Homeಕರ್ನಾಟಕಕಲ್ಬುರ್ಗಿ-ಗೌರಿ ಹತ್ಯೆ ವಿಚಾರಣೆ; ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸಿಎಂ ಸೂಚನೆ

ಕಲ್ಬುರ್ಗಿ-ಗೌರಿ ಹತ್ಯೆ ವಿಚಾರಣೆ; ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸಿಎಂ ಸೂಚನೆ

- Advertisement -
- Advertisement -

ಖ್ಯಾತ ಸಂಶೋಧಕ ಎಂ.ಎಂ. ಕಲ್ಬುರ್ಗಿ ಮತ್ತು ಜನಪರ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಹಾಗೂ ಪೂರ್ಣಾವಧಿ ನ್ಯಾಯಾಧೀಶರ ನೇಮಕಾತಿ ಮಾಡುವಂತೆ ಸಲ್ಲಿಸಿದ್ದ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಈ ಬಗ್ಗೆ ತ್ವರಿತವಾಗಿ ಅಗತ್ಯ ಕ್ರಮ ವಹಿಸುವಂತೆ ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಹಿಂದುತ್ವ ಸಂಘಟನೆಗಳು ನಡೆಸುತ್ತಿದ್ದ ಕೋಮು ದ್ವೇಶ ಹಾಗೂ ದ್ವೇಶ ರಾಜಕಾರಣವನ್ನು ವಿರೋಧಿಸುತ್ತಿದ್ದ ಗೌರಿ ಲಂಕೇಶ್ ಅವರನ್ನು ಕಳೆದ ಐದು ವರ್ಷಗಳ ಹಿಂದೆ ಇದೇ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಗುಂಡಿಟ್ಟು ಕೊಂದಿದ್ದರು. ಗೌರಿ ಹತ್ಯೆ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ದಳಕ್ಕೆ, ಅದಕ್ಕೂ ಎರಡು ವರ್ಷಗಳ ಹಿಂದೆ ಎಂ.ಎಂ. ಕಲ್ಬುರ್ಗಿ ಅವರನ್ನು ಹತ್ಯೆ ಮಾಡಿದ್ದ ಆರೋಪಿಗಳ ಸುಳಿವೂ ಸಿಕ್ಕಿತ್ತು. ಎರಡೂ ಹತ್ಯೆ ನಡೆದು ಏಳು ವರ್ಷ ಕಳೆದರೂ ಈವರೆಗೆ ಪ್ರಕರಣಗಳ ವಿಚಾರಣೆ ಮಾತ್ರ ಪೂರ್ಣಗೊಂಡಿಲ್ಲ. ಆರೋಪಿಗಳ ಬಂಧನವಾಗಿದ್ದರೂ ವಿಚಾರಣೆ ಪೂರ್ಣಗೊಳ್ಳದ ಕಾರಣಕ್ಕೆ ಶಿಕ್ಷೆ ಪ್ರಕಟವಾಗಿಲ್ಲ. ಆದ್ದರಿಂದ, ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಎಂಎಂ ಕಲ್ಬುರ್ಗಿ ಕುಟುಂಬದವರು ಹಾಗೂ ಪೂರ್ಣಾವಧಿ ನ್ಯಾಯಾಧೀಶರ ನೇಮಕ ಮಾಡುವಂತೆ ಗೌರಿ ಲಂಕೇಶ್ ಕುಟುಂಬದವರು ಸರ್ಕಾರಕ್ಕೆ ಮನವಿ ಮಾಡಿದ್ದರು.

ಹಿರಿಯ ಸಾಹಿತಿ ಹಾಗೂ ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರನ್ನು ದಿನಾಂಕ: 31.08.2015 ರಂದು ಧಾರವಾಡದ ಅವರ ಮನೆಯಲ್ಲೇ ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ನ್ಯಾಯಾಲಯಕ್ಕೆ 1950 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆದರೆ, ವಿಚಾರಣೆ ಪೂರ್ಣಗೊಂಡು ಶಿಕ್ಷೆ ಪ್ರಕಟವಾಗಿಲ್ಲ. ಘಟನೆ ನಡೆದು ಸಾಕಷ್ಟು ವರ್ಷಗಳು ಕಳೆದಿವೆ; ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಬೇಕು ಎಂದು ಮೃತರ ಪತ್ನಿ ಉಮಾದೇವಿ ಎಂ. ಕಲ್ಬುರ್ಗಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು.

ಗೌರಿ ಹತ್ಯೆ; ಪೂರ್ಣಾವಧಿ ನ್ಯಾಯಾಧೀಶರ ನೇಮಕಕ್ಕೆ ಸೂಚನೆ

ಜನಪರ ಪತ್ರಕರ್ತೆ, ಹಿಂದುತ್ವ ಸಂಘಟನೆಗಳ ಕಟು ಟೀಕಾಕಾರರಾಗಿದ್ದ ಗೌರಿ ಲಂಕೇಶ್ ಅವರನ್ನು ರಾಜರಾಜೇಶ್ವರಿ ನಗರದ ಅವರ ನಿವಾಸ ಮುಂದೆಯೇ 2017ರ ಸೆಪ್ಟೆಂಬರ್ 5ರ ಸಂಜೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಅಂದಿನ ಸಿದ್ದರಾಮಯ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸದೆ, ವಿಶೇಷ ತನಿಖಾ ದಳ (SIT) ಸ್ಥಾಪಿಸಿದ್ದರು. ಗೌರಿ ಹತ್ಯೆ ತನಿಖಾ ಸಂದರ್ಭದಲ್ಲಿ, ಎಂಎಂ ಕಲ್ಬುರ್ಗಿ ಹಾಗೂ ಮಹಾರಾಷ್ಟ್ರದಲ್ಲಿ ಇದೇ ಮಾದರಿಯಲ್ಲಿ ಹತ್ಯೆ ನಡೆಸಿದ್ದ ಆರೋಪಿಗಳ ಸುಳಿವೂ ಸಿಕ್ಕಿತ್ತು.

ಗೌರಿ ಹತ್ಯೆ ನಡೆದು ಐದು ವರ್ಷಗಳು ಕಳೆದು ಚಾರ್ಜ್‌ ಶೀಟ್ ಸಲ್ಲಿಕೆಯಾಗಿದ್ದರೂ ಕೋರ್ಟ್ ವಿಚಾರಣೆ ಮಾತ್ರ ಕುಂಟುತ್ತಲೇ ಸಾಗಿದೆ. ಪ್ರಕರಣ ಸಂಬಂಧ ಇದುವರೆಗೆ 18 ಆರೋಪಿಗಳನ್ನು ಬಂಧಿಸಲಾಗಿದ್ದು, ವಿವಿಧ ಬಗೆಯ 500 ಸಾಕ್ಷ್ಯಗಳನ್ನೊಳಗೊಂಡ ಚಾರ್ಜ್ ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಜುಲೈ, 2022 ರಿಂದ ನ್ಯಾಯಾಲಯದಲ್ಲಿ ವಿಚಾರಣೆಯು ಪ್ರಾರಂಭಗೊಂಡಿದ್ದು, ಈವರೆಗೆ ಕೇವಲ 94 ಸಾಕ್ಷಿಗಳನ್ನು ಮಾತ್ರ ವಿಚಾರಣೆ ಮಾಡಲಾಗಿದೆ.

ನ್ಯಾಯಾಲಯದಲ್ಲಿ ದಿನನಿತ್ಯ ಹಲವು ಪ್ರಕರಣಗಳು ವಿಚಾರಣೆಗೆ ಬಾಕಿ ಇರುವುದರಿಂದ, ಗೌರಿ ಹತ್ಯೆ ಪ್ರಕರಣದ ವಿಚಾರಣೆಗೆ ಹಿನ್ನಡೆಯಾಗುತ್ತಿದೆ. ಆದ್ದರಿಂದ, ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ರಚಿಸಿ, ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎಂದು ಮೃತ ಗೌರಿ ಸಹೋದರಿ ಕವಿತಾ ಲಂಕೇಶ್ ಅವರು ಮನವಿ ಮಾಡಿದ್ದರು. ಇದೀಗ ಎರಡೂ ಪ್ರಕರಣಗಳ ಕುರಿತು ‘ಜರೂರು ಅಗತ್ಯ ಕ್ರಮ’ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ; ಹುತಾತ್ಮ ಕ್ಯಾ.ಪ್ರಾಂಜಲ್ ಕುರಿತ ಸಿಎಂ ಹೇಳಿಕೆ ತಿರುಚಿದ ತೇಜಸ್ವಿ ಸೂರ್ಯ: ಕ್ಷಮೆಯಾಚಿಸುವಂತೆ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...