ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್‌ಗೆ ತನಗೆ ಆಹ್ವಾನ ನೀಡಲಿಲ್ಲ ಎಂದು ಭಾರತ ಕ್ರಿಕೆಟ್ ಮಾಜಿ ನಾಯಕ ಕಪಿಲ್ ದೇವ್ ಭಾನುವಾರ ಹೇಳಿದ್ದಾರೆ.
ಕಪಿಲ್ ದೇವ್ ಅವರ ನೇತೃತ್ವದಲ್ಲಿ ಭಾರತ ತಂಡ 1983ರಲ್ಲಿ ವಿಶ್ವ ಕಪ್ ಗೆದ್ದಿತ್ತು. ತಾನು ತನ್ನ ಹಿಂದಿನ ತಂಡದ ಸದಸ್ಯರೊಂದಿಗೆ ಪಂದ್ಯಕ್ಕೆ ಹೋಗಲು ಬಯಸಿದ್ದೆ ಆದರೆ ವಿಶ್ವಕಪ್ ಫೈನಲ್‌ಗೆ ತನಗೆ ಆಹ್ವಾನ ನೀಡಲಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.
ನನ್ನನ್ನು ಅಲ್ಲಿಗೆ ಆಹ್ವಾನಿಸಿಲ್ಲ. ಅವರು ನನ್ನನ್ನು ಕರೆಯಲಿಲ್ಲ ಹಾಗಾಗಿ ನಾನು ಹೋಗಲಿಲ್ಲ. ಇದು ತುಂಬಾ ದೊಡ್ಡ ಕಾರ್ಯಕ್ರಮವಾಗಿದೆ ಮತ್ತು ಅವರು ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಬಹಳ ನಿರತರಾಗಿದ್ದಾರೆ. ಕೆಲವೊಮ್ಮೆ ಅವರು ಮರೆತುಬಿಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಭಾರತದ ಮಾಜಿ ಕ್ಯಾಪ್ಟನ್‌ಗಳಲ್ಲಿ ಸೌರವ್ ಗಂಗೂಲಿ ಅವರು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಅವರು ಬಿಸಿಸಿಐಯ ಮಾಜಿ ಅಧ್ಯಕ್ಷರಾಗಿರುವ ಕಾರಣಕ್ಕೆ ಆಹ್ವಾನಿಸಲಾಗಿದೆ. ಬಿಸಿಸಿಐಯ ಮಾಜಿ ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನು ಆಹ್ವಾನಿಸುವುದು ಬಿಸಿಸಿಐಯ ನಿಯಮವಾಗಿದೆ.
ಇನ್ನು ವಿಶ್ವಕಪ್ ಪೈನಲ್ ಪಂದ್ಯ ವೀಕ್ಷಿಸಲು ಸೆಲೆಬ್ರಿಟಿಗಳಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಕೂಡ ಆಗಮಿಸಿದ್ದರು. ಫೈನಲ್ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧ 7ವಿಕೆಟ್‌ಗಳ ಸೋಲು ಕಂಡಿದ್ದು, 6ನೇ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟಕ್ಕೇರಿದೆ.
ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತ ನಂತರ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಮತ್ತು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ: ವಿಶ್ವಕಪ್‌ನಲ್ಲಿ ಭಾರತಕ್ಕೆ ಸೋಲು: ಮೋದಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷದ ನಾಯಕರು


