ಲೋಕಸಭೆಯಿಂದ ಬಹುಪಾಲು ಪ್ರತಿಪಕ್ಷಗಳ ಸದಸ್ಯರು ಅಮಾನತುಗೊಂಡ ಬೆನ್ನಲ್ಲಿ ಇದೀಗ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ(ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಕುರಿತ ಮಸೂದೆ-2023ನ್ನು ಅಂಗೀಕರಿಸಲಾಗಿದೆ.
ವಿವಾದಾತ್ಮಕ ಈ ಮಸೂದೆ ಮೊದಲು ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು. ಇದೀಗ ಮಸೂದೆಗೆ ರಾಷ್ಟ್ರಪತಿಗಳ ಸಹಿ ಮಾತ್ರ ಬಾಕಿ ಉಳಿದಿದೆ.
ಡಿಸೆಂಬರ್ 12ರಂದು ರಾಜ್ಯಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023 ಅಂಗೀಕಾರಗೊಂಡಿತ್ತು.
ಈ ಮಸೂದೆಯು ಮುಖ್ಯ ಚುನಾವಣಾ ಆಯುಕ್ತರು (CEC) ಮತ್ತು ಇತರ ಚುನಾವಣಾ ಆಯುಕ್ತರ (EC)ಗಳ ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಕಾರ್ಯವಿಧಾನವನ್ನು ಇದು ವಿವರಿಸುತ್ತದೆ.
ಆ.10 ರಂದು ಈ ಮಸೂದೆಯನ್ನು ಇಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ರಾಜ್ಯ ಸಭೆಯಲ್ಲಿ ಮಂಡಿಸಿದ್ದರು. ಸಂಸತ್ತಿನ ಮೇಲ್ಮನೆಯಲ್ಲಿ ಚರ್ಚೆಯ ನಂತರ ಮಸೂದೆ ಅಂಗೀಕಾರಗೊಂಡಿತು. ಮಸೂದೆಯನ್ನು ವಿರೋಧಿಸಿ ಪ್ರತಿಪಕ್ಷಗಳು ಸದನತ್ಯಾಗ ಮಾಡಿದ್ದವು. ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಾಧೀಶರನ್ನು ಕೈಬಿಟ್ಟಿರುವುದನ್ನು ಪ್ರತಿಪಕ್ಷಗಳು ವಿರೋಧಿಸಿದ್ದವು.
ಮಸೂದೆಯ ಪ್ರಮುಖ ನಿಬಂಧನೆಗಳು ಚುನಾವಣಾ ಆಯೋಗದ (ಚುನಾವಣಾ ಆಯುಕ್ತರ ಸೇವಾ ನಿಯಮಗಳು ಮತ್ತು ವ್ಯವಹಾರದ ವಹಿವಾಟು) ಕಾಯಿದೆ, 1991ನ್ನು ಬದಲಿಸಲಿದೆ. ಹೊಸ ಮಸೂದೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ, ಸಂಬಳ ಮತ್ತು ವಜಾಗೊಳಿಸುವಿಕೆಯಂತಹ ಅಂಶಗಳನ್ನು ಒಳಗೊಂಡಿದೆ.
ಪ್ರಧಾನ ಮಂತ್ರಿ, ಕೇಂದ್ರ ಸಂಪುಟ ಸಚಿವರು, ವಿರೋಧ ಪಕ್ಷದ ನಾಯಕ ಅಥವಾ ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುವ ಆಯ್ಕೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳನ್ನು ನೇಮಿಸಲಿದ್ದಾರೆ. ಪೂರ್ಣ ಸಮಿತಿಯ ಅನುಪಸ್ಥಿತಿಯಲ್ಲಿಯೂ ಈ ಸಮಿತಿಯ ಶಿಫಾರಸುಗಳು ಮಾನ್ಯವಾಗಿರುತ್ತವೆ. ಕಾನೂನು ಸಚಿವರ ನೇತೃತ್ವದ ಶೋಧನಾ ಸಮಿತಿಯು ಆಯ್ಕೆ ಸಮಿತಿಗೆ ಹೆಸರುಗಳನ್ನು ಪ್ರಸ್ತಾಪಿಸುತ್ತದೆ. ಅರ್ಹತಾ ಮಾನದಂಡಗಳೊಂದಿಗೆ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಕಾರ್ಯದರ್ಶಿಗೆ ಸಮಾನವಾದ ಸ್ಥಾನವನ್ನು ಹೊಂದಿರಬೇಕು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳಿಗೆ ವೇತನ ಮತ್ತು ಸೇವಾ ಷರತ್ತುಗಳನ್ನು ಸಂಪುಟ ಕಾರ್ಯದರ್ಶಿಗೆ ಸಮನಾಗಿ ಹೊಂದಿಸಲಾಗಿದೆ. ಇದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವೇತನಕ್ಕೆ ಸಮಾನಾಗಿ ಇದ್ದ ನಿಯಮವನ್ನು ಬದಲಿಸಲಿದೆ.
ಪ್ರಸ್ತಾವಿತ ಬದಲಾವಣೆಗಳು ಚುನಾವಣಾ ಆಯೋಗದ ಸ್ಥಾನಮಾನವನ್ನು ಕೆಳಮಟ್ಟಕ್ಕಿಳಿಸಲಿದೆ ಎಂದು ಪ್ರತಿಪಾದಿಸಿದ ಮಾಜಿ ಮುಖ್ಯ ಚುನಾವಣಾ ಆಯುಕ್ತರಗಳು ವೇತನ ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ, ಕೇಂದ್ರ ಸರ್ಕಾರವು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳ ವೇತನ ಮತ್ತು ಸವಲತ್ತುಗಳನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮಟ್ಟದಲ್ಲಿ ಮುಂದುವರೆಸಲು ಮಸೂದೆಯಲ್ಲಿ ತಿದ್ದುಪಡಿ ಮಾಡಿದೆ.
ಆಯ್ಕೆ ಸಮಿತಿಯ ಭಾರತದ ಮುಖ್ಯ ನ್ಯಾಯಮೂರ್ತಿ ಹೊರಕ್ಕೆ!
ಹೊಸ ಮಸೂದೆಯು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಹೊರಗಿಡಲಿದೆ. ಈ ವರ್ಷದ ಮಾರ್ಚ್‌ನಲ್ಲಿ, ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಸಂಸತ್ತು ಕಾನೂನು ರೂಪಿಸುವವರೆಗೆ ಚುನಾವಣಾ ಆಯುಕ್ತರನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ಆಯ್ಕೆ ಮಾಡುತ್ತದೆ ಎಂದು ತೀರ್ಪು ನೀಡಿತ್ತು. ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಪೀಠವು ಚುನಾವಣಾ ಆಯುಕ್ತರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಮಸೂದೆ ಮಂಡಿಸಿ ಕಾನೂನು ರೂಪಿಸಲು ಮುಂದಾಗಿದೆ.
ಇದನ್ನು ಓದಿ: ಸಂಸತ್ತಿನ ಭದ್ರತಾ ಲೋಪ: ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿಯೋರ್ವರ ಪುತ್ರ ಸೇರಿ ಮತ್ತಿಬ್ಬರ ಬಂಧನ


