Homeಕರ್ನಾಟಕಗೌರಿ ಹತ್ಯೆ ಪ್ರಕರಣ; 'ಕೋಕಾ ಕಾಯ್ದೆ' ಆರೋಪಿ ಮೋಹನ್ ನಾಯಕ್‌ಗೆ ಜಾಮೀನು!

ಗೌರಿ ಹತ್ಯೆ ಪ್ರಕರಣ; ‘ಕೋಕಾ ಕಾಯ್ದೆ’ ಆರೋಪಿ ಮೋಹನ್ ನಾಯಕ್‌ಗೆ ಜಾಮೀನು!

- Advertisement -
- Advertisement -

ಜನಪರ ಪತ್ರಕರ್ತೆ, ಬರಹಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ 11ನೇ ಆರೋಪಿ, ದಕ್ಷಿಣ ಕನ್ನಡ ಜಿಲ್ಲೆ ನಿವಾಸಿ ಮೋಹನ್ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ಗುರುವಾರ (ಡಿ.7) ಜಾಮೀನು ನೀಡಿದೆ. ಹತ್ಯೆ ಮಾಡಿದ ಆರೋಪಿಗಳಿಗೆ ಆಶ್ರಯ ನೀಡಿದ ಹಾಗೂ ಕೊಲೆ ಸಂಚಿನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮೋಹನ್ ವಿರುದ್ಧ ‘ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ’ (ಕೋಕಾ) ನಿಯಮಗಳ ಅಡಿ ವಿಚಾರಣೆ ನಡೆಯುತ್ತಿದೆ.

ಪ್ರಕರಣ ಸಂಬಂಧ ಅಮೋಲ್ ಕಾಳೆ, ಅಮಿತ್ ಬದ್ದಿ, ಪರಶುರಾಮ್ ವಾಘ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ದೆಗ್ವೇಕರ್, ಭರತ್ ಕುರಾಣೆ, ರಾಜೇಶ್ ಡಿ. ಬಂಗೇರ, ಸುಧನ್ವ ಗೊಂದಲೇಕರ್, ಮೋಹನ್ ನಾಯಕ್ ಎನ್., ಸುರೇಶ್ ಎಚ್.ಎಲ್., ಶರದ್ ಬಿ.ಕಲಸ್ಕರ್, ವಾಸುದೇವ್ ಬಿ. ಸೂರ್ಯವಂಶಿ, ಸುಜಿತ್ಕುಮಾರ್, ಮನೋಹರ ಯಡವೆ, ಶ್ರೀಕಾಂತ ಜೆ.ಪಗಾರಕರ್, ಕೆ.ಟಿ. ನವೀನ್ ಕುಮಾರ್ ಮತ್ತು ಋಷಿಕೇಶ್ ದೇವಡೇಕರ್ ಎಂಬುವವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿದ್ದಾರೆ.

ಮೋಹನ್ ವಿರುದ್ಧದ ಕೋಕಾ ಕಾಯ್ದೆ ಮರುಸ್ಥಾಪಿಸಿದ್ದ ಸುಪ್ರೀಂಕೋರ್ಟ್:

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೋಹನ್ ನಾಯಕ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ನಿಯಮಗಳ ಅಡಿ ದಾಖಲಿಸಲಾದ ಆರೋಪ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಗೌರಿ ಸಹೋದರಿ ಕವಿತಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. 2021ರ ಅಕ್ಟೋಬರ್‌ನಲ್ಲಿ ಆದೇಶ ನೀಡಿದ್ದ ಸುಪ್ರೀಂ, ಮೋಹನ್ ನಾಯಕ್ ವಿರುದ್ಧ ಕೋಕಾ ಕಾಯ್ದೆಯನ್ನು ಮರು ಸ್ಥಾಪಿಸುವಂತೆ ಸೂಚನೆ ನೀಡಿತ್ತು.

ಮೋಹನ್ ನಾಯಕ್ ವಿರುದ್ಧದ ಕೋಕಾ ತನಿಖೆಯನ್ನು ಜಾರಿಗೊಳಿಸಲು ಪೊಲೀಸ್ ಇಲಾಖೆ ನೀಡಿದ್ದ ಅನುಮೋದನೆಯನ್ನು 2018ರ ಆಗಸ್ಟ್ 14ರಂದು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿದ್ದ ಕವಿತಾ ಲಂಕೇಶ್ ಹಾಗೂ ಕರ್ನಾಟಕ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮನವಿ ಪುರಸ್ಕರಿಸಿದ್ದ ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ, ಕೋಕಾ ಕಾಯ್ದೆ ಮರುಸ್ಥಾಪನೆಗೆ ಅನುಮತಿ ನೀಡಿತ್ತು.

ಕೋಕಾ ಕಾಯ್ದೆಯಡಿ ಬಂಧಿತನಾಗಿದ್ದ ಮೋಹನ್ ನಾಯಕ್‌ಗೆ ವಿಚಾರಣೆ ಮುಗಿಯುವವರೆಗೂ ಜಾಮೀನು ಪಡೆಯುವುದು ಕಷ್ಟವಾಗಲಿದೆ ಎನ್ನಲಾಗಿತ್ತು. 2018ರಲ್ಲಿ ಈತನ ವಿರುದ್ಧ ಕೋಕಾ ಕಾಯ್ದೆ ರದ್ದುಗೊಳಿಸಿದ ಬೆನ್ನಲ್ಲೇ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಇತ್ಯರ್ಥಪಡಿಸುವವರೆಗೂ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಹೇಳಿತ್ತು. ಇದೀಗ ಮೋಹನ್ ಕೋಕಾ ಕಾಯ್ದೆಯಡಿ ಬಂಧಿತನಾಗಿದ್ದರೂ ಜಾಮೀನು ಲಭಿಸಿರುವುದು ಆಶ್ಚರ್ಯ ಮೂಡಿಸಿದೆ.

ಪ್ರಮುಖ ಆರೋಪಿ ಅಮೋಲ್ ಕಾಳೆ ನೇತೃತ್ವದಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ ಸಂಚಿನಲ್ಲಿ ಮೋಹನ್ ನಾಯಕ್ ಭಾಗಿಯಾಗಿದ್ದ. ಆರೋಪಿ ಕಾಳೆ, ಗೌರಿ ಅವರಲ್ಲದೆ ಇನ್ನೂ ಅನೇಕ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎನ್ನುವುದು ಎಸ್ಐಟಿ ತನಿಖೆಯಿಂದ ಬಹಿರಂಗವಾಗಿದೆ ಎಂದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

ಇದನ್ನೂ ಓದಿ; ಕಲ್ಬುರ್ಗಿ-ಗೌರಿ ಹತ್ಯೆ ವಿಚಾರಣೆ; ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸಿಎಂ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...