ಪಂಜಾಬ್‌ನ ಸುಲ್ತಾನ್‌ಪುರ್ ಲೋಧಿಯ ಕಪುರ್ತಲಾದಲ್ಲಿರುವ ಗುರುದ್ವಾರ ಅಕಾಲ್ ಬುಂಗಾದಲ್ಲಿ ನಿಹಾಂಗ್ ಸಿಖ್ಖರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಘರ್ಷಣೆ ಸಂಭವಿಸಿದೆ. ಘಟನೆಯಲ್ಲಿ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಪೊಲೀಸರಿಗೆ ಗಾಯಗಳಾಗಿವೆ.
ಮೃತ ಪೇದೆಯನ್ನು ಜಸ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಘರ್ಷಣೆಯ ವೇಳೆ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತ ವೀಡಿಯೊವನ್ನು ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.
ಗುರುದ್ವಾರದ ಮಾಲೀಕತ್ವದ ಕುರಿತು 2 ನಿಹಾಂಗ್ ಗುಂಪುಗಳ ನಡುವೆ ವಿವಾದ ನಡೆಯುತ್ತಿತ್ತು. ಮುಖ್ಯ ಗುರುದ್ವಾರ ಬರ್ ಸಾಹಿಬ್ ಎದುರು ಇರುವ ಗುರುದ್ವಾರ ಅಕಾಲ್ ಬುಂಗಾದ ಮಾಲಕತ್ವಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆ ಪೊಲೀಸರು ಗುರುದ್ವಾರ ಸಂಕೀರ್ಣವನ್ನು ಖಾಲಿ ಮಾಡಲು ಹೋಗಿದ್ದರು.
ನಿಹಾಂಗ್‌ಗಳ 2 ಗುಂಪುಗಳ ನಡುವೆ 3 ದಿನಗಳ ಹಿಂದೆ ಸಂಘರ್ಷ ಪ್ರಾರಂಭವಾಯಿತು ಆದರೆ ಗುರುವಾರ ಬೆಳಿಗ್ಗೆ ಅದು ಹೆಚ್ಚು ಉಲ್ಬಣಗೊಂಡಿತ್ತು. ಮನ್ ಸಿಂಗ್ ನೇತೃತ್ವದ ನಿಹಾಂಗ್ ಗುಂಪಿಗೆ ಗುರುದ್ವಾರದ ಆವರಣವನ್ನು ಖಾಲಿ ಮಾಡಲು ಪೊಲೀಸರು ಸೂಚಿಸಿದ್ದಾರೆ. ಈ ವೇಳೆ ಗ್ಯಾಂಗ್‌ನ ಸದಸ್ಯರು ಪೊಲೀಸ್ ತಂಡದ ಮೇಲೆ ಮನಬಂದಂತೆ ಫೈರಿಂಗ್ ಮಾಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಪೋಲೀಸ್ ಪೇದೆ ಮೃತಪಟ್ಟಿದ್ದಾರೆ. ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಬಾಬಾ ಬುದ್ಧ ದಳದ ಮುಖ್ಯಸ್ಥ ಬಾಬಾ ಬಲ್ವೀರ್ ಸಿಂಗ್ ಗುರುದ್ವಾರದ ಮುಂಭಾಗವನ್ನು ಆಕ್ರಮಿಸಿಕೊಂಡಿದ್ದರು. ಅಲ್ಲಿ ಅವರ ಸಹಾಯಕರಾದ ನಿರ್ವೈರ್ ಸಿಂಗ್ ಮತ್ತು ಜಗಜಿತ್ ಸಿಂಗ್ ಕುಳಿತಿದ್ದರು. ನ.21,2023ರಂದು ಬಾಬಾ ಬುದ್ಧ ದಳದ 2ನೇ ಬಣದ ಮುಖ್ಯಸ್ಥ ಬಾಬಾ ಮಾನ್ ಸಿಂಗ್ ವಾಲ್ಲೋ ಮತ್ತು ಇತರ 15-20 ಸಹಚರರು ಗುರುದ್ವಾರಕ್ಕೆ ಬಲವಂತವಾಗಿ ಪ್ರವೇಶಿಸಿದ್ದಾರೆ.
ಗುರುದ್ವಾರವನ್ನು ಪ್ರವೇಶಿಸಿದ ನಂತರ ಬಾಬಾ ಮಾನ್ ಸಿಂಗ್ ನೇತೃತ್ವದ ಗುಂಪು ನಿರ್ವೈರ್ ಸಿಂಗ್ ಅವರನ್ನು ಹಗ್ಗದಿಂದ ಕಟ್ಟಿಹಾಕಿದ್ದಾರೆ ಮತ್ತು ಜಗಜಿತ್ ಸಿಂಗ್ ಮೇಲೆ ಆಯುಧದಿಂದ ದಾಳಿ ಮಾಡಿದ್ದಾರೆ. ಭಾರೀ ಶಸ್ತ್ರಸಜ್ಜಿತರಾದ ನಿಹಾಂಗ್‌ಗಳು ಗುರುದ್ವಾರವನ್ನು ಒಳಗಿನಿಂದ ಲಾಕ್ ಮಾಡಿದ್ದಾರೆ.
ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಗುರುದ್ವಾರ ಸಂಕೀರ್ಣವನ್ನು ಖಾಲಿ ಮಾಡಲು ಹೋಗಿದ್ದು ಈ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿ ಈವರೆಗೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿ; ಭಾರತದ ವಿರುದ್ಧ ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಸಂಚು ಆರೋಪ


