ಪ್ಯಾಲೆಸ್ತೀನ್ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಆಂತರಿಕ ಸಚಿವೆ ಸುಯೆಲ್ಲಾ ಬ್ರೆವರ್‌ಮನ್ ಅವರನ್ನು ಸೋಮವಾರ ವಜಾಗೊಳಿಸಿದ್ದಾರೆ.
ಬ್ರಿಟನ್ ಅತ್ಯಂತ ಹಿರಿಯ ಸಚಿವರಲ್ಲಿ ಒಬ್ಬರಾದ ಬ್ರೇವರ್‌ಮ್ಯಾನ್ ವಿರುದ್ಧದ ಕ್ರಮವು ಪ್ಯಾಲೇಸ್ತೀನ್ ಪರ ಮೆರವಣಿಗೆಯನ್ನು ಪೋಲೀಸರು ನಿರ್ವಹಿಸಿದ ರೀತಿಯ ಬಗ್ಗೆ ಅವರ ಹೇಳಿಕೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇತ್ತೀಚೆಗೆ ಪ್ಯಾಲೆಸ್ತೀನ್ ಪರ ಮೆರವಣಿಗೆ ಮಾಡಿದ ಸಮಯದಲ್ಲಿ ಪೊಲೀಸರು ನಡೆದುಕೊಂಡ ರೀತಿಯನ್ನು ಸುಯೆಲ್ಲಾ ಬ್ರಾವರ್‌ಮನ್ ಟೀಕಿಸಿದ್ದರು. ಶನಿವಾರ ನಡೆದ ಮೆರವಣಿಗೆಯನ್ನು ಪೊಲೀಸರು ನಿರ್ವಹಣೆ ಮಾಡಿದ ರೀತಿಯ ಬಗ್ಗೆ ಒಂದು ಲೇಖನವನ್ನು ಕೂಡ ಬರೆದಿದ್ದರು. ಇದಕ್ಕೆ ಸುನಕ್ ಅವರ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.
ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಸುನಕ್ ಅವರು ಸರ್ಕಾರವನ್ನು ತೊರೆಯಲು ಸುಯೆಲ್ಲಾ ಬ್ರಾವರ್ಮನ್ ಅವರಿಗೆ ಸೂಚಿಸಿದ್ದಾರೆ ಮತ್ತು ಅವರು ಈ ನಿರ್ದೇಶನವನ್ನು ಒಪ್ಪಿಕೊಂಡಿದ್ದಾರೆ. ನಾನು ಸರಿಯಾದ ಸಮಯದಲ್ಲಿ ಈ ಬಗ್ಗೆ ಹೆಚ್ಚಿನದನ್ನು ಹೇಳುತ್ತೇನೆ ಎಂದು ಸುಯೆಲ್ಲಾ ಬ್ರೆವರ್‌ಮನ್ ಹೇಳಿದ್ದಾರೆ. ಬ್ರಾವರ್‌ಮನ್ ಗೆ ಸರ್ಕಾರದಲ್ಲಿ ಸಣ್ಣ ಹುದ್ದೆ ನೀಡುವ ಪ್ರಸ್ತಾಪವಿತ್ತು. ಆದರೆ ಅವರು ಅದನ್ನು ಸ್ವೀಕರಿಸಲು ಒಪ್ಪಲಿಲ್ಲ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಅವರು ಗಾಝಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ರ್ಯಾಲಿಗಳನ್ನು ದ್ವೇಷದ ಮೆರವಣಿಗೆಗಳು ಎಂದು ಕರೆದಿದ್ದರು. ಪ್ಯಾಲೆಸ್ತೀನ್ ಪರವಾದ ಪ್ರತಿಭಟನೆಗಳು ಕೆಲವು ಗುಂಪುಗಳ ಪ್ರಾಮುಖ್ಯತೆಯ ಪ್ರತಿಪಾದನೆಯಾಗಿದೆ ಎಂದು ಹೇಳಿದ್ದರು.
ಬ್ರೆವರ್‌ಮನ್ ಹೇಳಿಕೆ ಉದ್ವಿಗ್ನತೆಗೆ ಕಾರಣವಾಗಿತ್ತು ಮತ್ತು ಬಲಪಂಥೀಯ ಪ್ರತಿಭಟನಾಕಾರರು ಲಂಡನ್‌ನ ಬೀದಿಗಳಲ್ಲಿ ಪ್ರತಿಭಟನೆ ಮಾಡಲು ಪ್ರಚೋದಿಸಿತ್ತು ಎನ್ನಲಾಗಿದೆ.
ಸೆ.2022ರಲ್ಲಿ ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರು ಈ ಸ್ಥಾನಕ್ಕೆ ಬ್ರೆವರ್‌ಮನ್ ಅವರನ್ನು ನೇಮಿಸಿದ್ದರು. ತಮ್ಮ ವೈಯಕ್ತಿಕ ಇಮೇಲ್‌ನಿಂದ ಅಧಿಕೃತ ದಾಖಲೆಯನ್ನು ಕಳುಹಿಸಿದ್ದರಿಂದ ಅವರು ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ರಿಷಿ ಸುನಕ್ ಅವರು ಬ್ರೆವರ್‌ಮನ್ ಅವರನ್ನು ಮತ್ತೆ ನೇಮಿಸಿದ್ದರು.
ಇದನ್ನು ಓದಿ: ಗಾಝಾ ನರಮೇಧವನ್ನು ಬೆಂಬಲಿಸುವ ಸರಕಾರಗಳಿಗೆ ನಾಚಿಕೆಯಾಗಬೇಕು; ಪ್ರಿಯಾಂಕ ಗಾಂಧಿ


