Homeಚಳವಳಿಹಿಂದೀ-ಹಿಂದೂ ಒಂದೆಂಬ ಅಪಾಯಕಾರಿ ಭ್ರಮೆ!: ಇದು ಹಿಂದಿ ಹೇರಿಕೆಯ ಬಾನಾಮತಿ!

ಹಿಂದೀ-ಹಿಂದೂ ಒಂದೆಂಬ ಅಪಾಯಕಾರಿ ಭ್ರಮೆ!: ಇದು ಹಿಂದಿ ಹೇರಿಕೆಯ ಬಾನಾಮತಿ!

ಉರ್ದುವಿನಲ್ಲಿ ಹಲವಾರು ಖ್ಯಾತನಾಮ 'ಹಿಂದೂ' ಕವಿಗಳೂ, ಹಿಂದಿಯಲ್ಲಿ ಖ್ಯಾತನಾಮ 'ಮುಸ್ಲಿಂ' ಕವಿಗಳೂ ಇದ್ದಾರೆ ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿದೆ.

- Advertisement -
- Advertisement -

ಭಾರತೀಯ ಸಂಸತ್ತನ್ನೂ ಲೆಕ್ಕಿಸದೆ ಸಮಾನತೆಯ ಹೆಸರಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತ ಕೇಂದ್ರ ಸರಕಾರ, ಅದೇ ಹೆಸರಲ್ಲಿ ಹಿಂದಿಯ ‘ವಿಶೇಷ ಸ್ಥಾನಮಾನ’ ಕಿತ್ತೆಸೆಯಲಿ ಎಂಬ ಬೇಡಿಕೆಗೆ ಹಿಂದಿಯೇತರ ರಾಜ್ಯಗಳು, ಅದರಲ್ಲೂ ಮುಖ್ಯವಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ ಚಾಲನೆ ಸಿಕ್ಕಿದರೆ ಅದರಲ್ಲಿ ಅಚ್ಚರಿಯೇನಿಲ್ಲ. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ಏಕೆಂದರೆ, ಹಿಂದಿವಾಲಗಳ ಹಿಂದಿ ಹೇರಿಕೆಯ ಯತ್ನಕ್ಕೆ ಸ್ವಾತಂತ್ರ್ಯಪೂರ್ವದ ಇತಿಹಾಸವೂ ಇದೆ.

ಭಾರತೀಯ ಭಾಷೆಗಳಲ್ಲಿಯೇ ತೀರಾ ಇತ್ತೀಚಿನದಾಗಿರುವ ಹಿಂದಿಯ ನುಂಗುವ ಇತಿಹಾಸ ತುಂಬಾ ಹಳೆಯದು. ಅದೊಂದು ಸುಂದರ, ಸಂಗೀತಮಯ ಭಾಷೆ ಎಂಬುದರ ಬಗ್ಗೆ ಯಾರಿಗೂ ತಕರಾರಿಲ್ಲ. ಆದರೆ ಅದು ಪ್ರತಿಪಾದಿಸುವ ಮೇಲರಿಮೆಯ, ಶ್ರೇಷ್ಠತೆಯ ಮತ್ತು ಅಹಂಕಾರದ ಮನೋಭಾವವನ್ನು ವಿರೋಧಿಸದಿದ್ದರೆ ಮುಂದೆ ಅಪಾಯ ಕಾದಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಏಕೆಂದರೆ, ಭಾಷೆಯೊಂದು ಕೇವಲ ಸಾಂಸ್ಕೃತಿಕ ಜೀವನವನ್ನಷ್ಟೇ ಪ್ರತಿಫಲಿಸಿ, ಅದರ ಮೇಲಷ್ಟೇ ಪ್ರಭಾವ ಬೀರುವುದಿಲ್ಲ. ಅದು ಜೀವನೋಪಾಯ, ಆರ್ಥಿಕತೆ ಹಾಗೂ ರಾಜಕೀಯದ ಮೇಲೂ ಗಾಢ ಪರಿಣಾಮ ಬೀರುತ್ತದೆ ಎಂಬ ಎಚ್ಚರ ನಮಗಿಬೇಕಾಗುತ್ತದೆ.

ಯಾರೇ ಆಗಲಿ, ವ್ಯಾವಹಾರಿಕ ಅಗತ್ಯಕ್ಕೆ ಬೇಕಾದಷ್ಟು ಯಾವುದೇ ಭಾಷೆಯನ್ನು ಕಲಿಯುವುದು ಒಳ್ಳೆಯ ವಿಷಯವೇ. ಆದಷ್ಟು ಹೆಚ್ಚು ಭಾಷೆಗಳನ್ನು ಕಲಿತರೂ ಅನುಕೂಲವೇ. ಇದನ್ನು ಎಲ್ಲಾ ಭಾರತೀಯರು ಅನುಸರಿಸಬೇಕು. ಸಾಮಾನ್ಯವಾಗಿ ದಕ್ಷಿಣ ಭಾರತದ ನಗರ ಪಟ್ಟಣಗಳಲ್ಲಿ ಇಲ್ಲಿನ ಜನರು ಹೊರರಾಜ್ಯಗಳ ಜನರ ಜೊತೆ ಅವರದ್ದೇ ಅರೆಬರೆ ಭಾಷೆಯಲ್ಲಿ ವ್ಯವಹರಿಸಲು ಯತ್ನಿಸುತ್ತಾರೆ. ಆದರೆ, ಹಿಂದಿ ಭಾಷಿಕರು ಇಂತಹಾ ಪ್ರಯತ್ನವನ್ನೇ ಮಾಡುವುದಿಲ್ಲ. ಇದರಿಂದಾಗಿಯೇ ಅವರು ಇಂದು ದಕ್ಷಿಣ ಭಾರತದ ಹಳ್ಳಿಗಳಲ್ಲಿ ಕೂಡಾ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ ಮಾತ್ರವಲ್ಲ; ಉದ್ಯೋಗಗಳನ್ನೂ ಮಾಡುತ್ತಿದ್ದಾರೆ.

ಇತ್ತೀಚೆಗೆ ನಾನು ಚೆನ್ನೈ-ಮಂಗಳೂರು ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣ ಮಾಡಿದಾಗ ಇದು ಅತ್ಯಂತ ಸ್ಪಷ್ಟವಾಯಿತು. ಕಾಲಿಡಲೂ ಜಾಗವಿಲ್ಲದಷ್ಟು ಜನಸಂದಣಿ. ನಾನು ಗಮನಿಸಿದ್ದೇನೆಂದರೆ ಎಲ್ಲೆಲ್ಲೂ ಹಿಂದಿ, ಭೋಜ್‌ಪುರಿ, ಮೈಥಿಲಿ, ಬಂಗಾಳಿ, ಒಡಿಯಾ ಇತ್ಯಾದಿ ಭಾಷೆಗಳೇ ಕೇಳಿಸುತ್ತಿವೆ. ಈ ರೈಲಿನಲ್ಲಿ ತಮಿಳರು, ಮಲಯಾಳಿಗಳು, ಕನ್ನಡಿಗರು, ತುಳುವರು ಮುಂತಾಗಿ ಒಟ್ಟು ಸೇರಿಸಿದರೂ ಅವರ ಸಂಖ್ಯೆ ಹೆಚ್ಚಿದೆ. ಜೊತೆಗೆ  ದಬ್ಬಾಳಿಕೆ, ಜೋರು ಬೇರೆ. ಬಹುತೇಕ ದಕ್ಷಿಣ ಭಾರತದ ಎಲ್ಲಾ ರೈಲುಗಳಲ್ಲಿ ಇದನ್ನು ಕಾಣಬಹುದು. ಆದರೆ, ಉತ್ತರ ಭಾರತದಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ ಏಕೆ? ದಕ್ಷಿಣ ಭಾರತೀಯರು ಉತ್ತರದ ಹಳ್ಳಿಗಳಲ್ಲಿ ವಹಿವಾಟು ಮಾಡುವುದು ಬಿಡಿ, ಸ್ಥಳೀಯರ ಪರಿಚಯ ಇಲ್ಲದೇ ಪ್ರವೇಶಿಸುವುದೂ ಸಾಧ್ಯವಿಲ್ಲ ಎಂಬುದು ನಮಗೆ ತಿಳಿಯುವುದಿಲ್ಲವೆ?

ಇದನ್ನು ಬಡವರ ಹೊಟ್ಟೆಪಾಡು ಎಂದು ಉದಾರತೆ ತೋರಬಹುದು. ಅದೇ ರೀತಿಯಲ್ಲಿ ದೊಡ್ಡ ಖಾಸಗೀ ಉದ್ದಿಮೆ, ವ್ಯವಹಾರಗಳಲ್ಲಿ, ಬ್ಯಾಂಕು, ರೈಲ್ವೇ ಇತ್ಯಾದಿಯಾಗಿ ಕೇಂದ್ರ  ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉತ್ತರ ಭಾರತದವರ ಕಾರುಬಾರೇ ನಡೆಯುತ್ತಿದೆ. ಸ್ಥಳೀಯ ಯುವಕರು ಉದ್ಯೋಗವಂಚಿತರಾಗುತ್ತಿದ್ದಾರೆ. ಇಡೀ ವಿದ್ಯಮಾನದಲ್ಲಿ ಮುಂದೆ ನಡೆಯಬಹುದಾದ ಸಾಮಾಜಿಕ ಮತ್ತು ಜನಾಂಗೀಯ ಸಂಘರ್ಷದ ಬೀಜ ಅಡಗಿದೆ ಎಂದು ರಾಜಕಾರಣಿಗಳಿಗೆ ಬಿಡಿ, ನಮಗೂ ಗೊತ್ತಿಲ್ಲ!

ಹಿಂದಿಯ ಸಾಮ್ರಾಜ್ಯಶಾಹಿ ಮನೋವೃತ್ತಿ ಹಳೆಯದು. ಮೊದಲಿಗೆ ಅದು ತನ್ನ ಸಹಭಾಷೆಗಳನ್ನು ನುಂಗಿ ನೊಣೆಯಿತು. ಪರಿಣಾಮವಾಗಿ, ಭೋಜ್‌ಪುರಿ, ಮೈಥಿಲಿ, ಅವಧಿ ಇತ್ಯಾದಿ ಹಲವಾರು ಭಾಷೆಗಳು ಹಳ್ಳಿ ಜನರ ‘ಅಸಂಸ್ಕೃತ’ ಮನೆಮಾತುಗಳಾಗಿ ಮಾತ್ರ ಉಳಿದವು. ಈಗ ಇವುಗಳನ್ನೆಲ್ಲ ಹಿಂದಿಯ ಲೆಕ್ಕಕ್ಕೆ ಸೇರಿಸಲಾಗುತ್ತಿದೆ. ಇಡೀ ಭಾರತದ ಮೇಲೆ ಹಿಂದಿ ಹೇರುವ ಪ್ರಯತ್ನದ ಇತಿಹಾಸವನ್ನು ಸ್ವಲ್ಪ ನೋಡೋಣ. ಭಾಷವಾರು ರಾಜ್ಯಗಳ ರಚನೆಯ ವೇಳೆ, ಪಂಜಾಬಿ ಭಾಷೆಯು ಹಿಂದಿಗೆ ಬಹಳ ಹತ್ತಿರವಾಗಿದೆ ಎಂದು ನೆಪಹೇಳಿ ಹಿಂದಿ ಲಾಬಿಯು ಪಂಜಾಬ್ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಪಂಜಾಬಿಗಳ ಹೋರಾಟದಿಂದ ರಾಜ್ಯ ಸ್ಥಾಪನೆಯೇನೋ ಆಯಿತು. ಆದರೆ, ಜನಗಣತಿಯ ವೇಳೆ ಹಿಂದೂಗಳು ತಮ್ಮ ಭಾಷೆಯನ್ನು ಹಿಂದಿ ಎಂದು ನಮೂದಿಸಬೇಕೆಂದು ಹಿಂದೂ ಕೋಮುವಾದಿಗಳು ಪ್ರಚಾರ ಮಾಡಿದ ಪರಿಣಾಮವಾಗಿ ಹರ್ಯಾಣವು ಪಂಜಾಬಿನಿಂದ ಪ್ರತ್ಯೇಕವಾಯಿತು. ಚಂಡೀಗಡವು ಎರಡೂ ರಾಜ್ಯಗಳ ರಾಜಧಾನಿಯಾಗಬೇಕಾಯಿತು. ಭಾಷೆಯ ಕೋಮುವಾದೀಕರಣದ ಮೊದಲ ಪ್ರಯತ್ನಗಳಲ್ಲಿ ಇದೂ ಒಂದು.

1946ರ ಬಳಿಕ ಇನ್ನೇನು ಬ್ರಿಟಿಷರು ಭಾರತ ಬಿಟ್ಟು ತೊಲಗುವುದು ಖಚಿತ ಎಂಬ ಪರಿಸ್ಥಿತಿ ಉಂಟಾದಾಗಲೇ ರಾಷ್ಟ್ರಭಾಷೆ ಯಾವುದು ಎಂಬ ಚರ್ಚೆ ಬಹಳ ಜೋರಿನಲ್ಲಿತ್ತು. ಒಮ್ಮೆ ಬ್ರಿಟಿಷರು ಹೋಗಲಿ; ಇಂಗ್ಲಿಷನ್ನು ಕಿತ್ತೆಸೆದು ಹಿಂದಿಯನ್ನು ಸ್ಥಾಪಿಸುತ್ತೇವೆ ಎಂದು ಉತ್ತರ ಭಾರತದ ಹಿಂದಿ ರಾಜಕೀಯ ನಾಯಕರು ಮತ್ತು ನಾಗಪುರದ ಪುರೋಹಿತರು ಯೋಚಿಸಿದ್ದರು. ಆಗ ಇಂಗ್ಲೀಷ್- ಮೇಲುಜಾತಿ ಮೇಲು ವರ್ಗಗಳಲ್ಲಿ ಸಾಕಷ್ಟು ಪಸರಿಸಿತ್ತು. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಹಿಂದಿಯನ್ನು ರಾಷ್ಟ್ರಭಾಷೆ ಮಾಡುವುದರ ವಿರುದ್ಧ ದಕ್ಷಿಣ ಮತ್ತು ಪೂರ್ವದ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

ಇಲ್ಲಿ ಒಂದು ವಿಪರ್ಯಾಸವನ್ನು ಗಮನಿಸಬೇಕು. ಅಧಿಕಾರ ಮತ್ತು ರಾಜಕೀಯದಲ್ಲಿದ್ದ ಬ್ರಾಹ್ಮಣರಲ್ಲಿ ಭಾಷೆಯ ವಿಷಯದಲ್ಲಿ ವಿಭಜನೆ ಇದ್ದದ್ದು. ಉತ್ತರ ಭಾರತದ ಬ್ರಾಹ್ಮಣರು ಹಿಂದಿಯ ಪ್ರಚಾರಕರಾಗಿದ್ದರೆ, ದಕ್ಷಿಣ ಭಾರತೀಯ ಬ್ರಾಹ್ಮಣರು ಹಿಂದಿ ವಿರೋಧಿ- ಇಂಗ್ಲಿಷ್ ಪ್ರಿಯರಾಗಿದ್ದರು. ಕಾರಣ ಸರಳ. ಬಹುತೇಕ ಮೇಲ್ಜಾತಿ ಹಿಂದಿ ಭಾಷಿಕರಿಗೆ ಇಂಗ್ಲಿಷ್ ಬಿಡಿ, ಬೇರೆ ಯಾವುದೇ ಭಾಷೆಯೂ ಕಬ್ಬಿಣದ ಕಡಲೆ. ದಕ್ಷಿಣ ಭಾರತದ ಮೇಲ್ಜಾತಿಯವರು, ಮುಖ್ಯವಾಗಿ ತಮಿಳು ಮೂಲದ ಅಯ್ಯರ್, ಅಯ್ಯಂಗಾರಿ ಬ್ರಾಹ್ಮಣರು ಚೆನ್ನಾಗಿ ಇಂಗ್ಲಿಷ್ ಕಲಿತು ಬ್ರಿಟಿಷರ ಚಾಕರಿ ಮಾಡುತ್ತಾ, ಬ್ರಿಟಿಷರು ಹೋದಕೂಡಲೇ ಅಧಿಕಾರಶಾಹಿಯ ಪಾರುಪತ್ಯ ವಹಿಸಲು ತುದಿಗಾಲಲ್ಲಿ ನಿಂತಿದ್ದರು. ಅವರಿಗೆ ಇಂಗ್ಲಿಷ್ ಬೇಕಿತ್ತು. ಹಿಂದಿ ಬೇಡವೇ ಇತ್ತು. ಇಂದೂ ಕೂಡಾ ಉನ್ನತ ಅಧಿಕಾರಿ ವರ್ಗದಲ್ಲಿ, ಕೇಂದ್ರ ಮಂತ್ರಿ ಮಂಡಲದಲ್ಲಿ ‘ಮೇಲ್ಜಾತಿ’, ಅದರಲ್ಲೂ ಬ್ರಾಹ್ಮಣರ ಪ್ರಾಬಲ್ಯ ಇರುವುದು ಕೇವಲ ಕಾಕತಾಳೀಯವಲ್ಲ.

ಆದರೆ, ದಕ್ಷಿಣ ಮತ್ತು ಪೂರ್ವದ ಜನಸಾಮಾನ್ಯರಿಗೆ ಇಂಗ್ಲಿಷ್‌ನಷ್ಟೇ ಹಿಂದಿಯೂ ಕಬ್ಬಿಣದ ಕಡಲೆಯಾಗಿದ್ದು, ಅಷ್ಟೇ ವಿದೇಶಿಯಾಗಿತ್ತು. ಗಾಂಧೀಜಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಪಾರುಪತ್ಯದಲ್ಲಿ ಆಗಲೇ ಹಿಂದಿ ಪ್ರಚಾರ ಆರಂಭವಾಗಿತ್ತು. ಹಿಂದಿ ಪ್ರಚಾರ ಸಭಾಗಳು ಸಕ್ರಿಯವಾಗಿದ್ದು, ಈಗ ಹಿಂದಿ-ಹಿಂದೂ ವಿಷಯಗಳನ್ನು ಅತಾರ್ಕಿಕವಾಗಿ ತಳಕು ಹಾಕಿದಂತೆ, ಅಂದು ಹಿಂದಿ ಮತ್ತು ದೇಶಪ್ರೇಮವನ್ನು ತಳಕು ಹಾಕಲಾಗಿತ್ತು. ಇದು ಮತ್ತೆ ತಲೆ ಎತ್ತುತ್ತಿರುವುದನ್ನು ನೋಡುತ್ತೇವೆ. ಇಷ್ಟು ಮಾತ್ರವಲ್ಲದೆ, ಉರ್ದುವನ್ನು ಮುಸ್ಲಿಮರೊಂದಿಗೆ ತಳಕುಹಾಕುತ್ತಿರುವುದು ಹೆಚ್ಚಾಗುತ್ತಿದೆ. ಮುಖ್ಯವಾಗಿ ದಖ್ಖಣೀ ಉರ್ದುವಿನ ಮೇಲೆ ಹಿಂದಿಯಷ್ಟೇ ಕನ್ನಡ ಸಹಿತ ದಕ್ಷಿಣದ ಭಾಷೆಗಳ ಪ್ರಭಾವ ಇದೆ ಎಂಬುದನ್ನು ಕಡೆಗಣಿಸಲಾಗುತ್ತಿದೆ. ಉರ್ದುವಿನಲ್ಲಿ ಹಲವಾರು ಖ್ಯಾತನಾಮ ‘ಹಿಂದೂ’ ಕವಿಗಳೂ, ಹಿಂದಿಯಲ್ಲಿ ಖ್ಯಾತನಾಮ ‘ಮುಸ್ಲಿಂ’ ಕವಿಗಳೂ ಇದ್ದಾರೆ ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿದೆ.

ಈ ದೇಶಪ್ರೇಮದ ಭ್ರಮೆಯ ಕಾರಣದಿಂದಲೇ ಸ್ವಾತಂತ್ರ್ಯೋತ್ತರದಲ್ಲಿ ತಾನು ಹಿಂದಿ ವಿಶಾರದ, ಕೋವಿದ, ಪಂಡಿತ ಇತ್ಯಾದಿ ಸರ್ಟಿಫಿಕೇಟನ್ನು ಕುತ್ತಿಗೆಗೆ ನೇತುಹಾಕುವುದು ತಮಿಳರನ್ನು ಹೊರತುಪಡಿಸಿದ ದಕ್ಷಿಣ ಭಾರತೀಯ ಓಬಿಸಿಯ ಮಧ್ಯಮ ವರ್ಗದವರಿಗೆ ಹೆಮ್ಮೆಯ ವಿಷಯವಾಗಿತ್ತು. ಉತ್ತರದ ನಗರಗಳಿಗೆ ಹೋದ ದಕ್ಷಿಣ ಭಾರತೀಯರು ಅಲ್ಲಿನ ಭಾಷೆಗಳನ್ನು ಕಲಿತರು. ಆದರೆ, ಹಿಂದಿವಾಲಗಳು ಸಿನಿಮಾ ಸೇರಿದಂತೆ ಎಲ್ಲಾ ಕಡೆ ದಕ್ಷಿಣ ಭಾರತೀಯರ ಮಾತಿನ ಶೈಲಿಯನ್ನು ಅಣಕ, ಗೇಲಿ ಮಾಡಿ ‘ಅಂಡು ಗುಂಡು ತಂಡಾ ಪಾನಿ’ ಭಾಷೆಯವರೆಂದು ಹೀಯಾಳಿಸಿದರೇ ಹೊರತು, ತಮ್ಮ ಭಾಷೆ ಬಿಟ್ಟು ಬೇರೆ ಭಾಷೆ ಕಲಿಯಲಿಲ್ಲ.

ಸ್ವಾತಂತ್ರ್ಯಾನಂತರ ಹಿಂದಿಯನ್ನು ರಾಷ್ಟ್ರಭಾಷೆ ಅಥವಾ ಆಡಳಿತ ಭಾಷೆ ಮಾಡುವುದಕ್ಕೆ 1946 ಮತ್ತು 1949ರ ನಡುವೆ ಎಂತಹಾ ವಿರೋಧ ವ್ಯಕ್ತವಾಯಿತು ಎಂದರೆ, ದೇಶವು ಹುಟ್ಟುವ ಮೊದಲೇ ವಿಘಟನೆಯಾಗುವ ಭಯ ಉಂಟಾಗಿತ್ತು. ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿದ್ದವು. ಆದರೆ ಜವಾಹರಲಾಲ್ ನೆಹರೂ, ಮೌಲಾನಾ ಅಬ್ದುಲ್ ಕಲಾಂ ಅಜಾದ್, ವಲ್ಲಭಭಾಯ್ ಪಟೇಲ್ ಮುಂತಾದ ಮುತ್ಸದ್ಧಿಗಳು ಈ ಅಪಾಯವನ್ನು ಮನಗಂಡಿದ್ದರು. ಈ ಅಪಾಯ ಮನಗಂಡವರಲ್ಲಿ ಸಂವಿಧಾನದ ರೂವಾರಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಒಬ್ಬರು. ಅದಕ್ಕಾಗಿಯೇ ಹಿಂದಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಿದರೂ, ಇಂಗ್ಲಿಷ್ ಕೂಡಾ 1965ರ ತನಕ ಆಡಳಿತ ಭಾಷೆಯಾಗಿ ಮುಂದುವರಿಯಲು ಸಾಂವಿಧಾನಿಕ ಅವಕಾಶ ನೀಡಲಾಗಿತ್ತು. ಪರಿಣಾಮವಾಗಿಯೇ ಭಾರತವು ಗಂಭೀರವಾದ ವಿಘಟನೆಯ ಅಪಾಯದಿಂದ ಪಾರಾಗಿತ್ತು.

ಇದಕ್ಕೆ ಬೇರೆ ಕಾರಣಗಳೂ ಇದ್ದವು. ಬ್ರಿಟಿಷರು ಆಡಳಿತ ಭಾಷೆಯಾಗಿ ಇಂಗ್ಲಿಷನ್ನು ಪ್ರತಿಷ್ಟಾಪಿಸಿದರು. ಜೊತೆಗೆ ತಮ್ಮ ಆಡಳಿತಕ್ಕೆ ಬೇಕಾದಷ್ಟು ಮಾತ್ರ ಸ್ಥಳೀಯ ಭಾಷೆಗಳನ್ನೂ ಕಲಿತರು. ಇದನ್ನೇ ಮಾಡುತ್ತಿರುವ ದಕ್ಷಿಣ ಭಾರತೀಯರು ವ್ಯವಹಾರಕ್ಕೆ ಬೇಕಾದಷ್ಟು ಬೇರೆ ಭಾಷೆಗಳನ್ನು ಕಲಿಯುತ್ತಿರುವಾಗ ಹಿಂದಿಯವರಿಗೆ ಇದು ಯಾಕೆ ಸಾಧ್ಯವಾಗಿಲ್ಲ?! ಕೆಲವು ಬ್ರಿಟಿಷರು, ಬಾಸೆಲ್ ಮಿಷನ್‌ನಂತಹ ಐರೋಪ್ಯ ಕ್ರೈಸ್ತರು ಮಾಡಿದಷ್ಟು ಸ್ಥಳೀಯ ಭಾಷಾಸೇವೆಯನ್ನು ಇಂದು ಮೃತ ಸಂಸ್ಕೃತದ ಅಧ್ವರ್ಯು ಹಿಂದೀ ಬೆಂಬಲಿಗರು ಯಾಕೆ ಮಾಡಲಿಲ್ಲ!?

1963ರಲ್ಲಿ ಅಧಿಕೃತ ಭಾಷಾ ಕಾಯಿದೆ ಜಾರಿಗೆ ಬಂತು. ಕಾರಣ ಏನಾಗಿತ್ತು ಎಂದರೆ, 1965ರಲ್ಲಿ ಇಂಗ್ಲಿಷ್ ಭಾಷಗೆ ಕೊಡಮಾಡಿದ್ದ ಸಾಂವಿಧಾನಿಕ ಮಾನ್ಯತೆ ರದ್ದಾಗಲಿತ್ತು. ಈ ಕಾಯಿದೆಯು ಇಂಗ್ಲಿಷ್ ಭಾಷೆಗೆ ಅನಿಯಮಿತ ಕಾಲದ ವರೆಗೆ ಅಂದರೆ, ಸಂಸತ್ತು ವ್ಯತಿರಿಕ್ತ ನಿರ್ಧಾರ ಮಾಡುವ ವರೆಗೆ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಿತು. ಇದರ ಹಿಂದಿದ್ದದ್ದು ನೆಹರೂ. ಇಂದು ಅತ್ಯಂತ ದ್ವೇಷಿಸಲಾಗುತ್ತಿರುವ ನೆಹರೂ ಅವರ ದೂರದೃಷ್ಟಿಯನ್ನು ಇಲ್ಲಿ ದಾಖಲಿಸಬೇಕು. ಅವರ ಮಾತೃ ಭಾಷೆ ಕಾಶ್ಮೀರಿ ಆಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು. ಈ ಕಾಯಿದೆಯ ಪ್ರಕಾರ ಹಿಂದಿಯನ್ನು ಸಂಸತ್ತು ಮತ್ತು ಕೇಂದ್ರ ಸರಕಾರದ ವ್ಯವಹಾರಗಳಲ್ಲಿ ಬಳಸುವ ಅವಕಾಶವನ್ನೂ ನೀಡಲಾಯಿತು. ಹಿಂದಿಯನ್ನು ಬಳಸಿದಾಗ ಜೊತೆಗೆ ಅದರ ಜೊತೆಗೆ ಇಂಗ್ಲಿಷ್ ಅನುವಾದವನ್ನೂ ಒದಗಿಸಬೇಕೆಂಬ ಇಂಗಿತವನ್ನು ಈ ಕಾಯಿದೆಯಲ್ಲಿ ವ್ಯಕ್ತಪಡಿಸಲಾಗಿದೆ. ಹಿಂದಿ ರಾಷ್ಟ್ರಭಾಷೆ ಎಂಬ ಬೊಂಬಡಾ ಬಜಾಯಿಸಲಾಗುತ್ತಿದ್ದರೂ, ಸಾಂವಿಧಾನಿಕವಾಗಿ ಯಾವ ಭಾಷೆಗೂ ‘ರಾಷ್ಟ್ರಭಾಷೆ’ಯ ಸ್ಥಾನಮಾನ ನೀಡಲಾಗಿಲ್ಲ. ಆದರೂ, ಹಿಂದಿ ರಾಷ್ಟ್ರಭಾಷೆ ಎಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ.

1967ರಲ್ಲಿ ಒಂದು ತಿದ್ದುಪಡಿ ಬಂತು. ಇದರ ಪರಿಣಾಮವಾಗಿ ಮೊದಲಿಗೆ, ಹಿಂದಿ ಮತ್ತು ಇಂಗ್ಲಿಷ್ ಅಧಿಕೃತ ಭಾಷೆಯಾಗಿರುವಂತೆ ಮೊದಲಿಗೆ ಹದಿನಾಲ್ಕು ಭಾಷೆಗಳಿಗೆ ಶೆಡ್ಯೂಲ್ಡ್  ಭಾಷೆಗಳ ಸ್ಥಾನಮಾನ ನೀಡಲಾಯಿತು. ಈಗ ಶೆಡ್ಯೂಲ್ಡ್ ಭಾಷೆಗಳ ಸಂಖ್ಯೆ 22 ಇವೆ. ಅಲ್ಲದೇ ರಾಜ್ಯಗಳು ಕಾಯಿದೆಯ ಮೂಲಕ ತಮ್ಮದೇ ಆದ ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆಯನ್ನು ಹೊಂದಬಹುದು ಮತ್ತು ಕೆಲವು ಭಾಷೆಗಳನ್ನು ಹೆಚ್ಚುವರಿ ಅಧಿಕೃತ ಭಾಷೆಯೆಂದು ಘೋಷಿಸಬಹುದು.

ಕೆಲವು ರಾಜ್ಯಗಳಲ್ಲಿ ಹಲವಾರು ಅಧಿಕೃತ ಭಾಷೆಗಳು ಮತ್ತು ಹೆಚ್ಚುವರಿ ಅಧಿಕೃತ ಭಾಷೆಗಳು ಇವೆ ಎಂದು ಹಲವರಿಗೆ ಗೊತ್ತಿರಲಾರದು. ಉದಾಹರಣೆಗೆ  ಜಾರ್ಖಂಡದಲ್ಲಿ ಹಿಂದಿ ಅಧಿಕೃತ ಭಾಷೆಯಾಗಿದ್ದರೂ 14 ಹೆಚ್ಚುವರಿ ಅಧಿಕೃತ ಭಾಷೆಗಳಿವೆ. ಪಶ್ಚಿಮ ಬಂಗಾಳದಲ್ಲಿ ಬಂಗಾಳಿ, ಇಂಗ್ಲಿಷ್ ಅಧಿಕೃತ ಭಾಷೆಯಾಗಿದ್ದರೂ, 11 ಹೆಚ್ಚುವರಿ ಅಧಿಕೃತ ಭಾಷೆಗಳಿವೆ. ನೂರಾರು ಭಾಷೆಗಳು, ಅದಕ್ಕಿಂತಲೂ ಹೆಚ್ಚು ಉಪಭಾಷೆಗಳಿರುವ ಭಾರತದಲ್ಲಿ ಭಾಷಾವೈವಿಧ್ಯ ಉಳಿಸಿಕೊಳ್ಳಲು ಇದು ಅಗತ್ಯ. ಆದರೆ, ಹಿಂದಿ ಹೇರಿಕೆಯಿಂದ ಈ ಎಲ್ಲಾ ಭಾಷೆಗಳು ಅಪಾಯ ಎದುರಿಸುತ್ತಿವೆ.

ಈ ಎಲ್ಲಾ ಹಿನ್ನೆಲೆಗಳ ಆಧಾರದಲ್ಲಿ ಹಿಂದಿ ಹೇರಿಕೆ ವಿರೋಧಿಸುವವರಿಗೆ ಬೆಣ್ಣೆಹಚ್ಚಲು ತ್ರಿಭಾಷಾ ಸೂತ್ರವೆಂಬ ಮೋಸವನ್ನು ಹೇರಲಾಯಿತು. ಇಂಗ್ಲಿಷ್, ಹಿಂದಿ ಜೊತೆಯಲ್ಲಿ ಒಂದು ಆಧುನಿಕ ಭಾರತೀಯ ಭಾಷೆ ಕಲಿಯಬೇಕೆಂಬುದೇ ಈ ಸೂತ್ರ. ಇದನ್ನು ಖಡಾಖಂಡಿತವಾಗಿ ವಿರೋಧಿಸಿದ ತಮಿಳುನಾಡು ಹೊರತುಪಡಿಸಿ ಉಳಿದ ದಕ್ಷಿಣ ರಾಜ್ಯಗಳು ಬಲಿಬಿದ್ದವು. ತುಳುಭಾಷೆಯಲ್ಲಿ ಒಂದು ಮಾತಿದೆ. ‘ಎಕ್ಕಲೆಗ್ ಮೀಸೆ ಪೊಗ್ಗಿಲೆಕ್ಕ’- ಜಿರಳೆಗೆ ಮೀಸೆಹೊಕ್ಕಂತೆ- ಅದು ನಂತರ ಇಡೀ ದೇಹವನ್ನು ಹೊಕ್ಕಿಸುತ್ತದೆ. ಶಾಲೆ ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಆರಂಭವಾದ ಹಿಂದಿಯನ್ನು ಈಗ ಹಲವರು ಕಾಲೇಜು ಮಟ್ಟದಲ್ಲಿ ಸುಲಭದಲ್ಲಿ ಅಂಕ ಗಳಿಸುವ ಆಸೆಯಲ್ಲಿ ಕನ್ನಡಕ್ಕೆ ಬದಲಾಗಿ ಆಯ್ಕೆ ಮಾಡುತ್ತಿದ್ದಾರೆ. ಸಂಸ್ಕೃತದ ವಿಷಯದಲ್ಲೂ ಇದು ನಿಜ.

ಹಿಂದಿ ಮತ್ತು ತ್ರಿಭಾಷಾ ಸೂತ್ರಕ್ಕೆ ತಮಿಳುನಾಡಿನ ವಿರೋಧವನ್ನು ಒಂದು ರೀತಿಯ ದೇಶದ್ರೋಹ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ವಾಸ್ತವವಾಗಿ ಬಹುತೇಕ ಹಿಂದಿ ರಾಜ್ಯಗಳೇ ಅದನ್ನು ಇಷ್ಟು ವರ್ಷಗಳ ನಂತರವೂ ಜಾರಿಮಾಡಿಲ್ಲ. ಮೂರನೇ ಭಾಷೆಯನ್ನು ತೆಗೆದುಕೊಳ್ಳಬೇಕಾದರೂ, ಪ್ರಾಚೀನವಾದ ಸಂಸ್ಕೃತವನ್ನು ಆಧುನಿಕ ಭಾಷೆಯ ಲೇಬಲ್‌ನ ಹೆಸರಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಕೋಮುವಾದಿ ವಿಚಾರಧಾರೆಗಳಿಗೆ ಅನುಕೂಲವೂ ಆಗಿದೆ. ಉದಾಹರಣೆಗೆ ಉತ್ತರಖಂಡದಲ್ಲಿ ಹಿಂದಿ ಮಾತ್ರ ಅಧಿಕೃತ
ಭಾಷೆಯಾಗಿದ್ದು, ಸಂಸ್ಕೃತ ಹೆಚ್ಚುವರಿ ಅಧಿಕೃತ ಭಾಷೆಯಾಗಿದೆ. ತ್ರಿಭಾಷಾ ಸೂತ್ರದ ಪ್ರಕಾರ ಹಿಂದಿ ರಾಜ್ಯಗಳಲ್ಲಿ ಬೇರೊಂದು ಭಾಷೆ ಕಲಿಸುತ್ತಿದ್ದರೆ, ದೇಶದ ಭಾವೈಕ್ಯತೆಗೆ ಒಳಿತಾಗುತ್ತಿತ್ತೋ ಏನೋ. ಆದರೆ, ಹಾಗಾಗಿಲ್ಲ. ಈ ಎಲ್ಲಾ ದೃಷ್ಟಿಕೋನಗಳಿಂದ ಹಿಂದಿ ಹೇರಿಕೆಯ ಬಹುವಿಧ ಅಪಾಯಗಳನ್ನು ನಾವು ಮನಗಾಣಬೇಕಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹಿಂದಿ ನಿಧಾನವಿಷದಂತೆ‌ ದಕ್ಷಿಣದ ಭಾಷೆಗಳ ಕತ್ತು ಹಿಸುಕುತ್ತಿದೆ. ಆರಂಭದಲ್ಲಿ ನಿಧಾನವಿಷ‌ ಉದ್ದೀಪಿಸುತ್ತದೆ. ಆಮೇಲೆ‌ ಮೆದುಳಿಗೆ ಲಕ್ವಾ ಹೊಡೆಯುತ್ತದೆ. ಹಿಂದಿಯ ಕತೆಯೂ‌ ಇದೇ ಆಗುವ ರೋಗಲಕ್ಷಣಗಳು ಕಾಣುತ್ತಿವೆ. ‌ ಕನ್ನಡಿಗರಿಗೆ‌ ಎಲ್ಲದರಲ್ಲೂ ಆಲಸ್ಯ. ಟೇಬಲ್ ಮೇಲೆ ಮಕಾಡೆ ಮಲಗಿಸಿ ಹಿಂಬದಿಗೆ ಸೂಜಿ ಚುಚ್ಚುವ ತನಕ ರೋಗದ ಅರಿವಾಗುವುದಿಲ್ಲ. ಇದು ಕರ್ಮ.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...