ಭಾರತದ ಇತಿಹಾಸದಲ್ಲಿ ಡಿಸೆಂಬರ್ 6 ಎರಡು ಕಾರಣಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ಪಡೆದುಕೊಂಡಿದೆ. ಒಂದು ಅಂಬೇಡ್ಕರ್ ಅವರ ಪರಿನಿಬ್ಭಾಣ ದಿನ, ಎರಡು ಬಾಬರಿ ಮಸೀದಿ ಧ್ವಂಸ. 1992ರ ಡಿ.6 ರಂದು ಬಾಬರಿ ಮಸೀದಿಯನ್ನು ಕೆಡವಲಾಯಿತು. ಮಹಾತ್ಮಾ ಗಾಂಧಿಯವರ ಹತ್ಯೆಯ ನಂತರ ಸ್ವತಂತ್ರ ಭಾರತ ಎದುರಿಸಿದ ದೊಡ್ಡ ದುರಂತ ಇದು ಎಂದು ಮಾಜಿ ರಾಷ್ಟ್ರಪತಿ ಡಾ.ಕೆ.ಆರ್. ನಾರಾಯಣನ್ ಈ ಘಟನೆಯನ್ನು ಬಣ್ಣಿಸಿದ್ದರು.
ಬಾಬರಿ ಮಸೀದಿ ಧ್ವಂಸ ಘಟನೆಯು ಸಾಂವಿಧಾನಿಕ ಮೌಲ್ಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಲ್ಲಿ ಅಗಾಧ ನಂಬಿಕೆಯನ್ನು ಹೊಂದಿದ್ದ ಭಾರತೀಯ ಮುಸ್ಲಿಮರ ಮನಸ್ಸಿನ ಮೇಲೆ ಆಳವಾದ ಗಾಯವನ್ನು ಉಂಟುಮಾಡಿದೆ. ನ.25 1949ರಂದು ಸಂವಿಧಾನ ಸಭೆಯಲ್ಲಿ ಅಂಬೇಡ್ಕರ್ ಅವರು ಮಾಡಿದ ಭಾಷಣದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯ ಎಲ್ಲರಿಗೂ ಸಿಗುವಂತಾಗಬೇಕು ಎಂದು ಹೇಳಿದ್ದರು. ಆದರೆ ಬಾಬರಿ ಮಸೀದಿ ಭೂ ವಿವಾದದ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಮುಸ್ಲಿಂ ಸಮುದಾಯ ಇಂದು ಕೂಡ ಹೇಳುತ್ತಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್.ಎ ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ, ಅಯೋಧ್ಯೆ-ಬಾಬರಿ ಮಸೀದಿ ಜಮೀನಿನ ಒಡೆತನದ ಬಗ್ಗೆ ನ. 9, 2019ರಂದು ತೀರ್ಪು ನೀಡಿತ್ತು. ವಿವಾದಿತ 2.77 ಎಕರೆ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದ ಸುಪ್ರೀಂಕೋರ್ಟ್, ರಾಮಮಂದಿರ ಜಮೀನನ್ನು ಸಂಪೂರ್ಣವಾಗಿ ಟ್ರಸ್ಟ್ ವಶಕ್ಕೆ ನೀಡಬೇಕು. ಇದರ ಹೊಣೆ ಸರ್ಕಾರದ್ದು ಎಂದು ಸೂಚಿಸಿತ್ತು. ಇದೇ ವೇಳೆ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್ ಬೋರ್ಡ್‌ಗೆ 5 ಎಕರೆ ಪರ್ಯಾಯ ಭೂಮಿ ನೀಡಲು ಸೂಚಿಸಿತ್ತು. ಇದಲ್ಲದೆ 2010ರಲ್ಲಿ ಇದೇ ವಿವಾದದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯವು ರದ್ದುಪಡಿಸಿತ್ತು. ರಾಮ್ ಲಲ್ಲಾ, ನಿರ್ಮೋಹಿ ಅಖಾಡಾ ಮತ್ತು ಸುನ್ನಿ ವಕ್ಫ್ ಬೋರ್ಡ್‌ಗೆ ವಿವಾದಿತ ಜಾಗವನ್ನು ಅಲಹಾಬಾದ್ ಹೈಕೋರ್ಟ್ ಸಮನಾಗಿ ಹಂಚಿಕೆ ಮಾಡಿರುವುದನ್ನು ರದ್ದುಪಡಿಸಿತ್ತು. ಆ.5, 2020ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭಾರತದ ಪ್ರಧಾನ ಮಂತ್ರಿಗಳು ಶಂಕುಸ್ಥಾಪನೆ ಮಾಡಿದ್ದರು.
‘ಬಾರ್ನ್ ಎ ಮುಸ್ಲಿಂ’ ಕೃತಿಯ ಲೇಖಕರಾದ ಗಜಾಲಾ ವಹಾಬ್ ಅವರು ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿಷಯವು ಎಂದಿಗೂ ಭೂ ವಿವಾದವಾಗಿರಲಿಲ್ಲ ಮತ್ತು ಇದು ನಿಜವಾಗಿಯೂ ಭೂ ವಿವಾದವಾಗಿದ್ದರೆ, ಧಾವೆ ಹೂಡಿದ ಮುಸ್ಲಿಮರು ಮೊದಲೇ ಪರ್ಯಾಯ ಭೂಮಿ ಅಥವಾ ಹಣವನ್ನು ಸ್ವೀಕರಿಸುತ್ತಿದ್ದರು ಎಂದು ಲೇಖನವೊಂದರಲ್ಲಿ ಹೇಳಿದ್ದಾರೆ. ನ್ಯಾಯಕ್ಕೆ ಬದಲಾಗಿ ಭೂಮಿಯನ್ನು ಸ್ವೀಕರಿಸುವ ಮೂಲಕ, ಮುಸ್ಲಿಮರು ನ್ಯಾಯದ ಅಗತ್ಯವಿಲ್ಲದ ಸಮುದಾಯವಾಗಿ ತಮ್ಮ ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ತೀರ್ಪಿನ ಬಗ್ಗೆ ವಹಾಬ್ ಹೇಳಿದರು.
ಡಿಸೆಂಬರ್ 6, 1992ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಸಾವಿರಾರು ಜನರ ಗುಂಪು ಮುಖ್ಯವಾಗಿ ಕರಸೇವಕರು ನೆಲಸಮಗೊಳಿಸಿದ್ದರು. 2,000ಕ್ಕೂ ಹೆಚ್ಚು ಜನರು ಆ ಬಳಿಕದ ಕೋಮುಗಲಭೆಗಳಲ್ಲಿ ಕೊಲ್ಲಲ್ಪಟ್ಟರು. 1947ರಲ್ಲಿ ಸ್ವಾತಂತ್ರ್ಯದ ನಂತರ ಭಾರತವು ಕಂಡ ಅತ್ಯಂತ ಭೀಕರವಾದ ಗಲಭೆಗಳಲ್ಲಿ ಒಂದಾಗಿದೆ. ಈಗ 30 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದಶಕದ ಹಿಂದಿನ ಚುನಾವಣಾ ಭರವಸೆಯನ್ನು ಈಡೇರಿಸುವ ಸಮೀಪದಲ್ಲಿದ್ದಾರೆ. 2024ರ ಜ.22ರಂದು ರಾಮ ಮಂದಿರದ ಉದ್ಘಾಟನೆ ನಡೆಯಲಿದ್ದು, ಬಳಿಕ ಮಂದಿರವು ಭಕ್ತರಿಗೆ ತೆರೆದಿರುತ್ತದೆ. ವಿಶೇಷ ಎಂದರೆ ಈ ಬೆಳವಣಿಗೆಯು 2024ರ ಲೋಕಸಭಾ ಸಮೀಪಿಸುತ್ತಿದ್ದಂತೆಯೇ ನಡೆಯಲಿದೆ.
31 ವರ್ಷಗಳ ಹಿಂದೆ ಡಿ. 6ರಂದು ಭಾನುವಾರ ಸುಮಾರು 11 ಗಂಟೆಗೆ ಕರಸೇವಕರ ಒಂದು ದೊಡ್ಡ ಗುಂಪು ಮಸೀದಿಯನ್ನು ಸುತ್ತುವರೆದಿತ್ತು ಮತ್ತು ಮಂದಿರ ಯೇಹಿ ಬನೇಗಾ (ನಾವು ಇಲ್ಲಿ ದೇವಾಲಯವನ್ನು ನಿರ್ಮಿಸುತ್ತೇವೆ) ಎಂಬ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಮಧ್ಯಾಹ್ನದ ನಂತರ ವಿಎಚ್ ಪಿ, ಶಿವ ಸೇನೆ, ಬಿಜೆಪಿಯ ಸದಸ್ಯರಿದ್ದ ಕರಸೇವಕರು ಮಸೀದಿಯ 3 ಗುಮ್ಮಟಗಳು ಒಂದರ ನಂತರ ಒಂದರಂತೆ ಕೆಡವಿದ್ದಾರೆ.
ಬಾಬರಿ ಮಸೀದಿ ಧ್ವಂಸ ಅಪರಾಧ ಆದರೆ ಸುದೀರ್ಘ ವಿಚಾರಣೆಯ ನಂತರವೂ ವಿಚಾರಣಾ ನ್ಯಾಯಾಲಯದಿಂದ ಒಬ್ಬ ಆರೋಪಿಗೂ ಶಿಕ್ಷೆಯಾಗಲಿಲ್ಲ. ಉತ್ತರಪ್ರದೇಶ ಪೊಲೀಸರು ಬಾಬರಿ ಮಸೀದಿ ಧ್ವಂಸ, ಗಲಭೆ, ಕೋಮು ಸೌಹಾರ್ದತೆಗೆ ಭಂಗ ತರುವ ಭಾಷಣಗಳು ಮತ್ತು ಇತರ ಪತ್ರಕರ್ತರ ಮೇಲಿನ ಹಲ್ಲೆಗಳಿಗೆ ಸಂಬಂಧಿಸಿದಂತೆ ಒಟ್ಟು 49 ಪ್ರಕರಣಗಳನ್ನು ದಾಖಲಿಸಿದ್ದರು. ದಾಖಲೆಗಳ ಪ್ರಕಾರ ಅಂದಿನ ರಾಮಜನ್ಮಭೂಮಿ ಪೊಲೀಸ್ ಠಾಣೆಯ ಉಸ್ತುವಾರಿ ಪಿಎನ್ ಶುಕ್ಲಾ ಅವರು ಅಪರಿಚಿತ ಕರಸೇವಕರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಶೋಕ್ ಸಿಂಘಾಲ್, ಗಿರಿರಾಜ್ ಕಿಶೋರ್, ವಿಷ್ಣು ಹರಿ ದಾಲ್ಮಿಯಾ, ಸಾಧ್ವಿ ಋತಂಭರ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ವಿನಯ್ ಕಟಿಯಾರ್ ಮತ್ತು ಉಮಾಭಾರತಿ ಸೇರಿ ಪ್ರಕರಣದಲ್ಲಿ ಹಲವರ ವಿರುದ್ಧ ಕೇಸ್ ದಾಖಲಾಗಿತ್ತು.
ರಾಮಮಂದಿರ ಆಂದೋಲನ ಮತ್ತು ಬಾಬರಿ ಮಸೀದಿ ಧ್ವಂಸವು ಹಿಂದೂ ಬಹುಸಂಖ್ಯಾತತೆಯ ಬಲವರ್ಧನೆಗೆ ಮತ್ತು ಭಾರತೀಯ ಜನತಾ ಪಕ್ಷದ ಬೆಳವಣಿಗೆಗೆ ಕಾರಣವಾಗುತ್ತದೆ. ಬಾಬರಿ ಮಸೀದಿ ಧ್ವಂಸದ ಬಳಿಕ ಸಮುದಾಯಗಳ ನಡುವಿನ ದ್ವೇಷಕ್ಕೆ ನಾಂದಿಯಾಡಿತು. ಬಾಬರಿ ಮಸೀದಿಯ ಜಾಗದ ಕಾನೂನು ವಿವಾದ ಸುದೀರ್ಘ ವರ್ಷಗಳ ಕಾಲ ನಡೆಯಿತು. ಕೊನೆಯಲ್ಲಿ 2019ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಭಗವಾನ್ ರಾಮನು ಈ ಸ್ಥಳದಲ್ಲಿ ಜನಿಸಿದನು ಎಂದು ಹೇಳಿದೆ. ಈ ತೀರ್ಪನ್ನು ಹೆಚ್ಚಾಗಿ ಮೋದಿ ಮತ್ತು ಅವರ ಬೆಂಬಲಿಗರ ವಿಜಯವೆಂದು ಪರಿಗಣಿಸಲಾಗಿದೆ.
ಇದನ್ನು ಓದಿ: ಹುತಾತ್ಮ ಕ್ಯಾ.ಪ್ರಾಂಜಲ್ ಕುರಿತ ಸಿಎಂ ಹೇಳಿಕೆ ತಿರುಚಿದ ತೇಜಸ್ವಿ ಸೂರ್ಯ: ಕ್ಷಮೆಯಾಚಿಸುವಂತೆ ಆಗ್ರಹ


