ಭಾರತೀಯ ದೂರ ಸಂಪರ್ಕ ಮಸೂದೆ-2023 (Telecommunication Bill-2023) ಗುರುವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಸೋಮವಾರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗಿತ್ತು. ಚರ್ಚೆಯ ಬಳಿಕ ಗುರುವಾರ ಅನುಮೋದನೆ ಪಡೆದಿದೆ. ಈ ಮಸೂದೆಯು ಭಾರತೀಯ ಟೆಲಿಗ್ರಾಫ್ ಕಾಯ್ದೆ-1885 (Indian Telegraph Act-1885) ಮತ್ತು ಭಾರತೀಯ ವೈರ್‌ಲೆಸ್ ಟೆಲಿಗ್ರಫಿ ಕಾಯ್ದೆ- 1933(Indian Wireless Telegraphy Act-1933)ರನ್ನು ತೆಗೆದು ಹಾಕಲಾಗಿದೆ.
ಹೊಸ ಮಸೂದೆಯು ಇಂಟರ್‌ನೆಟ್ ಮೇಲಿನ ಕೇಂದ್ರ ಸರ್ಕಾರದ ಹಿಡಿತ ವಿಸ್ತರಣೆ ಮತ್ತು ದೇಶದ ಜನರ ಇಂಟರ್‌ನೆಟ್ ಸ್ವಾತಂತ್ರ್ಯದ ಮೇಲೆ ಬೀರಲಿರುವ ಪರಿಣಾಮಗಳ ಬಗ್ಗೆ ಚರ್ಚೆ ಹುಟ್ಟು ಹಾಕಿದೆ.
ಈ ಮಸೂದೆಯು ದೂರ ಸಂಪರ್ಕ ಸೇವೆಗಳ ಮೇಲೆ ವಸಾಹತುಶಾಹಿ ಯುಗದದಂತೆ ಸರ್ಕಾರ ಕಣ್ಗಾವಲಿಡಲು ಮತ್ತು ಯಾವುದೇ ಸುರಕ್ಷತೆಗಳಿಲ್ಲದೆ ಟೆಲಿಕಾಂ ಸೇವೆಗಳ ಮೇಲೆ ನಿಯಂತ್ರಣ ಸಾಧಿಸಲು ಸಹಕಾರಿಯಾಗಲಿದೆ ಎಂದು ಡಿಜಿಟಲ್ ಮತ್ತು ಮಾಧ್ಯಮ ಹಕ್ಕುಗಳ ತಜ್ಞರು ಹೇಳಿದ್ದಾರೆ. ಆದರೆ, ದೂರ ಸಂಪರ್ಕ ಉದ್ಯಮದ ಪ್ರತಿನಿಧಿಗಳು ಮಸೂದೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಈ ಮಸೂದೆಯು ದೂರಸಂಪರ್ಕ ಸೇವೆಗಳ ಬಗ್ಗೆ ನಿಗೂಢ ವ್ಯಾಖ್ಯಾನಗಳನ್ನು ಒಳಗೊಂಡಿದೆ ಎಂದು ಡಿಜಿಟಲ್ ತಜ್ಞರು ಸ್ಕ್ರಾಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇದರ ಪರಿಣಾಮವಾಗಿ, ಈವರೆಗೆ ದೂರಸಂಪರ್ಕ ಸೇವೆಗಳು ಎಂದು ಸಾಂಪ್ರದಾಯಿಕವಾಗಿ ಪರಿಗಣಿತವಾಗಿರದಿದ್ದ ಇಮೇಲ್ ಹಾಗೂ ಸಂದೇಶ ವೇದಿಕೆಗಳ ಮೇಲಿನ ನಿಯಂತ್ರಣ ವಿಸ್ತರಿಸಲಿದೆ ಎಂದಿದ್ದಾರೆ.
‘ಸಂದೇಶ, ದೂರಸಂಪರ್ಕ ಹಾಗೂ ದೂರಸಂಪರ್ಕ ಸೇವೆಗಳು’ ಎಂಬ ವ್ಯಾಖ್ಯಾನದಡಿ ಇಮೇಲ್, ಕ್ಲೌಡ್ ಸೇವೆಗಳು, ಪ್ರಸರಣ ಹಾಗೂ ತಂತ್ರಾಂಶ ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಭಾರತದಲ್ಲಿನ ತಾಂತ್ರಿಕ ನೀತಿಗಳ ಕುರಿತು ವರದಿ ಮಾಡುವ ಮೀಡಿಯಾನಾಮ ಎಂಬ ಡಿಜಿಟಲ್ ಮಾಧ್ಯಮ ವೇದಿಕೆಯ ಸಂಸ್ಥಾಪಕ ನಿಖಿಲ್ ಪಹ್ವಾ ಹೇಳಿದ್ದಾರೆ.
ದೂರಸಂಪರ್ಕ ಸೇವೆಗಳ ಬಳಕೆದಾರರು ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗಬೇಕಿರುವುದರಿಂದ ಅದರ ಪರಿಣಾಮವು ಎಂಡ್ ಟು ಎಂಡ್ ಎನ್‌ಕ್ರಿಪ್ಶನ್( end-to-end encryption) ಸೇವೆಗಳನ್ನು ಒದಗಿಸುವ ಸಂದೇಶ ವೇದಿಕೆಗಳ ಮೇಲಾಗಲಿದೆ. ಇದರಿಂದ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗಲಿದೆ ಎನ್ನುತ್ತಾರೆ ತಜ್ಞರು.
ಹೊಸ ಮಸೂದೆಯ ವ್ಯಾಪ್ತಿಯಲ್ಲಿ ದೂರ ಸಂಪರ್ಕ ಮತ್ತು ಇಂಟರ್‌ನೆಟ್ ಸೇವೆಗಳನ್ನು ಪಡೆಯಲು ಜನರು ಬಯೋಮೆಟ್ರಿಕ್ ಪರಿಶೀನೆಗೆ ಒಳಗಾಗಬೇಕಾಗುತ್ತದೆ. ಇಂಟರ್‌ನೆಟ್ ಬಳಸುವುದಕ್ಕಾಗಿ ಬಯೋಮೆಟ್ರಿಕ್ ಪರಿಶೀಲನೆಯನ್ನು ಕಡ್ಡಾಯಗೊಳಿಸುವ ಸಾಮರ್ಥ್ಯವನ್ನು ಸರ್ಕಾರ ಹೊಂದಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಇಂಟರ್‌ನೆಟ್ ಸಂಪರ್ಕವು ಭಾರತೀಯ ಸಂವಿಧಾನದಡಿಯಲ್ಲಿ ಮೂಲಭೂತ ಹಕ್ಕುಗಳ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಸ್ತುತ ಕಾನೂನಿನ ಪ್ರಕಾರ ಇಂಟರ್‌ನೆಟ್ ಬಳಕೆದಾರರು ಗೌಪ್ಯತೆ ಕಾಪಾಡಿಕೊಳ್ಳಬಹುದು. ಇಂಟರ್‌ನೆಟ್ ಬಳಕೆಗೂ ಬಯೋಮೆಟ್ರಿಕ್ ಕಡ್ಡಾಯಗೊಳಿಸುವುದು ಮತ್ತು ಬಳಕೆದಾರರಿಗೆ ಮಾಹಿತಿಯಿಲ್ಲದೆ ಇಂಟರ್‌ನೆಟ್ ಬಳಕೆಯನ್ನು ನಿಯಂತ್ರಿಸುವುದು ಕಳವಳಕಾರಿ ಎಂದು ಏಷ್ಯಾ ಪೆಸಿಫಿಕ್ ನೀತಿ ಸಲಹೆಗಾರ್ತಿ ನಮ್ರತಾ ಮಹೇಶ್ವರಿ ಹೇಳಿದ್ದಾರೆ.
ಹೊಸ ಮಸೂದೆಯನ್ನು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಕೆಲ ತಜ್ಞರು ಇದು ಬಳಕೆದಾರರ ಗೌಪ್ಯತಾ ಹಕ್ಕಿನ ಮೇಲೆ ನೇರವಾಗಿ ದಾಳಿ ಮಾಡುತ್ತದೆ ಎಂದಿದ್ದಾರೆ. ಇನ್ನೂ ಕೆಲವರು ಹೊಸ ಮಸೂದೆ ದೂರಸಂಪರ್ಕ ಸೇವೆಗಳನ್ನು ಸುಲಭವಾಗಿ ಬಳಸಿಕೊಳ್ಳಲು ಜನರಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಟೆಲಿಕಾಂ ಸೇವೆ ಒದಗಿಸುವ ಕಾರ್ಪೋರೇಟ್ ವಲಯ ಮಸೂದೆಯನ್ನು ಒಪ್ಪಿಕೊಂಡಿರುವುದು ಜನ ಸಾಮಾನ್ಯರು ಆತಂಕಪಡುವ ವಿಚಾರ. ವ್ಯಾವಹಾರಿಕವಾಗಿ ಲಾಭವಿಲ್ಲದೆ ಯಾವುದೇ ಉದ್ಯಮ ವಲಯ ಹೊಸ ನೀತಿಯನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಕೊನೆಯದಾಗಿ ಹೇಳುವುದಾದರೆ, ದೂರ ಸಂಪರ್ಕ, ಇಂಟರ್‌ನೆಟ್ ಸೇವೆಗಳು ಜನರಿಗೆ ಸುಲಭವಾಗಿ ದೊರೆಯಬೇಕು ಎಂಬುವುದು ನಿಜ. ಇದು ಅಭಿವೃದ್ದಿಯ ಒಂದು ಭಾಗವೂ ಹೌದು. ಆದರೆ, ಆಳುವ ಸರ್ಕಾರ ನಮ್ಮ ದೂರ ಸಂಪರ್ಕ, ಇಂಟರ್‌ನೆಟ್ ಬಳಕೆಯ ಮೇಲೆ ಕಣ್ಣಿಡುತ್ತದೆ ಎಂದರೆ ಅಪಾಯಕಾರಿ.
ಇದನ್ನೂ ಓದಿ : ಏಕರೂಪ ನಾಗರಿಕ ಸಂಹಿತೆ: ಕರಡು ಸಮಿತಿಯ ನಿರ್ಧಾರಕ್ಕೆ ಅನುಮೋದನೆ ನೀಡಿದ ಉತ್ತರಾಖಂಡ ಸರಕಾರ


