Homeಮುಖಪುಟರಾಜಸ್ಥಾನ ಸಿಎಂ ಹುದ್ದೆಗೆ ತೀವ್ರ ಪೈಪೋಟಿ! ಮಹಂತ್ ಬಾಲಕ ನಾಥ್ ಹೆಸರು ಮುನ್ನೆಲೆಗೆ

ರಾಜಸ್ಥಾನ ಸಿಎಂ ಹುದ್ದೆಗೆ ತೀವ್ರ ಪೈಪೋಟಿ! ಮಹಂತ್ ಬಾಲಕ ನಾಥ್ ಹೆಸರು ಮುನ್ನೆಲೆಗೆ

- Advertisement -
- Advertisement -

ರಾಜಸ್ಥಾನದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಪಟ್ಟು ಹಿಡಿದಿದ್ದ ಬಿಜೆಪಿ ಹೈಕಮಾಂಡ್ ವರಿಷ್ಠರು, ಕೇಂದ್ರ ಸಂಪುಟದ ಸಚಿವರು ಹಾಗೂ ಸಂಸದರನ್ನೇ ಕಣಕ್ಕಿಳಿಸಿ ತನ್ನ ಪ್ರತಿಷ್ಠೆ ಪಣಕ್ಕಿಟ್ಟಿತ್ತು. ಇದೀಗ 115 ಸ್ಥಾನಗಳನ್ನು ಗೆಲ್ಲುವ ಮೂಲಕ ‘ಅರಮನೆಗಳ ರಾಜ್ಯ’ದ ಗದ್ದುಗೆ ಏರಲು ಸಿದ್ಧವಾಗಿದೆ. 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತ ಸಾಧಿಸಿರುವ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹಲವರ ಹೆಸರು ಕೇಳಿಬರುತ್ತಿದೆ. ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಿಸದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಸ್ಥಾನದಲ್ಲಿ ಚುನಾವಣೆ ಎದುರಿಸಿತ್ತು.

ರಾಜಮನೆತನ ಹಿನ್ನೆಲೆಯ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವಸುಂಧರ ರಾಜೆ ಹಾಗೂ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಜತೆಗೆ ಇನ್ನೂ ಹಲವರು ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ. ಮಹಂತ್ ಬಾಲಕನಾಥ್, ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ ಮತ್ತು ವಿಪಕ್ಷ ನಾಯಕರಾಗಿದ್ದ ರಾಜೇಂದ್ರ ರಾಥೋಡ್ ಅವರು ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಮೂರನೇ ಬಾರಿಗೆ ಸಿಎಂ ಆಗ್ತಾರಾ ವಸುಂಧರಾ?

ಎರಡು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೆ ಅವರು ಝಲ್ರಾಪಟನ್ ಕ್ಷೇತ್ರದಿಂದ 53,193 ಮತಗಳ ಅಂತರದಿಂದ ಗೆದ್ದು ಒಟ್ಟು 1,38,831 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಮಲಾಲ್ ಅವರಿಗಿಂತ 85,638 ಹೆಚ್ಚಿನ ಮತಗಳನ್ನು ಪಡೆದು ಮೇಲುಗೈ ಸಾಧಿಸಿದ್ದು, ಮುಖ್ಯಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ಯೋಗಿ ಮಹಂತ್ ಬಾಲಕನಾಥ್‌ಗೆ ಒಲಿಯುತ್ತಾ ಸಿಎಂ ಪಟ್ಟ?

ಅಲ್ವಾರ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಮಹಂತ್ ಬಾಲಕ್ ನಾಥ್ ರಾಜಸ್ಥಾನದ ಪ್ರಮುಖ ಧಾರ್ಮಿಕ ವ್ಯಕ್ತಿಯಾಗಿದ್ದಾರೆ. ಇದೀಗ ತಿಜಾರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಖಾನ್ ಅವರನ್ನು 6,173 ಮತಗಳ ಅಂತರದಿಂದ ಸೋಲಿಸಿದ್ದು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಇವರೂ ಸಿಎಂ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ದಿಯಾ ಕುಮಾರಿ ಮುಂದಿನ ರಾಜಸ್ಥಾನ ಸಿಎಂ?

ರಾಜಸ್ಥಾನದ ರಾಜಸಮಂದ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ದಿಯಾ ಕುಮಾರಿ ಅವರು ಜೈಪುರ ಜಿಲ್ಲೆಯಲ್ಲಿರುವ ವಿದ್ಯಾಧರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು, ಕಾಂಗ್ರೆಸ್‌ನ ಸೀತಾರಾಮ್ ಅಗರ್ವಾಲ್ ಅವರನ್ನು 71,368 ಮತಗಳ ಅಂತರದಿಂದ ಸೋಲಿಸಿ, ಸಿಎಂ ಸ್ಥಾನದ ಪ್ರಬಲ ಸ್ಪರ್ಧಿಯಾಗಿದ್ದಾರೆ.

ಸಿಪಿ ಜೋಶಿ ಹೆಸರು ಮುನ್ನೆಲೆಗೆ!

2014 ಹಾಗೂ 2019ರಲ್ಲಿ ಎರಡು ಬಾರಿ ಚಿತ್ತೋರ್ಗಢ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿರುವ ಸಿಪಿ ಜೋಶಿ, ಪ್ರಸ್ತುತ ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದಾರೆ. ಅವರು ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ರಾಜಸ್ಥಾನ ಸಿಎಂ ಆಗ್ತಾರಾ ಕೇಂದ್ರ ಜಲಶಕ್ತಿ ಸಚಿವ?

ಜೋಧ್ಪುರದಿಂದ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿರುವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಮುಖ್ಯಮಂತ್ರಿಯಾಗಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ. 2014 ರಿಂದ ಎರಡು ಅವಧಿಗೆ ಲೋಕಸಭಾ ಸದಸ್ಯರಾಗಿ ಜೋಧ್ಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಹೈಕಮಾಂಡ್ ವರಿಷ್ಠರ ಸೂಚನೆ ಮೇರೆಗೆ ವಿಧಾನಸಭೆಗೆ ಸ್ಪರ್ಧಿಸಿದ್ದರು. ಇದೀಗ ಇವರನ್ನೇ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಗೆ ನೇಮಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಸೋತ ವಿಪಕ್ಷ ನಾಯಕನಿಗೆ ಸಿಗುತ್ತಾ ಸಿಎಂ ಪಟ್ಟ!

ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ರಾಜೇಂದ್ರ ರಾಥೋಡ್ ಕೂಡ ಚುನಾವಣೆಗೆ ಹೋಗುವ ಮುನ್ನ ಸಂಭಾವ್ಯ ಸಿಎಂ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು. ಆದರೆ, ಅವರು ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಬುಡಾನಿಯಾ ವಿರುದ್ಧ 10,345 ಮತಗಳ ಅಂತರದಿಂದ ಸೋತಿದ್ದಾರೆ. ಸೋತಿದ್ದರೂ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತುಗಳಿವೆ.

ರಾಜಸ್ಥಾನ ವಿಧಾನಸಭೆ ಚುನಾವಣೆ ಫಲಿತಾಂಶ:
ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಸ್ಥಾನಗಳಿಗೆ ನವೆಂಬರ್ 25 ರಂದು ಚುನಾವಣೆ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನರ್ ನಿಧನರಾಗಿದ್ದರಿಂದ ಕರಣ್ಪುರ ಕ್ಷೇತ್ರಕ್ಕೆ ಮತದಾನ ದಿನಾಂಕವನ್ನು ಮುಂದೂಡಲಾಗಿದೆ. ಬಹುಮತಕ್ಕೆ 100 ಸ್ಥಾನಗಳು ಬೇಕಿದ್ದು, ಕಳೆದ ಭಾನುವಾರ ನಡೆದ ಮತ ಎಣಿಕೆಯಲ್ಲಿ ಬಿಜೆಪಿ 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: ಮಿಜೋರಾಂ ಸಿಎಂ ಪಟ್ಟಕ್ಕೇರಲು ಅಣಿಯಾದ ಇಂದಿರಾ ಗಾಂಧಿಯ ಮಾಜಿ ಭದ್ರತಾಧಿಕಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...