ಗುಜರಾತ್ ಪೋರಬಂದರ್ ಕರವಾಳಿಯ ಹಿಂದೂ ಮಹಾಸಾಗರದಲ್ಲಿ ರಾಸಾಯನಿಕ ಟ್ಯಾಂಕರ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂಬ ಯುಎಸ್ ಹೇಳಿಕೆಯನ್ನು ಇರಾನ್ ತಿರಸ್ಕರಿಸಿದ್ದು, ಆಧಾರ ರಹಿತ ಆರೋಪ ಎಂದು ಹೇಳಿದೆ.
ದಾಳಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರರು, ಅಮೆರಿಕದ ಆರೋಪ ಆಧಾರ ರಹಿತವಾಗಿದೆ. ಇರಾನ್‌ನಿಂದ ಉಡಾವಣೆಯಾದ ಡ್ರೋನ್ ಹಿಂದೂ ಮಹಾಸಾಗರದಲ್ಲಿ ಹಡಗಿನ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕ ಹೇಳಿದ ಒಂದು ದಿನದ ನಂತರ ಈ ಪ್ರತಿಕ್ರಿಯೆ ಹೊರಬಿದ್ದಿದೆ.
ಲೈಬೀರಿಯಾ-ಧ್ವಜವನ್ನು ಹೊಂದಿದ್ದ ಜಪಾನೀಸ್ ಒಡೆತನದ ಮತ್ತು ನೆದರ್ಲ್ಯಾಂಡ್ಸ್-ಚಾಲಿತ ರಾಸಾಯನಿಕ ಟ್ಯಾಂಕರ್ ಮೋಟಾರು ನೌಕೆ CHEM PLUTO ಮೇಲೆ ಹಿಂದೂ ಮಹಾಸಾಗರದಲ್ಲಿ ಭಾರತದ ಕರಾವಳಿಯಿಂದ 200 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಶನಿವಾರ ಬೆಳಿಗ್ಗೆ ಡ್ರೋನ್ ಅಪ್ಪಳಿಸಿದೆ. ಇರಾನ್ ಡ್ರೋನ್‌ನ್ನು ದಾಳಿ ಮಾಡಿದೆ ಎಂದು ಅಮೆರಿಕ ಆರೋಪಿಸಿತ್ತು. 2021ರಿಂದ ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸುತ್ತಿರುವ 7ನೇ ದಾಳಿ ಇದು ಎಂದು ಅಮೆರಿಕ ಆರೋಪಿಸಿತ್ತು.
ದಾಳಿಯ ಪರಿಣಾಮವಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಟ್ಯಾಂಕರ್‌ಗೆ ಸ್ವಲ್ಪ ಬೆಂಕಿ ಕಾಣಿಸಿಕೊಂಡಿದೆ. 20 ಭಾರತೀಯ ಮತ್ತು ಒಬ್ಬ ವಿಯೆಟ್ನಾಂ ಸಿಬ್ಬಂದಿಯನ್ನು ಹೊಂದಿರುವ ಹಡಗು ಡಿಸೆಂಬರ್ 19 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಹೊರಟು ಡಿ.25 ರಂದು ಮಂಗಳೂರು ಬಂದರನ್ನು ತಲುಪುವ ನಿರೀಕ್ಷೆಯಿತ್ತು.
ಇರಾನ್ ಸರ್ಕಾರ ಮತ್ತು ಯೆಮನ್‌ನಲ್ಲಿರುವ ಅದರ ಮಿತ್ರ ಪಡೆಗಳು ಗಾಝಾದ ಮೇಲೆ ಇಸ್ರೇಲ್ ಸರ್ಕಾರ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಬಲವಾಗಿ ವಿರೋಧಿಸುತ್ತಿದೆ. ಇಸ್ರೇಲ್ ಮತ್ತು ಅದರ ಮಿತ್ರರಾಷ್ಟ್ರ ಅಮೆರಿಕ ಗಾಝಾದಲ್ಲಿ ಯುದ್ಧ ಅಪರಾಧಗಳನ್ನು ಮಾಡುವುದನ್ನು ಮುಂದುವರೆಸಿದರೆ ಮೆಡಿಟರೇನಿಯನ್ ಸಮುದ್ರವನ್ನು ಮುಚ್ಚುವುದಾಗಿ ಬೆದರಿಸಿತ್ತು. ಇದರ ಬೆನ್ನಲ್ಲೇ ಇರಾನ್ ವಿರುದ್ಧ ಅಮೆರಿಕ ಡ್ರೋನ್ ದಾಳಿಯ ಆರೋಪವನ್ನು ಮಾಡಿತ್ತು.
ಭಾರತೀಯ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್, ಡ್ರೋನ್ ದಾಳಿಯಿಂದ ಬೆಂಕಿ ಕಾಣಿಸಿಕೊಂಡ ಎಂವಿ CHEM PLUTO ಹಡಗಿನ ರಕ್ಷಣೆಗೆ ತೆರಳಿದೆ. ಪೋರಬಂದರ್ ಕರಾವಳಿಯಿಂದ 217 ನಾಟಿಕಲ್ ಮೈಲಿ ದೂರದಲ್ಲಿರುವ ಅರಬ್ಬಿ ಸಮುದ್ರದಲ್ಲಿ ಘಟನೆ ನಡೆದಿದೆ ಎಂದು ಭಾರತೀಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದರು. ನಾವು ಸ್ವೀಕರಿಸಿದ ಮಾಹಿತಿ ಪ್ರಕಾರ ಹಡಗಿನಲ್ಲಿ ಬೆಂಕಿಯನ್ನು ನಂದಿಸಲಾಗಿದೆ ಆದರೆ ಬೆಂಕಿಯು ಹಡಗಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ಹಡಗಿನಲ್ಲಿದ್ದ ಸುಮಾರು 20 ಭಾರತೀಯರನ್ನು ಒಳಗೊಂಡಂತೆ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು.
ಇದನ್ನು ಓದಿ: ಗಾಝಾ ನಾಗರಿಕರಿಗೆ ಕುಡಿಯಲು ನೀರು ಸಿಗದಂತೆ ಮಾಡುತ್ತಿರುವ ಇಸ್ರೇಲ್!


