Homeಕರ್ನಾಟಕಸರ್ಕಾರ-ನಾಗರಿಕರ ಉದಾಸೀನತೆ ಮತ್ತು ಜಾತೀಯತೆಯ ಹಿಂಸೆ; ಸುಧಾರಿಸದ ಪೌರಕಾರ್ಮಿಕರ ಜೀವನಮಟ್ಟ ಮತ್ತು ಕೆಲಸದ ಪರಿಸ್ಥಿತಿ

ಸರ್ಕಾರ-ನಾಗರಿಕರ ಉದಾಸೀನತೆ ಮತ್ತು ಜಾತೀಯತೆಯ ಹಿಂಸೆ; ಸುಧಾರಿಸದ ಪೌರಕಾರ್ಮಿಕರ ಜೀವನಮಟ್ಟ ಮತ್ತು ಕೆಲಸದ ಪರಿಸ್ಥಿತಿ

- Advertisement -
- Advertisement -

ಏಪ್ರಿಲ್, 1976ರಲ್ಲಿ, “ಜಾಡಮಾಲಿಗಳು ಮತ್ತು ಮಲಹೊರುವವರ ಜೀವನ ಮತ್ತು ಕೆಲಸದ ಪರಿಸ್ಥಿತಿಯ ಸುಧಾರಣೆ”ಗಳ ಕುರಿತು ವರದಿ ಮಾಡಲು ನೇಮಕವಾಗಿದ್ದ 13 ಸದಸ್ಯರ ಕರ್ನಾಟಕ ಸರಕಾರದ ಸಮಿತಿಯ ಅಧ್ಯಕ್ಷರಾಗಿದ್ದ ಐ.ಪಿ.ಡಿ. ಸಾಲಪ್ಪ ಅವರು ಸಮಿತಿಯ ಅಂತಿಮ ವರದಿಯನ್ನು ಆಗಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರಿಗೆ ಸಲ್ಲಿಸಿದ್ದರು. ಈ ವರದಿಯನ್ನು ಸಲ್ಲಿಸಲು ಸಮಿತಿಯ ಸದಸ್ಯರು ರಾಜ್ಯಾದ್ಯಂತ ಸುತ್ತಾಡಿ, ನಾಲ್ಕು ವರ್ಷಗಳ ಕಾಲ ನೂರಾರು ಕಾರ್ಮಿಕರು ಮತ್ತು ಮುನಿಸಿಪಲ್ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಜೊತೆಗೆ ಮಾತುಕತೆ ನಡೆಸಿದ್ದರು.

ಇದು ಅವರಿಗೆ ಪೌರಕಾರ್ಮಿಕರ ಜೀವನ ಮತ್ತು ಕೆಲಸದ ಪರಿಸ್ಥಿತಿಯ ಬಗ್ಗೆ ಆಳ ಮತ್ತು ಸಮಗ್ರವಾದ ತಿಳಿವಳಿಕೆಯನ್ನು ಕೊಟ್ಟಿತ್ತು. ಈ ವರದಿಯ ಪ್ರಸ್ತಾವನೆಯಿಂದ ತೆಗೆಯಲಾದ ಈ ಕೆಳಗಿನ ಸಾಲುಗಳು- ತಾವು ನೋಡಿದ, ಕೇಳಿದ ಮತ್ತು ಅನುಭವಿಸಿದ ವಿಷಯಗಳು ಸಮಿತಿಯ ಸದಸ್ಯರನ್ನು ಎಷ್ಟರಮಟ್ಟಿಗೆ ತಟ್ಟಿ ತಳಮಳಗೊಳಿಸಿದ್ದವು ಎಂದು ಸೂಚಿಸುತ್ತವೆ: “ದೇಶವು ಸ್ವತಂತ್ರವಾದ ನಂತರ ಉನ್ನತಮಟ್ಟದ ತಾಂತ್ರಿಕ ಮತ್ತು ಕೈಗಾರಿಕಾ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ನಾವು ಅಣುಬಾಂಬ್ ಸ್ಫೋಟಿಸಲು, ಬಾಹ್ಯಾಕಾಶಕ್ಕೆ ಒಂದು ಉಪಗ್ರಹವನ್ನು ಕಳುಹಿಸಲು ಶಕ್ತರಾಗಿದ್ದೇವೆ. ರಾಜಕೀಯ ಕ್ಷೇತ್ರದಲ್ಲಿ ಭಾರತವು ಯಶಸ್ವಿಯಾಗಿ ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿದೆ. ಅದೇ ರೀತಿಯಲ್ಲಿ ಕಲೆ, ಸಂಗೀತ, ನೃತ್ಯ ಮತ್ತು ನಾಟಕಗಳಲ್ಲಿ ಭಾರತವು ಇತರರು ಅನುಸರಿಸಬಹುದಾದ ಉದಾಹರಣೆಯನ್ನು ಹಾಕಿಕೊಟ್ಟಿದೆ.”

ಒಂದು ಯುವ ರಾಷ್ಟ್ರದ ಹಲವಾರು ಯಶಸ್ಸುಗಳ ಬಗ್ಗೆ, ಅದರಲ್ಲೂ ಮುಖ್ಯವಾಗಿ, ಆದು ಯಶಸ್ವಿ ಪ್ರಜಾಪ್ರಭುತ್ವ ಆಗಿರುವ ಬಗೆಗಿನ ಹಿಗ್ಗು- ಈ ವರದಿಯನ್ನು ತುರ್ತುಪರಿಸ್ಥಿತಿ ಹೇರಲಾಗಿದ್ದ ಕಾಲದಲ್ಲಿ ಸಿದ್ಧಪಡಿಸಿ ಸಲ್ಲಿಸಲಾಗಿತ್ತು ಎಂಬ ಹಿನ್ನೆಲೆಯಲ್ಲಿ ಬಹುತೇಕ ವ್ಯಂಗ್ಯವಾಗಿ ಕಾಣಿಸುತ್ತದೆ. ಆದರೆ, ಇಂತಹ ಸಾಂದರ್ಭಿಕತೆಯನ್ನು ಉಲ್ಲೇಖಿಸುವುದಕ್ಕೆ ಕಾರಣವಿತ್ತು:

ಐ.ಪಿ.ಡಿ. ಸಾಲಪ್ಪ

“ಈ ಎಲ್ಲಾ ಸಾಧನೆಗಳಿಗೆ ಹೊರತಾಗಿಯೂ, ಸಮಾಜಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸುತ್ತಾ ಬಂದಿರುವ ಜಾಡಮಾಲಿಗಳು ಮತ್ತು ಮಲಹೊರುವ ಕಾರ್ಮಿಕರ ಸಮುದಾಯದ ಸುಧಾರಣೆಗೆ ಯಾವುದೇ ನಿರ್ದಿಷ್ಟವಾದ ಕ್ರಮ ಕೈಗೊಳ್ಳಲಾಗಿಲ್ಲ ಮತ್ತು ಅವರು ಎಲ್ಲಿದ್ದರೋ ಅದೇ ಪರಿಸ್ಥಿತಿಯಲ್ಲಿ ಮುಂದುವರಿದಿದ್ದಾರೆ ಎಂಬುದು ನಾಚಿಕೆಯ ಮತ್ತು ವಿಷಾದದ ವಿಷಯ. ದೇಶವು ಸಾಧಿಸಿರುವ ಎಲ್ಲಾ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಪ್ರಗತಿಯ ಹೊರತಾಗಿಯೂ, ಈ ಜನರು ತಲೆ ಮೇಲೆ ಮಲ ಹೊರುವುದನ್ನು ಇನ್ನೂ ಮುಂದುವರಿಸಿದ್ದಾರೆ. ಇಂಥ ದಯನೀಯ ಸ್ಥಿತಿಗೆ, ದಪ್ಪ ಚರ್ಮದ ಆಡಳಿತಶಾಹಿಯ ಅಮಾನವೀಯತೆ ಒಂದು ಕಡೆಯಾದರೆ, ಸಾರ್ವಜನಿಕರ ಅತ್ಯಂತ ನಿರಾಸಕ್ತಿ ಮತ್ತು ನಿರ್ಲಕ್ಷ್ಯ ಇನ್ನೊಂದು ಕಡೆ ಕಾರಣವಾಗಿದೆ. ಇವತ್ತು ಈ ಜನರಿಗೆ ಏನಾದರೂ ಸವಲತ್ತು ಸಿಗುತ್ತಿದ್ದರೆ, ಅದಕ್ಕೆ ಈ ದುರದೃಷ್ಟಶಾಲಿಗಳ ಕುರಿತು ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದ ಮಹಾತ್ಮ ಗಾಂಧಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾನ್ ಪ್ರಯತ್ನಗಳು ಕಾರಣ.”

ಹಲವು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಲಹೊರುವ ಪದ್ಧತಿಯ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಪೌರಕಾರ್ಮಿಕರ ಜೀವನ ಮತ್ತು ಕೆಲಸದ ಪರಿಸ್ಥಿತಿಯನ್ನು ಸುಧಾರಿಸಲು ಕೈಗೊಂಡ ಹಲವಾರು ಕ್ರಮಗಳನ್ನು ಗುರುತಿಸಲಾಗಿದೆ. ಬರ್ವೆ ಸಮಿತಿ (ಬಾಂಬೆ 1952), ರೆನ್ ರೇ ಸಮಿತಿ (ಯೋಜನಾ ಆಯೋಗ, 1958), ಮಲ್ಕಾನಿ ಸಮಿತಿ (ಭಾರತ ಸರಕಾರ, 1960), ಗೃಹ ಸಚಿವಾಲಯದ ವಿಶೇಷ ಕಾರ್ಯಪಡೆಯ ವರದಿ (1961), ಕಾರ್ಮಿಕ ಸಚಿವಾಲಯದ ಭಾನುಪ್ರಸಾದ್ ಪಾಂಡ್ಯ ಸಮಿತಿ (1967) ಮತ್ತು ಕರ್ನಾಟಕದ್ದೇ- 1973ರಲ್ಲೇ (ಬಿ ಬಸವಲಿಂಗಪ್ಪನವರು ಪೌರಾಡಳಿತ ಸಚಿವರಾಗಿದ್ದಾಗ) ಮಲಹೊರುವ ಪದ್ಧತಿಯನ್ನು ನಿವಾರಿಸುವ ಮುಂಚೂಣಿ ಕ್ರಮಗಳು (ಪ್ರಾಸಂಗಿಕವಾಗಿ ಅದು ಮಾನವ ಘನತೆಯ ವರ್ಷವಾಗಿತ್ತು), ಜೊತೆಗೆ ಜಾಡಮಾಲಿಗಳು ಮತ್ತು ಮಲಹೊರುವವರೆಂಬ ಅವಮಾನಕಾರಿ ಪದನಾಮವನ್ನು ಪೌರಕಾರ್ಮಿಕರು- ಸ್ವಚ್ಛತಾ ಕಾರ್ಮಿಕರು ಎಂದು ಬದಲಿಸಿದ್ದು ಇತ್ಯಾದಿ ಸೇರಿವೆ.

“ಪೌರ ಕಾರ್ಮಿಕರು ಸಾಮಾಜಿಕ ಏಣಿಯ ಅತ್ಯಂತ ಕೆಳಗಿನ ಮೆಟ್ಟಿಲುಗಳಿಂದ ಬಂದವರು” ಎಂಬ ವಾಸ್ತವವು ಮತ್ತು “ಈ ವೃತ್ತಿಯು ಯಾವತ್ತೂ ಒಂದು ನಿರ್ದಿಷ್ಟ ಜಾತಿಯ ಜೊತೆ ಸಂಬಂಧ ಹೊಂದಿತ್ತು ಎಂಬಂತೆ, ಕೇವಲ ಅಸ್ಪೃಶ್ಯರಿಗೆ ಮಾತ್ರ ಮೀಸಲಾದುದು ಎಂಬ ತೀರ್ಮಾನಕ್ಕೆ ಸವರ್ಣೀಯ ಹಿಂದೂಗಳು ಬಂದಿರುವುದು” ಈ ದಯನೀಯ ಸ್ಥಿತಿಗೆ ಕಾರಣ ಎಂದು ಈ ವರದಿಯು ವಿಶ್ಲೇಶಿಸುತ್ತದೆ.

ಇದನ್ನು ಬದಲಿಸಲು, “ಅವರ ಪರಿಸ್ಥಿತಿಯನ್ನು ಸುಧಾರಿಸುವ ಸಮಗ್ರ ಮತ್ತು ಪರಿಣಾಮಕಾರಿ ಕ್ರಮಗಳನ್ನು ರೂಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದು ಅಗತ್ಯ ಮತ್ತು ಇದಕ್ಕಾಗಿ, “ಇನ್ನು ಮುಂದೆ ಸ್ಥಾಪಿತ ಹಿತಾಸಕ್ತಿಗಳಿಂದ ಪೌರಕಾರ್ಮಿಕರ ಶೋಷಣೆಯು ನಿಲ್ಲಬೇಕು” ಎಂದು ಸಾಲಪ್ಪ ಸಮಿತಿಯು ಹೇಳುತ್ತದೆ. “ಒಂದು ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪುನಶ್ಚೇತನದ ಗುರಿಯನ್ನು ಸಾಧಿಸಲು ರಾಜಕೀಯ ಅಧಿಕಾರದ ಅಗತ್ಯವಿದೆ”, ಆದುದರಿಂದ, “ಸಂಸತ್ತು, ರಾಜ್ಯ ವಿಧಾನಸಭೆಗಳಿಂದ ಹಿಡಿದು, ಸ್ಥಳೀಯಾಡಳಿತದ ತನಕ ಎಲ್ಲಾ ಹಂತಗಳಲ್ಲಿ ಪೌರಕಾರ್ಮಿಕರ ಹಿತಾಸಕ್ತಿಗಳಿಗೆ ಪ್ರಾತಿನಿಧ್ಯ ಇರುವುದು ಅಗತ್ಯ” ಎಂದು ತಿಳಿಸಿ ಯಾವುದೇ ರೀತಿಯ ಭ್ರಮೆಗೆ ಒಳಪಡದೆ ಸಮಿತಿಯು ಸಮಸ್ಯೆಗಳನ್ನು ಒಪ್ಪಿಕೊಳ್ಳುತ್ತದೆ. ಮೂಲಭೂತವಾಗಿ ಸಮಿತಿಯು ಒತ್ತಿಹೇಳುವಂತೆ, “ಪೌರಕಾರ್ಮಿಕರು ಸೇರಿದಂತೆ ಎಲ್ಲಾ ವೃತ್ತಿಗಳಿಗೆ ಒಂದು ಘನತೆಯಿದ್ದು, ತಥಾಕಥಿತ ಅಸ್ಪೃಶ್ಯರೇ ಎಂದೆಂದಿಗೂ ಈ ಕೆಲಸ ಮಾಡಬೇಕು ಎಂದು ಹೇಳುವುದು ಖಂಡಿತವಾಗಿ ಒಪ್ಪತಕ್ಕದ್ದಲ್ಲ.”

ಈಗ ನೀವು ಈ ವರದಿಯನ್ನು ಓದಿದಾಗ, ಸಾಲಪ್ಪ ಮತ್ತು ಅವರ ಸಮಿತಿಯ ಸಹೋದ್ಯೋಗಿಗಳು ಇಂದಿನ ಪೌರಕಾರ್ಮಿಕರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬಂತೆ ಕಾಣುತ್ತದೆ. “ದಪ್ಪ ಚರ್ಮದ ಆಡಳಿತಶಾಹಿ ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಸಾರ್ವಜನಿಕರ ಅತ್ಯಂತ ನಿರಾಸಕ್ತಿ ಮತ್ತು ನಿರ್ಲಕ್ಷ್ಯ ಇಂದಿಗೂ ಕಣ್ಣಿಗೆ ರಾಚುತ್ತದೆ. ಯಾರೂ ಕೂಡಾ ಇನ್ನೊಬ್ಬರ ತ್ಯಾಜ್ಯವನ್ನು, ಅದರಲ್ಲೂ ಮಲವನ್ನು ಶುಚಿಗೊಳಿಸಲು ಬಯಸುವುದಿಲ್ಲ ಮತ್ತು ಹಾಗೆ ಮಾಡಬೇಕು ಎಂದೂ ಇಲ್ಲ. ಆದರೂ, ಇಂದಿನ ತನಕ ಇದು ನಡೆಯುತ್ತಿದೆ. ಸ್ವಲ್ಪ ಆದಾಯವನ್ನಾದರೂ ಗಳಿಸಬೇಕಾದ ಹತಾಶೆಯು ಸಾವಿರಾರು ಜನರನ್ನು ನಮ್ಮ ತ್ಯಾಜ್ಯವನ್ನು ಶುಚಿಗೊಳಿಸುವ ಕೆಲಸದತ್ತ ಬಲವಂತವಾಗಿ ದೂಡುತ್ತಿದೆ.

ಇದು ಇತರರ ತ್ಯಾಜ್ಯವನ್ನು ಶುಚಿಗೊಳಿಸುವಂತೆ, ಮಲವನ್ನು ಹೊರುವಂತೆ, ಸತ್ತ ಜಾನುವಾರುಗಳನ್ನು ಒಯ್ಯುವಂತೆ, ನಮ್ಮ ಸ್ಮಶಾನಗಳನ್ನು ನೋಡಿಕೊಳ್ಳುವಂತೆ, ಮನೆಗಳು, ಕಚೇರಿಗಳು, ಹಳ್ಳಿಗಳು ಮತ್ತು ನಗರಗಳನ್ನು ಶುಚಿಯಾಗಿ, ಆರೋಗ್ಯಕರವಾಗಿ ಇಟ್ಟುಕೊಳ್ಳುವಂತೆ, ಜಾತಿಹೀನ ಅಸ್ಪೃಶ್ಯರೆಂದು ಪರಿಗಣಿಸಲಾಗುವ- ಜಾತಿ ಏಣಿಯ ತಳಹಂತದಲ್ಲಿರುವ ಜನರನ್ನು ರಾಚನಿಕವಾಗಿ ಮತ್ತು ವ್ಯವಸ್ಥಿತವಾಗಿ ಒತ್ತಾಯಿಸುವ ಅತ್ಯಂತ ಕ್ರೂರ ಮತ್ತು ದಮನಕಾರಿ ಜಾತಿ ವ್ಯವಸ್ಥೆಯ ನೇರ ಪರಿಣಾಮ ಇದಾಗಿದೆ.

ಕೆಲವೇ ಅಪರೂಪದ ಉದಾಹರಣೆಗಳನ್ನು ಹೊರತುಪಡಿಸಿದರೆ, ದಕ್ಷಿಣ ಭಾರತದ ಬಹುಭಾಗದಲ್ಲಿ ಪೌರಕಾರ್ಮಿಕರು ಮಾದಿಗ ಜಾತಿಯವರಾಗಿರುತ್ತಾರೆ ಮತ್ತು ಉತ್ತರ ಭಾರತದ ಬಹುಭಾಗದಲ್ಲಿ ವಾಲ್ಮೀಕರು ಇದನ್ನು ಮಾಡುತ್ತಾರೆ. ಭೂಮಿ, ಸ್ವರ್ಗ ಅಥವಾ ನರಕದಲ್ಲಾಗಲೀ ಅವರು ಸವರ್ಣೀಯರ ಭಾಗವಾಗುವುದಕ್ಕೆ ಮತ್ತು ತಮ್ಮ ಮಕ್ಕಳು ಬೇರೇನಾದರೂ ಮಾಡುವುದನ್ನು ಖಾತರಿಪಡಿಸಿಕೊಳ್ಳುವುದಕ್ಕೆ ಅವಕಾಶವೇ ಇಲ್ಲದಂತಾಗಿದೆ. ಅವರ ಮೇಲ್ಮುಖ ಚಲನೆಗೆ ಇಂಥಾ ಜಡ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಡೆತಡೆಗಳಿವೆ. ಇಂತಹ ಜನಾಂಗೀಯ ಆಚರಣೆಗಳು ಹಳ್ಳಿ ಮತ್ತು ನಗರಗಳೆರಡರಲ್ಲೂ ಆಳವಾಗಿ ಬೇರುಬಿಟ್ಟಿವೆ.

ಬಹುತೇಕ ಹೆಚ್ಚಿನ ಪೌರಕಾರ್ಮಿಕರು ಮಹಿಳೆಯರೇ ಆಗಿರುತ್ತಾರೆ. ಭಯಾನಕವಾದ ಕೆಲಸದ ಪರಿಸ್ಥಿತಿಯನ್ನು ಒತ್ತಟ್ಟಿಗಿಟ್ಟರೂ, ಸಮಾಜವು ಅವರನ್ನು ಅತ್ಯಂತ ಅಮಾನವೀಯ ಜೀವನ ನಡೆಸುವಂತೆ ಮಾಡಿದೆ. ಕುಟುಂಬದ ಉಳಿದೆಲ್ಲರಿಗಿಂತ ಬೇಗನೇ ಎದ್ದು, ನೀರು ತರುವುದು, ಮನೆಯನ್ನು ಸ್ವಚ್ಛ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದು, ಅಡುಗೆ ಮಾಡುವುದು ಇತ್ಯಾದಿಗಳನ್ನು ಮಾಡಿಯೂ ಬೆಳಗಿನ ಜಾವ 6.00 ಗಂಟೆಗೆ ಮೊದಲೇ ಅವರು ಕೆಲಸಕ್ಕೆ ಹಾಜರಾಗಬೇಕು. ಅವರನ್ನು ಕೊಂಡೊಯ್ಯಲು ಐಟಿ ನೌಕರರಂತೆ ಹವಾನಿಯಂತ್ರಿತ ಬಸ್ಸಾಗಲೀ ಅಥವಾ ಸಾಮಾನ್ಯ ಕೈಗಾರಿಕಾ ಕ್ಷೇತ್ರದ ಕಾರ್ಮಿಕರಿಗೆ ಲಭ್ಯವಾಗುವ ಸಾಮಾನ್ಯ ಬಸ್ಸಾಗಲೀ ಬರುವುದಿಲ್ಲ. ಅವರು ತಮ್ಮದೇ ವ್ಯವಸ್ಥೆ ಮಾಡಿಕೊಳ್ಳಬೇಕು. ಹೆಚ್ಚಿನವರು ಖರ್ಚು ಉಳಿಸಲು ನಡೆದೇಹೋಗುತ್ತಾರೆ.

ಕೆಲಸದ ವೇಳೆ ಅವರು ತೀರಾ ಕೆಟ್ಟ ವಿನ್ಯಾಸದ ತಳ್ಳುಗಾಡಿಗಳನ್ನು ತಳ್ಳುತ್ತಾರೆ. ಅವುಗಳಿಗೆ ಬಕೇಟುಗಟ್ಟಲೆ ಮಿಶ್ರ ತ್ಯಾಜ್ಯವನ್ನು ಸುರಿಯಲಾಗುತ್ತದೆ- ಕೆಲವೊಮ್ಮೆ ಮಲ ಮತ್ತು ಜೈವಿಕ-ವೈದ್ಯಕೀಯ ತ್ಯಾಜ್ಯವನ್ನೂ. ಜೊತೆಗೆ ಅವರು ರಸ್ತೆಗಳನ್ನೂ ಗುಡಿಸುತ್ತಿರುತ್ತಾರೆ. ಅವರು ತಾವೇ ಕೊಳ್ಳಬೇಕಾದ ಗಿಡ್ಡದಾದ ಕಸಬರಿಕೆಗಳನ್ನು ಬಳಸುವುದರಿಂದ ಅವರ ಮುಖಗಳು ಅವರು ಒಟ್ಟು ಸೇರಿಸುವ ಧೂಳು ಮತ್ತು ತ್ಯಾಜ್ಯಗಳಿಗೆ ಕೆಲವೇ ಇಂಚುಗಳಷ್ಟು ದೂರವಿರುತ್ತದೆ. ಮಳೆಯಿರಲಿ ಬಿಸಿಲಿರಲಿ, ದಟ್ಟವಾದ, ಯದ್ವಾತದ್ವಾ ವಾಹನ ಸಂಚಾರದ ನಡುವೆ ಕಸವನ್ನು ಸಂಗ್ರಹಿಸುತ್ತಾ, ನಾವು ಭಯಂಕರವಾದ ಕ್ಷಮತೆಯಿಂದ ಎರಡೂ ಕೈಗಳಿಂದ ಕಸ ಎಸೆದ ಕರಾಳ ಮೂಲೆಗಳನ್ನು ಸ್ವಚ್ಛಗೊಳಿಸುತ್ತಾ, ಕೆಲಸ ಮಾಡುತ್ತಾರೆ. ಹೆಚ್ಚಿನ ನಗರವಾಸಿಗಳು ಬೆಳಗ್ಗಿನ ಹೊತ್ತು ಜಿಮ್‌ಗಳಲ್ಲೋ, ಪಾರ್ಕುಗಳಲ್ಲೋ ತಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತಿರುವಾಗ, ಈ ಮಹಿಳೆಯರು, ಸಮಾಜವು ಎಸೆದ ಬಣ್ಣಿಸಲಸಾಧ್ಯವಾದ ಕಸ, ತ್ಯಾಜ್ಯಗಳನ್ನು ಸಂಗ್ರಹಿಸುತ್ತಾ, ಸಹಿಸಲು ಸಾಧ್ಯವಿಲ್ಲದ ಕೆಟ್ಟ ವಾಸನೆಯನ್ನು ಸಹಿಸುತ್ತಾ, ಉಸಿರಾಡಲು ಹೆಣಗುತ್ತಿರುತ್ತಾರೆ. ಪ್ರತಿದಿನ ಅವರು ಮತ್ತೆಮತ್ತೆ ತಮ್ಮ ಗಮ್ಯಸ್ಥಾನವಾದ ಒಂದು ಟ್ರಕ್‌ನತ್ತ ಧಾವಿಸುತ್ತಾ ಇರುತ್ತಾರೆ.

ಈ ಟ್ರಕ್ಕುಗಳು ಸಾಮಾನ್ಯವಾಗಿ ತಳ್ಳುಗಾಡಿಗಳಿಂದ ನಾರುವ ಕಸವನ್ನೆತ್ತಿ ಟ್ರಕ್ಕಿನೊಳಗೆ ತುಂಬಿಸುವ ಕೆಲಸ ಗಂಡಸರನ್ನು ಹೊಂದಿರುತ್ತದೆ. ಇದನ್ನು ಅವರು ಮಾಡುತ್ತಿರುವಾಗ ವಿಷಕಾರಿಯೂ, ಅಪಾಯಕಾರಿಯೂ ಆದ ತ್ಯಾಜ್ಯ ನೀರು ಅವರ ಗಲ್ಲದಿಂದ, ಕೈಗಳಿಂದ ಕಂಕುಳಗಳಿಗೆ ಹರಿಯುತ್ತಿರುತ್ತದೆ. ಅವರಿಗೆ ಇಂತಹ ತ್ಯಾಜ್ಯಗಳ ನಿರ್ವಹಣೆಗೆ ಯಾವುದೇ ಸುರಕ್ಷಾ ಸಾಧನಗಳು ಇಲ್ಲವೇ ಇಲ್ಲ. ಅದಲ್ಲದೇ ಈ ನಾರುವ ಕಸದ ರಾಶಿಯ ಮೇಲೆ ಕುಳಿತು ಅವರು ಈ ಕಸವನ್ನು ಎಸೆಯುವ ’ಲ್ಯಾಂಡ್ ಫಿಲ್’ ಎಂದು ಕರೆಯಲಾಗುವ ’ಗುಂಡಿ ತುಂಬಿಸುವ’ ಸ್ಥಳಗಳಿಗೆ ನಿತ್ಯವೂ ಹಲವಾರು ಕಿ.ಮೀ.ಗಳಷ್ಟು ಪ್ರಯಾಣ ಮಾಡುತ್ತಾರೆ. ಈ ಗುಂಡಿಗಳು ಸಾಮಾನ್ಯವಾಗಿ ಕಾಲುವೆಗಳೋ, ಕೆರೆಗಳೋ, ಕ್ವಾರಿಗಳೋ, ಗೋಮಾಳಗಳೋ, ರಸ್ತೆಬದಿಗಳೋ, ಕೆಲವೊಮ್ಮೆ ಅರಣ್ಯ ಪ್ರದೇಶಗಳೋ ಆಗಿರುತ್ತವೆ.

ಇದನ್ನು ಪ್ರತಿನಿತ್ಯ ಮಾಡುವುದು ಭಯಾನಕವಾದ ಕೆಲಸ. ಒಂದು ದಿನ ಮಾಡುವುದೇ ಹೇವರಿಕೆ ತರಿಸುವಂತದ್ದು. ಚೆನ್ನಾಗಿ ತೊಳೆದು ಶುಚಿಗೊಳಿಸಿದರೂ, ತನ್ನ ಕೈಗಳಿಂದ ಉಣ್ಣಲು ಆಗದ ಪೌರಕಾರ್ಮಿಕರೊಬ್ಬರನ್ನು ನಾನು ಭೇಟಿ ಮಾಡಿದ್ದೇನೆ. ಆಗಲೂ ತಾನು ಶುಚಿಗೊಳಿಸುವ ತ್ಯಾಜ್ಯದ ವಾಸನೆ ಹೊಡೆದಂತೆ ಭಾಸಗುತ್ತದೆಂದು ಅವರು ತಿಳಿಸುತ್ತಾರೆ. ಒಂದು ಸಲ ವಯಸ್ಸಾದ ಮಹಿಳಾ ಪೌರಕಾರ್ಮಿಕರೊಬ್ಬರು ನನಗೆ ತನ್ನ ನೆತ್ತಿಯಲ್ಲಿ ಹೊಲಿಗೆ ಹಾಕಿದ್ದನ್ನು ತೋರಿಸಿದರು. ಅಪಾರ್ಟ್ಮೆಂಟ್ ಒಂದರಲ್ಲಿ ವಾಸಿಸುವ ಒಬ್ಬ ವ್ಯಕ್ತಿಗೆ ಎಷ್ಟರ ತನಕ ಸೋಮಾರಿತನ ಇತ್ತು ಎಂದರೆ, ಕೆಳಗೆ ಇಳಿದುಬಂದು ಕಸ ಕೊಡುವ ಬದಲು ಆತ ಮೇಲಿನಿಂದಲೇ ಕಸ ಎಸೆದಿದ್ದ. ಕಸದ ಜತೆಗಿದ್ದ ಬಾಟಲಿಗಳಿಂದಾಗಿ ಆಕೆಯ ತಲೆ ಒಡೆದಿತ್ತು. ಎಷ್ಟೋ ಮಂದಿ ಪೌರಕಾರ್ಮಿಕರು ರಸ್ತೆಯಲ್ಲಿ ಕಸ ಗುಡಿಸುವಾಗ ವೇಗವಾಗಿ ಚಲಿಸುವ ವಾಹನಗಳೆದುರು ಸಿಕ್ಕಿ ಗಾಯಗೊಂಡಿದ್ದಾರೆ. ಅವರಿಗೆ ರಕ್ಷಣೆ ನೀಡುವಂತ ಯಾವುದೇ ತಡೆಗಳು ಇಲ್ಲವೇ ಇಲ್ಲ. ಇವರಲ್ಲಿ ಬಹುತೇಕ ಎಲ್ಲರೂ ಸ್ನಾಯು, ಮತ್ತು ತಲೆಬುರುಡೆಯ ತೊಂದರೆಗಳು, ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಗಳು, ಚರ್ಮದ ಸೋಂಕುಗಳು ಮತ್ತು ಎಸಿಡಿಟಿಯಿಂದ ಬಳಲುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ವಿರಮಿಸಿ, ಸುಧಾರಿಸಿಕೊಳ್ಳಲು, ಆಯಾಸ ಪರಿಹಾರಕ್ಕಾಗಲೀ, ಮಲಮೂತ್ರ ವಿಸರ್ಜನೆಗಾಗಲೀ ಅವರಿಗೆ ಯಾವುದೇ ಜಾಗವಿಲ್ಲ. ಮಹಿಳೆಯರು ಅದರಲ್ಲಿಯೂ ಮುಟ್ಟಾದ ಮತ್ತು ಗರ್ಭಿಣಿ ಮಹಿಳೆಯರು ಇದರಿಂದ ಅತೀ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ.

ನಾವು ಇಂತವರನ್ನು ಪ್ರತೀದಿನವೂ ನೋಡುತ್ತಿರುತ್ತೇವೆ. ಬೆಂಗಳೂರಿನಲ್ಲಿಯೇ ಕನಿಷ್ಟ ಮೂವತ್ತು ಸಾವಿರ ಇಂತಹ ಕಾರ್ಮಿಕರಿದ್ದಾರೆ. ಆದರೆ ನಾವವರನ್ನು ಕಾಣುವುದಿಲ್ಲ. ಏಕೆಂದರೆ, ಸಹಜ ರೀತಿಯಲ್ಲಿ ಅವರ ನೋಟಗಳು ಅಳಿಸಿಹೋಗುವಂತೆ ನಮ್ಮ ಮನಸ್ಸುಗಳನ್ನು ನಾವು ತರಬೇತಿಗೊಳಿಸಿದ್ದೇವೆ. ನಾವು ಹೆಚ್ಚು ಸ್ವಚ್ಛವಾದ ನಗರ, ಹಳ್ಳಿಗಳಲ್ಲಿ ಬದುಕುತ್ತಿದ್ದೇವೆ ಏಕೆಂದರೆ, ಈ ಪೌರಕಾರ್ಮಿಕರು ಪ್ರತೀದಿನ ಬೆಳಗ್ಗಿನ 6.00ರಿಂದ ಮಧ್ಯಾಹ್ನದ 2.00ರ ತನಕ ಒದ್ದಾಡುತ್ತಾ ದುಡಿಯುತ್ತಿರುವ ಕಾರಣದಿಂದ. ಅವರ ದಿನದ ಮೊದಲ ಒಳ್ಳೆಯ ಊಟ ಸಿಗುವುದು- ಅವರಿಗೆ ತಿನ್ನಲು ಪುರುಸೊತ್ತು ಸಿಕ್ಕಿದಾಗ ಮಾತ್ರ. ಕೇವಲ ಇತ್ತೀಚೆಗಷ್ಟೇ ಕೆಲವು ಸ್ಥಳೀಯ ಕ್ಯಾಂಟೀನುಗಳಲ್ಲಿ ಅವರಿಗೆ ತಿಂಡಿಯ ವ್ಯವಸ್ಥೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಬಾಯಾರಿಕೆ ಆದಾಗ ಅವರು ನೇರವಾಗಿ ಯಾವುದೇ ಹೊಟೇಲಿಗೆ ಹೊಕ್ಕು ನೀರು ಕುಡಿಯುವಂತಿಲ್ಲ. ಯಾಕೆಂದರೆ, ಯಾರೂ ಅವರನ್ನು ಒಳಗೆ ಹೊಕ್ಕಲು ಬಿಡುವುದಿಲ್ಲ. ನಾವು ಸಾಮಾನ್ಯವಾಗಿ ಶೌಚಾಲಯಗಳಲ್ಲಿ ನೋಡುವ ಪ್ಲಾಸ್ಟಿಕ್ ಮಗ್ಗುಗಳಲ್ಲಿ ನೀರು ಕೊಡುತ್ತಾರೆಂದು ಹಲವರು ನೆನಪಿಸುತ್ತಾರೆ.

ಇಂತಹ ಕೆಲಸದ ವಾತಾವರಣದಲ್ಲಿ ಅವರನ್ನು ಪ್ರತಿದಿನ ಪುರಸಭೆಗಳ ಅಧಿಕಾರಿಗಳು ಮತ್ತು ಹಲವು ಕಾಂಟ್ರಾಕ್ಟರ್‌ಗಳು ಮೇಲ್ವಿಚಾರಣೆ ನಡೆಸುತ್ತಾರೆ. ಇಂತಹ ಅತಿ ಭಯಾನಕ ಕೆಲಸವನ್ನು ಮಾಡುವುದಕ್ಕೆ ಅವರಿಗೆ ಸಿಗುವ ಕೂಲಿ ತಿಂಗಳಿಗೆ ಸುಮಾರು 14 ಸಾವಿರದಿಂದ 18,000 ರೂ ಮಾತ್ರ. ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿದ್ದರೂ ಅಷ್ಟೇ! ಅವರಿಗೆ ಯಾವುದೇ ನಿರ್ದಿಷ್ಟವಾದ ರಜೆಯಿಲ್ಲ. ಕೆಲಸಕ್ಕೆ ಬರಲಿಲ್ಲ ಎಂದರೆ, ಆ ದಿನದ ಸಂಬಳವಿಲ್ಲ. ಅಪರೂಪದ ರಜಾದಿನ ಬಿಟ್ಟರೆ, ಪ್ರತೀದಿನವೂ ಕೆಲಸವೇ. ವಾರದ ರಜೆಯಿಲ್ಲ. ಯಾವುದೇ ಉಳಿತಾಯದ ಸೌಲಭ್ಯವಿಲ್ಲ. ಸಾಲದ ಬೆಂಬಲ ಇಲ್ಲ. ಸೋಡಾ ಕೂಪನುಗಳು ಇಲ್ಲ. ಆರೋಗ್ಯ ತಪಾಸಣೆಗಳು ಇಲ್ಲ.

ಇಷ್ಟು ದೊಡ್ಡ ಕಾರ್ಮಿಕ ಶಕ್ತಿಯನ್ನು ನೇಮಕ ಮಾಡಿಕೊಳ್ಳುವಾಗ ಅನ್ವಯವಾಗುವ ಯಾವುದೇ ನಿಯಮಾವಳಿಗಳು ಇವರಿಗೆ ಅನ್ವಯವಾಗುವುದಿಲ್ಲ. ಇವರ್‍ಯಾರೂ ಶಾಶ್ವತವಾದ ನಿಯಮಿತ ಕೆಲಸಕ್ಕೆ ಅರ್ಹರಲ್ಲ. ಇವರ್‍ಯಾರಿಗೂ ಪಿಂಚಣಿಯಿಲ್ಲ. ಪ್ರಾವಿಡೆಂಟ್ ಫಂಡ್ ಅಥವಾ ಕಾರ್ಮಿಕರ ಕ್ಷೇಮ ನಿಧಿಯೂ ಇಲ್ಲ. (ಈ ಲೇಖನ ಮುದ್ರಣಕ್ಕೆ ಹೋಗುವ ಹೊತ್ತಿಗೆ ರಸ್ತೆಗಳಲ್ಲಿ ಕಸ ಗುಡಿಸುವ ಕಾರ್ಮಿಕ ವರ್ಗವನ್ನು ಮೂರು ತಿಂಗಳೊಳಗೆ ಕಾಯಂ ಮಾಡುವ ಬಗ್ಗೆ ಸಮಿತಿ ರಚಿಸುವುದಾಗಿ ಕರ್ನಾಟಕ ಸರ್ಕಾರ ವಾಗ್ದಾನ ನೀಡಿದೆ.)

1999ರಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದು, ಕೆ. ಜಯರಾಜ್ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಕಮಿಷನರ್ ಆಗಿದ್ದಾಗ ವಿಂಡ್ಸರ್ ಮ್ಯಾನರ್ ಹೊಟೇಲಿನಲ್ಲಿ ನಡೆದ ಸಭೆಯೊಂದರಲ್ಲಿ ಈ ಶೋಷಣಾ ವ್ಯವಸ್ಥೆಯು ಕರ್ನಾಟಕದ ಉದ್ದಗಲಕ್ಕೂ ಜಾರಿಗೊಂಡಿತು.

ಈ ವೈಭೋಗದ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದ ವಿಶ್ವ ಬ್ಯಾಂಕಿನ ಪ್ರಭಾವದಿಂದ ತ್ಯಾಜ್ಯ ನಿರ್ವಹಣೆಯನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಇದರಿಂದ ದಕ್ಷತೆಯಲ್ಲಿ ಸುಧಾರಣೆಯಾಗಿ, ಬೆಂಗಳೂರು ಸೇರಿದಂತೆ ಕರ್ನಾಟಕದ ನಗರಗಳು ’ವಿಶ್ವ ದರ್ಜೆ’ಗೆ ಏರುವುವು ಎಂದು ಬಿಂಬಿಸಲಾಗಿತ್ತು. ಈ ವಿಷಯಕ್ಕೆ ಚಪ್ಪಾಳೆ ತಟ್ಟಿದವರೆಂದರೆ, ನಂದನ್ ನೀಲೇಕಣಿ ನೇತೃತ್ವದ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್‌ನವರು. ಬಹಳ ಬೇಗನೇ ರಾಜ್ಯದ ಉದ್ದಗಲಕ್ಕೂ ಹಲವಾರು ನಗರ ಪಟ್ಟಣಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಇದು ಸಾಂಕ್ರಾಮಿಕ ರೋಗದಂತೆ ಹರಡಿತು.

ನಂತರದ ಬಂದ ದಶಕಗಳು ವಸ್ತುಶಃ ನರಕಸದೃಶವಾದವು. ಖಾಸಗಿ ಗುತ್ತಿಗೆ ಪದ್ಧತಿಯು ಪೌರ ಕಾರ್ಮಿಕರ ಶೋಷಣೆಯನ್ನು ಕಾನೂನುಬದ್ಧಗೊಳಿಸಿತು. ಅವರ ಸಂಬಳವನ್ನು ಗುತ್ತಿಗೆದಾರರು ತೆಗೆದುಕೊಂಡು, (ಆಗ ಅದು ತಿಂಗಳಿಗೆ 8,000 ರೂ. ಇತ್ತು.) ಬಹಳಷ್ಟು ಸಲ ಕಾರ್ಮಿಕರಿಗೆ ತಿಂಗಳಿಗೆ ಜುಜುಬಿ 2,000-3,000 ರೂ ಕೊಡಲು ಆರಂಭಿಸಿದರು. ಈ ಪದ್ಧತಿ ಒಂದು ದಶಕಕ್ಕೂ ಹೆಚ್ಚು ಕಾಲ ಮುಂದುವರಿಯಿತು. ರಾಜ್ಯದ ಅನೇಕ ಭಾಗಗಳಲ್ಲಿ ಇದು ಈಗಲೂ ಮುಂದುವರಿದಿದೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ವೇತನವನ್ನು ಪರಿಷ್ಕರಿಸಲೇ ಇಲ್ಲ.

ಆತ್ಯಂತ ಹೆಚ್ಚು ನಿರ್ಲಕ್ಷ್ಯವನ್ನು ಕೋವಿಡ್ ಸಾಂಕ್ರಾಮಿಕ ಪಿಡುಗಿನ ವೇಳೆ ತೋರಿಸಲಾಯಿತು. ಸಾರಿಗೆಯೇ ಇಲ್ಲದುದರಿಂದ ಪೌರಕಾರ್ಮಿಕರು ನಡೆದೇ ಕೆಲಸಕ್ಕೆ ಬರುವಂತೆ ಮಾಡಲಾಯಿತು. ಎಲ್ಲವೂ ಮುಚ್ಚಿದ್ದುದರಿಂದ ಅವರು ಊಟ ಮಾಡಲಾಗಲೀ, ನೀರು ಕುಡಿಯಲಾಗಲೀ ಯಾವುದೇ ಜಾಗ ಇರಲಿಲ್ಲ. ಯಾವುದೇ ಶೌಚಾಲಯಕ್ಕೂ ಹೋಗುವಂತಿರಲಿಲ್ಲ. ಹೆಚ್ಚಿನ ಭಾಗ ಅವರು ಯಾವುದೇ ರಕ್ಷಣೆ ಇಲ್ಲದೇ, ಸಾರ್ವಜನಿಕ ಆರೋಗ್ಯವನ್ನೇ ತಮ್ಮ ಉದ್ದೇಶವನ್ನಾಗಿಟ್ಟುಕೊಂಡು ದುಡಿದರು.

ಇಂದು ಪೌರಕಾರ್ಮಿಕರು ಏನಾದರೂ ಸವಲತ್ತುಗಳನ್ನು ಪಡೆದಿದ್ದರೆ, ಸ್ಪಂದನೆ ಇಲ್ಲದ ಪ್ರಭುತ್ವದ ವಿರುದ್ಧ ಆವರು ಮಾಡಿದ ಹೋರಾಟ ಮತ್ತು ಪ್ರತಿಭಟನೆಗಳ ಕಾರಣದಿಂದ. ಇಂತಹ ಪ್ರತಿಭಟನೆಗೆ ವಿರಳವಾದ ಧನಾತ್ಮಕ ಸ್ಪಂದನೆ ಸಿಕ್ಕಿದ್ದರೆ, ಅದು ಸಿದ್ದರಾಮಯ್ಯ ನೇತೃತ್ವದ ಸರಕಾರದಿಂದ. ಅದು ಎಲ್ಲಾ ಪೌರಕಾರ್ಮಿಕರ ಹುದ್ದೆಗಳನ್ನು ನಿಯಮಬದ್ಧಗೊಳಿಸಿತು. ಅವರನ್ನು ವೃತ್ತಿಪರರೆಂದು ಪರಿಗಣಿಸಿ, ಅವರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸುವ ಭರವಸೆಯನ್ನೂ ಈ ಆದೇಶದಲ್ಲಿ ನೀಡಲಾಗಿತ್ತು.

ಆ ಬಳಿಕ ಬೇರೆಬೇರೆ ಮುಖ್ಯಮಂತ್ರಿಗಳು ಬಂದಿದ್ದಾರೆ. ಭರವಸೆಗಳು ಮಳೆಗಾಲದಲ್ಲಿ ಕಾವೇರಿ ಹರಿಯುವಂತೆ ಹರಿದಿವೆ. ಕರ್ನಾಟಕ ಹೈಕೋರ್ಟ್ ಸದ್ಯ ವಿಚಾರಣೆಯಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ತ್ಯಾಜ್ಯ ನಿರ್ವಹಣೆಯ ಹಲವಾರು ಅಂಶಗಳನ್ನು ಪರಿಶೀಲಿಸಿದೆ. ಆದರೆ, ಪೌರಕಾರ್ಮಿಕರ ಜೀವನದ ಹಕ್ಕನ್ನು ಪರಿಗಣಿಸಿ, ಸ್ವಚ್ಚ ಪರಿಸರದಲ್ಲಿ ಸುರಕ್ಷಿತವಾಗಿ ಕೆಲಸ ಮಾಡುವಂತ ಮೂಲಭೂತ ಹಕ್ಕುಗಳನ್ನು ಒದಗಿಸುವಲ್ಲಿ ಮುಂದುವರಿದ ಉಲ್ಲಂಘನೆಯನ್ನು ಕೊನೆಗಾಣಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡುವ ಯಾವೊಂದು ಪ್ರಯತ್ನವೂ ನಡೆದಿಲ್ಲ. ಪೌರಕಾರ್ಮಿಕರ ಇಂದಿನ ಜೀವನ ಮತ್ತು ಕೆಲಸದ ಪರಿಸ್ಥಿತಿಗೂ, 45 ವರ್ಷಗಳ ಹಿಂದೆ ಸಾಲಪ್ಪನವರು ಗಮನಿಸಿದ್ದ ಪರಿಸ್ಥಿತಿಗೂ ಯಾವ ವ್ಯತ್ಯಾಸವೂ ಇಲ್ಲ.

ಇಂತಾ ಜೀವಂತ ನರಕವನ್ನೇ ಇಂದು ಪೌರಕಾರ್ಮಿಕರು ರಾಜ್ಯಾದ್ಯಂತ ಪ್ರತಿಭಟಿಸುತ್ತಿರುವುದು. ಈ ಪ್ರತಿಭಟನೆಯ ಮೂಲಕ ಅವರು ನಮ್ಮೆಲ್ಲರಿಂದ- ಮುಖ್ಯವಾಗಿ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರದ ಪ್ರಮುಖ ಮಂತ್ರಿಗಳಿಂದ ಪಡೆಯಬಯಸುವುದು ಏನೆಂದರೆ, ತಮ್ಮ ಬಹುಕಾಲದ ಬೇಡಿಕೆಗಳನ್ನು ಈಡೇರಿಸಬೇಕು, ತಮ್ಮನ್ನು ಗೌರವದಿಂದ ಕಾಣಬೇಕು, ಇನ್ನೂ ಪಾಲಿಸದೇ ಇರುವ 1976ರಲ್ಲಿ ನೀಡಿದ ವಚನವನ್ನು ಈಗಲಾದರೂ ಪಾಲಿಸಲು ಕ್ರಮ ಕೈಗೊಳ್ಳಬೇಕು ಎಂಬುದೇ ಆಗಿದೆ.

ಎಷ್ಟೇ ವೆಚ್ಚವಾಗಲಿ, ಘಟಿಸಿದ ಒಂದು ಘೋರ ಅನ್ಯಾಯವನ್ನು ಈಗಲಾದರೂ ಸರಿಪಡಿಸಬೇಕು. ಅನಗತ್ಯವಾದ ಮೇಲ್ಸೇತುವೆಗಳು, ಬೆಂಗಳೂರಿನ ಸೌಂದರ್ಯೀಕರಣ ಯೋಜನೆಗಳಿಗೆ ಖರ್ಚು ಮಾಡಲು ಹಣ ಹೊಂದಿಸುವ ಸರಕಾರವು ಮಾಡಬೇಕಾಗಿರುವ ಒಂದು ಸಣ್ಣ ಕೆಲಸವೇನೆಂದರೆ, ಜನರ ಹಣವನ್ನು ಪೋಲು ಮಾಡುವುದನ್ನು ನಿಲ್ಲಿಸಿ, ಪಿಡುಗಿನ ಕಾಲದಲ್ಲೂ ನಮ್ಮ ಆರೋಗ್ಯ ಕಾಪಾಡಿ, ಸುರಕ್ಷಿತವಾಗಿ ಇರಿಸಲು ಶಕ್ತಿ ಮೀರಿ ದುಡಿಯುವ ಪೌರಕಾರ್ಮಿಕರ ಜೀವನ ಮತ್ತು ಕೆಲಸದ ಪರಿಸ್ಥಿತಿಯ ಸುಧಾರಣೆಗೆ ಆ ಹಣವನ್ನು ತೊಡಗಿಸುವುದು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಲಿಯೋ ಎಫ್. ಸಾಲ್ಡಾನಾ

ಲಿಯೋ ಎಫ್. ಸಾಲ್ಡಾನ
ಹಲವಾರು ಸಾಮಾಜಿಕ ಮತ್ತು ಪರಿಸರ ಸಂಬಂಧಿ ಸಂಕೀರ್ಣ ಸಮಸ್ಯೆಗಳನ್ನು ನಿಭಾಯಿಸುವ ಬೆಂಗಳೂರು ಮೂಲದ ಸರಕಾರೇತರ ಸಂಘಟನೆ- ಎನ್ವಾಯರ್ನಮೆಂಟ್ ಸಪೋರ್ಟ್ ಗ್ರೂಪ್‌ನಲ್ಲಿ ದುಡಿಯುತ್ತಿದ್ದಾರೆ.


ಇದನ್ನೂ ಓದಿ: ಖಾಯಮಾತಿಗೆ ಇನ್ನೆಷ್ಟು ವರ್ಷ ಕಾಯಬೇಕು?: ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಬೃಹತ್‌…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...