ಇಸ್ರೇಲ್‌ಗೆ 10 ಸಾವಿರ ಕಾರ್ಮಿಕರನ್ನು ಕಳುಹಿಸಿಕೊಡುವ ಶ್ರೀಲಂಕಾ ಸರ್ಕಾರದ ಕ್ರಮವನ್ನು ಖಂಡಿಸಿ ಅಲ್ಲಿನ ಕಾರ್ಮಿಕ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿವೆ.
ಕಳೆದ ಅಕ್ಟೋಬರ್‌ನಿಂದ ಗಾಝಾದೊಂದಿಗೆ ಒಗ್ಗಟ್ಟು ಪ್ರದರ್ಶಿಸಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿರುವ ಶ್ರೀಲಂಕನ್ನರು, ಗಾಝಾದಲ್ಲಿ ನರಮೇಧ ನಡೆಸುತ್ತಿರುವ ಇಸ್ರೇಲ್‌ಗೆ ಕಾರ್ಮಿಕರನ್ನು ಕಳುಹಿಸಿಕೊಡಲು ನಾಚಿಕೆಯಾಗುವುದಿಲ್ಲವೇ? ಎಂದು ತಮ್ಮ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದ ಬಳಿಕ ಲಕ್ಷಾಂತರ ಪ್ಯಾಲೆಸ್ತೀನಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವ ಇಸ್ರೇಲ್, ಏಷ್ಯಾದ ದೇಶಗಳಾದ ಭಾರತ, ಶ್ರೀಲಂಕಾ ಮತ್ತು ನೇಪಾಳದಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗಿದೆ.
ತ್ವರಿತವಾಗಿ ಸುಮಾರು 10 ಸಾವಿರ ಕಟ್ಟಡ ಮತ್ತು ಕೃಷಿ ಕಾರ್ಮಿಕರನ್ನು ಕಳುಹಿಸಿಕೊಡುವುದಾಗಿ ಶ್ರೀಲಂಕಾ ಸರ್ಕಾರ ಕಳೆದ ನವೆಂಬರ್‌ನಲ್ಲಿ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದದ ಅನುಸಾರ ಡಿಸೆಂಬರ್ ಆರಂಭದಲ್ಲಿ ಕಾರ್ಮಿಕರ ಮೊದಲ ತಂಡ ಇಸ್ರೇಲ್‌ಗೆ ಪ್ರಯಾಣ ಬೆಳೆಸಿದೆ. ಸರ್ಕಾರದ ಮಾತು ನಂಬಿ ಹೊಟ್ಟೆಪಾಡಿಗಾಗಿ ದೂರದ ದೇಶಕ್ಕೆ ತೆರಳಿರುವ ಈ ಬಡ ಕಾರ್ಮಿಕರ ಸುರಕ್ಷತೆಯ ಕುರಿತು ಕಳವಳ ಹೆಚ್ಚಾಗಿದೆ.
ಕಳೆದ ವರ್ಷ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾ ತಮ್ಮ ದೇಶದ ಜನರಿಗೆ ಉದ್ಯೋಗ ಕೊಡುವತ್ತ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಭಾಗವಾಗಿ ವಿದೇಶಗಳಿಗೆ ಕಾರ್ಮಿಕರನ್ನು ಕಳುಹಿಸಿಕೊಡಲು ತುದಿಗಾಲಲ್ಲಿ ನಿಂತಿದೆ. ಆದರೆ, ಯುದ್ಧ ಪೀಡಿತ ಇಸ್ರೇಲ್‌ಗೆ ಏನೂ ಅರಿಯ ಬಡ ಕಾರ್ಮಿಕರನ್ನು ಕಳುಹಿಸಿಕೊಟ್ಟಿರುವ ಸರ್ಕಾರದ ವಿರುದ್ಧ ಶ್ರೀಲಂಕಾದ ಕಾರ್ಮಿಕ ಮತ್ತು ಮಾನವೀಯ ಸಂಘಟನೆಗಳು ಸಿಡಿದೆದ್ದಿವೆ.
ಶ್ರೀಲಂಕಾದಲ್ಲಿ ಗಾಝಾ ಪರ ಪ್ರತಿಭಟನೆಗಳನ್ನು ಆಯೋಜಿಸುವ ಮಾನವ ಹಕ್ಕುಗಳ ಕಾರ್ಯರ್ತ ಅಬ್ದುಲ್ ಸರೂರ್ ಅವರು, ಶ್ರೀಲಂಕಾ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಿಕೊಡುವುದು ಜನಾಂಗೀಯ ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
ಇಸ್ರೇಲ್‌ನಲ್ಲಿ ಈಗಾಗಲೇ 9 ಲಕ್ಷ ಶ್ರೀಲಂಕನ್ ಕಾರ್ಮಿಕರಿದ್ದಾರೆ. ಇಸ್ರೇಲ್‌ನ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ತೋರಿಸಿ 10 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರನ್ನು ಸುರಕ್ಷಿತವಾಗಿ ಕಳುಹಿಸಿಕೊಡಲಾಗುವುದು ಎಂದು ಶ್ರೀಲಂಕಾದ ಕಾರ್ಮಿಕ ಸಚಿವ ಮನೂಷ ನನಯಕ್ಕರ ತಿಳಿಸಿದ್ದಾರೆ.
ಭಾರತದಿಂದಲೂ ಕಾರ್ಮಿಕರನ್ನು ಕಳುಹಿಸಲು ಸಿದ್ದತೆ, ವಿರೋಧ
ಭಾರತದಿಂದಲೂ ಕಾರ್ಮಿಕರನ್ನು ಕಳುಹಿಸಿಕೊಡುವಂತೆ ಇಸ್ರೇಲ್ ಬೇಡಿಕೆ ಇಟ್ಟಿದೆ. ಇದಕ್ಕೆ ಬಹಳ ಉತ್ಸಾದಿಂದ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮತ್ತು ಹರಿಯಾಣ ಬಿಜೆಪಿ ಸರ್ಕಾರಗಳು, ಈಗಾಗಲೇ ಕಾರ್ಮಿಕರನ್ನು ಕಳುಹಿಸಿಕೊಡಲು ಮುಂದಾಗಿವೆ.
ಹರಿಯಾಣ ಸರ್ಕಾರದ ಕೌಶಲ್ ರೋಝ್‌ಗಾರ್ ನಿಗಮ್ (ಹೆಚ್‌ಕೆಆರ್‌ಎನ್) ಕಳೆದ ತಿಂಗಳು ಇಸ್ರೇಲ್‌ಗೆ ಕಳುಹಿಸಲು 10 ಸಾವಿರ ಕಟ್ಟಡ ಮತ್ತು ಕೃಷಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪ್ರಕಟನೆ ಹೊರಡಿಸಿತ್ತು.
ರಾಷ್ಟ್ರೀಯ ಕೌಶಲ್ಯ ಅಭಿವೃದ್ದಿ ನಿಗಮದ ಮೂಲಕ 10 ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಲು ಆಯ್ಕೆ ಮಾಡುವ ಸಂಬಂಧ ಉತ್ತರ ಪ್ರದೇಶ ಸರ್ಕಾರ ಕೂಡ ಅರ್ಜಿ ಆಹ್ವಾನಿಸಿದೆ. ಅಲೀಘರ್, ಹತ್ರಾಸ್, ಕಾಸ್‌ಗಂಜ್, ಇತಾಹ್ ಜಿಲ್ಲೆಗಳಿಂದ ಮೂದಲ ಹಂತದಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.
ವಿದ್ಯಾರ್ಹತೆ ಕಡಿಮೆ ಇರುವ, ಆಧುನಿಕ ವಿಚಾರಗಳ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ ಬಡ, ಮುಗ್ದ ಕಾರ್ಮಿಕರನ್ನು ದೂರದ ಇಸ್ರೇಲ್‌ಗೆ ಕಳುಹಿಸಿಕೊಡುವುದಕ್ಕೆ ಭಾರತದ ಕಾರ್ಮಿಕ ಸಂಘಟನೆಗಳು ಮತ್ತು ಮಾನವ ಹಕ್ಕು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ತಂಬ್‌ನೈಲ್ ಚಿತ್ರ ಸಾಂದರ್ಭಿಕ
ಇದನ್ನೂ ಓದಿ : ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಪೋಟ ಪ್ರಕರಣ: ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು


