‘ವರ ಅಥವಾ ಆತನ ಕುಟುಂಬದವರು ವರದಕ್ಷಿಣೆಗೆ ಬೇಡಿಕೆಯಿಟ್ಟರೆ, ಯುವತಿಯರು ಮದುವೆ ಪ್ರಸ್ತಾಪಗಳನ್ನು ತಿರಸ್ಕರಿಸುವ ಧೈರ್ಯ ತೋರಬೇಕು’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಲಹೆ ನೀಡಿದರು. ಹೆಚ್ಚಿನ ವರದಕ್ಷಿಣೆ ನೀಡಲಾಗದೆ ಮದುವೆ ಮುರಿದುಬಿದ್ದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಡಾ. ಶಹಾನಾ ಪ್ರಕರಣದ ಕುರಿತು ಮಾತನಾಡುವಾಗ ಅವರು ಯುವತಿಯರಿಗೆ ಹಾಗೂ ಪೋಷಕರಿಗೆ ಕಿವಿಮಾತು ಹೇಳಿದರು.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವೈದ್ಯೆ ಆತ್ಮಹತ್ಯೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, ‘ಯಾರಾದರೂ ವರದಕ್ಷಿಣೆಗೆ ಬೇಡಿಕೆ ಇಟ್ಟರೆ, ಯುವತಿಯರು ಅಂತಹ ಪ್ರಸ್ತಾಪಗಳನ್ನು ಬಲವಾಗಿ ತಿರಸ್ಕರಿಸಬೇಕು. ನಮ್ಮ ಹುಡುಗಿಯರು ಆ ಹುಡುಗರಿಗೆ ‘ಪೋಡಾ’ (ಹೋಗೋ) ಎಂದು ಹೇಳಿ ಮದುವೆ ತಿರಸ್ಕರಿಸುವ ಧೈರ್ಯ ತೋರಿಸಬೇಕು. ಸಮಾಜ ಮತ್ತು ಕುಟುಂಬಗಳು ಇದಕ್ಕಾಗಿಯುವತಿಯರಿಗೆ ಬೆಂಬಲಿಸಬೇಕು’ ಎಂದು ಹೇಳಿದರು.
ವರದಕ್ಷಿಣೆ ಬೇಡಿಕೆಯನ್ನು ತಿರಸ್ಕರಿಸುವ ನಿದರ್ಶನಗಳನ್ನು ಸಮಾಜವು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ಕೂಡಾ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ. ಇಂತಹ ಆಚರಣೆಗಳನ್ನು ತಡೆಗಟ್ಟುವುದು ಹೆಣ್ಣುಮಕ್ಕಳ ಮತ್ತು ಅವರ ಪೋಷಕರು ಹಾಗೂ ಕುಟುಂಬದ ಜವಾಬ್ದಾರಿ. ಸಮಾಜವನ್ನು ಬಲಪಡಿಸಸಬೇಕಾದರೆ ಯುವತಿಯರು ಹೆಚ್ಚೆಚ್ಚು ಆತ್ಮವಿಶ್ವಾಸ ಹೊಂದುವಂತೆ ನೋಡಿಕೊಳ್ಳಬೇಕು. ವರದಕ್ಷಿಣೆ ಕೇಳುವುದು ಮತ್ತು ಸ್ವೀಕರಿಸುವುದು ತಪ್ಪು ಎಂಬ ಸಾಮಾನ್ಯ ಅರಿವು ಜನರಿಗಿದೆ’ ಎಂದರು.
ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ಶಹಾನಾ (26) ತನ್ನ ಅಪಾರ್ಟ್ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮದುವೆ ನಿಗದಿಯಾಗಿದ್ದ ವರನ ಮನೆಯವರು ಹೆಚ್ಚಿನ ವರದಕ್ಷಿಣೆ ಕೇಳಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಶಹಾನಾ ಈ ನಿರ್ಧಾರ ಮಾಡಿದ್ದಾರೆ ಎಂದು ಆಕೆಯ ಮನೆಯವರು ಆರೋಪಿಸಿದ್ದಾರೆ.
ಇದನ್ನೂ ಓದಿ; ಗೌರಿ ಹತ್ಯೆ ಪ್ರಕರಣ; ‘ಕೋಕಾ ಕಾಯ್ದೆ’ ಆರೋಪಿ ಮೋಹನ್ ನಾಯಕ್‌ಗೆ ಜಾಮೀನು!


