ರಾಜ್ಯದ ದೇಶಿ ಮುಸ್ಲಿಮರ ಆರ್ಥಿಕ-ಸಾಮಾಜಿಕ ಸಮೀಕ್ಷೆಗೆ ಸಮೀಕ್ಷೆಗೆ ಅಸ್ಸಾಂ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ.
ಮುಸ್ಲಿಂ ಜನಾಂಗದ ಐದು ಸಮುದಾಯಗಳನ್ನು ದೇಶಿಯ ಅಸ್ಸಾಂ ಮುಸ್ಲಿಮರು ಎಂದು ಹಿಮಂತ್ ಬಿಶ್ವ ಶರ್ಮಾ ನೇತೃತ್ವದ ಸರ್ಕಾರ ಬಿಜೆಪಿ ಸರ್ಕಾರ ಮಾನ್ಯ ಮಾಡಿದ ಒಂದು ವರ್ಷದ ಬಳಿಕ ಸಮೀಕ್ಷೆಗೆ ಸಂಪುಟ ನಿರ್ಧಾರ ಕೈಗೊಂಡಿದೆ.
ಡೈರೆಕ್ಟೋರೇಟ್ ಆಫ್ ಚಾರ್ ಏರಿಯಾಸ್ ಡೆವಲಪ್‌ಮೆಂಟ್ ಅನ್ನು ಡೈರೆಕ್ಟೋರೇಟ್ ಮೈನಾರಿಟಿ ಅಫೈರ್ಸ್ ಅಂಡ್ ಚಾರ್ ಏರಿಯಾಸ್ ಡೆವಲಪ್‌ಮೆಂಟ್ ಎಂದು ಮರುನಾಮಕರಣ ಮಾಡಲಾಗಿದೆ. ಇದು ದೇಶಿ ಮುಸ್ಲಿಮರ ಆರ್ಥಿಕ-ಸಾಮಾಜಿಕ ಸಮೀಕ್ಷೆ ನಡೆಸಿ ವರದಿ ನೀಡಲಿದೆ ಎಂದು ಸಂಪುಟ ಟಿಪ್ಪಣಿಯಲ್ಲಿ ವಿವರಿಸಿದೆ.
2011ರ ಜನಗಣತಿಯ ಪ್ರಕಾರ, ಮುಸ್ಲಿಮರು ಅಸ್ಸಾಂನ ಒಟ್ಟು ಜನ ಸಂಖ್ಯೆಯ ಶೇ. 34ಕ್ಕಿಂತ ಹೆಚ್ಚು ಇದ್ದಾರೆ. ಲಕ್ಷದ್ವೀಪ ಮತ್ತು ಜಮ್ಮು ಕಾಶ್ಮೀರದ ನಂತರ ಅತೀ ಹೆಚ್ಚು ಮುಸ್ಲಿಮರಿರುವ ಮೂರನೇ ರಾಜ್ಯವಾಗಿದೆ ಅಸ್ಸಾಂ. ರಾಜ್ಯದ ಒಟ್ಟು 3.1 ಕೋಟಿ ಜನ ಸಂಖ್ಯೆಯಲ್ಲಿ 1 ಕೋಟಿಗೂ ಹೆಚ್ಚು ಮುಸ್ಲಿಮರಿದ್ದಾರೆ. ಈ ಪೈಕಿ ಸುಮಾರು 40 ಲಕ್ಷ ಜನರು ಮಾತ್ರ ಸ್ಥಳೀಯರು, ಅಸ್ಸಾಮಿ ಮಾತನಾಡುವ ಮುಸ್ಲಿಮರು. ಉಳಿದವರು ಬಾಂಗ್ಲಾದೇಶ ಮೂಲದವರು, ಬಂಗಾಳಿ ಮಾತನಾಡುವ ವಲಸಿಗರು ಎಂದು ವರದಿಗಳು ಹೇಳಿವೆ.
ಅಕ್ಟೋಬರ್‌ನಲ್ಲಿ, ಹಿಮಂತ ಬಿಶ್ವ ಶರ್ಮಾ ಸರ್ಕಾರವು ಸ್ಥಳೀಯ ಮುಸ್ಲಿಂ ಸಮುದಾಯಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸುವ ಬಗ್ಗೆ ಪ್ರಕಟಿಸಿತ್ತು. “ಈ ಸಮೀಕ್ಷೆ ರಾಜ್ಯದ ಸ್ಥಳೀಯ ಅಲ್ಪಸಂಖ್ಯಾತರ ಸಮಗ್ರ ಸಾಮಾಜಿಕ-ರಾಜಕೀಯ ಮತ್ತು ಶೈಕ್ಷಣಿಕ ಉನ್ನತಿಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಹಕಾರಿಯಾಗಲಿದೆ” ಎಂದು ಸಿಎಂ ಶರ್ಮಾ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಗೋರಿಯಾ, ಮೋರಿಯಾ, ಜೋಲಾಹ್ (ಕೇವಲ ಚಹಾ ತೋಟಗಳಲ್ಲಿ ವಾಸಿಸುವವರು), ದೇಸಿ ಮತ್ತು ಸೈಯದ್ ( ಅಸ್ಸಾಮಿ ಭಾಷೆ ಮಾತ್ರ ಮಾತನಾಡುವರು) ಸಮುದಾಯಗಳನ್ನು ಸ್ಥಳೀಯ ಅಸ್ಸಾಮಿ ಮುಸ್ಲಿಮರು ಎಂದು ಮಾನ್ಯ ಮಾಡಿದೆ. ಇವರು ಹಿಂದಿನ ಪೂರ್ವ ಪಾಕಿಸ್ತಾನ ಅಥವಾ ಈಗಿನ ಬಾಂಗ್ಲಾದೇಶದಿಂದ ಬಂದವರಲ್ಲ ಎಂದು ಹೇಳಿದೆ.
ಇದನ್ನೂ ಓದಿ : ‘ಒಂದು ರಾಷ್ಟ್ರ, ಒಂದು ಚುನಾವಣೆ’: ಕೇಂದ್ರದ ಉತ್ತರದಲ್ಲಿ ಸ್ಪಷ್ಟನೆ ಇಲ್ಲ!


