| ಶುದ್ದೋಧನ |
ಉತ್ತರ ಕನ್ನಡದ ನಾಲ್ಕು ಬಿಜೆಪಿ ಎಮ್ಮೆಲ್ಲೆಗಳ ನಡುವೆ ಶುರುವಾದ ಹೊಟ್ಟೆಕಿಚ್ಚಿನ ಕಿತ್ತಾಟ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಶಿರಸಿಯ ಸೀನಿಯರ್ ಮೋಸ್ಟ್ ಕಾಗೇರಿ ತನಗರಿವಿಲ್ಲದೆ ಒಲ್ಲದ ಸ್ಪೀಕರ್ ಗದ್ದುಗೆಯೇರಿ ಕುಂತಿದ್ದಾರೆ. ಘಟ್ಟದ ಮೇಲಿನ ಕಾಗೇರಿಗೆ ಕರಾವಳಿ ಕಡೆಯ ಮೂವರು ಎಳಸು ಎಮ್ಮೆಲ್ಲೆಗಳು ಸ್ವಪಕ್ಷದಲ್ಲಿ ಪ್ರತಿಸ್ಪರ್ಧಿಗಳಾಗಲು ಸಾಧ್ಯವೇ ಇಲ್ಲ. ಆತನಿಗೇನಿದ್ದರೂ ಸದಾ ಮಗ್ಗಲು ಮುಳ್ಳಾಗಿ ಕಾಡುವ ಎಂಪಿ ಅನಂತ್ಮಾಣಿಯೇ ಆತಂಕಕಾರಿ! ಮಜಾ ಎಂದರೆ, ಕೋಮು ರಾಜಕಾರಣದ ವರಸೆ ಪ್ರಯೋಗಿಸುತ್ತ ಅದಕ್ಕೆ ಹುಸಿ ಅಭಿವೃದ್ಧಿಯ ಮುಸುಕು ತೊಡಿಸುವ ಬೋಂಗು ಬಿಡುವ ಕಾರವಾರದ ರೂಪಾಲಿ ನಾಯ್ಕ, ಕುಮಟೆಯ ದಿನಕರ ಶೆಟ್ಟಿ ಮತ್ತು ಭಟ್ಕಳದ ಸುನಿಲ್ ನಾಯ್ಕ್ ಮೂರು ಮೂಲೆಯಲ್ಲಿ ನಿಂತು ಪರಸ್ಪರ ಕಾಲೆಳೆದಾಡುತ್ತಿದ್ದಾರೆ. ಈ ಮೂವರೂ ಅನಂತ್ಮಾಣಿಯ ಚೇಲಾಗಳೇ. ಆದರೆ ಮಾಣಿ ಇವರನ್ನೀಗ ಪೂರ್ತಿ ನಂಬುತ್ತಿಲ್ಲ. ಅವರೆಲ್ಲ ಶಾಸಕರಾದ ತಿಂಗಳೊಪ್ಪತ್ತಿನಲ್ಲೇ ಅವರವರ ಕ್ಷೇತ್ರದಲ್ಲಿ “ಚೆಕ್” ಇಟ್ಟು ಬಿಟ್ಟಿದ್ದಾನೆ ಮಾಣಿ!!
ಸಮ್ಮಿಶ್ರ ಸರ್ಕಾರ ಪತನವಾಗುತ್ತಿದ್ದಂತೆಯೇ ಕೆನರಾದ ಕೇಸರಿ ಶಾಸಕರಿಗೆಲ್ಲ ಮಂತ್ರಿಗಿರಿ ಕನಸು ಪ್ರತಿ ರಾತ್ರಿಯೂ ಬಿಡದೇ ಬೀಳತೊಡಗಿತ್ತು. ಆದರೆ ಇವರ್ಯಾರೂ ಮಂತ್ರಿಯಾಗೋದು ಅನಂತ್ಮಾಣಿಗೆ ಇಷ್ಟವಿರಲಿಲ್ಲ. ಕಾಗೇರಿ ವಿಧಾನಸಭಾ ಅಧ್ಯಕ್ಷನಾದದ್ದು ರೂಪಾಲಿ, ದಿನಕರ್ ಮತ್ತು ಸುನೀಲ್‍ನಲ್ಲಿ ಮಂತ್ರಿಗಿರಿ ಆಸೆಯ ಹುಚ್ಚೆಬ್ಬಿಸಿತ್ತು. ಇವರಲ್ಲಿ ಒಂದು ಗುಲಗಂಜಿಯಷ್ಟು ಜಾಸ್ತಿಯೇ ಕಸರತ್ತು ಮಾಡಿದ್ದು ಮಾತ್ರ ರೂಪಾಲಿಯಮ್ಮನೇ. ಅದಕ್ಕೆ ಕಾರಣವೂ ಇತ್ತು. ಆಕೆಗೆ ಸಿಎಂ ಯಡ್ಡಿ ಜತೆ ವಿಶೇಷವಾದ ನಂಟಿತ್ತು. ಎರಡನೆಯದು ಮಹಿಳಾ ಕೋಟಾದಲ್ಲಿ ಸಚಿವೆಯಾಗುವ ಅವಕಾಶವಿತ್ತು. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಯಡ್ಡಿಗೆ ಕರಾವಳಿಯ ಬಿಜೆಪಿ ಶಾಸಕರ ಪೈಕಿ ರೂಪಾಲಿ ಎಂದರೇನೇ ನಂಬಿಕೆ-ಕಕ್ಕುಲಾತಿ ವಿಪರೀತ! ಆಕೆ ತನ್ನ ನಿಗೂಢ ಸಂಪತ್ತನ್ನು ರಾಜಕಾರಣಕ್ಕಾಗಿ ಹರಿಸುವ ದಾಢಸಿತನಕ್ಕೆ ಯಡ್ಡಿ ಮಾರುಹೋಗಿದ್ದಾರೆ. ಹಾಗಾಗಿ ರೂಪಾಲಿ ಮಂತ್ರಿಯಾಗ್ತಾರೆಂಬ ದಟ್ಟ ಭಾವನೆ ಬಿಜೆಪಿಗರಿಗಷ್ಟೇ ಅಲ್ಲ, ಜಿಲ್ಲೆಯಲ್ಲೂ ಮನೆಮಾಡಿತ್ತು.
ಇದು ಸಹಜವಾಗೇ ಜಿಲ್ಲೆಯ ಕಮಲ ಪಾಳಯದ ಪುರುಷೋತ್ತಮ ಶಾಸಕರಲ್ಲಿ ಅಸೂಯೆಗೆ ಕಾರಣವಾಯಿತ್ತು. ಅಕತ್ಮಾತ್ ರೂಪಾಲಿ ಮಂತ್ರಿಣಿಯಾದರೆ ಚಾಲಾಕಿತನದ ಈ ಹೆಣ್ಣು, ತಮ್ಮನ್ನು ನಗಣ್ಯ ಮಾಡಿಬಿಡುತ್ತಾಳೆಂಬ ಆತಂಕ “ಗಂಡು” ಶಾಸಕರ ಕಾಡತೊಡಗಿತ್ತು. ಚಿತ್ರದುರ್ಗದಲ್ಲಿ ಬಿಸ್ನೆಸ್ ಮಾಡುತ್ತಾ ಕಾರವಾರ – ಅಂಕೋಲದಲ್ಲಿ ರಾಜಕಾರಣ ನಡೆಸುವ ರೂಪಾಲಿಯ ಕೊಪ್ಪರಿಗೆ ಕಾಸು, ಗ್ಲಾಮರ್, ಸಿಎಂ ಮತ್ತಿತರ ಬಿಜೆಪಿ ಘಟಾನುಘಟಿಗಳೊಂದಿಗಿನ ನಿಕಟಸಂಪರ್ಕ….. ಹೀಗೆ ಮೂರು ಶಾಸಕರಿಗೆ ಗಂಡಾಂತರಕಾರಿಯೇ ಆಗಿತ್ತು. ಕಾಗೇರಿ ತನ್ನ ಚೆಡ್ಡಿ ಆಶ್ರಯದಾತರ ಬಲ ಮತ್ತು ಹಿರಿತನ ಹಾಗೂ ಸ್ಪೀಕರ್ ಆಗಿರುವುದರಿಂದ ರೂಪಾಲಿ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿದ್ದರೂ ದಿನಕರ ಶೆಟ್ಟಿ ಮತ್ತು ಸುನೀಲ್ ನಾಯ್ಕ ಮತ್ತವರ ಬಾಸ್ ಅನಂತ್ಮಾಣಿ ಆತಂಕಗೊಂಡಿದ್ದರು.
ಉತ್ತರ ಕನ್ನಡದ ಮಂತ್ರಿ ಕೋಟಾವನ್ನು ಅನರ್ಹ ಕಮ್ ಅಂತರ್‍ಪಿಶಾಚಿ ಶಾಸಕ ಶಿವರಾಮ ಹೆಬ್ಬಾರ್‍ಗೆ ಮೀಸಲಿಡಲಾಗಿದೆ. ಆದರೆ ಆತ ವನವಾಸ ಮುಗಿಸಿ ಬರುವತನಕ ಆತನ ಪಾದುಕೆ ಇಟ್ಟುಕೊಂಡು ಮಂತ್ರಿಗಿರಿ ಮಾಡುವ ಯೋಜನೆ ರೂಪಾಲಿ, ಸುನೀಲ್ ಮತ್ತು ದಿನಕರ್‍ಗೆ ಇತ್ತು. ಹೆಬ್ಬಾರ್‍ನನ್ನು ರಹಸ್ಯವಾಗಿ ಭೇಟಿಯಾಗಿದ್ದ ಮೂವರು ತಮ್ಮ ಹೆಸರು ರೆಕಮೆಂಡ್ ಮಾಡುವಂತೆ ಬೇಡಿಕೊಂಡಿದ್ದರು. ಅಂತಿಮವಾಗಿ ತಾವು ಮಂತ್ರಿಯಾಗದಿದ್ದರೂ ಪರವಾಗಿಲ್ಲ ಆದರೆ ರೂಪಾಲಿ ಮಾತ್ರ ಯಾವ ಕಾರಣಕ್ಕೂ ಮಂತ್ರಿಗಿರಿಗೆ ಹಕ್ಕುದಾರಿಣಿ ಆಗಬಾರದೆಂಬ ಹಠಕ್ಕೆ ದಿನಕರ್ ಶೆಟ್ಟಿ, ಸುನೀಲ್ ನಾಯ್ಕ ಮತ್ತು ಹೆಬ್ಬಾರ್ ಬಿದ್ದಿದ್ದರು. ಗುರು ಅನಂತ್ಮಾಣಿ ಮೂಲಕವೂ ರೂಪಾಲಿಗೆ ಅಡ್ಡಗಾಲು ಹಾಕಿಸಿದ್ದರು. ಈ ದ್ವೇಷಾಸೂಯೆ ವಿವಿಧ ರೂಪಾತಾಳುತ್ತ ಈಗ ಜಿಲ್ಲಾ ಬಿಜೆಪಿಯನ್ನು ಮನೆಯೊಂದು ಮೂರು ಬಾಗಿಲು ಮಾಡಿಬಿಟ್ಟಿದೆ!
ಈ ನಡುವೆ ಜಿಲ್ಲೆಯ ಹಿಂದೂತ್ವ ರಾಜಕಾರಣದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವ ಎದುರಾಳಿ ಶಾಸಕರ ವರ್ಚಸ್ಸು ಕುಗ್ಗಿಸುವ ಹಿಕಮತ್ತಿನ ಕಾರ್ಯಾಚರಣೆ ಈ ಮೂರು ಶಾಸಕರು ನಡೆಸಿದ್ದರು. ಪರೇಶ್‍ನ ನಿಗೂಢ ಸಾವಿನ ನಂತರ ಜಿಲ್ಲೆಯಲ್ಲಿ ಭುಗಿಲೆದ್ದಿದ್ದಮತೀಯ ದಂಗೆಯಲ್ಲಿ ಭಾಗಿಯಾಗಿ ಕೋರ್ಟ್-ಕಚೇರಿ ಅಲೆಯುತ್ತಿದ್ದ ಆರೋಪಿಗಳ ಕೇಸನ್ನು ಸಂಪುಟ ಸಭೆಯಲ್ಲಿ ಸಿಎಂನಿಂದ ರದ್ದುಮಾಡಿಸುತ್ತೇವೆ ಎಂದು ದಿನಕರ ಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ ಮತ್ತು ಕಾಗೇರಿ ಎಲ್ಲರೂ ವೀರಾವೇಷದ ಮಾತು ಆಡುತ್ತಲೇ ಇದ್ದರು. ಆದರೆ ಎಲ್ಲರಿಗಿಂತ ಮೊದಲು ರೂಪಾಲಿ ಸಿಎಂ ಸಂಧಿಸಿ ಪರೇಶ್ ಸಾವಿನ ನಂತರದ ದೊಂಬಿ ಪ್ರಕರಣ ರದ್ದು ಮಾಡುವಂತೆ ಮನವಿ ಕೊಟ್ಟ ಆ ಫೋಟೋ ಮಾಧ್ಯಮಗಳಿಗೆ ಕೊಟ್ಟು ದೊಡ್ಡ ಸುದ್ದಿಯಾಗಿ ಹೋದರು. ಇದು ಪುರುಷ ಶಾಸಕರ ಬೆಚ್ಚಿಬೀಳಿಸಿತು.
ಕೇಸು ರದ್ದತಿಯ ಕ್ರೆಡಿಟ್ ರೂಪಾಲಿ ತಾನೊಬ್ಬಳೇ ಹೊಡೆದುಕೊಳ್ಳಲು ಹವಣಿಸುತ್ತಿರುವುದು ಇವರೆಲ್ಲರ ಕಣ್ಣು ಕೆಂಪಾಗಿಸಿತು. ಆಕೆಗೆ ಪಾಠ ಕಲಿಸಲು ಸ್ಕೆಚ್ ಹಾಕತೊಡಗಿದರು. ಅಷ್ಟೊತ್ತಿಗೆ ಸಿಎಂ ಕೇಸ್ ರದ್ದು ಮಾಡಿಯಾಗಿತ್ತು. ರೂಪಾಲಿ ನಾಯ್ಕ ಪ್ರಯತ್ನದಿಂದಲೇ ಹಿಂದೂ ಕಾರ್ಯಕರ್ತರು ಬಚಾವಾದರೆಂಬ ವ್ಯವಸ್ಥಿತ ಪ್ರಚಾರವೂ ಹಬ್ಬಿತು. ಅಲ್ಲಿಗೆ ರೂಪಾಲಿ ಪ್ರಭಾವ ವೃದ್ಧಿಸಿದರೆ, ಪುರುಷ ಶಾಸಕರ ಪುಂಗಿ ಬಂದ್ ಆಯಿತು!! ಈಗ ನಿಗಮ ಮಂಡಳಿಗಾಗಿ ಮೂವರಲ್ಲಿ ಮೇಲಾಟ ನಡೆದಿದೆ. ಮೊದಲಿನ ಬಾಂಧವ್ಯ ಈಗ ಮೂವರಲ್ಲಿ ಉಳಿದಿಲ್ಲ. ಒಬ್ಬರ ಮುಖ ಕಂಡರೆ ಇನ್ನೊಬ್ಬರು ಅಡ್ಡ ಮುಖ ಹಾಕುತ್ತಿದ್ದಾರೆ.
ಅಂತಿಮವಾಗಿ ಪುರುಷ ಶಾಸಕರು ತಮಗೆ ಅವಕಾಶ ಸಿಗದಿದ್ದರೂ ಸರಿ, ರೂಪಾಲಿಗೆ ಭಾಗ್ಯ ಬರಬಾರದು ಎಂಬ ಪ್ರಯತ್ನದಲ್ಲಿದ್ದಾರೆ. ಆದರೆ ಚಾಲೂ ಪುಢಾರಿಣಿ ಎಂದೇ ಕಾರವಾರದಲ್ಲಿ ಗುರುತಿಸಿಕೊಂಡಿರುವ ರೂಪಾಲಿ ನಾಯ್ಕ ಎದುರಾಳಿಗಳ ಬೇಸ್ತು ಬೀಳಿಸಲು ಏನೇನು ಸಾಧ್ಯವೋ ಅದೆಲ್ಲ ಮಾಡುತ್ತಿದ್ದಾರೆ! ಈ ಅಧಿಕಾರದಾಹದ ಬಡಿದಾಟಕ್ಕೆ ಮುಂದಿನ ದಿನಗಳಲ್ಲಿ ಜಿಲ್ಲಾ ಬಿಜೆಪಿ ಕುಸಿದು ಬೀಳಲಿದೆ ಎಂದು ಆ ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ಮಾತಾಡಿಕೊಳ್ಳುವಂತಾಗಿದೆ.


