ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ಇದರ ಭಾಗವಾಗಿ ಪ್ರಣಾಳಿಕೆ ಸಮಿತಿಯನ್ನು ರಚಿಸಿದೆ.
ಅಧ್ಯಕ್ಷ, ಸಂಚಾಲಕ ಸೇರಿದಂತೆ ಒಟ್ಟು 16 ಜನರ ಸಮಿತಿಯನ್ನು ರಚಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆದೇಶಿಸಿದ್ದಾರೆ.
Congress President Shri @kharge has constituted the Manifesto Committee for the upcoming General Elections 2024 with immediate effect. pic.twitter.com/TD9Rf4bWiu
— Congress (@INCIndia) December 22, 2023
ರಾಜ್ಯಸಭಾ ಸಂಸದ ಪಿ ಚಿದಂಬರಂ ಅವರನ್ನು ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ಸಮಿತಿಯ ಸಂಚಾಲಕ ಸ್ಥಾನವನ್ನು ಛತ್ತೀಸ್‌ಗಢದ ಮಾಜಿ ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವ್ ಅವರಿಗೆ ನೀಡಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ 16 ಸದಸ್ಯರು ಸಮಿತಿಯಲ್ಲಿದ್ದಾರೆ.
ಸಮಿತಿ ಸದಸ್ಯರ ವಿವರ ಹೀಗಿದೆ..
ಪಿ. ಚಿದಂಬರಂ (ಅಧ್ಯಕ್ಷ), ಟಿಎಸ್ ಸಿಂಗ್ ದೇವ್ (ಸಂಚಾಲಕ) ಸದಸ್ಯರು– ಸಿದ್ದರಾಮಯ್ಯ, ಪ್ರಿಯಾಂಕಾ ಗಾಂಧಿ ವಾದ್ರಾ, ಆನಂದ್ ಶರ್ಮಾ, ಜೈರಾಮ್ ರಮೇಶ್, ಶಶಿ ತರೂರ್, ಗೈಕಂಗಂ, ಗೌರವ್ ಗೊಗೋಯ್, ಪ್ರವೀಣ್ ಚಕ್ರವರ್ತಿ, ಇಮ್ರಾನ್ ಪ್ರತಾಪ್‌ಗಿರಿ, ಕೆ. ರಾಜು, ಓಂಕಾರ್ ಸಿಂಗ್ ಮರ್ಕಂ, ರಂಜೀತ್ ರಂಜನ್, ಜಿಗ್ನೇಶ್ ಮೆವಾನಿ, ಗುರುದೀಪ್ ಸಪ್ಪಲ್.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಲೋಕಸಭಾ ಚುನಾವಣಾ ಕಾರ್ಯತಂತ್ರವನ್ನು ಚರ್ಚಿಸಲು ಮತ್ತು ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೆ ನಡೆಸಿದ ಬೆನ್ನಲ್ಲೇ ಪ್ರಣಾಳಿಕೆ ಸಮಿತಿ ರಚಿಸಲಾಗಿದೆ.
ಲೋಕಸಭೆ ಚುನಾವಣೆ ಎದುರಿಸುವ ಸಲುವಾಗಿ ಕಾಂಗ್ರೆಸ್ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಇಂಡಿಯಾ ಒಕ್ಕೂಟದ ನೇತೃತ್ವದ ವಹಿಸಿರುವ ಕಾಂಗ್ರೆಸ್, ಈಗಾಗಲೇ ಒಕ್ಕೂಟದ ಸದಸ್ಯ ಪಕ್ಷಗಳ ಜೊತೆ ಮೂರ ಸುತ್ತಿನ ಸಭೆ ನಡೆಸಿದೆ. ಮಮತಾ ಬ್ಯಾನರ್ಜಿ ಸೇರಿದಂತೆ ಒಕ್ಕೂಟದ ಕೆಲ ಪ್ರಮುಖ ನಾಯಕರು ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ.
ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡುವುದಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಹೇಳಿವೆ. ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ(ಡಿ.22) ರಾಹುಲ್ ಗಾಂಧಿ ನಿತೀಶ್ ಕುಮಾರ್ ಮತ್ತು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದಾರೆ.
ಮತ್ತೊಂದೆಡೆ ಉತ್ತರ ಪ್ರದೇಶದಲ್ಲಿ ‘ಯುಪಿ ಜೋಡೋ’ ಪಾದಯಾತ್ರೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಉತ್ತರ ಪ್ರದೇಶದ ಕೈ ನಾಯಕರು ಈ ಯಾತ್ರೆಯನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ : ಉಡುಪು ಅವರವರ ಇಷ್ಟ: ಹಿಜಾಬ್ ನಿಷೇಧ ವಾಪಸ್ ಪಡೆಯಲು ಸೂಚಿಸಿದ್ದೇನೆ; ಸಿಎಂ ಸಿದ್ದರಾಮಯ್ಯ


