Homeಮುಖಪುಟಮಿಜೋರಾಂ ಸಿಎಂ ಪಟ್ಟಕ್ಕೇರಲು ಅಣಿಯಾದ ಇಂದಿರಾ ಗಾಂಧಿಯ ಮಾಜಿ ಭದ್ರತಾಧಿಕಾರಿ

ಮಿಜೋರಾಂ ಸಿಎಂ ಪಟ್ಟಕ್ಕೇರಲು ಅಣಿಯಾದ ಇಂದಿರಾ ಗಾಂಧಿಯ ಮಾಜಿ ಭದ್ರತಾಧಿಕಾರಿ

- Advertisement -
- Advertisement -

ಮಿಜೋರಾಂ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ಪಕ್ಷ 27 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಪಕ್ಷ ಭಾರೀ ಹಿನ್ನಡೆ ಅನುಭವಿಸಿದೆ.

2019ರಲ್ಲಿ ಚುನಾವಣಾ ಆಯೋಗದಲ್ಲಿ ನೋಂದಾವಣೆಗೊಂಡ ಹೊಸ ಪಕ್ಷ ಝೆಡ್‌ಪಿಎಂ, ಕೆಲವೇ ವರ್ಷಗಳಲ್ಲಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಸ್ಥಾನಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದೆ. ಈ ಪಕ್ಷದ ಸ್ಥಾಪಕ 73 ವರ್ಷದ ಲಾಲ್ದುಹೋಮಾ ಮಿಜೋರಾಂನ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಖ ಖಚಿತವಾಗಿದೆ. ಲಾಲ್ದುಹೋಮಾ ಅವರು ಪ್ರತಿಸ್ಪರ್ಧಿ ಎಂಎನ್‌ಎಫ್ ಪಕ್ಷದ ಅಭ್ಯರ್ಥಿ ವಿರುದ್ಧ 2,982 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಯಾರಿವರು ಲಾಲ್ದುಹೋಮಾ? ಹೊಸ ಪಕ್ಷ ಕಟ್ಟಿ ಕಡಿಮೆ ಅವಧಿಯಲ್ಲಿ ರಾಜ್ಯದ ಸಿಎಂ ಆಗಲು ಸಿದ್ದರಾಗಿರುವ ಲಾಲ್ದುಹೋಮಾ 1984ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಿಜೋರಾಂ ವಿಧಾನಸಭೆಗೆ ಸ್ಪರ್ಧಿಸಿದ್ದರು. ಆದರೆ, ಪೀಪಲ್ಸ್ ಕಾನ್ಪರೆನ್ಸ್ ಪಕ್ಷದ ಅಭ್ಯರ್ಥಿ ಮುಂದೆ 846 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಅದೇ ವರ್ಷ ಲೋಕಸಭೆಗೆ ಸ್ಪರ್ಧಿಸಿದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್‌ ಪಕ್ಷದ ಸಂಸದರಾಗಿದ್ದ ಲಾಲ್ದುಹೋಮಾ ಅವರನ್ನು ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದಡಿ ಉಚ್ಚಾಟನೆ ಮಾಡಲಾಗಿತ್ತು. ಲಾಲ್ದುಹೋಮಾ 1988ರ ಪಕ್ಷಾಂತರ ವಿರೋಧ ಕಾಯ್ದೆಯಡಿ ಲೋಕಸಭೆಯಿಂದ ಉಚ್ಚಾಟನೆಗೊಂಡ ಮೊದಲ ಸಂಸದರಾಗಿದ್ದಾರೆ.

2018 ರಲ್ಲಿ, ಲಾಲ್ದುಹೋಮಾ ಸ್ವತಂತ್ರ ಅಭ್ಯರ್ಥಿಯಾಗಿ ಐಜ್ವಾಲ್ ವೆಸ್ಟ್-I ಮತ್ತು ಸೆರ್ಚಿಪ್ ಎರಡು ಕ್ಷೇತ್ರಗಳಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು. ನಂತರ, ಅವರು ಸೆರ್ಚಿಪ್ ಕ್ಷೇತ್ರ ಉಳಿಸಿಕೊಳ್ಳಲು ಐಜ್ವಾಲ್ ವೆಸ್ಟ್-I ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲೂ ಲಾಲ್ದುಹೋಮಾ ಸೆರ್ಚಿಪ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ.

2018 ರ ಚುನಾವಣೆಯಲ್ಲಿ ಲಾಲ್ದುಹೋಮಾ ಸ್ಪರ್ಧಿಸಿದ್ದಾಗ ಅವರು ಝೆಡ್‌ಪಿಎಂ ಪಕ್ಷದ ಮುಖ್ಯಸ್ಥರಾಗಿದ್ದರು. ಆದರೆ ಆ ಪಕ್ಷ ನೋಂದಣಿಯಾಗಿರದ ಕಾರಣ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರು. 2020 ರಲ್ಲಿ ಝೆಡ್‌ಪಿಎಂಗೆ ಪಕ್ಷಾಂತರ ಮಾಡಿದ್ದಕ್ಕಾಗಿ ಲಾಲ್ದುಹೋಮಾ ಅವರನ್ನು ತಾಂತ್ರಿಕ ಕಾರಣಕ್ಕಾಗಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ಇಂದಿರಾ ಗಾಂಧಿಗೆ ಭದ್ರತಾಧಿಕಾರಿಯಾಗಿದ್ದರು ಲಾಲ್ದುಹೋಮಾ:

ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಲಾಲ್ದುಹೋಮಾ ಅವರ ಹಿನ್ನೆಲೆ ರೋಚಕವಾಗಿದೆ. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಅವರ ಭದ್ರತಾ ವಿಭಾಗದ ಮುಖ್ಯಸ್ಥರಾಗಿದ್ದ ಲಾಲ್ದುಹೋಮಾ, ಬಳಿಕ ಕಾಂಗ್ರೆಸ್ ಸೇರುವ ಸಲುವಾಗಿ ತಮ್ಮ ಉನ್ನತ ಹುದ್ದೆ ತೊರೆದಿದ್ದರು. ಅಧಿಕಾರಿಯಾಗಿದ್ದಾಗ ಲಾಲ್ದುಹೋಮಾ ಅವರನ್ನು ಮಿಜೋ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಲಾಲ್ಡೆಂಗಾ ಅವರೊಂದಿಗೆ ಶಾಂತಿ ಮಾತುಕತೆ ನಡೆಸಲು ಪ್ರಧಾನಿ ಇಂದಿರಾ ಗಾಂಧಿ ಲಂಡನ್‌ಗೆ ಕಳುಹಿಸಿದ್ದರು. ಈ ಮಾತುಕತೆಯ ಫಲವಾಗಿ 1987ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಲಾಲ್ಡೆಂಗಾ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಇದನ್ನೂ ಓದಿ : ತೆಲಂಗಾಣದ ಸಂಭಾವ್ಯ ಸಿಎಂ ರೇವಂತ್ ರೆಡ್ಡಿ ಯಾರು..ಇವರ ಹಿನ್ನೆಲೆ ಏನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...