ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರನ್ನು ಅನುಕರಿಸುವ ವಿಡಿಯೋವನ್ನು ನಾನು ಎಲ್ಲಿಯೂ ಹಂಚಿಕೊಂಡಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಸಭೆ ಕಲಾಪದಲ್ಲಿನ ಉಪರಾಷ್ಟ್ರಪತಿಯವರ ನಡೆ-ನುಡಿಯನ್ನು ಅನುಕರಿಸಿದ ಟಿಎಂಸಿ ಸಂಸದರ ವಿರುದ್ಧ ಹಾಗೂ ಅದನ್ನು ಚಿತ್ರೀಕರಿಸಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದರು.
‘ಯಾರು ಮತ್ತು ಹೇಗೆ ಅವಮಾನಿಸಿದರು?’ ಎಂದು ಮಾಧ್ಯಮಗಳನ್ನು ಪ್ರಶ್ನಿಸಿದ ಅವರು, ‘ಸಂಸದರು ಅಲ್ಲಿ ಕುಳಿತಿದ್ದರು, ನಾನು ಅವರ ವೀಡಿಯೋವನ್ನು ನನ್ನ ಫೋನ್‌ನಲ್ಲಿ ತೆಗೆದುಕೊಂಡಿದ್ದೇನೆ. ಮಾಧ್ಯಮಗಳು ಅದನ್ನು ತೋರಿಸುತ್ತಾ ಟೀಕೆಗಳನ್ನು ಮಾಡುತ್ತಿವೆ. ಮೋದಿಯವರು ಕೂಡ ಹಲವು ಟೀಕೆಗಳನ್ನು ಮಾಡುತ್ತಿದ್ದಾರೆ, ಯಾರೂ ಏನನ್ನೂ ಹೇಳಲಿಲ್ಲ’ ಎಂದು ಅವರು ಹೇಳಿದರು.
‘ನಮ್ಮ ಗೌರವಾನ್ವಿತ ಉಪರಾಷ್ಟ್ರಪತಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ಅವಮಾನಿಸಿದ ರೀತಿಯನ್ನು ನೋಡಿ ನಾನು ದಿಗ್ಭ್ರಮೆಗೊಂಡೆ. ಚುನಾಯಿತ ಪ್ರತಿನಿಧಿಗಳು ತಮ್ಮ ಅಭಿವ್ಯಕ್ತಿ ವ್ಯಕ್ತಪಡಿಸಲು ಮುಕ್ತವಾಗಿರಬೇಕು. ಆದರೆ ಅವರ ಅಭಿವ್ಯಕ್ತಿ ಘನತೆ ಮತ್ತು ಸೌಜನ್ಯದ ಮಾನದಂಡಗಳೊಳಗೆ ಇರಬೇಕು. ಅದು ನಾವು ಹೆಮ್ಮೆಪಡುವ ಸಂಸದೀಯ ಸಂಪ್ರದಾಯವಾಗಿದೆ ಮತ್ತು ಭಾರತದ ಜನರು ಅದನ್ನು ಎತ್ತಿಹಿಡಿಯುತ್ತಾರೆ ಎಂದು ನಿರೀಕ್ಷಿಸುತ್ತಾರೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.
ಈ ವಿವಾದದ ಕುರಿತು ಮಾಧ್ಯಮಗಳ ಪಕ್ಷಪಾತದ ವಿರುದ್ಧ ಆಕ್ರೋಶ ಹೊರಹಾಕಿರುವ ರಾಹುಲ್ ಗಾಂಧಿ, ‘ಉಭಯ ಸದನಗಳಿಂದ 150 ಸಂಸದರನ್ನು ಹೊರಹಾಕಲಾಗಿದೆ. ಆ ಬಗ್ಗೆ ಮಾಧ್ಯಮಗಳು ಮಾತನಾಡುತ್ತಲೇ ಇಲ್ಲ. ಅದಾನಿ ಮತ್ತು ರಫೇಲ್ ವಿಷಯಗಳ ಬಗ್ಗೆ ಮಾಧ್ಯಮಗಳಲ್ಲಿ ಯಾವುದೇ ಚರ್ಚೆಯಾಗಿಲ್ಲ’ ಎಂದು ಕಿಡಿಕಾರಿದರು.
‘ಮಾಧ್ಯಮಗಳಲ್ಲಿ ಅದಾನಿ ಮತ್ತು ರಫೇಲ್ ಬಗ್ಗೆ ಯಾವುದೇ ಚರ್ಚೆ ಇಲ್ಲ. ತನಿಖೆಗೆ ಅವಕಾಶ ನೀಡುತ್ತಿಲ್ಲ ಎಂದು ಫ್ರಾನ್ಸ್ ಹೇಳಿದೆ. ಅದರ ಬಗ್ಗೆ ಯಾವುದೇ ಚರ್ಚೆ ಇಲ್ಲ, ನಿರುದ್ಯೋಗದ ಬಗ್ಗೆ ಯಾವುದೇ ಚರ್ಚೆ ಇಲ್ಲ. ಅಮಾನತಾಗಿರುವ ನಮ್ಮ ಸಂಸದರು ದುಃಖಿತರಾಗಿದ್ದಾರೆ. ಅಲ್ಲಿ ಕುಳಿತು ನೀವು ಚರ್ಚಿಸುತ್ತಿದ್ದೀರಿ’ ಎಂದು ಅವರು ಹೇಳಿದರು.
ಗಮನ ಬೇರೆಡೆ ಸೆಳೆಯುತ್ತಿರುವ ಬಿಜೆಪಿ:
ಡಿ.13, 22ರಂದು ಲೋಕಸಭೆಗೆ ಇಬ್ಬರು ನುಸುಳುಕೋರರ ಪ್ರವೇಶವನ್ನು ಬಿಜೆಪಿ ಸಂಸದರೊಬ್ಬರು ಹೇಗೆ ಸುಗಮಗೊಳಿಸಿದರು ಎಂಬ ಬಗ್ಗೆ ಗಮನ ಬೇರೆಡೆ ಸೆಳೆಯಲು ‘ಮಿಮಿಕ್ರಿ ಅಲ್ಲದ ವಿಷಯ’ವನ್ನು ಬಿಜೆಪಿ ವಿವಾದ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ‘ಮಿಮಿಕ್ರಿ ಅಲ್ಲದ ವಿಷಯವನ್ನು ವಿವಾದ ಮಾಡಲು ಇಡೀ ಮೋದಿ ಪರಿಸರ ವ್ಯವಸ್ಥೆಯು ಉತ್ಸಾಹಭರಿತವಾಗಿದೆ. ಆದರೆ, ಮೈಸೂರಿನ ಬಿಜೆಪಿ ಸಂಸದರೊಬ್ಬರು ಏಕೆ ಮತ್ತು ಹೇಗೆ ಲೋಕಸಭೆಗೆ ಇಬ್ಬರು ನುಸುಳುಕೋರರು ಪ್ರವೇಶವನ್ನು ಸುಗಮಗೊಳಿಸಿದರು ಎಂಬ ನೈಜ ವಿಷಯದ ಬಗ್ಗೆ ಮೌನವಾಗಿದೆ. ಈಗ ಅವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲಾಗಿದೆ’ ಎಂದು ಹೇಳಿದ್ದಾರೆ.
The entire Modi ecosystem now being galvanised on the so-called mimicry non-issue, while it remains silent on the real issue of why and how a BJP MP from Mysuru facilitated entry of two intruders into Lok Sabha on December 13th — who are now charged under the anti-terror law…
— Jairam Ramesh (@Jairam_Ramesh) December 20, 2023
‘ಸಂಪೂರ್ಣ ನ್ಯಾಯಸಮ್ಮತ ಬೇಡಿಕೆಗಾಗಿ 142 ಸಂಸದರ ಅಮಾನತು ಕುರಿತು ಅವರ ಇಡೀ ಪರಿಸರ ವ್ಯವಸ್ಥೆಯು ಮೌನವಾಗಿದೆ. ಬುಧವಾರ ಮತ್ತೆ ಇಬ್ಬರು ವಿರೋಧ ಪಕ್ಷದ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದ್ದು, ಒಟ್ಟು ಸಂಖ್ಯೆ 143ಕ್ಕೆ ಏರಿಕೆಯಾಗಿದೆ’ ಎಂದು ಹೇಳಿದ್ದಾರೆ.
ತನ್ನ ಕುರಿತು ಅನುಕರಣೆ ಮಾಡಿದ ಕುರಿತು ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಧನ್ಖರ್, ‘ಸೆರಾಂಪೋರ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮಿಮಿಕ್ರಿ ಮತ್ತು ರಾಹುಲ್ ಗಾಂಧಿ ಅವರ ಚಿತ್ರೀಕರಣವು ರೈತರು ಮತ್ತು ಜಾಟ್ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ’ ಎಂದರು.
ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ಉದ್ದೇಶಿಸಿ ಮಾತನಾಡಿದ ಧನ್ಖರ್, ‘ಚಿದಂಬರಂ ನೀವು ತುಂಬಾ ಹಿರಿಯ ಸದಸ್ಯರು. ನಿಮ್ಮ ಪಕ್ಷದ ಹಿರಿಯ ನಾಯಕ, ಸಂಸದರೊಬ್ಬರು ನನ್ನನ್ನು ಗೇಲಿ ಮಾಡುವ ಕೃತ್ಯವನ್ನು ಚಿತ್ರೀಕರಿಸಿದಾಗ ನನಗೆ ಏನನಿಸಿತು ಎಂದು ಊಹಿಸಿ. ಇದು ಕೇವಲ ರೈತ ಅಥವಾ ಸಮುದಾಯದ ಅವಮಾನವಲ್ಲ, ಇದು ರಾಜ್ಯಸಭಾ ಅಧ್ಯಕ್ಷ ಸ್ಥಾನಕ್ಕೆ ಅಗೌರವ. ಅದೂ ಕೂಡ ದೇಶವನ್ನು ದೀರ್ಘಕಾಲ ಆಳಿದ ಪಕ್ಷದಿಂದ ನನಗೆ ತುಂಬಾ ನೋವಾಗಿದೆ’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ; ವಿಪಕ್ಷಗಳ 143 ಸಂಸದರ ಅಮಾನತು ಖಂಡಿಸಿ ‘ಇಂಡಿಯಾ’ ಒಕ್ಕೂಟದಿಂದ ನಾಳೆ ಧರಣಿ


