ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಇಂದು ಟೆಂಗ್ನಾಪಾಲ್ ಜಿಲ್ಲೆಯಲ್ಲಿ ಎರಡು ಉಗ್ರಗಾಮಿ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.
ಸೋಮವಾರ ಮಧ್ಯಾಹ್ನ ಟೆಂಗ್ನಾಪಾಲ್ ಜಿಲ್ಲೆಯ ಲೀತು ಗ್ರಾಮದಲ್ಲಿ ಗುಂಡಿನ ಚಕಮಕಿ ನಡೆದಿದ್ದು, 13 ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.
ಮ್ಯಾನ್ಮಾರ್‌ಗೆ ತೆರಳುತ್ತಿದ್ದ ಉಗ್ರಗಾಮಿ ಗುಂಪೊಂದರ ಮೇಲೆ ಲೀತು ಗ್ರಾಮದಲ್ಲಿ ಪ್ರಬಲವಾಗಿರುವ ಮತ್ತೊಂದು ಗುಂಪಿನ ಬಂಡುಕೋರರು ಹೊಂಚು ಹಾಕಿ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಘಟನಾ ಸ್ಥಳಕ್ಕಾಗಮಿಸಿದ ಭದ್ರತಾ ಪಡೆಗಳು 13 ಮೃತದೇಹಗಳನ್ನು ವಶಪಡಿಸಿಕೊಂಡಿವೆ. ಮೃತರು ಸ್ಥಳೀಯ ಜನರಲ್ಲ, ಬೇರೆಡೆಯಿಂದ ಬಂದವರು ಆಗಿರಬಹುದು ಎಂದು ಹೇಳಲಾಗಿದೆ. ಈ ವರ್ಷದ ಮೇ 3ರಿಂದ ಮಣಿಪುರದಲ್ಲಿ ಪ್ರಾರಂಭವಾದ ಜನಾಂಗೀಯ ಸಂಘರ್ಷದಲ್ಲಿ ಇದುವರೆಗೆ 180 ಜನರು ಮೃತಪಟ್ಟಿದ್ದಾರೆ.
ಇತ್ತೀಚಿನ ಬೆಳವಣಿಗೆಯಲ್ಲಿ ಕಳೆದ ನವೆಂಬರ್ 29ರಂದು, ಕೇಂದ್ರ ಗೃಹ ಸಚಿವಾಲಯವು ನಿಷೇಧಿಸಿದ್ದ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (UNLF)ಹಿಂಸಾಚಾರವನ್ನು ತ್ಯಜಿಸಲು ಒಪ್ಪಿಕೊಂಡು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ : ಮಿಜೋರಾಂ ಸಿಎಂ ಪಟ್ಟಕ್ಕೇರಲು ಅಣಿಯಾದ ಇಂದಿರಾ ಗಾಂಧಿಯ ಮಾಜಿ ಭದ್ರತಾಧಿಕಾರಿ


