‘ವಿವಾದಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪಾಕಿಸ್ತಾನದೊಂದಿಗೆ ಮಾತನಾಡುತ್ತಿಲ್ಲ’ ಎಂದು ನರೇಂದ್ರ ಮೋದಿ ಸರ್ಕಾರವನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಟೀಕಿಸಿದ್ದಾರೆ. ‘ನಾವು ಮಾತುಕತೆ ಪ್ರಾರಂಭಿಸದಿದ್ದರೆ, ಭವಿಷ್ಯದಲ್ಲಿ ನಾವೂ ಸಹ ಗಾಜಾದ ಪರಿಸ್ಥಿತಿ ಎದುರಿಸುಬೇಕಾಗುತ್ತದೆ’ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ದೆಹಲಿಯಲ್ಲಿ ಮಾತನಾಡಿದ ಅವರು, ‘ನಾವು ನಮ್ಮ ಸ್ನೇಹಿತರನ್ನು ಬದಲಾಯಿಸಬಹುದು. ಆದರೆ, ನಮ್ಮ ನೆರೆಹೊರೆಯವರನ್ನಲ್ಲ’ ಎಂಬ ಭಾರತ-ಪಾಕಿಸ್ತಾನ ಸಂಬಂಧಗಳ ಕುರಿತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ಉಲ್ಲೇಖಿಸಿದರು. ‘ಪ್ರಧಾನಿ ಮೋದಿಯವರು ಕೂಡ ಯುದ್ಧವು ಈಗ ಆಯ್ಕೆಯಾಗಿಲ್ಲ ಮತ್ತು ಮಾತುಕತೆ ಮೂಲಕ ವಿವಾದಗಳನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ. ಆದರೆ, ಮಾತುಕತೆ ಎಲ್ಲಿದೆ? ನವಾಜ್ ಷರೀಫ್ ಅವರು (ಪಾಕಿಸ್ತಾನದ) ಪ್ರಧಾನಿಯಾಗಿದ್ದಾಗ ನಾವು ಮಾತನಾಡಲು ಸಿದ್ಧ ಎಂದು ಅವರು ಹೇಳುತ್ತಿದ್ದರು. ಆದರೆ, ನಾವು ಮಾತನಾಡಲು ಸಿದ್ಧವಾಗಿಲ್ಲದಿರುವುದಕ್ಕೆ ಕಾರಣವೇನು’ ಎಂದು ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
‘ಪರಸ್ಪರ ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳದಿದ್ದರೆ ಇಸ್ರೇಲ್‌ನಿಂದ ಬಾಂಬ್ ದಾಳಿಗೆ ಒಳಗಾಗಿರುವ ಗಾಜಾ ಮತ್ತು ಪ್ಯಾಲೆಸ್ತೀನ್‌ಗೂ ಆದ ಗತಿಯೆ ನಮಗೂ ಬರಲಿದೆ. ಇಸ್ರೇಲ್‌ನ ಮೇಲೆ ಹಮಾಸ್‌ನ ಅಕ್ಟೋಬರ್ 7 ರ ದಾಳಿಗಳು ಮತ್ತು ನಂತರದ ಕ್ರೂರ ಪ್ರತಿದಾಳಿಯು 21,000ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಗಾಜಾದ ಹೆಚ್ಚಿನ ಭಾಗಗಳನ್ನು ಭಗ್ನಾವಶೇಷ ಮಾಡಿದೆ’ ಎಂದು ಹೇಳಿದ್ದಾರೆ.
ಕಳೆದ ಒಂದು ವಾರದಿಂದ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳ ನಂತರ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಪೂಂಚ್‌ನಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಐವರು ಸೈನಿಕರು ಹುತಾತ್ಮರಾಗಿದ್ದಾರೆ. ಬಾರಾಮುಲ್ಲಾ ಮಸೀದಿಯೊಳಗೆ ನಿವೃತ್ತ ಪೋಲೀಸ್ ಒಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದ್ದು, ಅದರ ವಿಚಾರಣೆಗಾಗಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡ ನಂತರ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ.
‘ಕಣಿವೆ ರಾಜ್ಯಕ್ಕೆ ಪ್ರವಾಸಿಗರ ಆಗಮನವನ್ನು ಶಾಂತಿ ಎಂದು ಪ್ರಚಾರ ಮಾಡುವುದು ಭಯೋತ್ಪಾದನೆಯನ್ನು ಕೊನೆಗೊಳಿಸುವುದಿಲ್ಲ. ಅವರು ಆರ್ಟಿಕಲ್ 370 ರದ್ದತಿಯೊಂದಿಗೆ ಭಯೋತ್ಪಾದನೆ ಮುಗಿದಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ನಾಲ್ಕು ವರ್ಷಗಳ ನಂತರವೂ ಭಯೋತ್ಪಾದನೆ ಇನ್ನೂ ಇದೆ. ನಾವು ನಿರ್ಮೂಲನೆ ಮಾಡಲು ಪ್ರಯತ್ನಿಸುವವರೆಗೂ ಕೊನೆಗೊಳ್ಳುವುದಿಲ್ಲ. ಭಯೋತ್ಪಾದನೆಯ ಮೂಲ ಕಾರಣವನ್ನು ಅರ್ಥಮಾಡಿಕೊಳ್ಳಿ’ ಎಂದು ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.
‘ಪೊಲೀಸ್ ಅಧಿಕಾರಿಯ ಹತ್ಯೆಗೆ ನಾನು ವಿಷಾದಿಸುತ್ತೇನೆ. ಕಾಶ್ಮೀರ ಸಹಜಸ್ಥಿತಿಯಲ್ಲಿದೆ ಎಂದು ಹೇಳುವವರು ಮೌನವಾಗಿದ್ದಾರೆ. ಅವರು ಇದರ ಮೂಲ ಕಾರಣವನ್ನು ಪರಿಹರಿಸುವ ಬದಲು ಮೇಲ್ನೋಟದ ಗಾಯಗಳನ್ನು ವಾಸಿಮಾಡಲು ಪ್ರಯತ್ನಿಸಿದರು. ನಾವು ನಮ್ಮ ಸೈನಿಕರನ್ನು, ಅಧಿಕಾರಿಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಸಾಮಾನ್ಯರು ಅರ್ಥಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ತಪಾತವನ್ನು ಕೊನೆಗೊಳಿಸಲು ಕೇಂದ್ರವು ‘ಸರಿಯಾದ ದೃಷ್ಟಿಕೋನ’ ವನ್ನು ಕಂಡುಹಿಡಿಯಬೇಕಾಗಿದೆ. ‘ನಾವು ಭಾರತದ ಭಾಗವಾಗಿದ್ದೇವೆ, ನಾವು ಭಾರತದ ಭಾಗವಾಗಿದ್ದೇವೆ ಮತ್ತು ನಾವು ಭಾರತದ ಭಾಗವಾಗಿಯೇ ಉಳಿಯುತ್ತೇವೆ. ನಾವು ಭಯೋತ್ಪಾದನೆಯನ್ನು ಕೊನೆಗೊಳಿಸಬೇಕಾದರೆ, ಅದರ ನಿರ್ಮೂಲನೆಗೆ ಮಾರ್ಗಗಳನ್ನು ಹುಡುಕಬೇಕಾಗಿದೆ’ ಎಂದು ಅವರು ಹೇಳಿದರು.
‘ಮಿಲಿಟರಿ ಅಥವಾ ಪೊಲೀಸರ ಬಳಕೆಯಿಂದ ಭಯೋತ್ಪಾದನೆಯನ್ನು ಕೊನೆಗಾಣಿಸಲು ಸಾಧ್ಯವಿಲ್ಲ. ನಾವು ಅದರ ಆಳವನ್ನು ಅರ್ಥಮಾಡಿಕೊಂಡು, ಮೂಲ ಕಾರಣವನ್ನು ಪರಿಹರಿಸಬೇಕು’ ಎಂದು ಅವರು ಹೇಳಿದರು.
‘ಭಯೋತ್ಪಾದಕರು ದಾಳಿ ಮಾಡಿದ್ದರಿಂದ ನಮ್ಮ ವೀರ ಸೈನಿಕರು ಹುತಾತ್ಮರಾದರು, ನಂತರ ಮೂವರು ಸ್ಥಳೀಯ ನಾಗರಿಕರನ್ನು ಚಿತ್ರಹಿಂಸೆಗೆ ಒಳಪಡಿಸಿರುವುದು ದುರಂತ. ಏಕೆಂದರೆ, ನಾವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದೇವೆ; ನಮ್ಮ ಜನರ ವಿರುದ್ಧ ಅಲ್ಲ. ನಾವು ನಮ್ಮ ಜನರನ್ನು ಕಿರಿಕಿರಿಗೊಳಿಸಿದರೆ, ಎಂದಿಗೂ ಈ ಯುದ್ಧವನ್ನು ಗೆಲ್ಲುವುದಿಲ್ಲ’ ಎಂದು ಅವರು ಹೇಳಿದರು.
ಇದನ್ನೂ ಓದಿ; ‘ಹಿಂದೂ’ ಎಂಬುವುದು ಒಂದು ವಂಚನೆಯಾಗಿದೆ: ಸ್ವಾಮಿ ಪ್ರಸಾದ್ ಮೌರ್ಯ


