Homeಮುಖಪುಟಪ್ಲೇಗ್ ವೇಳೆ ವೇಶ್ಯೆಯರು & ಯಹೂದಿಗಳನ್ನು ಬಲಿಪಶು ಮಾಡಲಾಗಿತ್ತು! ಕೊರೋನ ವೇಳೆಯಲ್ಲಿ?

ಪ್ಲೇಗ್ ವೇಳೆ ವೇಶ್ಯೆಯರು & ಯಹೂದಿಗಳನ್ನು ಬಲಿಪಶು ಮಾಡಲಾಗಿತ್ತು! ಕೊರೋನ ವೇಳೆಯಲ್ಲಿ?

ಸಾರ್ಸ್‌ನ ನಂತರ ನಾವು- ಈ ಹೊತ್ತಿಗೆ ಅತ್ಯಂತ ತ್ವರಿತವಾಗಿ ಒಂದು ಕೊರೋನ ವೈರಸ್ ಲಸಿಕೆಯನ್ನು ತಯಾರಿಸಲು ಸಾಧ್ಯವಾಗುವಂತೆ ಒಂದು ವೇದಿಕೆಯನ್ನು ಕಟ್ಟಬಹುದಿತ್ತು. ಆದರೆ, ಅದನ್ನು ಮಾಡಲಾಗಲಿಲ್ಲ. ವಿಜ್ಞಾನ ಸಮರ್ಥವಾಗಿರಲಿಲ್ಲ ಎಂಬ ಕಾರಣದಿಂದ ಅಲ್ಲ; ಆದರೆ, ಹಾಗೆ ಮಾಡುವುದರಿಂದ ಯಾವುದೇ ಲಾಭವಿರಲಿಲ್ಲ.

- Advertisement -
- Advertisement -

ಕೊರೋನ ವೈರಸ್ ಪಿಡುಗು ಹಾಗೂ ಹಿಂದೆ ಪ್ರಪಂಚದಾದ್ಯಂತ ಕೋಟ್ಯಂತರ ಜನರನ್ನು ಬಲಿತೆಗೆದುಕೊಳ್ಳುತ್ತಾ ಬಂದಿರುವ ಪಿಡುಗುಗಳಿಗೂ ಇರುವ ಸಂಬಂಧಗಳನ್ನು ಚರ್ಚಿಸಿದ ಪ್ರಸಿದ್ಧ ವೈದ್ಯಕೀಯ ಇತಿಹಾಸಜ್ಞ ಫ್ರಾಂಕ್ ಸ್ನೋಡೆನ್ ಅವರ ಸಂದರ್ಶನದ ಮೊದಲ ಭಾಗ ಇಲ್ಲಿ ಪ್ರಕಟವಾಗಿತ್ತು. ಜರ್ಮನಿಯ ಅತ್ಯಂತ ಖ್ಯಾತ ಪತ್ರಿಕೆ “ಡೆಷ್ ಸ್ಪೀಗಲ್” (Der Spiegel) ಪ್ರಕಟಿಸಿದ ಅವರ ಕುತೂಹಲಕಾರಿ ಸಂದರ್ಶನದ ಎರಡನೆಯ ಭಾಗ ಇಲ್ಲಿದೆ.

ಸಂದರ್ಶನ: ವೆರೋನಿಕಾ ಹ್ಯಾಕೆನ್‌ಬ್ರೋಖ್

ಅನುವಾದ: ನಿಖಿಲ್ ಕೋಲ್ಪೆ

ಫ್ರಾಂಕ್ ಸ್ನೋಡೆನ್, 73, ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಔಷಧೀಯ ಇತಿಹಾಸದ ಪ್ರಾಧ್ಯಾಪಕರಾಗಿದ್ದು, “ಎಪಿಡೆಮಿಕ್ಸ್ ಎಂಡ್ ಸೊಸೈಟಿ: ಫ್ರಮ್ ದಿ ಬ್ಲ್ಯಾಕ್ ಡೆತ್ ಟು ದಿ ಪ್ರೆಸೆಂಟ್” ಎಂಬ ಪ್ರಸಿದ್ಧ ಪುಸ್ತಕದ ಲೇಖಕರು. ಇಲ್ಲಿ ಹಿಂದಿನ ಸಾಂಕ್ರಾಮಿಕ ರೋಗಗಳಿಗೂ, ಕೊರೋನಕ್ಕೂ ಯಾವುದಾದರೂ ಸಮಾಂತರ ವಿಷಯಗಳು ಇವೆಯೇ ಎಂದವರು ಚರ್ಚಿಸಿದ್ದಾರೆ. ಬುಬೋನಿಕ್ ಪ್ಲೇಗ್ ವೇಳೆ ವೇಶ್ಯೆಯರು ಮತ್ತು ಯಹೂದಿಗಳನ್ನು ದೂರಲಾಗಿತ್ತು! ಈಗ?

ಪ್ರಶ್ನೆ: ಕೊನೆಗೂ ಕೊರೋನ ವೈರಸ್ ಪಿಡುಗಿಗೂ, ಪ್ಲೇಗಿಗೂ ಏನಾದರೂ ಸಮಾಂತರವಾದ ವಿಷಯ ಇದೆಯೆಂದಾಯಿತಲ್ಲವೆ?.

ಸ್ನೋಡೆನ್: ಇರಬಹುದು, ಹೌದು. ಉದಾಹರಣೆಗೆ, ಇಟಲಿಯ ಪ್ರಸಿದ್ಧ ಲೇಖಕ ಜೊವಾನ್ನಿ ಬೊಕ್ಕಾಚ್ಚೋ (Giovanni Boccaccio)ನ “ಡಿಕೇಮ್ರಾನ್” (Decamerone)ನಲ್ಲಿ ಹತ್ತು ಮಂದಿ ಯುವಜನರು ಬಬೋನಿಕ್ ಪ್ಲೇಗಿನಿಂದ ಪಾರಾಗಲು ಫ್ಲೋರೆನ್ಸ್‌ನ ಹೊರಭಾಗದ ಬಂಗಲೆಯೊಂದಕ್ಕೆ ಓಡಿಹೋಗುವಂತೆ, ಈಗ ಅತೀ ಶ್ರೀಮಂತರು ದೂರದೂರದ ಸ್ಥಳಗಳಿಗೆ ಓಡಿಹೋಗುತ್ತಿದ್ದಾರೆ. ಚೀನಾ ಮತ್ತು ಯುಎಸ್‌ಎಯು ಈಗ ಈ ಪಿಡುಗಿಗಾಗಿ ಪರಸ್ಪರರನ್ನು ದೂರುತ್ತಿರುವ ವಾಸ್ತವವು ನನಗೆ ಪ್ಲೇಗನ್ನು ನೆನಪಿಸುತ್ತದೆ.

ಪ್ಲೇಗ್ ವೇಳೆ ಜನರ ಸ್ವಭಾವನ್ನು ಚಿತ್ರಿಸುವ ಜಿಯೋನ್ನಿ ಬೊಕಾಚ್ಚೊನ “ಡಿಕೆಮೆರಾನ್”

ಬಬೋನಿಕ್ ಪ್ಲೇಗ್ ವೇಳೆ ವೇಶ್ಯೆಯರು ಮತ್ತು ಯಹೂದಿಗಳನ್ನು ದೂರಲಾಗಿತ್ತು! ಇದು ಭಯಾನಕವಾದ ಹತ್ಯಾಕಾಂಡಗಳಿಗೆ ಕಾರಣವಾಗಿತ್ತು. ಅಲೆಸ್ಸಾಂದ್ರೊ ಮಂಝೋನಿ (Alessandro Manzoni)ಯ ಐತಿಹಾಸಿಕ ಕಾದಂಬರಿ “ದಿ ಬಿಟ್ರೋಥ್ಡ್” (The Betrothed)ನಲ್ಲಿ ಕ್ರೂರವಾಗಿ ಹತ್ಯೆ ಮಾಡಲಾದ ನಾಲ್ವರು ಸ್ಪೇನಿಯಾರ್ಡರ (ಸ್ಪೇನ್ ದೇಶದವರ) ಕತೆಯನ್ನು ಹೇಳಲಾಗಿದೆ. ಅವರ ಮೇಲೆ ಉದ್ದೇಶಪೂರ್ವಕವಾಗಿ ರೋಗವನ್ನು ಹರಡಿದ ಆರೋಪವನ್ನು ಹೊರಿಸಲಾಗಿತ್ತು.

ಅಲೆಸ್ಸಾಂದ್ರೋ ಮಂಝೋನಿಯ “ಬಿತ್ರೋಥ್ಡ್”.

ಮಲೇರಿಯಾದ ವಿಷಯವೂ ಇದೇ: ಐತಿಹಾಸಿಕ ಚಿತ್ರಗಳು ಹೇಗೆ ಅಮೇರಿಕಾದ ನಾಗರಿಕರು ರೋಗದ ಸೋಂಕು ತಗಲಿದೆ ಎಂದು ಶಂಕಿಸಿ ವಲಸಿಗರ ವಿರುದ್ಧ ಕಾದಾಡಲು ಯತ್ನಿಸಿದರು ಎಂದು ತಿಳಿಸುತ್ತವೆ. ಈಗಲೂ, ಈ ಕೊರೋನ ಪಿಡುಗಿನ ಹೊತ್ತಿನಲ್ಲಿ ಚೀನೀಯರಂತೆ ಕಾಣುವ ಜನರನ್ನು ಹಲವಾರು ದೇಶಗಳಲ್ಲಿ ನಿಂದಿಸಿ ಅವಮಾನಿಸಲಾಗುತ್ತಿದೆ ಅಥವಾ ಅವರ ಮೇಲೆ ದೈಹಿಕ ಹಲ್ಲೆಗಳನ್ನೂ ಮಾಡಲಾಗುತ್ತಿದೆ.

ಪ್ರಶ್ನೆ: ಬಬೋನಿಕ್ ಪ್ಲೇಗ್ ಎಷ್ಟು ಭೀಕರವಾಗಿ ಹರಡಿತ್ತೆಂದರೆ ಹಲವರು ದೇವರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡರು. ನಾವು ನಮ್ಮ ಜಾತ್ಯತೀತ ಸಮಾಜದಲ್ಲಿ ಹೊಂದಿರುವ ನಂಬಿಕೆಗಳಿಗೆ ಈ ಕೊರೋನ ವೈರಸ್ ಏನು ಮಾಡುತ್ತಿದೆ?

ಸ್ನೋಡೆನ್: ಜಾಗತೀಕರಣದ ಕುರಿತ ನಮ್ಮ ನಂಬಿಕೆಯನ್ನು ಪ್ರಶ್ನಿಸುವುದು ಅಗತ್ಯವಾಗಿದೆ ಎಂದು ನನ್ನ ಯೋಚನೆ. ಜಾಗತೀಕರಣದ ಮೂಲಕ ನಾವು ಎಷ್ಟು ನಿರುಪಾಯರಾಗಿದ್ದೇವೆ ಎಂದು ನಮಗೀಗ ಗೊತ್ತಾಗಿದೆ. ಈ ಪಿಡುಗು ನಿಜವಾಗಿಯೂ ನಮ್ಮ ಒಳಮನಸ್ಸಿನಲ್ಲಿರುವ ಆತಂಕಗಳನ್ನು, ಮನುಷ್ಯರಾಗಿ ನಮಗಿರುವ ಅತ್ಯಂತ ದೊಡ್ಡ ಚಿಂತೆಗಳನ್ನು ತಟ್ಟಿದೆ. ಆದರೆ, ಜಾಗತೀಕರಣವು ದೇವರ ಕೃತ್ಯವಲ್ಲ. ಅದನ್ನು ನಾವೇ ಸೃಷ್ಟಿಸಿದ್ದು. ಹೆಚ್ಚುಕಡಿಮೆ 800 ಕೋಟಿ ಜನರು ಭೂಮಿಯಲ್ಲಿ ಇರುವಾಗ, ಅತಿಯಾದ ಪ್ರಯಾಣ, ಪರಿಸರ ಮಾಲಿನ್ಯ, ನಿಸರ್ಗವನ್ನು ಇನ್ನಷ್ಟು, ಮತ್ತಷ್ಟು ಬದಿಗೆ ತಳ್ಳುವುದು ಇತ್ಯಾದಿಗಳೊಂದಿಗೆ ನಾವು ನಮ್ಮ ಆರ್ಥಿಕತೆಯನ್ನು ಆಕ್ರಮಣಕಾರಿಯಾಗಿ ಮತ್ತು ನಿರಂತರವಾಗಿ ಬೆಳೆಸಬಹುದು ಎಂಬ ಮಿಥ್ಯೆಯನ್ನು ಸೃಷ್ಟಿಸುವುದರ ಮೂಲಕ- ನಾವು ಕೊರೋನ ವೈರಸ್ ಹುಟ್ಟಿಕೊಳ್ಳುವುದಕ್ಕೆ, ಹರಡುವುದಕ್ಕೆ ಮತ್ತು ನಮ್ಮನ್ನು ವಿಶೇಷವಾಗಿ ತಟ್ಟುವುದಕ್ಕೆ ಹೆಚ್ಚುಕಡಿಮೆ ಹಸನಾದ ಪರಿಸ್ಥಿತಿಯನ್ನು ಉಂಟುಮಾಡಿದೆವು.

ಪ್ರಶ್ನೆ: ಈ ಪಿಡುಗಿನಿಂದ ಏನಾದರೂ ಧನಾತ್ಮಕವಾದದ್ದು ಹುಟ್ಟಿಕೊಳ್ಳಬಹುದೆ?

ಸ್ನೋಡೆನ್: ಹೌದು. ನಾವು ಈಗ ಕವಲು ರಸ್ತೆಯಲ್ಲಿದ್ದೇವೆ. ನಾವು ಸದ್ಯಕ್ಕೆ ಮಾಡುತ್ತಿರುವಂತೆ ರಾಷ್ಟ್ರೀಯತೆಯತ್ತ ಹಿಂದೆ ಸರಿದರೆ, ನಿಜವಾಗಿಯೂ ಬದಲಾವಣೆಯನ್ನು ಪ್ರಚೋದಿಸಬಲ್ಲ ಅವಕಾಶವನ್ನು ಕೈಚೆಲ್ಲಿದಂತಾಗುತ್ತದೆ. ಹಕ್ಕಿಜ್ವರ (Avian Flu)ದಿಂದ ಹಿಡಿದು, ಸಾರ್ಸ್ (SARS)ನಿಂದ, ಕೊರೋನ ವೈರಸ್ ತನಕ ಎಲ್ಲಾ ರೋಗಗಳು ಪ್ರಾಣಿಸಂಬಂಧಿ ಕಾರಣಗಳಿಂದ ಹುಟ್ಟಿದವುಗಳು. ನಾವು ಇಂದು ಮಾನವ ಇತಿಹಾಸದಲ್ಲೆಂದೂ ಕಾಣದಷ್ಟು ಮಟ್ಟಿಗೆ ಪ್ರಾಣಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ಬಗ್ಗೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳು ಇಲ್ಲವೆ? “ಓಹ್! ಇಲ್ಲಿ ಒಂದು ನಿರ್ದಿಷ್ಟ ವಿನ್ಯಾಸವಿದೆಯೆ? ನಾವು ನಮ್ಮ ಜನವಸತಿಯನ್ನು ಇನ್ನಷ್ಟು, ಮತ್ತಷ್ಟು ಪ್ರದೇಶದಗಳಿಗೆ ವಿಸ್ತರಿಸುವ ಅಗತ್ಯವಿದೆಯೆ?” ಎಂಬ ಮಾತು ನಮ್ಮ ಬಾಯಿಯಲ್ಲಿ ಬರಲು ನಾವು ಇನ್ನೆಷ್ಟು ಸಲ ಸಂಕಷ್ಟ ಅನುಭವಿಸಬೇಕು?

ಪ್ರಶ್ನೆ: ನಮಗೆ ಹಸಿರು ಆರ್ಥಿಕತೆ ಅಗತ್ಯವೆ?

ಸ್ನೋಡೆನ್: ಹೌದು. ಪರಿಸರವಾದ ಮತ್ತು ಆರೋಗ್ಯ ಜೊತೆಜೊತೆಯಾಗಿಯೇ ಹೋಗಬೇಕು ಎಂಬಂತೆ ನನಗೆ ಕಾಣುತ್ತದೆ. ಆದರೆ, ಅದು ದೇಶಗಳಾಗಿ ಯೋಚಿಸುವುದರಿಂದ ಆಗುವುದಿಲ್ಲ. ಜೀವಾಣುಗಳು ದೇಶದ ಗಡಿಗಳಿಗೆ ಕಿಂಚಿತ್ತೂ ಗೌರವ ಕೊಡುವುದಿಲ್ಲ. ನಾವೊಂದು ಜೀವಪ್ರಭೇದವಾಗಿ- ಜೀವಾಣುಗಳ ಪ್ರಪಂಚದಲ್ಲಿ ಬದುಕುತ್ತಿರುವ ಜೀವಪ್ರಭೇದವಾಗಿ- ಯೋಚಿಸಬೇಕು.

ಪ್ರಶ್ನೆ: ಆದರೆ, ವಿಜ್ಞಾನದ ವಿಷಯವೇನು? ನಮ್ಮನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ವಿಜ್ಞಾನದಿಂದ ಸಾಧ್ಯವಿಲ್ಲವೆ?

ಸ್ನೋಡೆನ್: ವಿಜ್ಞಾನವು ಬಹಳಷ್ಟು ಪ್ರಗತಿ ಸಾಧಿಸಿದೆ ಎಂಬುದರಲ್ಲಿ ಸಂಶಯವಿಲ್ಲ ಮತ್ತು ನಾವೀಗ ಈ ಕೊರೋನ ವೈರಸ್ ಪಿಡುಗಿನ ಪ್ರತಿಯೊಂದು ದಿನವೂ ಇದನ್ನು ನೋಡುತ್ತಿದ್ದೇವೆ. ಪ್ಲೇಗಿನ ಕಾಲದಲ್ಲಿ ಜನರು ಅದನ್ನೊಂದು ದೇವರು ನೀಡಿದ ಶಿಕ್ಷೆ ಎಂದು ಭಾವಿಸಿದ್ದರು. ಅದು ನಿಜಕ್ಕೂ ಭಯಾನಕವಾಗಿತ್ತು. 1973ರಲ್ಲಿ ಕೊಲೆರಾ ಸಾಂಕ್ರಾಮಿಕ ರೋಗದಿಂದಾಗಿ ನಾನು ರೋಮ್‌ನಲ್ಲಿ ಇದ್ದಾಗ ಇಟಲಿಯ ಆರೋಗ್ಯ ಸಚಿವರಾಗಿದ್ದವರು ಎಷ್ಟು ಮೂಢನಂಬಿಕೆಯವರಾಗಿದ್ದರೆಂದರೆ, ಅವರು ಕೇವಲ ಸ್ವಚ್ಛತೆಯ ಕ್ರಮಗಳನ್ನು ಮಾತ್ರ ಅನುಸರಿಸುತ್ತಿರಲಿಲ್ಲ; ಬೆನ್ನಹಿಂದಿನಿಂದ ಕೈಗಳಲ್ಲಿ ದುಷ್ಟಶಕ್ತಿಗಳನ್ನು ದೂರ ಇಡುವ ಸಂಜ್ಞೆಗಳನ್ನೂ ಮಾಡುತ್ತಿದ್ದರು. ಇಂತಹಾ ಸಮಯಗಳು ಹಿಂದೆಯೇ ಕಳೆದುಹೋಗಿವೆ. ಹದಿನೇಳು ವರ್ಷಗಳ ಹಿಂದಿನ ಸಾರ್ಸ್‌ಗೆ ಹೋಲಿಸಿದಾಗಲೂ ವಿಜ್ಞಾನವು ಬಹಳಷ್ಟು ಪ್ರಗತಿ ಸಾಧಿಸಿದೆ.

ಪ್ರಶ್ನೆ: ಆದರೆ ಅದು ಸಾಕಾಗದು?

ಸ್ನೋಡೆನ್: ಸಮಸ್ಯೆಯೆಂದರೆ, ನಾವು ವಿಜ್ಞಾನವನ್ನು ರಚನಾತ್ಮಕ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ‌ಸಾರ್ಸ್‌ನ ನಂತರ ನಾವು- ಈ ಹೊತ್ತಿಗೆ ಅತ್ಯಂತ ತ್ವರಿತವಾಗಿ ಒಂದು ಕೊರೋನ ವೈರಸ್ ಲಸಿಕೆಯನ್ನು ತಯಾರಿಸಲು ಸಾಧ್ಯವಾಗುವಂತೆ ಒಂದು ವೇದಿಕೆಯನ್ನು ಕಟ್ಟಬಹುದಿತ್ತು. ಆದರೆ, ಅದನ್ನು ಮಾಡಲಾಗಲಿಲ್ಲ. ವಿಜ್ಞಾನ ಸಮರ್ಥವಾಗಿರಲಿಲ್ಲ ಎಂಬ ಕಾರಣದಿಂದ ಅಲ್ಲ; ಆದರೆ, ಹಾಗೆ ಮಾಡುವುದರಿಂದ ಯಾವುದೇ ಲಾಭವಿರಲಿಲ್ಲ. ಔಷಧಿ ಉತ್ಪಾದನಾ ಕೈಗಾರಿಕೆಯಲ್ಲಿ ಪ್ರತಿಯೊಂದೂ ಲಾಭವನ್ನೇ ನೋಡುತ್ತದೆ. ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿಯೂ ಇದೇ ಸಮಸ್ಯೆ. ಸಾಂಕ್ರಾಮಿಕ ರೋಗಕ್ಕೆ ಸಿದ್ಧವಾಗಿರುವಿಕೆಯು, ಆಕ್ರಮಣಕಾರಿ ಪರಿಹಾರ ಪ್ರಕ್ರಿಯೆಯಷ್ಟು ಲಾಭವನ್ನು ತರುವುದಿಲ್ಲ. ಆದುದರಿಂದ, ಯಾರೂ ಸಿದ್ಧತೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಯುಎಸ್‌ಎ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಕೋಟ್ಯಂತರ ಜನರಿಗೆ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುವುದಿಲ್ಲ. ಆದರ ಭಯಾನಕ ಪರಿಣಾಮಗಳನ್ನು ನಾವೀಗ ನೋಡುತ್ತಿದ್ದೇವೆ. ಈ ಪಿಡುಗಿನ ಒಂದು ಪಾಠವೆಂದರೆ: ಔಷಧಿಯು ಒಂದು ಮಾನವ ಹಕ್ಕಾಗಬೇಕು!

ಪ್ರಶ್ನೆ: ಕೊನೆಗೂ ಗೆಲ್ಲುವುದು ಜೀವಾಣುಗಳೇ ಎಂಬ- ಸಾಂಕ್ರಾಮಿಕ ರೋಗಗಳ ಕುರಿತ ಸಂಶೋಧನೆಗಳ ಜನಕ- ಲೂಯಿ ಪಾಸ್ತರ್ (Louis Pasteur) ಅವರ ಅಭಿಪ್ರಾಯವನ್ನು ನೀವು ಒಪ್ಪುತ್ತೀರಾ?

ಸ್ನೋಡೆನ್: ನಾವು ಹಿಂದಿನ ತಪ್ಪುಗಳಿಂದ ಕಲಿಯಲು ಸಿದ್ಧರಿದ್ದೇವೆಯೇ, ಇಲ್ಲವೇ ಎಂಬುದರ ಮೇಲೆ ಅದು ಅವಲಂಬಿಸಿದೆ. ನಮ್ಮ ದೋಷ, ದೌರ್ಬಲ್ಯಗಳೇ ನಮ್ಮನ್ನು ನಾವೀಗ ಎದುರಿಸುತ್ತಿರುವಂತಹ ಪಿಡುಗುಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ನಮಗೆ ಗೊತ್ತಿದೆ. ಭವಿಷ್ಯದ ಸಾಂಕ್ರಾಮಿಕ ಪಿಡುಗುಗಳನ್ನು ತಡೆಯುವ ಅಥವಾ ಕನಿಷ್ಟ ಅವುಗಳ ಸಾಧ್ಯತೆಯನ್ನು ಕಡಿಮೆ ಮಾಡುವ ಸಲುವಾಗಿ ಸಹಕರಿಸುವ ಸಾಮರ್ಥ್ಯ ಮತ್ತು ಸಾಧನಗಳು ನಮ್ಮಲ್ಲಿವೆ. ಆದರೆ, ನಾವು ಅದರಂತೆ ಕಾರ್ಯಾಚರಿಸುತ್ತೇವೆಯೆ? ಹಾಗೆಂಂದು ನಾನು ಆಶಿಸುತ್ತೇನೆ. ಆದರೆ, ಖಂಡಿತವಾಗಿ ಹೇಳಲಾರೆ. ಹವಾಮಾನ ಸಂರಕ್ಷಣೆಯ ಕೆಲಸ ಎಷ್ಟು ದಯನೀಯ ಗತಿಯಲ್ಲಿ ನಡೆಯುತ್ತಿದೆ ಎಂಬುದನ್ನು ಯೋಚಿಸಿ!

ಪ್ರಶ್ನೆ: ಆದರೆ, ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ವ್ಯತಿರಿಕ್ತವಾಗಿ ಕೊರೋನ ವೈರಸನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ.

ಸ್ನೋಡೆನ್: ನೀವು ಹೇಳುವುದು ಸರಿ. ನಾವೀಗ ಇಷ್ಟು ನೇರವಾಗಿ ಕೊರೋನ ವೈರಸ್‌ನಿಂದ ಬಾಧಿತರಾಗಿರುವುದರಿಂದ ನಾವು ಬದಲಾಗಲೂಬಹುದು. ಗ್ರೀಕ್ ನಾಟದ ಹೂರಣವೇ ಅದಲ್ಲವೆ?- ಮಾನವರಿಗೆ ಕಲಿಕೆ ಸಾಧ್ಯವಿದೆ. ಆದರೆ, ಸಾಮಾನ್ಯವಾಗಿ ಈ ಕಲಿಕೆಯು ನರಳುವಿಕೆಯಿಂದಲೇ ಬರುತ್ತದೆ.


ಇದನ್ನೂ ಓದಿ: ನಾವು ಹೇಳಿದ್ದನ್ನು ನೀವಂದೇ ಕೇಳಿದ್ದರೆ ಕೊರೊನಾದಿಂದ ಇಷ್ಟು ಕಷ್ಟ ಆಗುತ್ತಿರಲಿಲ್ಲ: ಏನು ಹೇಳುತ್ತಿದ್ದಾರೆ ಫ್ರಾಂಕ್ ಸ್ನೋಡೆನ್? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಭಾರತದ ಸಂಸ್ಕೃತಿ ಯಾವತ್ತೂ ಪ್ರಕೃತಿಯೈಡನೆ ಸಾಮರಸ್ಯದಿಂದಿರುವಂತಯೇ ಹೇಳಿದೆ. ನಮ್ಮ ಪುರಾಣ, ಜನಪದ, ಎಲ್ಲವೂ. ಆದರೆ ನಮಗೆ ಒಳಿತೋ ಕೆಡುಕೋ.
    ಮುಖ್ಯವಲ್ಲ ಅದು ವಿದೇಶದಿಂದ ಆಮದಾಗಿರಬೇಕು ಅದನ್ನು ಮಾತ್ರ ನಂಬುವುದು. ಮೇಲೆ ಯಾರೋ ವಿದೇಶಿಯರು ಹೇಳಿರುವುರ ಒಟ್ಟು ಸಾರಾಂಶ ನೀನೂ ಬದುಕು ಎಲ್ಲವನ್ನೂ ಬದುಕಲು ಬಿಡು ಎಂಬುದು. ನಮ್ಮ ಗ್ರಾಮ ಭಾರತದ ಜೀವನ ಇರುವುದೇ ಹಾಗೆ ಅದಕ್ಕೆ ಅವರು ಶ್ರೀಮಂತರಾಗಲೇ ಇಲ್ಲ. ನಗರದ ನಾಗರೀಕರ ದೃಷ್ಟಿ ಅವರ ಕಡೆ ತಿರುಗಲೇ ಇಲ್ಲ. ಈಗಲಾದರೂ ಸರ್ಕಾರಕ್ಕಾಗಲೀ ಉಳಿದ ಯಾರಿಗೇ ಆಗಲಿ ಶ್ರೀಮಂತಕಿ ಹಾಗೂ ಹೊರದೇಶದ ವ್ಯಾಮೋಹ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಶ್ರೀಮಂತಿಕೆಯ ಅಳತೆಗೋಲು ಹಣ ಹಾಗೂ ತಾವು ಹೊಂದಿರುವ ವಸ್ತುಗಳೊಂದಿಗೆ ಎಂದು ಎಲ್ಲಿಯವರೆಗೂ ಭಾವಿಸಲಾಗುವುದೋ ಅಲ್ಲಿಯವರೆಗೆ ಶ್ರೀಮಂತಿಕೆಗಾಗಿ ಜನರ ಹಾಗೂ ದೇಶಗಳ ಪೈಪೋಟಿ ನಿಲ್ಲುವುದಿಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ಮಹಾರಾಷ್ಟ್ರ ಸರ್ಕಾರ

50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಬಹುಮತ ಸಾಬೀತುಪಡಿಸುತ್ತೇನೆ: ಬಂಡಾಯ ನಾಯಕ ಏಕನಾಥ್ ಶಿಂಧೆ

0
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್‌ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು...