Homeಮುಖಪುಟತೆಲಂಗಾಣದ ಸಂಭಾವ್ಯ ಸಿಎಂ ರೇವಂತ್ ರೆಡ್ಡಿ ಯಾರು..ಇವರ ಹಿನ್ನೆಲೆ ಏನು?

ತೆಲಂಗಾಣದ ಸಂಭಾವ್ಯ ಸಿಎಂ ರೇವಂತ್ ರೆಡ್ಡಿ ಯಾರು..ಇವರ ಹಿನ್ನೆಲೆ ಏನು?

- Advertisement -
- Advertisement -

ತೆಲಂಗಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ನಿನ್ನೆ (3. ಡಿ) ಪ್ರಕಟಗೊಂಡಿದ್ದು, 119 ವಿಧಾನಸಭಾ ಸ್ಥಾನಗಳ ಪೈಕಿ ಅಖಿಲ ಭಾರತೀಯ ಕಾಂಗ್ರೆಸ್‌ ಪಕ್ಷ 64 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚಿಸಲು ಅಣಿಯಾಗಿದೆ. ಕಳೆದ 10 ವರ್ಷಗಳ ಕಾಲ ತೆಲುಗು ರಾಜ್ಯವನ್ನು ಆಳಿದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷ 39 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರ ಕಳೆದುಕೊಂಡಿದೆ. 8 ಸ್ಥಾನಗಳನ್ನು ಪಡೆದ ಬಿಜೆಪಿ ಮೂರನೇ ಪಕ್ಷವಾಗಿ ಹೊರ ಹೊಮ್ಮಿದ್ದು, ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ 7 ಸ್ಥಾನಗಳನ್ನು ಗೆಲ್ಲುವ ಮೂಲಕ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಇತರರು 1 ಸ್ಥಾನ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸುವುದು ಖಾತ್ರಿಯಾಗುತ್ತಿದ್ದಂತೆ ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಹೆಸರು ಮುನ್ನಲೆಗೆ ಬಂದಿದೆ. ಚುನಾವಣಾ ಪೂರ್ವದಲ್ಲಿ ಬಿಂಬಿತವಾದಂತೆ ರೇವಂತ್ ರೆಡ್ಡಿ ತೆಲಂಗಾಣದ ನೂತನ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿಯಾಗುವುದು ಬಹುತೇಖ ಖಚಿತವಾಗಿದೆ. ಇಂದು (ಡಿ.4) ಹೈದರಾದ್‌ನ ಗಾಂಧಿ ಭವನದ ತೆಲಂಗಾಣ ರಾಜ್ಯ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಶಾಸಕರ ಮೊದಲ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ರೇವಂತ್ ರೆಡ್ಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇಂದು ರಾತ್ರಿಯೇ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.

ಯಾರಿದು ರೇವಂತ್ ರೆಡ್ಡಿ?

ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಕಾಲಿಟ್ಟ ರೇವಂತ್ ರೆಡ್ಡಿ, ಆರಂಭದಲ್ಲಿ ಬಿಜೆಪಿ-ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನ ಯುವ ನಾಯಕರಾಗಿದ್ದರು. ಪ್ರಸ್ತುತ ಸುಮಾರು 20 ವರ್ಷಗಳ ರಾಜಕೀಯ ಜೀವನ ಪೂರೈಸಿರುವ ರೇವಂತ್ ರೆಡ್ಡಿ ತೆಲಂಗಾಣದ ಬಹುತೇಖ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರು.

ರೇವಂತ್ ರೆಡ್ಡಿ 2001 ರಿಂದ ಬಿಆರ್‌ಎಸ್‌ (ಈ ಹಿಂದಿನ ಟಿಆರ್‌ಎಸ್‌) ಪಕ್ಷದ ಮೂಲಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡರು. 2006ರಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣೆಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಪಕ್ಷ ತೊರೆದಿದ್ದರು. ಬಳಿಕ 2007ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದರು. ನಂತರ 2009-2014ರ ನಡುವೆ ಎರಡು ಬಾರಿ ಕೊಂಡಗಲ್‌ ಕ್ಷೇತ್ರದಿಂದ ತೆಲುಗು ದೇಶಂ ಪಕ್ಷ (ಟಿಡಿಪಿ) ಶಾಸಕರಾಗಿದ್ದರು.

2015ರಲ್ಲಿ ವಿಧಾನಪರಿಷತ್‌ ಚುನಾವಣೆಯಲ್ಲಿ ತನ್ನ ಪರ ಮತ ಚಲಾಯಿಸುವಂತೆ ಶಾಸಕರಿಗೆ 50 ಲಕ್ಷ ರೂಪಾಯಿ ಲಂಚ ನೀಡಿದ ಆರೋಪ ರೇವಂತ್ ರೆಡ್ಡಿ ಮೇಲೆ ಕೇಳಿ ಬಂದಿತ್ತು. ಈ ಕುರಿತ ವಿಡಿಯೋವೊಂದು ವೈರಲ್ ಆಗಿ ದೊಡ್ಡ ವಿವಾದವಾಗಿತ್ತು. ಇದೇ ಪ್ರಕರಣದಲ್ಲಿ ಬಂಧಿತರಾದ ರೇವಂತ್ ರೆಡ್ಡಿ ಕೆಲ ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ಈಗಲೂ ಈ ಪ್ರಕರಣ ನಡೆಯುತ್ತಿದೆ.

2017ರಲ್ಲಿ ಕಾಂಗ್ರೆಸ್‌ ಸೇರಿದ ರೇವಂತ್ ರೆಡ್ಡಿ, ಪಕ್ಷಕ್ಕಾಗಿ ದುಡಿಯುವ ಮೂಲಕ ಹೈಕಮಾಂಡ್ ನಾಯಕರ ಗಮನ ಸೆಳೆದರು. 2021ರಲ್ಲಿ ಅವರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಹೈಕಮಾಂಡ್ ನೇಮಕ ಮಾಡಿತ್ತು. ಆ ಬಳಿಕ ಪಕ್ಷ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ರೇವಂತ್ ರೆಡ್ಡಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸುವಂತೆ ಮಾಡಿದ್ದಾರೆ. ಅಲ್ಲದೆ, ತೆಲಂಗಾಣದ ರಾಜ್ಯದ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿ ಎನಿಸಿಕೊಳ್ಳುವ ಹಂತದಲ್ಲಿದ್ದಾರೆ.

ರೇವಂತ್ ರೆಡ್ಡಿಗೆ ಪಕ್ಷದ ಅಧ್ಯಕ್ಷ ಸ್ಥಾನ ಕೊಟ್ಟಾಗ ಮೂಲ ಕಾಂಗ್ರೆಸಿಗ ನಾಯಕರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅವರು ಹೊರಗಿನಿಂದ ಬಂದವರು ಎಂಬ ಅಪಸ್ವರ ಕೇಳಿ ಬಂದಿತ್ತು. ಆದರೆ , ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ರೆಡ್ಡಿ ಮೇಲೆ ಭಾರೀ ನಂಬಿಕೆ ಇಟ್ಟಿದ್ದರು.

2018ರಲ್ಲಿ ಕೊಡಂಗಲ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ತೆಲಂಗಾಣ ವಿಧಾನಸಭೆಗೆ ಸ್ಪರ್ಧಿಸಿದ್ದ ರೇವಂತ್ ರೆಡ್ಡಿ, ಟಿಆರ್‌ಎಸ್ ಅಭ್ಯರ್ಥಿ ಪಟ್ನಂ ನರೇಂದ್ರ ರೆಡ್ಡಿ ವಿರುದ್ಧ ಸೋಲನುಭವಿಸಿದ್ದರು. ಇದು ಅವರ ಮೊದಲ ಚುನಾವಣಾ ಸೋಲಾಗಿತ್ತು. ಬಳಿಕ 2019ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಲ್ಕಾಜ್ಗಿರಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ರೇವಂತ್ ರೆಡ್ಡಿ 10 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

ಪಕ್ಷದ ಆತಂರಿಕ ವಿರೋಧಗಳ ನಡುವೆ ಈ ಬಾರಿಯ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದ 19 ಶಾಸಕರ ಪೈಕಿ 13 ಜನರು ಆಢಳಿತರೂಡ ಬಿಆರ್‌ಎಸ್‌ ಸೇರ್ಪಡೆಯಾಗಿದ್ದರು. ಇದರಿಂದ ಕಾಂಗ್ರೆಸ್ ಶಾಸಕರ ಸಂಖ್ಯೆ ಎಂಐಎಂ ಪಕ್ಷಕ್ಕಿಂತ ಕಡಿಮೆಯಾಗಿತ್ತು. ಈ ಸವಾಲಿನ ನಡುವೆ ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ದಾಖಲಿಸಿದ್ದು ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಉತ್ಸಾಹವನ್ನು ತಂದು ಕೊಟ್ಟಿತ್ತು. ಬಳಿಕ ಶುರುವಾದ ಕಾಂಗ್ರೆಸ್ ಅಲೆ ಮತ್ತು ಚುನಾವಣಾ ತಂತ್ರಜ್ಞ ಸುನಿಲ್ ಕುಣುಗೋಲು ಅವರ ತಂತ್ರಗಾರಿಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವಂತೆ ಮಾಡಿದೆ.

ಹಳೆಯ ಮೆಹಬೂಬ್ ನಗರ ಜಿಲ್ಲೆಯ ಕೊಂಗರೆಡ್ಡಿಪಲ್ಲಿ ಎಂಬ ಸಣ್ಣ ಗ್ರಾಮದಲ್ಲಿ 8 ನವೆಂಬರ್ 1969 ಜನಿಸಿದ ರೇವಂತ್ ರೆಡ್ಡಿ, ಉಸ್ಮಾನಿಯಾ ವಿಶ್ವ ವಿದ್ಯಾನಿಲಯ ಅಧೀನದ ಎವಿ ಕಾಲೇಜಿನಲ್ಲಿ ತನ್ನ ಬಿಎ ಪದವಿ ವ್ಯಾಸಂಗ ಮುಗಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿಯವರ ಸಂಬಂಧಿಯನ್ನು ರೇವಂತ್ ರೆಡ್ಡಿ ವಿವಾಹವಾಗಿದ್ದು, ದಂಪತಿಗೆ ಒಬ್ಬಳು ಮಗಳಿದ್ದಾಳೆ.

ಇದನ್ನೂ ಓದಿ : ELECTION UPDATE: ಮಿಜೋರಾಂನಲ್ಲಿ ಬಹುಮತ ಪಡೆದ ZPM: ಸಿಎಂಗೆ ಸೋಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಟಿಪ್ಪು ಸುಲ್ತಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬುವುದು ಸುಳ್ಳು

0
"ಜಿಹಾದಿ ಶಾರುಖ್ ಖಾನ್‌ನ ಭಾರೀ ಬಜೆಟ್‌ನಿಂದ ತಯಾರಾದ ದೇಶದ್ರೋಹಿ, ಮತಾಂಧ ತಿಪ್ಪೆ ಸುಲ್ತಾನನ ನಕಲಿ ಚರಿತ್ರೆ ಬರುತ್ತಿದೆ. ಇಂತಹ ದೇಶದ್ರೋಹಿಯ ಸಿನಿಮಾವನ್ನು ಬಹಿಷ್ಕರಿಸಲು ಶೇರ್ ಮಾಡಿ" ಎಂದು ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ...