| ಗಿರೀಶ್ ತಾಳಿಕಟ್ಟೆ |
ಮೋದಿ-ಶಾ ವರ್ಚಸ್ಸಿಗೆ ಹಿನ್ನಡೆಯಾಗಬಾರದೆಂಬ ಕಾರಣಕ್ಕೆ ಅವರ ತವರು ರಾಜ್ಯ ಗುಜರಾತ್‍ನಲ್ಲಿ ಟ್ರಾಫಿಕ್ ದಂಡದ ಪ್ರಮಾಣವನ್ನು ಶೇ.50ರಷ್ಟು ಕಡಿಮೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಬಿಜೆಪಿ ಸರ್ಕಾರವೇ ಇರುವ ಕರ್ನಾಟಕದಲ್ಲಿ ಮಾತ್ರ ಸಿಎಂ ಘೋಷಿಸಿ ವಾರ ಕಳೆದರೂ ಆದೇಶಕ್ಕೆ ಅನುಮತಿ ಸಿಕ್ಕಿಲ್ಲ! ಯಡ್ಯೂರಪ್ಪ ತನ್ನ ವರ್ಚಸ್ಸು ಕಳೆದುಕೊಳ್ಳಬೇಕು ಅಂತಲೇ ಹೀಗೆಲ್ಲ ಮಾಡಲಾಗುತ್ತಿದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
ಮೊನ್ನೆ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಯ್ತು. ಬೆಳಗಾವಿಯಲ್ಲಿ ನಡೆದ ಘಟನೆ ಅದು. ಪತ್ರಿಕಾಗೋಷ್ಠಿಗೆಂದು ಅಣಿಯಾಗಿ ನಿಂತಿದ್ದ ಸಿಎಂ ಯಡ್ಯೂರಪ್ಪ ಪತ್ರಕರ್ತ ಎನ್ನಲಾದ ಒಬ್ಬ ವ್ಯಕ್ತಿ ಕೇಳಿದ ಪ್ರಶ್ನೆಗೆ ಸಿಟ್ಟಿಗೆದ್ದು ಆತನತ್ತ ನುಗ್ಗುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಪಕ್ಕದಲ್ಲಿದ್ದ ಗೃಹಮಂತ್ರಿ ಬಸವರಾಜ್ ಬೊಮ್ಮಾಯಿ ತಡೆಯದೇ ಹೋಗಿದ್ದರೆ ಯಡ್ಯೂರಪ್ಪ ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿದ್ದರಾ? ಬಹುಶಃ ಆ ಮಟ್ಟಿಗಿನ ಮತಿಗೇಡಿ ಕೆಲಸಕ್ಕೆ ಅವರು ಕೈಹಾಕುತ್ತಿರಲಿಲ್ಲ ಅನ್ನಿಸುತ್ತೆ. ಆದರೂ ಯಡ್ಯೂರಪ್ಪ ಆ ಕ್ಷಣಕ್ಕೆ ತಾಳ್ಮೆ ಕಳೆದುಕೊಂಡದ್ದು ಮಾತ್ರ ಸ್ಪಷ್ಟ. ಮನುಷ್ಯ ಸಾಮಾನ್ಯವಾಗಿ ಹತಾಶೆ ಮತ್ತು ಅಸಹಾಯಕತೆಗೆ ಸಿಲುಕಿದಾಗ ಹೀಗೆ ತನ್ನ ಸಾರ್ವಜನಿಕ ಘನತೆ, ಗಾಂಭೀರ್ಯವನ್ನೂ ಲೆಕ್ಕಿಸದೆ ವರ್ತಿಸುತ್ತಾನೆ. ಹಾಗಂತ ಮನೋಶಾಸ್ತ್ರ (ಮನುಶಾಸ್ತ್ರವಲ್ಲ) ಹೇಳುತ್ತೆ. ಅರೆ, ಸತತ ಹದಿನಾಲ್ಕು ತಿಂಗಳ ಅಸಿಡಿಟಿಯನ್ನು ನೀಗಿಕೊಂಡು, ಅಖಂಡ ಮೂರು ದಿನಗಳ ಕಾಲ ಸದನದಲ್ಲಿ ಕಠಿಣ ಮೌನವ್ರತಗೈದು (ಕಾಂಗ್ರೆಸ್-ಜೆಡಿಎಸ್ ಕೆಣಕಿದರೂ) ದಕ್ಕಿಸಿಕೊಂಡ ಸಿಎಂ ಕುರ್ಚಿಯೇ ಸಿಕ್ಕಿರುವಾಗ ಯಡ್ಯೂರಪ್ಪನವರು ಹತಾಶೆಗೊಳ್ಳುವಂ ತದ್ದು ಮತ್ತೇನಿದೆ?
ಈ ಪ್ರಶ್ನೆಯೇ ಬಿಜೆಪಿಯೊಳಗೆ ನಡೆಯುತ್ತಿರುವ ಶೀತಲ ಸಮರದ ಒಂದೊಂದೇ ಮಡಿಕೆಗಳನ್ನು ನೀಟಾಗಿ ತೆರೆದಿಡುತ್ತಾ ಸಾಗುತ್ತೆ. ಯಡ್ಯೂರಪ್ಪ ಈಗ ಹಿಂದಿನ ಯಡ್ಯೂರಪ್ಪ ಆಗಿ ಉಳಿದಿಲ್ಲ. ಪಕ್ಷ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದೆಯಾದರು ಅವರೀಗ ಪಕ್ಷಕ್ಕೆ ಬೇಡವಾದ ಕೂಸು ಎಂಬುದು ಅಕ್ಷರಶಃ ಸತ್ಯ! ಹಠಕ್ಕೆ ಬಿದ್ದು, ಹೈಕಮಾಂಡನ್ನೇ ಎದುರು ಹಾಕಿಕೊಂಡು ಸಿಎಂ ಹುದ್ದೆಗೇರಿರುವ ಅವರು ಸಣ್ಣದೊಂದು ನಿರ್ಧಾರವನ್ನೂ ತೆಗೆದುಕೊಳ್ಳಲು ಆಗದಷ್ಟು ಡಮ್ಮಿಯಾಗಿ ಹೋಗಿದ್ದಾರೆ. ಮೂಲತಃ ದೂರ್ವಾಸ ಮುನಿಯಂತೆ, ಕಣ್ಣಲ್ಲೆ ಕೆಂಡ ಕಾರುತ್ತಾ ಶಾಸಕರು-ಸಂಸದರನ್ನೆಲ್ಲ ತನ್ನ ಅಂಕೆಯಲ್ಲಿಟ್ಟುಕೊಂಡು ಮೆರೆದಾಡುತ್ತಿದ್ದ ಯಡ್ಯೂರಪ್ಪನವರಿಗೆ ಹೀಗೆ ಮತ್ತೊಬ್ಬರ ಆಣತಿಗಾಗಿ ಕಾದುಕೂರುವುದು ಒಪ್ಪುವ ಜಾಯಮಾನವೇ ಅಲ್ಲ. ಈ ಆಂತರಿಕ ಸಂಘರ್ಷವೇ ಅವರನ್ನು ಹತಾಶೆಗೆ ತಳ್ಳಿರೋದು. ಒಂದೊಮ್ಮೆ ಮೋದಿ-ಶಾ ಎಂಬ ದ್ವೈಕಮಾಂಡಷ್ಟೇ ಯಡ್ಯೂರಪ್ಪನವರನ್ನು ಹೀಗೆ ಆಟ ಆಡಿಸಿದ್ದರೆ ಸಹಿಸಿಕೊಳ್ಳುತ್ತಿದ್ದರೇನೊ. ಸಾರ್ವಜನಿಕ ಸಭೆಯೊಂದರಲ್ಲಿ ತನಗಿಂತಲೂ ವಯಸ್ಸಿನಲ್ಲಿ ಇಪ್ಪತ್ತೊಂದು ವರ್ಷ ಕಿರಿಯವರಾದ ಅಮಿತ್ ಶಾ ಕಾಲಿಗೇ ಬಿದ್ದಿದ್ದ ಯಡ್ಯೂರಪ್ಪ ಅಂತಾ ಕಾಂಪ್ರಮೈಸಿಗೂ ಸಿದ್ಧರಾಗಿದ್ದರೂ ಅಚ್ಚರಿಯಿಲ್ಲ. ಆದರೆ ಯಾವಾಗ ತನ್ನ ಕಂಕುಳಲ್ಲೆ ಬೆಳೆದು ಬಲಿಷ್ಠನಾಗಿ ಈಗ ತನ್ನ ವಿರುದ್ಧವೇ ತಿರುಗಿಬಿದ್ದಿರುವ ಬಿ.ಎಲ್.ಸಂತೋಷ್ ಕೂಡಾ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಗೇರಿ `ತ್ರೈ’ಕಮಾಂಡ್ (ಮೋದಿ-ಶಾ-ಸಂತೋಷ್) ಆದ ನಂತರವಂತೂ ಯಡ್ಯೂರಪ್ಪ ಕುದ್ದು ಹೋಗುತ್ತಿದ್ದಾರೆ. ಕಾರಣವಿಷ್ಟೇ ಕರ್ನಾಟಕ ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಸಂತೋಷ್ ತಂತ್ರದಿಂದಾಗಿ ಯಡ್ಯೂರಪ್ಪನವರಿಗೆ ಒಂದೊಂದೇ ಚೆಕ್‍ಮೇಟ್ ಇಡಲಾಗುತ್ತಿದೆ. ಇದೇ ಅವರ ಹತಾಶೆಯ ಮೂಲ`ವ್ಯಾಧಿ’!
ಒಂದುಕಡೆ ನೆರೆ ಬಂದು ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ತೊಳೆದು ಹಾಕಿದ್ದರೂ ಕೇಂದ್ರದಿಂದ ರಾಜ್ಯಕ್ಕೆ ಪರಿಹಾರಧನವನ್ನು ಮಂಜೂರು ಮಾಡಿಸಿಕೊಳ್ಳಲು ಯಡ್ಯೂರಪ್ಪನವರಿಗೆ ಇದುವರೆಗೆ ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ, ಸ್ವತಃ ಪ್ರಧಾನಿಯೇ ಚಂದ್ರಯಾನದ ನಿಮಿತ್ತ ಕರ್ನಾಟಕಕ್ಕೆ ಬಂದಾಗಲೂ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮಾತಿರಲಿ ಸಿಎಂ ಜೊತೆ ಪರಿಹಾರದ ಬಗ್ಗೆ ಮಾತಾಡುವುದಕ್ಕೂ ಸಮಯ ಕೊಟ್ಟಿಲ್ಲ. `ನೆರೆ ಪರಿಹಾರ ಬಗ್ಗೆ ಪ್ರಧಾನಿ ಬಳಿ ಮಾತಾಡಲು ಸಮಯವೇ ಸಿಗಲಿಲ್ಲ’ ಅಂತ ಯಡ್ಯೂರಪ್ಪನವರೇ ಹೇಳಿಕೊಂಡಿದ್ದಾರೆ. ಇದಕ್ಕೆ ವ್ಯತಿರಕ್ತವಾಗಿ ಕರ್ನಾಟಕದಲ್ಲಿ ನೆರೆ ಬಂದ ಸಂದರ್ಭದಲ್ಲೇ ಅತ್ತ ಮಹಾರಾಷ್ಟ್ರವೂ ಪ್ರವಾಹಕ್ಕೆ ಸಿಲುಕಿತ್ತು. ಅಲ್ಲಿಯೂ ಬಿಜೆಪಿ ಸರ್ಕಾರವೇ ಇದೆ. ತನಗೆ ಆರು ಸಾವಿರ ಕೋಟಿ ನಷ್ಟ ಆಗಿದೆ ಅಂತ ಅದು ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅಧ್ಯಯನ ಮಾಡಿಬರುವಂತೆ ಏಳು ಜನರ ನಿಯೋಗವನ್ನೂ ಕಳಿಸಿಕೊಟ್ಟಿದೆ. ಆದರೆ ಅವರದೇ ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದ ಸಿಎಂ ಮಾತಾಡಲು ಅವಕಾಶ ಕೇಳಿದರೂ ಪ್ರಧಾನಿಗಳು ಕಿವಿಗೊಡುತ್ತಿಲ್ಲ ಅಂದರೆ ಏನರ್ಥ?
ಇನ್ನು ಇತ್ತೀಚೆಗೆ ಜನರನ್ನು ವಿಪರೀತ ಕೆರಳಿಸಿದ ಟ್ರಾಫಿಕ್ ದಂಡಗಳ ಅಧ್ವಾನದಲ್ಲೂ ಬಿಜೆಪಿ ಹೈಕಮಾಂಡ್ ಯಡ್ಯೂರಪ್ಪನವರಿಗೆ ಭರ್ಜರಿ ಮುಖಭಂಗ ಮಾಡುತ್ತಿದೆ. ಬಾದಲ್ ನಂಜುಂಡಸ್ವಾಮಿ ಎಂಬುವವರು ಅನ್ಯಗ್ರಹದ ಮೇಲೆ ಬಾಹ್ಯಾಕಾಶಯಾನಿಯೊಬ್ಬರು ನಡೆದಂತೆ ಬೆಂಗಳೂರಿನ ರಸ್ತೆಯ ಮೇಲೆ ನಡೆದು ವೈರಲ್ ಆದ ಅಣುಕು ವಿಡಿಯೋ ಸಾಕು ನಮ್ಮ ದೇಶದ ರಸ್ತೆಗಳ ಸ್ಥಿತಿಗತಿ ಅರ್ಥಮಾಡಿಸಲು. ಅವುಗಳನ್ನು ಸರಿ ಮಾಡುವ ಮೊದಲೇ ಕೇಂದ್ರ ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಯ ದಂಡಗಳನ್ನು ಅನಾಮತ್ತು ನೂರು ಪಟ್ಟು ಹೆಚ್ಚಿಸಿದ್ದು ಜನರನ್ನು ಕೆರಳಿಸಿದೆ. ಇದಕ್ಕೆ ವಿಪರೀತ ಪ್ರತಿರೋಧ ಬರುತ್ತಿದ್ದಂತೆಯೇ ಪಶ್ಚಿಮ ಬಂಗಾಳದಂತಹ ಹಲವು ರಾಜ್ಯ ಸರ್ಕಾರಗಳು ಈ ಅವೈಜ್ಞಾನಿಕ ಕಾಯ್ದೆಯನ್ನು ತಮ್ಮ ರಾಜ್ಯದಲ್ಲಿ ಜಾರಿಗೆ ತರುವುದೇ ಇಲ್ಲ ಎಂದು ಸೆಡ್ಡು ಹೊಡೆದರೆ, ಗೋವಾದಂತಹ ಪುಟ್ಟ ರಾಜ್ಯವು ರಸ್ತೆಗಳನ್ನು ಸುಧಾರಿಸುವವರೆಗೆ ಈ ನಿಯಮ ಜಾರಿಗೆ ಮಾಡಲ್ಲ ಎಂದು ಹೇಳಿದೆ. ಇನ್ನು ಬಿಜೆಪಿಯೇ ಅಧಿಕಾರದಲ್ಲಿರುವ, ಮೋದಿಯ ತವರು ರಾಜ್ಯ ಗುಜರಾತ್‍ನಲ್ಲೇ ದಂಡದ ಪ್ರಮಾಣವನ್ನು ಶೇ.50ರಷ್ಟು ಕಡಿಮೆ ಮಾಡುವುದಾಗಿ ಅಲ್ಲಿನ ರಾಜ್ಯ ಸರ್ಕಾರ ಘೋಷಿಸಿದೆ.
ಇದೇ ಸಂದರ್ಭವನ್ನು ನೋಡಿಕೊಂಡ ಯಡ್ಯೂರಪ್ಪನವರು ಕೂಡಾ ಜನರ ಆಕ್ರೋಶ ತಗ್ಗಿಸಲು ಹೈಕಮಾಂಡ್‍ನ ಅನುಮತಿಯಿಲ್ಲದೆ ಕರ್ನಾಟಕದಲ್ಲೂ ದಂಡದ ಪ್ರಮಾಣವನ್ನು ಇಳಿಸಲಾಗುವುದು ಎಂದು ಘೋಷಿಸಿ, ಸಾರಿಗೆ ಅಧಿಕಾರಿಗಳಿಗೆ ಸೂಚನೆಯನ್ನೂ ರವಾನಿಸಿಬಿಟ್ಟರು! ಘೋಷಣೆ ಹೊರಬಿದ್ದು ವಾರ ಕಳೆದರೂ ದಂಡ ಕಡಿಮೆಯಾದ ಆದೇಶವೇ ಹೊರಬಿದ್ದಿಲ್ಲ. ಇದು ಸಹಾ ಬಿಜೆಪಿ `ತ್ರೈ’ಕಮಾಂಡ್ ಯಡ್ಯೂರಪ್ಪನವರಿಗೆ ಕೊಡುತ್ತಿರುವ ಅಸಹಕಾರಕ್ಕೆ ಸಾಕ್ಷಿ! ಈ ಕಾಯ್ದೆ ಜಾರಿಗೆ ತಂದಿರೋದು ಕೇಂದ್ರದ ಬಿಜೆಪಿ ಸರ್ಕಾರ, ಈಗ ರಾಜ್ಯದಲ್ಲಿ ನಮ್ಮದೇ ಪಕ್ಷ ಅದನ್ನು ಕಡಿತಗೊಳಿಸಿದರೆ ಕೇಂದ್ರ ಸರ್ಕಾರದ ಕಾಯ್ದೆಯೇ ತಪ್ಪು ಎಂಬ ಸಂದೇಶ ರವಾನೆಯಾಗುವುದಿಲ್ಲವೇ ಎಂಬ ತರ್ಕವನ್ನು ಮುಂದಿಟ್ಟಿರುವ ತ್ರೈಕಮಾಂಡ್ ದಂಡ ಇಳಿಸಲು ಗ್ರೀನ್‍ಸಿಗ್ನಲ್ ಕೊಡುತ್ತಿಲ್ಲ ಎಂಬ ವರ್ತಮಾನಗಳು ಕೇಳಿಬಂದಿವೆ. ವಿಪರ್ಯಾಸವೆಂದರೆ ಈ ಕಾಯ್ದೆಯನ್ನು ಪರೋಕ್ಷವಾಗಿ ಧಿಕ್ಕರಿಸಿದ ಗೋವಾ, ಗುಜರಾತ್‍ಗಳಲ್ಲಿ ಇರೋದು ಬಿಜೆಪಿ ಸರ್ಕಾರ. ಅವುಗಳಿಗೆ ಸಿಕ್ಕ ಅನುಮತಿ ಯಡ್ಯೂರಪ್ಪನವರು ಸಿಎಂ ಆಗಿರುವ ಕರ್ನಾಟಕಕ್ಕೆ ಏಕೆ ಸಿಗುತ್ತಿಲ್ಲ?
ಮೋದಿ-ಶಾ ವರ್ಚಸ್ಸಿಗೆ ಹಿನ್ನಡೆಯಾಗಬಾರದೆಂಬ ಕಾರಣಕ್ಕೆ ಗುಜರಾತ್‍ನಲ್ಲಿ ದಂಡದ ಪ್ರಮಾಣವನ್ನು ಶೇ.50ರಷ್ಟು ಕಡಿಮೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಬಿಜೆಪಿ ಸರ್ಕಾರವೇ ಇರುವ ಕರ್ನಾಟಕದಲ್ಲಿ ಮಾತ್ರ ಸಿಎಂ ಘೋಷಿಸಿ ವಾರ ಕಳೆದರೂ ಆದೇಶಕ್ಕೆ ಅನುಮತಿ ಸಿಕ್ಕಿಲ್ಲ! ಒಟ್ಟಿನಲ್ಲಿ ಯಡ್ಯೂರಪ್ಪ ತನ್ನ ವರ್ಚಸ್ಸು ಕಳೆದುಕೊಳ್ಳಬೇಕು ಅಂತಲೇ ಹೀಗೆಲ್ಲ ಮಾಡಲಾಗುತ್ತಿದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಇಂಥಾ ಅಸಹಕಾರಕ್ಕೆ ಬೇಸತ್ತು ಯಡ್ಯೂರಪ್ಪ ತಾನಾಗಿಯೇ ಅಧಿಕಾರ ಬಿಟ್ಟು ಹೋಗುವಂತಾದರೆ ತನ್ನ ಹಾದಿ ಸುಗಮವಾಗುತ್ತದೆ ಎಂತಲೇ ಬಿ.ಎಲ್.ಸಂತೋಷ್ ಯಡ್ಯೂರಪ್ಪನವರಿಗೆ ಹೀಗೆ ಹೆಜ್ಜೆಹೆಜ್ಜೆಗೂ ಅಡ್ಡಗಾಲು ಹಾಕುತ್ತಿದ್ದಾರೆ ಅನ್ನೋದು ಲೇಟೆಸ್ಟ್ ವರ್ತಮಾನ.
ಅಂದಹಾಗೆ, ಮೈತ್ರಿ ಸರ್ಕಾರವನ್ನು ಬೀಳಿಸಿ ಮಧ್ಯಂತರ ಚುನಾವಣೆಗೆ ಹೋಗೋದು ಬಿಜೆಪಿ ಹೈಕಮಾಂಡ್‍ನ ಲೆಕ್ಕಾಚಾರವಾಗಿತ್ತು. ಹಾಗೆ ಮಾಡಿದರೆ, ಲೋಕಸಭಾ ಫಲಿತಾಂಶದ ಹ್ಯಾಂಗ್‍ಓವರ್‍ನಲ್ಲಿದ್ದ ಕರ್ನಾಟಕದ ಮತದಾರರನ್ನು ಮೋದಿಯ ಜಪದಲ್ಲಿ ಅನಾಯಾಸವಾಗಿ ಸೆಳೆದು ಏನಿಲ್ಲವೆಂದರು 140-150 ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರ ಬಿಜೆಪಿಗಿತ್ತು. ಆಗ ಯಡ್ಯೂರಪ್ಪನವರ ಹಂಗಿಲ್ಲದೆ ತಮಗಿಷ್ಟಬಂದ (ಸಂತೋಷ್) ವ್ಯಕ್ತಿಯನ್ನು ಸಿಎಂ ಮಾಡುವುದು ಬಿಜೆಪಿಗೆ ಸುಲಭವಾಗುತ್ತಿತ್ತು. ಆದರೆ ಯಡ್ಯೂರಪ್ಪ ಹಠ ಹಿಡಿದು ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದು ಸಿಎಂ ಆದರು. ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೇ ಹೈಕಮಾಂಡ್‍ನಿಂದ ಅಷ್ಟು ಸುಲಭಕ್ಕೆ ಗ್ರೀನ್‍ಸಿಗ್ನಲ್ ಸಿಗದಿದ್ದುದು, ಅಲ್ಲಿಂದಾಚೆಗೆ ಪ್ರವಾಹ ಉಕ್ಕಿ ಹರಿದರು ತನ್ನದೊಂದು ಸಂಪುಟ ರಚಿಸಿಕೊಳ್ಳಲಾಗದೆ ಪರದಾಡಿದ್ದುದು, ಸಂಪುಟ ರಚನೆಯಲ್ಲು ತನ್ನ ಹಿಂಬಾಲಕರನ್ನು ಮಂತ್ರಿ ಮಾಡಿಕೊಳ್ಳಲಾಗದೆ ಕೈಕೈ ಹಿಸುಕಿಕೊಳ್ಳುವಂತಾದದ್ದು, ಮೂರುಮೂರು ಡಿಸಿಎಂಗಳ ಇಕ್ಕಟ್ಟಿನಲ್ಲಿ ಸಿಲುಕಿಕೊಂಡದ್ದು, ಇಷ್ಟವಿಲ್ಲದಿದ್ದರೂ `ಬ್ಲೂ ಬಾಯ್’ ಸವದಿಯನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿಕೊಳ್ಳುವಂತಾದದ್ದು, ಇವೆಲ್ಲವೂ ಘಟಿಸುವುದಕ್ಕೆ ಮೊದಲೇ ಬಿ.ಎಲ್.ಸಂತೋಷ್‍ರಿಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ `ಹೈಕಮಾಂಡ್’ ಮಟ್ಟದ ಪ್ರಮೋಷನ್ ಸಿಕ್ಕಿದ್ದು ಇವೆಲ್ಲವೂ ಬಿಜೆಪಿಯೊಳಗೆ ಯಡ್ಯೂರಪ್ಪನವರು ಅನುಭವಿಸುತ್ತಿರುವ ಹತಾಶೆಯ `ಸಿಂಪ್ಟಮ್’ಗಳಲ್ಲದೆ ಬೇರೇನೂ ಅಲ್ಲ.
ಬೈದು ಬೈ, ಇದೆಲ್ಲದರ ನಡುವೆ ಯಡ್ಯೂರಪ್ಪ ನಿರಾತಂಕವಾಗಿ ಕೆಲಸ ಮಾಡಲು ಸಾಧ್ಯವಾಗಿರೋದು ಒಂದೇ ಕಾಯಕ, ಅದು ಟ್ರಾನ್ಸ್‍ಫರ್ ದಂಧೆ! ಅಧಿಕಾರ ವಹಿಸಿಕೊಂಡ ಮೂರೇ ದಿನಕ್ಕೆ ನೂರು ಟ್ರಾನ್ಸ್‍ಫರ್ ಮಾಡಿದ್ದ ಯಡ್ಯೂರಪ್ಪನವರನ್ನು ನಮ್ಮ `ರೆಸ್ಪಾನ್ಸಿಬಲ್ ಮೀಡಿಯಾ’ಗಳು `ಸೆಂಚೂರಿ ಸ್ಟಾರ್’ ಅಂತ ವ್ಯಂಗ್ಯ ಮಾಡಲಿಕ್ಕೂ ಬಾರದ ಕಾರ್ಯಕ್ರಮಗಳನ್ನು ಮಾಡಿ ಜನರನ್ನೇ ತಬ್ಬಿಬ್ಬುಗೊಳಿಸಿದ್ದುಂಟು. ಈಗಲೂ ಅದೊಂದೇ ಕಾಯಕ ಯಡ್ಯೂರಪ್ಪ ಅಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್‍ನಿಂದ ಸಾಧ್ಯವಾಗುತ್ತಿರೋದು.
ಇಲ್ಲೂ ಒಂದು ವರ್ತಮಾನವಿದೆ. ಹೀಗೆ ಹಿಗ್ಗಾಮುಗ್ಗಾ ಟ್ರಾನ್ಸ್‍ಫರ್ ದಂಧೆ ನಡೆಸಲು ಹಗ್ಗ ಸಡಿಲಬಿಟ್ಟು ನಂತರ, ಈ ಹಗರಣವನ್ನೇ ಮುಂದೆ ಮೂಗುದಾರವಾಗಿ ಬಳಸಿ ಯಡ್ಯೂರಪ್ಪನವರನ್ನು ಹಣಿಯಲು ಯೋಜನೆಯೂ ಸಂಘಟನಾ ಕಾರ್ಯದರ್ಶಿಗಳ ತಲೆಯಲ್ಲಿ ರೆಡಿಯಾಗಿದೆಯಂತೆ. ಮೇಲ್ನೋಟಕ್ಕೆ ಇದನ್ನು ನಂಬೋದು ಕಷ್ಟ ಅಂತನ್ನಿಸಿದರೂ ಹಿಂದೆ, ಯಡ್ಯೂರಪ್ಪ ಇದೇ ರೀತಿ ಗಣಿ ಮೇವನ್ನು ಅನಾಯಾಸವಾಗಿ ಮೇಯಲು ಬಿಟ್ಟು, ಅದರಿಂದ ತಾವೂ ಲಾಭ ಮಾಡಿಕೊಂಡ ಹೈಕಮಾಂಡ್ ಕೊನೆಕೊನೆಗೆ ಆ ಪಕ್ಷದವರೇ ಗಣಿ ಹಗರಣವನ್ನು ಮುಂದಿಟ್ಟುಕೊಂಡು ಹಣಿದ ಇತಿಹಾಸ ಕಣ್ಣ ಮುಂದೆಯೇ ಇರುವಾಗ ನಂಬದೇ ಇರುವುದೂ ಕಷ್ಟ.
ಅದೇನೇ ಆಗಲಿ, ಒಂದು ಕಾಲಕ್ಕೆ ರಾಜ್ಯ ಬಿಜೆಪಿ ಪಾಲಿನ ಏಕಚಕ್ರಾಧಿಪತಿಯಂತೆ ಮರೆದಿದ್ದ ಯಡ್ಯೂರಪ್ಪನವರಿಗೆ ಪಾಪ, ಇಂಥಾ ದೈನೇಸಿ ಪರಿಸ್ಥಿತಿ ಬರಬಾರದಿತ್ತು….!!!


