹಣ ಪಡೆದು ಡೀಲ್ ಮಾಡಿಕೊಂಡಿದ್ದ ಎಂಬ ಆರೋಪ ಇದೆ. ಬ್ಲೂಟೂತ್ ಪ್ರಕರಣ ಹೊರಬರುತ್ತಿದ್ದಂತೆ ಆರ್.ಡಿ. ಪಾಟೀಲ್ ತಲೆಮರೆಸಿಕೊಂಡಿದ್ದ.
ನ.19ರಂದು ನಡೆಯುವ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆಗೂ ಅಭ್ಯರ್ಥಿಗಳೊಂದಿಗೆ ಆರ್.ಡಿ.ಪಾಟೀಲ್ ಒಪ್ಪಂದ ಮಾಡಿಕೊಂಡಿದ್ದ ಎನ್ನಲಾಗಿದೆ. ಅಭ್ಯರ್ಥಿಗಳಿಗೆ ಬ್ಲೂಟೂತ್ ವ್ಯವಸ್ಥೆ ಮಾಡಿಕೊಡಲು ಕಲಬುರಗಿ ನಗರಕ್ಕೆ ಬಂದು ವಸತಿ ಸಮುಚ್ಚಯ ಒಂದರಲ್ಲಿ ತಂಗಿದ್ದ. ಖಚಿತ ಮಾಹಿತಿ ತಿಳಿದು ಪೊಲೀಸರು ವಸತಿ ಸಮುಚ್ಚಯಕ್ಕೆ ಬರುತ್ತಿದ್ದಂತೆ ಆರ್.ಡಿ. ಪಾಟೀಲ್ ಅಲ್ಲಿಂದ ಪರಾರಿಯಾಗಿದ್ದಾನೆ.
ವಸತಿ ಸಮುಚ್ಚಯ ಹಿಂಭಾಗದ ಕಾಂಪೌಂಡ್ ಗೇಟ್ ಹತ್ತಿ ಇಳಿಯುವಾಗ ಕಾಲಿನಿಂದ ಈತನ ಬೂಟ್ ಕಳಚಿ ಬಿದ್ದಿದೆ. ಬೂಟ್ ಎತ್ತಿಕೊಡುವಂತೆ ಅಲ್ಲಿಯೇ ಇದ್ದ ಮಹಿಳೆಯೊಬ್ಬರಿಗೆ ಕೇಳಿದ್ದಾನೆ. ಮಹಿಳೆ ಇದಕ್ಕೆ ಸ್ಪಂದಿಸಿಲ್ಲ. ಬಳಿಕ ಮತ್ತೊಬ್ಬ ಮಹಿಳೆ ಬರುತ್ತಿದ್ದಂತೆ ಆರ್.ಡಿ. ಪಾಟೀಲ್ ಸ್ಥಳದಿಂದ ಪರಾರಿಯಾಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕಳೆದ ಒಂದು ವಾರದಿಂದ ಆರ್.ಡಿ.ಪಾಟೀಲ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈಗಾಗಲೇ 20 ಆರೋಪಿಗಳ ಬಂಧನವಾಗಿದೆ. ಆರ್.ಡಿ. ಪಾಟೀಲ್ ಬಗ್ಗೆ ಖಚಿತ ಮಾಹಿತಿ ಇದ್ದರೂ ಅಧಿಕಾರಿಗಳು ಕರ್ತವ್ಯದಲ್ಲಿ ಲೋಪ ಎಸಗಿರವುದು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಓದಿ: ಪ್ರಶ್ನೆಗಾಗಿ ನಗದು ಪ್ರಕರಣ: ನ.9ಕ್ಕೆ ಮಹುವಾ ಮೊಯಿತ್ರಾ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಸಾಧ್ಯತೆ


