ಕಳೆದ ವರ್ಷ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ‘ಭಾರತ ಜೋಡೋ’ ಪಾದಯಾತ್ರೆಗೆ ಭರ್ಜರಿ ಬೆಂಬಲ ವ್ಯಕ್ತವಾಗಿತ್ತು. ಒಂದು ವರ್ಷದ ನಂತರ ಮತ್ತೊಂದು ಪಾದಯಾತ್ರೆಗೆ ಮುಂದಾಗಿರುವ ಅವರು, 2024ರ ಜನವರಿ 14ರಿಂದ ಮಾರ್ಚ್ 20ರ ನಡುವೆ ಮಣಿಪುರದಿಂದ ಮುಂಬೈಗೆ ‘ಭಾರತ ನ್ಯಾಯ ಯಾತ್ರೆ’ ಹೆಸರಿನಲ್ಲಿ ಮತ್ತೊಂದು ಪಾದಯಾತ್ರೆ ನಡೆಸಲಿದ್ದಾರೆ.
ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ರಾಜ್ಯಗಳ ಮೂಲಕ 6,200 ಕಿಮೀ ಸಾಗುವ ರಾಹುಲ್ ಯಾತ್ರೆ ಮಹಾರಾಷ್ಟ್ರದಲ್ಲಿ ಕೊನೆಗೊಳ್ಳಲಿದೆ. ರಾಹುಲ್ ಭಾರತ್ ಜೋಡೋ ಯಾತ್ರೆಗೆ ಅಪಾರ ಜನಬೆಂಬಲ ಸಿಕ್ಕಿತ್ತು. ಆದರೆ, ಕರ್ನಾಟಕ-ತೆಲಂಗಾಣ ಹೊರತುಪಡಿಸಿ ಉತ್ತರದ ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಮೇಲೆ ರಾಹುಲ್ ಪಾದಯಾತ್ರೆ ಅಷ್ಟಾಗಿ ಪರಿಣಾಮ ಬೀರಲಿಲ್ಲ.
2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮತ್ತೊಂದು ಪಾದಯಾತ್ರೆಗೆ ಮುಂದಾಗಿರುವ ರಾಹುಲ್, ಈಗ ಈಶಾನ್ಯ ಭಾರತ ರಾಜ್ಯಗಳು ಹಾಗೂ ಹಿಂದಿ ಭಾಷಿಕ ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದಾರೆ.
ಚುನಾವಣೆಗೆ ಮುಂಚಿತವಾಗಿ ಮಾರ್ಚ್ 20 ರಂದು ಮುಕ್ತಾಯಗೊಳ್ಳಲಿರುವ ಈ ಯಾತ್ರೆಯು, ದೇಶದ ಪೂರ್ವ-ಪಶ್ಚಿಮ ರಾಜ್ಯಗಳನ್ನು ತಲುಪುವುದಾಗಿದೆ. ಕಳೆದ ವರ್ಷ ಅವರು ಭಾರತ್ ಜೋಡೋ ಹೆಸರಿನಲ್ಲಿ ಉತ್ತರ-ದಕ್ಷಿಣದ ರಾಜ್ಯಗಳಲ್ಲಿ ಪಾದಯಾತ್ರೆ ಮಾಡಿದ್ದರು.
ಹಿಂಸಾಚಾರ ಪೀಡಿತ ಮಣಿಪುರವನ್ನು ಆರಂಭಿಕ ಹಂತವಾಗಿ ಆರಿಸಿಕೊಂಡ ಕಾಂಗ್ರೆಸ್, ‘ಪಕ್ಷವು ಜನರ ಗಾಯಗಳನ್ನು ಗುಣಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬಯಸಿದೆ. ನ್ಯಾಯ ಯಾತ್ರೆಯು ದೇಶದ ಜನರಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ಭದ್ರಪಡಿಸುವುದಾಗಿದೆ’ ಎಂದು ಹೇಳಿದೆ.
ಕಾಂಗ್ರೆಸ್ ಘೋಷಣೆಗೆ ಬಿಜೆಪಿ ವ್ಯಂಗ್ಯವಾಡಿದ್ದು, ‘ಭಾರತ್ ಜೋಡೋ ಯಾತ್ರೆಯ ಕಲ್ಪನೆಯನ್ನು ಜನರು ತಿರಸ್ಕರಿಸಿದ್ದಾರೆ. ಕೆಲವು ಘೋಷಣೆಗಳನ್ನು ಹಾಕಿ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ’ ಎಂದು ಬಿಜೆಪಿ ಹೇಳಿದೆ.
‘ಭಾರತದ ಜನರು ಭಾರತ್ ಜೋಡೋ ಯಾತ್ರೆಯ ಕಲ್ಪನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಏಕೆಂದರೆ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಈ ವಿಚಾರಗಳಲ್ಲಿ ದ್ವಂದ್ವವನ್ನು ಹೊಂದಲು ಸಾಧ್ಯವಿಲ್ಲ. ಕೆಲವು ಘೋಷಣೆಗಳನ್ನು ರೂಪಿಸುವ ಮೂಲಕ ಭಾರತದ ಜನರನ್ನು ಮೂರ್ಖರನ್ನಾಗಿ ಮಾಡಬಹುದು ಎಂದು ಅವರು ಭಾವಿಸುತ್ತಾರೆ’ ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ; WFI ವಿವಾದ: ಬಜರಂಗ್ ಪುನಿಯಾ ಸೇರಿ ಕುಸ್ತಿಪಟುಗಳ ಜೊತೆ ರಾಹುಲ್ ಗಾಂಧಿ ಮಾತುಕತೆ


